spot_img
spot_img

ಸೇವಾಯಜ್ಞದಲ್ಲಿ…!

Must Read

- Advertisement -

ಬೆಂಗಳೂರು –  ಶನಿವಾರ ಪಾಂಚಜನ್ಯ ಪ್ರತಿಷ್ಠಾನದ ಹನ್ನೊಂದನೇ ವಾರ್ಷಿಕೋತ್ಸವ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ಸುರೇಶ ವಿ.ಕುಲಕರ್ಣಿ  ರವರಿಗೆ 2023ನೇ ಸಾಲಿನ ಪ್ರತಿಷ್ಠಿತ ‘ಪಾಂಚಜನ್ಯ ಪುರಸ್ಕಾರ’ ಪ್ರದಾನ ಸಮಾರಂಭ ನಡೆಯಲಿದೆ. ಪಾಂಚಜನ್ಯ ಪ್ರತಿಷ್ಠಾನದ ಕಿರು ಪರಿಚಯ.

ಇದು ಸಮಾಜಸೇವೆಗೆ ಕಟ್ಟಿಬದ್ಧವಾದೊಂದು ಸಂಘಟನೆ. ಗ್ರಾಮೀಣ ಭಾಗದಲ್ಲಿ ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ, ಆರೋಗ್ಯ ಕ್ಷೇತ್ರದ ಕಾರ್ಯಚಟುವಟಿಕೆಗಳನ್ನು ನಡೆಸುತ್ತ ಎಲ್ಲಾ ಜನಾಂಗಕ್ಕೆ ದಾರಿತೋರುವ ನಿಸ್ವಾರ್ಥ ಚಿಂತನೆ ವಿಶಾಲದೃಷ್ಟಿಯಿಂದ ಸದ್ದಿಲ್ಲದೆ ಸೇವಾಕ್ರಾಂತಿ ಮಾಡುತ್ತಿರುವ ಪಾಂಚಜನ್ಯ ಪ್ರತಿಷ್ಠಾನ  ಲೋಕಾರ್ಪಣೆಗೊಂಡು ಸಾರ್ಥಕ ಒಂದು ದಶಕ ಪೂರೈಸಿದೆ.

- Advertisement -

ಈ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳಲ್ಲಿ ಸಂತಸವಿದೆ, ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರೇ ಮೊದಲ್ಗೊಂಡು ಶ್ರದ್ಧೆಯಿಂದ ದುಡಿಯುವ ಸೃಜನಶೀಲ ಕಾರ್ಯಕರ್ತರಿದ್ದಾರೆ. ಇದಕ್ಕಾಗಿ ಪ್ರಶಾಂತವಾದ ವಾತಾವರಣದ ಸಿದ್ಧವಿದೆ, ಮಾನವ ಸೇವೆಯೇ ಮಾಧವನ ಸೇವೆ ಎಂಬ ದೃಷ್ಟಿಯಿಂದ ರೂಪಿಸಿರುವ ಶೈಕ್ಷಣಿಕ , ವೈದ್ಯಕೀಯ, ಆಧ್ಯಾತ್ಮಿಕ ಕಾರ್ಯಕ್ರಮಗಳ ಸಾಫಲ್ಯ ಅಚ್ಚರಿಯನ್ನುಂಟು ಮಾಡುತ್ತದೆ.

ಸಮಾನ ಮನಸ್ಕರ ಸ್ವಲಾಭಾತೀತ ಸಂಘಟನೆಯಾಗಿ ರೂಪುಗೊಂಡು ಪ್ರತಿಷ್ಠಾನವು ಅನೇಕ ಜನೋಪಯೋಗಿ ಕಾರ್ಯಗಳನ್ನು ನಡೆಸುತ್ತ ಬಂದಿದೆ. ಆರೋಗ್ಯಕರ ಜೀವನ ಶೈಲಿಗೆ ಅಧ್ಯಾತ್ಮ ಮತ್ತು ತಾತ್ವಿಕ ಮೌಲ್ಯಗಳೇ ತಳಹದಿ . ಆ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸೂಕ್ತ ತರಬೇತಿ ಮತ್ತು ಸಮಯೋಚಿತ ಮಾರ್ಗದರ್ಶನ ಅಗತ್ಯ. ಆದರೇ ಆರ್ಥಿಕ ಸಂಕಷ್ಟ ಮತ್ತಿತರ ಕಾರಣಗಳಿಂದಾಗಿ ನಮ್ಮ ಸಮಾಜದಲ್ಲಿ ಎಷ್ಟೋ ಮಂದಿ , ಮೂಲ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗಳಿಂದ ವಂಚಿತರಾಗುತ್ತಿದ್ದಾರೆ. ಅಂತಹವರಿಗೆ ಸಹಾಯ ಹಸ್ತ ನೀಡಿ ,ಅವರ ಕನಿಷ್ಠ ಅಗತ್ಯಗಳನ್ನು ಪೂರೈಸುವುದು ಪ್ರತಿಷ್ಠಾನದ ಪ್ರಮುಖ ಧ್ಯೇಯೋದ್ದೇಶ. ಪಾಂಚಜನ್ಯ ಮೊಳಗುವುದಕ್ಕಾಗಿ ಅಲ್ಲ, ದೀನರ ಬಾಳು ಬೆಳಗುವುದಕ್ಕಾಗಿ ಉದಯವಾಗಿದೆ.

ವಿದ್ಯಾರ್ಥಿ ಮಾರ್ಗದರ್ಶಿ:

