spot_img
spot_img

ಹೇಮಾವತಿ ತೀರದ ಕಲ್ಲಹಳ್ಳಿ ಭೂವರಾಹಸ್ವಾಮಿ ದೇವಾಲಯ ದರ್ಶನ

Must Read

spot_img
- Advertisement -

ನಾವು ಕೆಆರ್‍ಎಸ್ ಹಿನ್ನೀರಿನಲ್ಲಿ ಮುಳುಗಡೆಯಾಗಿ ನೂತನವಾಗಿ ನಿರ್ಮಿಸಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ದರ್ಶಿಸಿದ ನಂತರ ಶ್ರೀ ಭೂವರಾಹನಾಥಸ್ವಾಮಿ ದೇವಾಲಯ ನೋಡಲು ಹೊರಟೆವು. ಬನ್ನಂಗಾಡಿ ಬಲ್ಲೇನಹಳ್ಳಿ ಗಂಜಿಗೆರೆ ಮಾರ್ಗ ಕಲ್ಲಹಳ್ಳಿ ತಲುಪಿದೆವು. ಗಂಜಿಗೆರೆ ಅಂಚೆ ಬೂಕನಕೆರೆ ಹೋಬಳಿ ಕೆ.ಆರ್.ಪೇಟೆ ತಾಲ್ಲೂಕಿಗೆ ಸೇರಿದ  ಕಲ್ಲಹಳ್ಳಿ  ಕೆ.ಆರ್. ಪೇಟೆಯಿಂದ  20 ಕಿ.ಮೀ. ದೂರದಲ್ಲಿದೆ. ಇಲ್ಲಿಯ ಶ್ರೀ ಭೂವರಾಹನಾಥಸ್ವಾಮಿ ದೇವರ ಮಹಿಮೆ ಜನಜನಿತವಾಗಿ ಭಕ್ತಾದಿಗಳು ಮನೆ ಸೈಟು ಖರೀದಿಸುವ ಬಯಕೆಯಲ್ಲಿ  ಸಂಕಲ್ಪ ಬೇಡಿಕೆ ತೊಟ್ಟು ಇಲ್ಲಿಗೆ ಆಗಮಿಸಿ ಪ್ರಾರ್ಥಿಸಿ ಹೋಗುವುದರಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಬಂದು ಹೋಗುತ್ತಾರೆ. ಅದರಲ್ಲೂ ಭಾನುವಾರ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲೇ ಜನರಿದ್ದರು.