ಬೌದ್ದಿಕ ಶಿಕ್ಷಣ, ವ್ಯಕ್ತಿತ್ವ ನಿರ್ಮಾಣಕ್ಕೆ ಬುನಾದಿ ,ಆದರೆ ಗ್ರಾಮೀಣ ಭಾಗದಲ್ಲಿ ಎಷ್ಟೋ ಮಂದಿ ಸೂಕ್ತ ಮಾರ್ಗದರ್ಶನವಿಲ್ಲದೆ ದಿಕ್ಕು ತಪ್ಪುತ್ತಿದ್ದಾರೆ. ವಿದ್ಯಾರ್ಥಿಗಳ ಜೀವನದ ಪ್ರಮುಖ ಮೈಲಿಗಲ್ಲಾದ 10ನೇ ತರಗತಿ ಪರೀಕ್ಷೆ -ಭವ್ಯ ಭವಿಷ್ಯದ ಪ್ರಥಮ ಸೋಪಾನ, ಅಂತಹ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಭವ್ಯ ಹೊಂಗಿರಣವಾಗಲು ನಗರದ ಹಿರಿಯ ಶಿಕ್ಷಣ ತಜ್ಞ  ಪ್ರಥಮ ಪಾಂಚಜನ್ಯ ಪುರಸ್ಕಾರ ಪುರಸ್ಕೃತರಾದ ಡಾ.ಕೆ.ಎಸ್ ಸಮೀರಸಿಂಹ ನೇತೃತ್ವದಲ್ಲಿ ಪರಿಣತ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಜ್ಜಾಗಲು ಪರೀಕ್ಷಾಪೂರ್ವ ತರಬೇತಿಯಲ್ಲಿ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸುವ ವಿಧಾನ ಮತ್ತು ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಮೂಡಿಸುವ ಕುರಿತು ಮಾರ್ಗದರ್ಶನ ಮಾಡಿದ್ದಾರೆ . ತತ್ಪರಿಣಾಮವಾಗಿ ಶೇ. 90ಕ್ಕೂ ಅಧಿಕ ಫಲಿತಾಂಶ ಬಂದಿದ್ದು ಗ್ರಾಮಾಂತರ ವಿದ್ಯಾರ್ಥಿಗಳ ಪ್ರತಿಭೆ, ಪರಿಶ್ರಮಗಳು ಲೋಕದ ಬೆಳಕು ಕಾಣುವಂತಾಗಿದೆ ! ಈ ಶೈಕ್ಷಣಿಕ ಉಪಕ್ರಮದಿಂದ  ಕಳೆದ ನಾಲ್ಕು ವರ್ಷಗಳಿಂದ ಕಾಕೋಳು ಸರ್ಕಾರಿ ಪ್ರೌಢಶಾಲೆಯು ಬೆಂಗಳೂರು ಉತ್ತರ ತಾಲೂಕಿನಲ್ಲಿಯೇ ಅತ್ಯುತ್ತಮ ಅಂಕ ಪಡೆಯಲು ಸಹಕಾರಿಯಾಗಿದೆ.

ಅರ್ಥಪೂರ್ಣವಾಗಿ ಗುರುವಂದನೆ:

ಸೆಪ್ಟಂಬರ್ ಎಂದಾಕ್ಷಣ ನೆನಪಿಗೆ ಬರುವುದು ‘ಶಿಕ್ಷಕರ ದಿನಾಚರಣೆ ’ ; ಇದು ಔಪಚಾರಿಕ ಸಮಾರಂಭವಷ್ಟೇ ಆಗದೇ ವಿದ್ಯೆ ಕಲಿಸಿದಾತನಿಗೆ ಕೃತಜ್ಞತೆ ಅರ್ಪಿಸುವ ದಿನವಾಗಬೇಕೆಂಬ ಬಯಕೆಯಿಂದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಅಂಗವಾಗಿ ಕಾಕೋಳು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಷ್ಠಾನದ ವತಿಯಿಂದ ಸಮಾಜ ಶಿಲ್ಪಿಗಳಾದ ಉಪಾಧ್ಯಾಯರನ್ನು ಗೌರವಿಸುವ ಪ್ರತೀಕವಾಗಿ ಗುರುವಂದನೆ ಆಯೋಜಿಸುತ್ತದೆ. ಪ್ರತಿಷ್ಠಾನದ ಪ್ರಾರಂಭಿಕ ಧ್ಯೇಯ “ಅಕ್ಷರ”. ಅಕ್ಷರಕ್ಕೆ ತೋರುವ ಗೌರವ ಸಂಸ್ಕೃತಿಗೆ ತೋರುವ ಗೌರವ , ಅಕ್ಷರದ ಆದ್ಯತೆ ಸಾಧನೆಗೆ ದಾರಿ ,ಅಕ್ಷರವನ್ನು ; ಅಕ್ಷರ ಕಲಿಸಿದ ಶಿಕ್ಷಕನನ್ನೂ ಗೌರವಿಸುವುದು ಅತಿ ಶ್ರೇಷ್ಠವಾದ ನಾಗರೀಕತೆ.

- Advertisement -

ನಾಡೋಜ ,ಶತಾಯುಷಿ ಪ್ರೋ. ಜಿ.ವೆಂಕಟಸುಬ್ಬಯ್ಯ,  ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ಡಾ.ಹೋ.ಶ್ರೀನಿವಾಸಯ್ಯ, ಶಿಕ್ಷಣ ತಜ್ಞ ಪ್ರೋ ಎಂ ಆರ್ ಹೊಳ್ಳ , ಅಮರ ಬಾಪು ಚಿಂತನ ಮಾಸಪತ್ರಿಕೆ ಸಂಪಾದಕ ಜೀರಿಗೆ ಲೋಕೇಶ, ಸರ್ವೋದಯ ಮಂಡಲಿಯ ಡಾ.ಎಚ್.ಎಸ್.ಸುರೇಶ , ಪ್ರಾಚಾರ್ಯ ಡಾ.ಎಂ.ವಿ.ನಾಗರಾಜ ರಾವ್, ಸಂಶೋಧಕ ಸೇಡಂನ ಡಾ. ವಾಸುದೇವ ಅಗ್ನಿಹೋತ್ರಿ ಇವರೆಲ್ಲರು ಸಮಾಜದಲ್ಲಿ ಸಮಾನತೆ, ಸಹಿಷ್ಣುತೆಯ ತತ್ವಗಳನ್ನು ಪ್ರಸರಣ ಮಾಡುವ ದೃಷ್ಟಿಯಿಂದ ಸ್ಥಾಪನೆಯಾಗಿರುವ ಪ್ರತಿಷ್ಠಾನದ ಕಾರ್ಯಯೋಜನೆಗಳನ್ನು ಮೆಚ್ಚಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ಹೆಚ್ಚಾಗಿ ನಡೆಯಬೇಕೆಂದು ಪ್ರಶಂಸಿರುತ್ತಾರೆ.