ಈ ದೇವಸ್ಥಾನವು ವಿಷ್ಣುವಿನ 3ನೇ ಅವತಾರವಾದ ವರಾಹಸ್ವಾಮಿ ರೂಪಕ್ಕೆ ಅರ್ಪಿತವಾಗಿದೆ. ಸುಮಾರು 2500 ವರ್ಷಗಳಿಗಿಂತ ಹಳೆಯದೆಂದು ಹೇಳಲಾಗಿದೆ. ದೇವಾಲಯದ ರಚನೆ ಸರಳವಾಗಿದೆ. ಇದು ದೊಡ್ಡ ಬೂದು ಕಲ್ಲಿನ ಬ್ಲಾಕ್‍ಗಳಿಂದ ನಿರ್ಮಿಸಿದ  ಆಯಾತಕಾರದ ಕಟ್ಟಡವಾಗಿದೆ. ದೇವಾಲಯದ ಎರಡು ಘಟಕಗಳು ಗರ್ಭಗುಡಿ ಮತ್ತು ಮುಂಭಾಗದ ಸಭಾಂಗಣವನ್ನು ಒಳಗೊಂಡಿದೆ. ಪ್ರವೇಶದ್ವಾರದಲ್ಲಿ ಎರಡು ದೊಡ್ಡ ಮರದ ಬಾಗಿಲುಗಳಿವೆ. ಇಲ್ಲಿ ಗೌತಮ ಮಹರ್ಷಿಯು ಸಾಲಿಗ್ರಾಮವನ್ನು ಪೂಜಿಸಿದ್ದರೆಂದು ಪ್ರತೀತಿ ಇದೆ. ಒಂದು ದಂತಕಥೆಯಂತೆ ಹೊಯ್ಸಳರ 3ನೇ ವೀರ ಬಲ್ಲಾಳ ಈ ಕಾಡಿನಲ್ಲಿ ಭೇಟೆಯಾಡಲು ಬಂದು ಕಳೆದುಹೋಗುತ್ತಾರೆ. ರಾಜನು ಒಂದು ಆಲದ ಮರದ ಕೆಳಗೆ ಮಿಶ್ರಮಿಸುತ್ತಿರಲು ನಾಯಿಯೊಂದು  ಮೊಲವನ್ನು ಬೆನ್ನಟ್ಟಿ ಬರುತ್ತದೆ. ಮೊಲವು  ಒಂದು ನಿರ್ದಿಷ್ವ ಸ್ಥಳ ತಲುಪಿದಾಗ ಅದು ಹಿಂತಿರುಗಿ ಉಗ್ರ ನಾಯಿಯನ್ನೇ ಬೆನ್ನಟ್ಟಲು ಆರಂಭಿಸಿದ್ದನ್ನು ಕಂಡು ಆ ಸ್ಥಳದಲ್ಲಿ ಕಾಣದ ಮಾಂತ್ರಿಕ ಶಕ್ತಿ ಇರುವುದನ್ನು ರಾಜನು ಮನಗಂಡನು. ಅವನು ಈ ಪ್ರದೇಶವನ್ನು ಅಗೆದು ಭೂಮಿಯ ಪದರಗಳ ಅಡಿಯಲ್ಲಿ ಮರೆಯಾಗಿದ್ದ ಪ್ರಳಯ ವರಹನಾಥಸ್ವಾಮಿಯ ವಿಗ್ರಹವನ್ನು ಕಂಡನು. ಮುಂದೆ ಅದನ್ನು ದೇವಸ್ಥಾನದಲ್ಲಿ ಸ್ಥಾಪಿಸಿ ನಿಯಮಿತವಾದ ಪೂಜೆ ಪ್ರಾರ್ಥನೆ ಸಲ್ಲಿಸಿದನೆಂದು ನಾವು ಇಂದು ನೋಡುತ್ತಿರುವ ದೇವಾಲಯವು ರಾಜನು ಕಟ್ಟಿದ ಅವಶೇಷಗಳು ಇಂದಿಗೂ ಸಹ ದೇವಸ್ಥಾನದ ಮುಂದೆ ಮತ್ತು ದೇವಸ್ಥಾನದ ಮೇಲೆ ಶಾಸನಗಳಿದ್ದು ಈ ಸ್ಥಳದ ಕಥೆಯನ್ನು ನಮಗೆ ಹೇಳುತ್ತವೆ. ಇದನ್ನು ಪ್ರಳಯ ವರಾಹಸ್ವಾಮಿ, ಆದಿ ವರಾಹ ಮಹಶಿ ಎಂದೂ ಕರೆಯಲಾಗುತ್ತದೆ. ಈ ಅವತಾರದಲ್ಲಿ ವಿಷ್ಣುವು ಭೂದೇವಿಯನ್ನು ಹಿರಣ್ಯಾಕ್ಷದಿಂದ ರಕ್ಷಿಸಲು ಹಂದಿಯಾಗಿ ಕಾಣಿಸಿಕೊಂಡನು.

- Advertisement -

14 ಅಡಿ ಎತ್ತರದ ಭೂ ವರಾಹಸ್ವಾಮಿಯ ಕೃಷ್ಣಶಿಲಾ ವಿಗ್ರಹವು ಇಡೀ ದೇಶದಲ್ಲಿಯೇ ಅಪರೂಪದ್ದಾಗಿದೆ. ಮೈಸೂರಿನ ಬ್ರಹ್ಮ ತಂತ್ರ ಸ್ವತಂತ್ರ ಪರಕಾಲ ಮಠದ ಉಸ್ತುವಾರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಶ್ರೀಕ್ಷೇತ್ರವಾಗಿದೆ. ದೇವಸ್ಥಾನದ ಪಕ್ಕದಲ್ಲಿಯೇ ಪಶ್ಚಿಮಾಭಿಮುಖವಾಗಿ  ಹೇಮಾವತಿ ನದಿ ಹರಿಯುತ್ತಿದೆ. ನದಿಯಲ್ಲಿ ಪ್ರವಾಸಿಗರು ದೋಣಿ ವಿಹಾರ, ತೆಪ್ಪ ವಿಹಾರಕ್ಕೆ ಅವಕಾಶವಿದೆ. ಕಮಾನು ಆಕಾರದ ವಿಶಾಲ ದಾಸೋಹ ಭವನದಲ್ಲಿ ಭಕ್ತಾದಿಗಳಿಗೆ ಉಚಿತ ಅನ್ನ ದಾಸೋಹವಿತ್ತಾಗಿ ನಾವು ಮೂರೂವರೆ ಗಂಟೆಗೆ ತಲುಪಿಯೂ ಒಂದಿಷ್ಟು ಮೊಸರನ್ನ ತಿಂದು ತೃಪ್ತರಾದವು. ಇಲ್ಲಿ ಅಕ್ಕಿ ಚೀಲಗಳನ್ನು ಇರಿಸಲಾಗಿತ್ತು. ನನಗೆ ಇಲ್ಲಿ ವಿಶೇಷವಾಗಿ ಕಂಡುಬಂದಿದ್ದು ಗುಬ್ಬಚ್ಚಿಗಳ ಕಲರವ. ಪುರ್ರನೆ ಅತ್ತಿಂದಿತ್ತ ಹಾರಾಡುತ್ತಿದ್ದ ಗುಬ್ಬಚ್ಚಿಗಳು ಕಿಟಕಿಯಲ್ಲಿ ಕುಳಿತು ಒಂದು ಪೋಟೋ ತೆಗೆದೆ.  

ಗರ್ಭಗುಡಿಯಲ್ಲಿ  ವಿಗ್ರಹವು 15 ಅಡಿ ಎತ್ತರವಿದ್ದು ಸುಖಾಸನ ಭಂಗಿಯಲ್ಲಿದೆ. ನೆಲವನ್ನು ಸ್ಫರ್ಶಿಸುವ ಒಂದು ಕಾಲು. ಇನ್ನೊಂದು ಕಾಲು ಮಡಿಸಿಕೊಂಡಿರುವ ಭಂಗಿಯಲ್ಲಿ ಕಂಡುಬರುವ ಸಾಲಿಗ್ರಾಮ ಶಿಲೆಯ ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿದೆ. 