ಗ್ರಾಮಾಂತರ ಪ್ರದೇಶದಲ್ಲಿ ಕಲಾ ಪೋಷಣೆ

ಶ್ರೀಕೃಷ್ಣನಿಗೂ ಕಲೆಗೂ ಅವಿನಾಭಾವ ನಂಟು ; ಐತಿಹಾಸಿಕ ಹಿನ್ನೆಲೆಯ ಕಾಕೋಳು ವೇಣುಗೋಪಾಲಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಅಷ್ಟದಶಮಾನೋತ್ಸವದ ಪ್ರಯುಕ್ತ ಆಹ್ವಾನಿತ 11 ಜನ ಕಲಾವಿದರು ತಮ್ಮ ಪರಿಕಲ್ಪನೆಯಲ್ಲಿ ಮೂಡಿದ ವಿಭಿನ್ನ ಶೈಲಿಯಲ್ಲಿ ಕೃಷ್ಣನನ್ನು ಚಿತ್ರಿಸಿದ ಕಲಾಕೃತಿಗಳ ಶ್ರೀ ಕೃಷ್ಣ ಕಲಾದರ್ಶನ ಸಮೂಹಚಿತ್ರ ಪ್ರದರ್ಶನಕ್ಕೆ ಸಹಯೋಗ ನೀಡಿದ ಪಾಂಚಜನ್ಯ ಪ್ರತಿಷ್ಠಾನದವರು, ಚಿತ್ರಕಲೆ ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ಗ್ರಾಮೀಣ ಪ್ರದೇಶದ ಕಲಾಪ್ರೇಮಿಗಳಿಗೂ ಮುಟ್ಟುವಂತೆ ಮಾಡುವುದು ಹಾಗು ನಾಡಿನ ಉದಯೋನ್ಮುಖ ಕಲಾಕಾರರನ್ನು ಪ್ರೋತ್ಸಾಹಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸುವ ಹಿನ್ನೆಲೆಯಲ್ಲಿ ಈ ಕಲಾಪ್ರದರ್ಶನವನ್ನು ಹಮ್ಮಿಕೊಂಡು ಅಷ್ಟಮಿಪ್ರಿಯನ ಅವಿಸ್ಮರಣೀಯ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿರುತ್ತಾರೆ ಎಂದು ಕಲಾಜಾತ್ರೆಯನ್ನು ಅನಾವರಣಗೊಳಿಸಿದ ವಿದ್ವಾನ್ ಆರ್.ಕೆ.ಪದ್ಮನಾಭ ರವರು ನೆನೆಪಿಸಿಕೊಳ್ಳುತ್ತಾರೆ.

ಸಾಧಕರ ಗೌರವ ಹೆಚ್ಚಿಸುವ  “ಪಾಂಚಜನ್ಯ ಪುರಸ್ಕಾರ” 

ಹಳ್ಳಿಗಳ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ ಎನ್ನುವುದು ಮಹಾತ್ಮ ಗಾಂಧೀಜಿ ಕಂಡ ಕನಸು. ಈ ಕನಸು ನನಸಾಗಲು ಸರಕಾರದ ಬದ್ದತೆಯೊಂದೇ ಸಾಲದು. ಪ್ರಜೆಗಳೂ ,ಪ್ರಜಾಸಂಸ್ಥೆಗಳೂ ಸರಕಾರದ ಜೊತೆ ಕೈಜೋಡಿಸಿ ದುಡಿದಾಗ ಪುರೋಭಿವೃದ್ದಿಯ ಪಥದಲ್ಲಿ ಗಮನ ಸರಾಗವಾಗುತ್ತದೆ. ಈ ದಿಸೆಯಲ್ಲಿ ಶ್ರಮಿಸುತ್ತಿರುವ ಒಂದು ಮಾದರಿ ಸಂಸ್ಥೆ ಪಾಂಚಜನ್ಯ ಪ್ರತಿಷ್ಠಾನ.

ಸಮಾನ ಮನೋಧರ್ಮದ ಗೆಳೆಯರು ಒಂದಾಗಿ ಗ್ರಾಮೀಣ ಪ್ರದೇಶದಲ್ಲಿ ಅಕ್ಷರ ,ಆರೋಗ್ಯ ಮತ್ತು ಅಧ್ಯಾತ್ಮ ವೆಂಬ ಮಂತ್ರಗಳ ಬುನಾದಿಯ ಮೇಲೆ ಭವ್ಯ ಸಮಾಜ ನಿರ್ಮಾಣದ ದೀಕ್ಷೆ ತೊಟ್ಟು,ಹಲವಾರು ಜನಮುಖಿ ಕಾರ್ಯಗಳನ್ನು ನಡೆಸುತ್ತಿದೆ ಈ ಸಂಘಟನೆ.

ಪ್ರತಿಷ್ಠಾನ ಲೋಕಾರ್ಪಣೆಗೊಂಡಾಗಿನಿಂದ ಪ್ರತಿ ವರ್ಷ ವಾರ್ಷಿಕೋತ್ಸವ ಸಂದರ್ಭದಲ್ಲಿ  ಅಕ್ಷರ ,ಆರೋಗ್ಯ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿ ಅವಿರತ ಸೇವಾ- ಸಾಧನೆಯನ್ನು ಮಾಡುತ್ತಿರುವ ಬಿಎಚ್‍ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗು ಖ್ಯಾತ ಶಿಕ್ಷಣ ತಜ್ಞ ಡಾ|| ಕೆ.ಎಸ್. ಸಮೀರ ಸಿಂಹ , ಜೀವೋ ರಕ್ಷತಿ ರಕ್ಷಿತಃ’ ಮಂತ್ರವನ್ನೇ ತಮ್ಮ ಜೀವನದ ಗುರಿಯಾಗಿಸಿಕೊಂಡು ಜೀವನ್ಮರಣದ ನಡುವೆ ಹೋರಾಡುವ ಕ್ಯಾನ್ಸರ್ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುವ ಖ್ಯಾತ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಪದ್ಮಶ್ರೀ ಡಾ. ಕೊಡಗನೂರು ಎಸ್. ಗೋಪಿನಾಥ್ ಮಂತ್ರಾಲಯ ಶ್ರೀಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಕುಲಾಧಿಪತಿಗಳಾದ ಹಿರಿಯ ವಿದ್ವಾಂಸ ವಿದ್ವತ್‍ಚಕ್ರವರ್ತಿ ಡಾ.ವಿ.ಆರ್.ಪಂಚಮುಖಿ, ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್‍ನ ಸ್ಥಾಪಕ ಅಧ್ಯಕ್ಷರಾದ ಡಾ. ಗುರುರಾಜ ಕರಜಗಿ, ಧರ್ಮ – ಸಾಹಿತ್ಯ -ಸಂಸ್ಕೃತಿ ಕ್ಷೇತ್ರಜ್ಞ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ, ಜಿಆರ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕಿ ಹಿರಿಯ ಶಿಕ್ಷಣ ತಜ್ಞೆ ಡಾ.ಗೀತಾ ರಾಮಾನುಜಂ ,ಜನಪರ ಕಾಳಜಿಯುಳ್ಳ ಖ್ಯಾತ ವೈದ್ಯೆ ಡಾ.ವಿಜಯಲಕ್ಷ್ಮಿ ದೇಶಮಾನೆ ಹಾಗು ಖ್ಯಾತ ವಿದ್ವಾಂಸ ಶತಾವಧಾನಿ ಡಾ.ಆರ್.ಗಣೇಶ್ ರವರುಗಳು ಪಾಂಚಜನ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ನಮ್ಮ ದೇಶದ 75ನೇ ಸ್ವಾತ್ರಂತೋತ್ಸವ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಪಾಂಚಜನ್ಯ ಪ್ರತಿಷ್ಠಾನದ ದಶಮಾನೋತ್ಸವ ಆಚರಣೆ ಹೆಮ್ಮೆಯ ಸಂಗತಿಯಾಗಿದೆ

ಶಿಕ್ಷಣ ಸೇವೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ನೆರವು

ಕಲಿಕೆಗಾಗಿ ಬೆಳಕು ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್ ವಿತರಣೆ ಯೋಜನೆಯಡಿ ಗ್ರಾಮೀಣ ಭಾಗದ ವಿದ್ಯುತ್ ಕೊರತೆಯನ್ನು ನೀಗಿಸಲು ಕಾಕೋಳು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ  ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಅವರ ಅವಶ್ಯಕತೆಯನ್ನು ಮನಗಂಡು ಸೆಲ್ಕೋ ಪ್ರತಿಷ್ಠಾನ ಮತ್ತು ಮೆಂಡಾ ಪ್ರತಿಷ್ಠಾನದ ಸಹಯೋಗದಲ್ಲಿ ಸೋಲಾರ್ ಲ್ಯಾಂಪನ್ನು ವಿತರಿಸಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಗೌರವ ಕಾರ್ಯದರ್ಶಿ ಮುರಳಿ ಎಸ್ ಕಾಕೋಳು ತಿಳಿಸುತ್ತಾರೆ. 

ಗ್ರಾಮೀಣ ವಿದ್ಯಾರ್ಥಿಗಳನ್ನು ಡಿಜಿಟಲ್ ತಂತ್ರಜ್ಞಾನಕ್ಕೆ ಅಣಿಗೊಳಿಸಲು ಪ್ರತಿಷ್ಠಾನವು ಎಚ್‍ಸಿಎಲ್ ಪ್ರಾಯೋಜಿತ ಡಿಜಿಟಲ್ ಸಾಕ್ಷರತಾ ಕೇಂದ್ರ ಯೋಜನೆಯ ಜೊತೆ ಕೈಜೋಡಿಸಿ ಆ ಮುಖಾಂತರ ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟೂ ಹೆಚ್ಚಿಸುವ ಪ್ರಯತ್ನ ಮಾಡಲು ಮುಂದಾಗಿ. ಸೆಲ್ಕೋನ ಸೌರ ವ್ಯವಸ್ಥೆಯಿಂದ ವಿದ್ಯುಚ್ಛಕ್ತಿ ಪಡೆವ, ಕಡಿಮೆ ವಿದ್ಯುತ್ ಬಳಕೆಯ ಒಂದು ಪ್ರಾಜೆಕ್ಟರ್ ಆನಿಮೇಟೆಡ್ ವೀಡಿಯೋ ಒಳಗೊಂಡ ಈ ದೃಕ್ ಶ್ರಾವ್ಯ ಬೋಧನಾ ಸಲಕರಣೆಯ ಉದ್ಘಾಟನೆಯನ್ನು ಎಚ್‍ಸಿಎಲ್ ಟೆಕ್ನಾಲಜೀಸ್‍ನ ಉಪಾಧ್ಯಕ್ಷರಾದ ರವೀಂದ್ರ ನುಗೂರಿರವರು ನೆರವೇರಿಸಿದರು.

ನವೀಕರಣಗೊಂಡಿರುವ `ಶಾಲಾ ಕೊಠಡಿಗಳ ಲೋಕಾರ್ಪಣೆ ’ ಪಾಂಚಜನ್ಯ ಪ್ರತಿಷ್ಠಾನದ ಶೈಕ್ಷಣಿಕ ಉಪಕ್ರಮವಾಗಿ ನಮ್ಮ ಗ್ರಾಮ, ನಮ್ಮ ಶಾಲೆ, ನಮ್ಮ ಹೆಮ್ಮೆ ಯೋಜನೆಯಡಿಯಲ್ಲಿ ಮಳೆ ಗಾಳಿಯಿಂದ ತೊಂದರೆ ಗೊಳಗಾಗಿದ್ದ ರಾಮನಗರ (ಜಿಲ್ಲೆ) ಕನಕಪುರ ತಾ, ಹಾರೋಹಳ್ಳಿ ಹೋ ಕೊಳ್ಳಿಗನಹಳ್ಳಿ ಅಂಚೆ ಆಣೆದೊಡ್ಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ಗುರುತಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪೂರಕ ಯೋಜನೆಯಂತೆ ಮೆ: ಆರ್ಕಿಡ್ ಲ್ಯಾಮಿನೇಟ್ಸ್ ಪ್ರೈ.ಲಿ. ರವರ ಸಿಎಸ್‍ಆರ್ ಯೋಜನೆಯಡಿಯಲ್ಲಿ ಶಿಥಿಲಾವಸ್ಥೆ ತಲುಪಿದ್ದ ಶಾಲಾ ಕೊಠಡಿಗಳನ್ನು ನವೀಕರಣಗೊಳಿಸಲಾಗಿದೆ.