ವರಾಹ ಎಂದರೆ ಹಂದಿ ಮತ್ತು ದೇವತೆಯ ಕೊಂಬುಗಳು ಮುಖಕ್ಕಿಂತಲೂ ಹಗುರವಾಗಿ ಕಣ್ಣುಗಳು ಕೆಂಪು ಬಣ್ಣದಾಗಿವೆ. ಮಡಿಚಿದ ಕಾಲಿನ ತೊಡೆಯ ಮೇಲೆ ಭೂದೇವಿ ಕುಳಿತ ಭಂಗಿಯಲ್ಲಿದೆ. ಒಂದು ಕೈಯಲ್ಲಿ ಕಮಲದ ಹೂವು ಹಿಡಿದುಕೊಂಡಿದ್ದು ಇನ್ನೊಂದು ಕೈ ಭೂದೇವಿಯ ಸೊಂಟದ ಸುತ್ತಲೂ ಇದೆ. ಬಲಗೈ ಅಭಯ ಮುದ್ರೆಯಲ್ಲಿದೆ. ಭೂದೇವಿ ವಿಗ್ರಹವು 3.5 ಅಡಿ ಎತ್ತರವಿದೆ. ವರಾಹಸ್ವಾಮಿಯ ಮೇಲ್ಬಾಗದ ಕೈಗಳು ಶಂಖ ಚಕ್ರಗಳನ್ನು ಒಳಗೊಂಡಿದೆ. ಸುದರ್ಶನ ಚಕ್ರವನ್ನು ವಿಗ್ರಹದ ಹಿಂದೆ ಕೆತ್ತಲಾಗಿದೆ. ವರಾಹನಾಥಸ್ವಾಮಿಯು ಕಿರೀಟ ಮುಕುಟ ಭೂದೇವಿಯು ಕರಂದ ಮುಕುಟ ಧರಿಸಿದೆ.  ಮೂರ್ತಿಯು 2 ಸಾವಿರ ವರ್ಷಗಳಷ್ಟು ಹಳೆಯದು ಮತ್ತು ಗೌತಮ ಮುನಿಗಳಿಂದ ಸ್ಥಾಪಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಹನುಮಾನ್ ವಿಗ್ರಹವನ್ನು ಮುಖ್ಯ ವಿಗ್ರಹದ ಅಡಿಯಲ್ಲಿ ಕೆತ್ತಲಾಗಿದೆ. ಪ್ರತಿದಿನ ಅಭಿಷೇಕ ಮತ್ತು ಪೂಜೆಯನ್ನು ನಿರ್ವಹಿಸಲಾಗುತ್ತಿದೆ. 

- Advertisement -

ದೇವಸ್ಥಾನದ ವಿಸ್ತಾರ ಕಾರ್ಯ ನಡೆಯುತ್ತಿತ್ತು. ವಿಗ್ರಹ ಕಲ್ಲು ಗೋಡೆ ಚಪ್ಪರ ನಿರ್ಮಿಸಲು ಸೂಕ್ತವಾದ ಉದ್ದವಾದ ದೊಡ್ಡ ದೊಡ್ಡ ಕಲ್ಲುಗಳ ಸಂಗ್ರಹ ದೊಡ್ಡ ಪ್ರಮಾಣದಲ್ಲೇ ಇತ್ತು. ಈ ಕಲ್ಲುಗಳನ್ನು ವಿವಿಧ ಅಳತೆಗೆ ಕತ್ತರಿಸುವ ಮೆಷನರಿ ಯಂತ್ರೋಪಕರಣಗಳ ಕಾರ್ಖನೆ ಸ್ಥಾಪಿಸಿ ಕಲ್ಲುಗಳನ್ನು ಅತ್ತಿಂದಿತ್ತ ಸಾಗಿಸುವ ಇಟಾಚಿಗಳು ಓಡಾಡುತ್ತಿದ್ದವು. ದೇವಾಲಯದ ಹೊರಾಂಗಣದಲ್ಲಿ ಅರ್ಚಕರು ಭಕ್ತರಿಗೆ ಇಟ್ಟಿಗೆ ಮತ್ತು ಮಣ್ಣಿನ ಪೂಜೆ ಮಾಡಿಕೊಡುತ್ತಿದ್ದರು. ಮನೆ ಕಟ್ಟುವವರು ನಿರ್ವಿಘ್ನವಾಗಿ ಕಾರ್ಯ ನೆರವೇರಲೆಂದು ಸಂಕಲ್ಪ ಮಾಡಿ ಇಟ್ಟಿಗೆ ಪೂಜೆ ಮಾಡಿಸಿಕೊಂಡು ತೆಗೆದುಕೊಂಡು ಹೋಗಿ ಪೂಜಿಸಿ ಮನೆ ಕಟ್ಟಲು ತೊಡಗಿದರೆ, ಸೈಟು ಖರೀದಿಸುವವರು ಇಲ್ಲಿಯ ಮಣ್ಣು ತೆಗೆದುಕೊಂಡು ಹೋಗಿ ಪೂಜಿಸಿ ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳಬಹುದೆಂಬ ನಂಬಿಕೆಯಿಂದಾಗಿ ದೇವರು ಪ್ರಸಿದ್ಧಿಯಾಗಿದೆ. ಮೃತಿಕಾ ಪೂಜೆ, ಭೂಸೂಕ್ತ ನಾರಾಯಣ, ರೇವತಿ ಅಭಿಷೇಕ ಸಂಕಲ್ಪ ಸೇವೆ, ಗೋಸೇವೆ, ಭಾನುವಾರ ಇಡೀ ದಿನ ಅನ್ನದಾನ ಸೇವೆಗೆಂದು ವಿವಿಧ ದರವಿದೆ.