ಸರ್ಕಾರಿ ಶಾಲೆಗಳು ಯಾವುದೇ ಖಾಸಗೀ ಶಾಲೆಗಳಿಗಿಂತ ಕಡಿಮೆಯೇನು ಇಲ್ಲ, ಶಾಲಾ ಶುಲ್ಕ, ಲೇಖನ ಸಾಮಗ್ರಿಗಳು, ಸಮವಸ್ತ್ರಗಳ ಖರೀದಿಗಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಜೊತೆಗೆ ವಿಶೇಷ ತರಗತಿಗಳಿಗೂ ಮಕ್ಕಳನ್ನು ಕಳುಹಿಸುವ ವ್ಯವಸ್ಥೆಯನ್ನು ಖಾಸಗೀ ಶಾಲಾ ವಿದ್ಯಾರ್ಥಿಗಳ ಪೋಷಕರು ಕೈಗೊಳ್ಳುವಂಥ ಸ್ಥಿತಿ ಇಂದಾಗಿದೆ. ಆದರೆ ಸರ್ಕಾರಿ ಶಾಲೆಗಳು ಉತ್ತಮ ವಾತಾವರಣದಲ್ಲಿ ಉಚಿತ ಬೋಧನೆ, ಸುಸಜ್ಜಿತ ಕೊಠಡಿ ಹಾಗು ಪೀಠೋಪಕರಣ ವ್ಯವಸ್ಥೆ,  ಮಧ್ಯಾಹ್ನದ ಉಚಿತ ಬಿಸಿಯೂಟ, ಬಿಸಿಹಾಲು ವಿತರಣೆ, ಉಚಿತ ಸಮವಸ್ತ್ರ, ಉಚಿತ ಶೂ ಸಾಕ್ಸ್, ಉಚಿತ ಸೈಕಲ್ ವಿತರಣೆ, ಉಚಿತ ವೈದ್ಯಕೀಯ ತಪಾಸಣೆ, ವಿದ್ಯಾರ್ಥಿವೇತನ, ಉಚಿತ ಬಸ್ಪಾಸ್, ದಾಖಲಾತಿ ಹಾಗು ವರ್ಗಾವಣೆಯ ವ್ಯವಸ್ಥೆ ಸುಗಮ  (ಆನ್ಲೈನ್ ಮೂಲಕ) ಕಂಪ್ಯೂಟರ್ ತರಬೇತಿ, ಕ್ರೀಡಾ ತರಬೇತಿ, ಲಲಿತಕಲೆಗೆ ಪ್ರೋತ್ಸಾಹ, ಪರಿಸರ ಶಿಕ್ಷಣ, ಹೆಣ್ಣು ಮಕ್ಕಳಿಗೆ ವಿಶೇಷ ಕಾಳಜಿ ಅನುಕೂಲತೆಗಳು, ಆಂಗ್ಲ ಮಾಧ್ಯಮದಲ್ಲೂ ಕಲಿಯಲು ಅವಕಾಶ, ತಿಂಗಳಿಗೊಮ್ಮೆ ಪೋಷಕರ ಸಭೆ, ಪರೀಕ್ಷಾ ಪೂರ್ವ ವಿಶೇಷ ಕಲಿಕಾ ಅವಧಿ, ವಿಶೇಷ ತರಬೇತಿ ಕಾರ್ಯಕ್ರಮಗಳು, ಆರೋಗ್ಯ, ಆಹಾರ, ಸ್ವಚ್ಛತೆ ಕುರಿತಂತೆ ಮಾರ್ಗದರ್ಶನ, ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಹಾಗು ಸುಪ್ತವಾದ ಪ್ರತಿಭೆ ಹೊರಹೊಮ್ಮಿಸುವಂತಹ ಅನೇಕ ಕಾರ್ಯಕ್ರಮಗಳ ಅನುಷ್ಠಾನ, ವೃತ್ತಿಪರ ತರಬೇತಿ ಇನ್ನೂ ಮುಂತಾದ ಅನುಕೂಲತೆಗಳನ್ನು ಸರ್ಕಾರ ಮತ್ತು ಅನೇಕ ಸ್ವಯಂಸೇವಾ ಸಂಸ್ಥೆಗಳು ಸ್ಥಳೀಯ ವ್ಯಕ್ತಿಗಳ ಸಹಕಾರದೊಂದಿಗೆ ಹೊಂದಿವೆ.

ಇಂದಿನ ಪೋಷಕರು ಖಾಸಗೀ ಶಾಲೆಗಳ ವ್ಯಾಮೋಹ ತೊರೆದು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಿ ಉತ್ತಮ ಅನುಕೂಲತೆಗಳನ್ನು ಪಡೆದು ತಮ್ಮ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಹಾಗು ಸರ್ಕಾರದ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಲು ಮತ್ತು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣರಾಗಲು ಮನಸ್ಸು ಮಾಡಬೇಕಾಗಿದೆ.

ವೈದ್ಯಕೀಯ ಶಿಬಿರದ ಮೂಲಕ ಸಮುದಾಯ ಆರೋಗ್ಯವೃದ್ಧಿ

       ಧಾರ್ಮಿಕ ಆಚರಣೆಗಳಿಗೆ ಬೆಂಗಳೂರು ಹೆಸರು ವಾಸಿಯಾಗಿದೆ . ಯಾಂತ್ರಿಕ ಬದುಕಿನಲ್ಲಿ ಸಿಕ್ಕಿಕೊಂಡಿರುವ ಸಜ್ಜನರಿಗೆ ಈ ತಾಣಗಳು ದಾರಿದೀಪವಾಗಿವೆ . ವೈಟ್‍ಫೀಲ್ಡ್‍ನ ವೈದೇಹಿ ಆಸ್ಪತ್ರೆಯ ಸಹಯೋಗದಲ್ಲಿ ನಗರದ ಕೋಣನಕುಂಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು  ಆಯೋಜಿಸಲಾಗಿತ್ತು. ಭವರೋಗ ವೈದ್ಯರಾದ ಶ್ರೀ ರಾಯರ ಸನ್ನಿಧಾನದಲ್ಲಿ  ಸಾಮಾನ್ಯ ಆರೋಗ್ಯ, ಹೃದ್ರೋಗ, ಮೂಳೆ ಸಂಬಂಧಿತ, ಸ್ತ್ರೀರೋಗ ಇತ್ಯಾದಿ ತಪಾಸಣೆಯ ಪ್ರಯೋಜನವನ್ನು 200ಕ್ಕೂ ಅಧಿಕ ಮಂದಿ ಫಲಾನುಭವಿಗಳು  ಪಡೆದುಕೊಂಡಿರುತ್ತಾರೆ .

ಜೆ.ಪಿ ನಗರ 4ನೇ ಹಂತ ಡಾಲರ್ಸ್ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ) ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ಬಡಾವಣೆಯ ಶುಚಿತ್ವ ಕಾರ್ಯಕ್ರಮ  “ಶುಚಿಯೇ ಖುಷಿ” ಕಾರ್ಯಕ್ರಮ ಆಯೋಜಿಸಲಾಗಿತ್ತು .

“ಸರ್ವೇ ಭವಂತು ಸುಖಿನಃ” ಎಂಬ ಧ್ಯೇಯವಾಕ್ಯದಂತೆ , ಕನಿಷ್ಟ ವೈದ್ಯಕೀಯ ಚಿಕಿತ್ಸೆಗಳಿಂದ ವಂಚಿತರಾದವರಿಗೆ ಆಸರೆಯಾಗಿ ನಿಲ್ಲುವ  ಆರೋಗ್ಯಾಮೃತ- ರಾಜ್ಯಪ್ರಶಸ್ತಿ ವಿಜೇತ ಉದಯಭಾನು ಕಲಾ ಸಂಘ ಮತ್ತು ನಾರಾಯಣ ನೇತ್ರಾಲಯದ ಸಹಯೋಗದೊಡನೆ ಗ್ರಾಮೀಣ ಭಾಗದ ಅವಕಾಶ ವಂಚಿತರು ಮತ್ತು ಅಶಕ್ತರ ಅನುಕೂಲಕ್ಕಾಗಿ ಕಾಕೋಳು ಗ್ರಾಮದಲ್ಲಿ ನಡೆಸಿದ ಉಚಿತ ನೇತ್ರ  ಮತ್ತು ದಂತ ತಪಾಸಣಾ ಶಿಬಿರದ ಫಲಾನುಭವವನ್ನು  ಸುತ್ತಲಿನ ಗ್ರಾಮದ ಹಿರಿಯ ನಾಗರಿಕರು ಪಡೆದಿರುತ್ತಾರೆ ಎಂದು ಸಂಸ್ಥಾಪಕ ಟ್ರಸ್ಟೀ ಎಸ್ ವಿ ಸುಬ್ರಹ್ಮಣ್ಯ ವಿವರಿಸುತ್ತಾರೆ. 

ಸಹಾನುಭೂತಿಯ ಸಂವೇದನೆಯೊಂದಿಗೆ ಗಮನಿಸುವಾಗ ಬದಲಾವಣೆ ಹೇಗೆ ಸಾಧ್ಯ ಎಂದು ತಿಳಿಯದೇ ಅಸಹಾಯಕತೆಯೂ(ಯೇ) ಮನೆಮಾಡಿ ಜನರಲ್ಲಿ ಉದಾಸೀನ ಮೂಡುವುದು ಸಹಜ ,ಹಾಗಿರುವಾಗ ಬದಲಾವಣೆಯ ದಾರಿಯನ್ನು ತೋರಿಸಿ , ಪೋಷಿಸಿದಾಗ ಅಸಹಾಯಕತೆಯೂ ದೂರವಾಗುತ್ತದೆ. ಜೊತೆಗೆ ಕಣ್ಣಿಗೆ ಕಾಣುವ ಬದಲಾವಣೆಯೂ ಸಾಧ್ಯ ಎಂದು ಪಾಂಚಜನ್ಯ ಪ್ರತಿಷ್ಠಾನ ನಂಬಿಕೊಂಡು ಬಂದಿದೆ . ನಿಮಗೂ ಪಾಂಚಜನ್ಯ ಪ್ರತಿಷ್ಠಾನದೊಂದಿಗೆ ಜೋಡಿಸಿಕೊಳ್ಳಬೇಕೆನಿಸಿದರೆ ಕರೆಮಾಡಿ 9845075250 ಹಾಗೂ ಸಮಾಜದಲ್ಲಿನ ಬದಲಾವಣೆಗೆ ಪಾತ್ರರಾಗಿರಿ .

ಅಪ್ರತಿಮ ಚಿತ್ರ ವರ್ಣ ಕಲಾಕಾರ, ವಿದ್ಯಾಕ್ಷೇತ್ರದ ಮಾದರಿ ಗುರು, ಜನಾನುರಾಗಿ

ಶ್ರೀ ಸುರೇಶ್ ವೆಂಕಟೇಶ ಕುಲಕರ್ಣಿ ಅವರಿಗೆ ಪಾಂಚಜನ್ಯ ಪುರಸ್ಕಾರ-2023

ಪ್ರದಾನ ಸಂದರ್ಭದಲ್ಲಿ ಕಿರು ಪರಿಚಯ 

ಶೈಕ್ಷಣಿಕ ವಲಯದಲ್ಲಿ ಆದರ್ಶ ಗುರುವಾಗಿ ಅಮೂಲ್ಯ ಸೇವೆ ಸಲ್ಲಿಸುತ್ತಾ, ಜನಪ್ರಿಯ ಅಧ್ಯಾಪಕರಾಗಿ ಉತ್ತರ ಕರ್ನಾಟಕದ ನೆಲದ ಕಲಾ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಸುರೇಶ ವೆಂಕಟೇಶ ಕುಲಕರ್ಣಿ ಅವರು  ಕವಿ ಕುಮಾರವ್ಯಾಸನ ಆರಾಧ್ಯ ದೈವ ವೀರನಾರಾಯಣನು ನೆಲೆಗೊಂಡ ಗದಗ ಕ್ಷೇತ್ರದ ವೈಭವ ಇತಿಹಾಸದ ಭಾವೈಕ್ಯತೆಯ ನೆಲೆವೀಡಾದ ಶರಹಪೂರ ಎಂದೇ ಖ್ಯಾತವಾದ ತಿರುಳ್ಗನ್ನಡ ನಾಡು ಶಿರಹಟ್ಟಿಯ ಬನ್ನಿಕೊಪ್ಪದಲ್ಲಿ ಭಾರತೀಯತೆಯೇ ಮೂರ್ತೀಭವಿಸಿದ ಸುಸಂಸ್ಕೃತ ಕುಲಕರ್ಣಿ ಕುಟುಂಬದ  ವೆಂಕಟೇಶ ಕುಲಕರ್ಣಿ ಮತ್ತು ಶ್ರೀಮತಿ ಸೋನುಬಾಯಿ(ಪದ್ಮಾವತಿ) ಸುಪುತ್ರರಾಗಿ 25.05.1948ರಂದು ಜನಿಸಿದರು. ಉತ್ತರ ಕರ್ನಾಟಕದ ಮಣ್ಣಿನ ಸೊಗಡನ್ನು ಸಹಜವಾಗಿಯೇ ಮೈಯ ಕಣ ಕಣದಲ್ಲೂ ತುಂಬಿಕೊಂಡ ಅಪರೂಪ ವ್ಯಕ್ತಿತ್ವ . 