ನಾವು ಮೈಸೂರಿನಲ್ಲಿ ನಿವೇಶನ ಖರೀದಿಲು ಕಂತಿನಲ್ಲಿ ಹಣಹಾಕಿ ಹತ್ತು ವರ್ಷಗಳಾಗಿ ಅದು ಇನ್ನು ನಮ್ಮ ಹೆಸರಿಗೆ ನೋಂದಣಿಯಾಗದೇ ಇದ್ದು ನಾವು ದೇವರಲ್ಲಿ ಪ್ರಾರ್ಥನೆ ಮಾಡಿದೆವು.  ದೇವಸ್ಥಾನದ ಹೊರಗೆ ಒಂದು ಸುತ್ತು ಬಂದವು. ಅಲ್ಲಿ ಇಟ್ಟಿಗೆ ಜೋಡಿಸಿ ಪೂಜಿಸಿರುವುದು ಗೋಚರಿಸಿತು. ಇಲ್ಲಿ ಇಟ್ಟಿಗೆ  ಮಣ್ಣು ಮಾರಾಟಕ್ಕಿತು. ನಾವು ದೇವಸ್ಥಾನದ ಹಿಂದಕ್ಕೆ ಹೋಗಿ ನೋಡಲು ಅಲ್ಲಿ ಎರಡು ಗೋಶಾಲೆಗಳಲ್ಲಿ ದನಕರಗಳಿಗೆ ಆಳುಗಳು ಹುಲ್ಲು ನೀರು ಪೂರೈಸುತ್ತಿದ್ದರು. ಅಲ್ಲಿಂದ ಕೆಳಗೆ  ಹೇಮಾವತಿ ನದಿ  ಹರಿದು ಬರುತ್ತಿರುವ ದೃಶ್ಯ ಗೋಚರಿಸಿತು. ನದಿ ತುಂಬಾ ತಳಮಟ್ಟದಲ್ಲಿ ಹರಿಯುತ್ತಿದ್ದು ಆಚೆಗೆ ಮರದ ತೋಪು ಕಾಣಿಸುತ್ತಿತ್ತು. ತಳಭಾಗದಲ್ಲಿ ಮದ್ಯೆ ಕಬ್ಬಿಣದ ರಕ್ಷಣಾ ಬೇಲಿ ನಿರ್ಮಿಸಿದ್ದು ಬಹುಶ: ಮಳೆಗಾಲದಲ್ಲಿ ನದಿ ತುಂಬಿ ಹರಿದು ನೀರು ಅಲ್ಲಿಯವರೆಗೂ ಬರಬಹುದೆಂದು ಅಂದಾಜಿಸಿದೆ. ದೇವಸ್ಥಾನದ ಹೊರಗೆ ಪುರಿ ಖಾರದ ಅಂಗಡಿಗಳು ಐಸ್ ಕ್ರಿಂ ಹೂವು ಹಣ್ಣಿನ ಅಂಗಡಿಗಳಿಂದ ಕೂಡಿ ಮಿನಿ ಜಾತ್ರೆಯ ವಾತಾವರಣ ನೋಡಿದಂತ್ತಾಗಿ ಪುರಿ ಖಾರ ಕಟ್ಟಿಸಿಕೊಂಡು ಬಂದ ಕಾರು ಹತ್ತಿ ಮೈಸೂರು ಕಡೆಗೆ ಮತ್ತೆ ಹೊರಟವು.


ಗೊರೂರು ಅನಂತರಾಜು, ಹಾಸನ.

ಮೊಬೈಲ: 9449462879

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group