ಪ್ರಾಥಮಿಕ- ಪ್ರೌಢ ಶಿಕ್ಷಣವನ್ನು ಶಿರಹಟ್ಟಿಯಲ್ಲಿಯೇ ಪೂರ್ಣಗೊಳಿಸಿ ಉನ್ನತ ಶಿಕ್ಷಣ, ಸ್ನಾತಕೋತ್ತರ ಪದವಿಗ್ರಹಿತರಾದ ನಂತರ ರಾಜ್ಯ ಸರ್ಕಾರದ ಕಲೆ ಮತ್ತು ಮಾಡೆಲಿಂಗ್‍ಗಳಲ್ಲಿ ವಿಶೇಷ ಪದವಿಗಳನ್ನು ಪಡೆದು ಚಿತ್ರಕಲಾ ಶಿಕ್ಷಕರ ಕೋರ್ಸ್‍ನಲ್ಲಿ ರಾಜ್ಯಕ್ಕೆ ಪ್ರಥಮರಾಗಿ ಸಾಧನೆ ಮಾಡಿದ ಹೆಮ್ಮೆ ಇವರದು. 

ಶಾಲಾ ದಿನಗಳಿಂದಲೂ ಚಿತ್ರಕಲೆ ಮತ್ತು ವರ್ಣಕಲೆಯತ್ತ ಒಲುಮೆಯನ್ನು ಬೆಳೆಸಿಕೊಂಡು ವಿಶ್ವವಿದ್ಯಾನಿಲಯ ಮಟ್ಟದ, ರಾಜ್ಯ ಮಟ್ಟದ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡದ ಪ್ರತಿಭಾಶಾಲಿ ಆಗಿದ್ದಾರೆ. ಬಿ.ಎಡ್ ಪದವಿ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್, ಜಿಡಿ ಕಲೆ ಮತ್ತು ಜಿಡಿ ಮಾಡೆಲಿಂಗ್‍ಗಳಲ್ಲಿ ರಾಜ್ಯಕ್ಕೆ ಮೊದಲಿಗರಾಗಿ ‘ಕಲಾನಿಪುಣ’ ಎನಿಸಿಕೊಂಡು ನಾಡಿನ ಕಲೋಪಾಸಕರ ಸಾಲಿನಲ್ಲಿ ಪ್ರಥಮರಾಗಿದ್ದಾರೆ. 

ಧಾರವಾಡದ ಸುತ್ತಲಿನ ಪ್ರದೇಶಗಳಲ್ಲಿ ಶ್ರೀಯುತರು ಜ್ಞಾನಶಿಬಿರ, ಸ್ವಕಲಿಕಾ ಶಿಬಿರ, ಪ್ರಕೃತಿ ಅಧ್ಯಯನ ಶಿಬಿರ, ಆರೋಗ್ಯ ಶಿಬಿರ, ಸೃಜನಶೀಲ ಶಿಬಿರ, ವಿಜ್ಞಾನ ಶಿಬಿರ, ವರ್ಣ ಚಿತ್ರಕಲಾ ಶಿಬಿರ, ಉಪಾಧ್ಯಾಯರಿಗಾಗಿ ಬೋಧನಾ ಕೌಶಲ್ಯ ಶಿಬಿರ ಮುಂತಾದ ಕಲೆ, ಆರೋಗ್ಯ, ಸಾಂಸ್ಕೃತಿಕ ಶಿಬಿರಗಳನ್ನು ಆಯೋಜಿಸಿ ಸಮಾಜ ಸ್ವಾಸ್ಥ್ಯದ ಹಲವು ಕಾರ್ಯಗಳ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಅದಮ್ಯ ಚೇತನ . 

ವೃತ್ತಿಪರವಾಗಿ ಧಾರವಾಡದಲ್ಲಿ ಸುಮಾರು ಮೂರು ದಶಕಗಳಿಗೂ ಮೀರಿ ಅಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ನಾಂದಿ ನುಡಿದು ರಾಜ್ಯಮಟ್ಟದ ‘ಆದರ್ಶಗುರು’ ಪ್ರಶಸ್ತಿಗೆ ಅರ್ಹವಾಗಿಯೇ ಭಾಜನರಾಗಿ, ಪದ್ಮವಿಭೂಷಣೆ ಗಂಗೂಬಾಯಿ ಹಾನಗಲ್ ಅವರಿಂದ ‘ಶಾರದ ಶಾಲ್ಮಲಾ’ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರದಾಗಿದೆ. 

ತಮ್ಮ ಅನನ್ಯ ಸಾಮಾಜಿಕ ಕಳಕಳಿ, ಕಲಾಸೇವೆ, ಸಾಹಿತ್ಯ ಸೇವೆಗಳನ್ನು ಪುರಸ್ಕರಿಸಿ ರಾಷ್ಟ್ರೀಯ ಎನ್‍ಸಿಇಆರ್‍ಟಿ ಪ್ರಶಸ್ತಿ, ಡಾ|| ಎಸ್.ಜಿ. ನಾಗಲೋಟಿಮಠ ಪ್ರಶಸ್ತಿ, ‘ಬೇಂದ್ರೆ ಕಲಾರತ್ನ’ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸರದಿಯಲ್ಲಿ ನಿಂತು ಇವರನ್ನು ಅಲಂಕರಿಸಿವೆ.

ಕನ್ನಡ ಪುಸ್ತಕ ಪ್ರಪಂಚಕ್ಕೆ ‘ಆಧುನಿಕ ಕಲಾವಿನ್ಯಾಸ’, ‘ಭಾವರೇಖೆಯಲ್ಲಿ ಬೇಂದ್ರ’, ‘ಪಕ್ಷಿ ಸಂಕುಲ’, ‘ರಾಜ್ಯಕೋಶ ಪಕ್ಷಿಪ್ರಾಣಿ ಸಂಪುಟ’, ‘ಕುಶಲಕಲೆಯ ಕುತೂಹಲ ಜೀವಿಗಳು’, ‘ಚೆಲುವ ಕನ್ನಡ ನಾಡು’ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿ-ಪ್ರಕಟಣೆಗಳನ್ನು ಕೊಡುಗೆಯನ್ನಾಗಿ ನೀಡುವ ಮೂಲಕ ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸಿದ ಹೆಮ್ಮೆ ಇವರ ಪಾಲಿಗಿದೆ. ಧಾರವಾಡದ ಬಾನುಲಿಯಲ್ಲಿ ತಮ್ಮ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳು ಬಿತ್ತರಗೊಂಡಿವೆ. 

ಅನೇಕ ಪ್ರತಿಷ್ಠಿತ ಗ್ರಂಥಗಳಿಗೆ ಸೊಗಸಾದ ಸೂಕ್ತ ಮುಖ ಪುಟಗಳನ್ನು ವಿನ್ಯಾಸಗೊಳಿಸಿರುವುದು ಇವರ ಕಲೆಯ ಕಲ್ಪನಾ ಶಕ್ತಿಗೆ ನಿದರ್ಶನವಾಗಿದೆ. 

ಧಾರವಾಡದ ಕಲಾವೃಂದ, ಚೈತನ್ಯ ಮಂಡಲ, ಮಕ್ಕಳ ಅಕಾಡೆಮಿಯ ಸಂಸ್ಥಾಪಕರಾಗಿ, ಕಲೋದ್ಧಾರಕ ಸಂಘ, ಅಂಬಿಕಾತನಯದತ್ತ ವೇದಿಕೆಗಳ ಸದಸ್ಯರಾಗಿ, ಅನ್ವೇಷಕ ಕೂಟ, ಬಾಲರಂಗಗಳ ನೇತಾರರಾಗಿ, ಶಿಕ್ಷಣ ವಿಕಾಸ ಪರಿಷತ್ತು, ಶ್ರೀ ರಾಮಕೃಷ್ಣ ಆಶ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬಹುರೂಪಿ ಪ್ರತಿಭೆಯಾಗಿ ಸಮುದಾಯ ಸೇವೆಯಲ್ಲಿ ಸದಾ ನಿರತರಾಗಿರುವ ಚೈತನ್ಯಶೀಲ ವ್ಯಕ್ತಿತ್ವ ಇವರದು. 

ಜಿಲ್ಲಾ ಪ್ರಾಥಮಿಕ ಶಿಕ್ಷಣ, ಸರ್ವ ಶಿಕ್ಷಾ ಅಭಿಯಾನ, ದೂರ ಶಿಕ್ಷಣ ಯೋಜನೆ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ, ಆಕಾಶವಾಣಿಯ ರಾಜ್ಯಮಟ್ಟದ ‘ಕೇಳಿ-ಕಲಿ’ ಕಾರ್ಯಕ್ರಮದ ಸಹಭಾಗಿಗಳಾಗಿ ರಾಜ್ಯ ಶಿಕ್ಷಣ ವಲಯದಲ್ಲಿ ಪ್ರತ್ಯೇಕ ಸ್ಥಾನವನ್ನು ಪಡೆದಿರುವ ಹಿರಿಮೆಗೆ ಪಾತ್ರರಾಗಿದಿದ್ದಾರೆ.

 ಇವೆರ ಎಲ್ಲ್ಲ ಸಮಾಜಮುಖೀ ಚಟುವಟಿಕೆಗಳಿಗೆ ಜೀವತುಂಬುವ ಪತ್ನಿ ತಾರಾ, ಮಕ್ಕಳಾದ ವರ್ಷಾ, ಹರ್ಷಾ ಮತ್ತು  ರಶ್ಮಿ , ಅಳಿಯಂದಿರಾದ  ಸಚಿನ ಮೆಳ್ಳಿಮಟ್ಟಿ  ಮತ್ತು ಪ್ರವೀಣ ದೊಡ್ಡವಾಡ , ಮೊಮ್ಮಗಳು ವಾಗ್ಮಯಿ ಇದು ಸಗ್ಗಕ್ಕೆ ಕಿಚ್ಚು ಹಚ್ಚಬಹುದಾದ ಇವರ  ಚಿಕ್ಕ ಚೊಕ್ಕ ಕುಟುಂಬದ ಸಂತೃಪ್ತ ಬದುಕು. 

ಆಧ್ಯಾತ್ಮಿಕ ತಳಹದಿಯ ಮೇಲೆ ಗ್ರಾಮೀಣ ಪ್ರದೇಶದಲ್ಲಿ  ಅಕ್ಷರ, ಆರೋಗ್ಯಗಳ ಏಳಿಗೆಯನ್ನೇ ಗುರಿಯನ್ನಾಗಿಸಿಕೊಂಡು ಶ್ರಮಿಸುತ್ತಿರುವ ಲಾಭರಹಿತ ಸಂಸ್ಥೆಯಾದ ಪಾಂಚಜನ್ಯ ಪ್ರತಿಷ್ಠಾನದ ವಾರ್ಷಿಕ ಉತ್ಸವದ ಸಂಭ್ರಮದಲ್ಲಿ ಬೆಂಗಳೂರು ಜಯನಗರ 4ನೇ ಬಡಾವಣೆಯ ಯುವಪಥ ವಿವೇಕ ಸಭಾಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಾಡಿನ ಶಿಕ್ಷಣ ಹಾಗೂ ಕಲಾ ವಲಯಗಳಿಗೆ ಅವಿರಾಮವಾಗಿ ಅನುಪಮ ಸೇವೆ ಸಲ್ಲಿಸುತ್ತಿರುವ ಶ್ರೀಯುತರಿಗೆ ಪಾಂಚಜನ್ಯ ಪರಸ್ಕಾರ – 2023 ಅನ್ನು ಪ್ರದಾನವಾಗಲಿದೆ.


 ಜಿ.ಪಿ. ನಾಗರಾಜನ್

- Advertisement -
- Advertisement -

Latest News

Today Horoscope: ಭಾನುವಾರ, ಫೆಬ್ರವರಿ 25, 2024 ರಂದು ನಿಮ್ಮ ರಾಶಿ ಭವಿಷ್ಯ

ಇಂದು ಫೆಬ್ರವರಿ 25, 2024, ಭಾನುವಾರ. ಈ ದಿನ 3 ವಿಶೇಷ ಯೋಗಗಳ ಸಂಯೋಜನೆಯಾಗಿದೆ: ಸುಕರ್ಮ ಯೋಗ, ತ್ರಿಪುಷ್ಕರ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ....
- Advertisement -

More Articles Like This

- Advertisement -
close
error: Content is protected !!
Join WhatsApp Group