spot_img
spot_img

ನೆನಪಿರಲಿ ನಮ್ಮಿಂದ ಎಲ್ಲ ಕಾಲಕ್ಕೂ ಯಮಧರ್ಮನನ್ನ ಯಾಮಾರಿಸುವದು ಸಾಧ್ಯವಿಲ್ಲ

Must Read

- Advertisement -

ಆತ್ಮೀಯರೇ ನಮಸ್ಕಾರ…

ಭೂಮಿಯ ಆಳಕ್ಕೆ ಬಿದ್ದ ಮಗುವೊಂದು ಬದುಕಿ ಬರಲಿ ಅಂತ ದೇವರಿಗೆ ಹರಕೆ ಹೊರುವ ಅದೆಷ್ಟೋ ಸಾವಿರ ಅಥವಾ ಲಕ್ಷ ಜನರ ನಡುವಿನಿಂದ ಇಂದು ಈಗಷ್ಟೇ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ಸಾತ್ವಿಕ ಅನ್ನುವ ಎರಡುವರೆ ವರ್ಷದ ಮಗು ತೆರೆದ ಕೊಳವೆ ಬಾವಿಗೆ ಬಿದ್ದ ಸರಿ ಸುಮಾರು ಇಪ್ಪತ್ತೆರಡು ಘಂಟೆಗಳ ನಿರಂತರ ರಕ್ಷಣಾ ಕಾರ್ಯಾಚರಣೆಯಿಂದಾಗಿ ಜೀವ ಸಹಿತ ಸಣ್ಣ ಪುಟ್ಟ ಗಾಯಗಳೊಂದಿಗೆ ಬದುಕಿ ಬಂದಿದೆ.

ಇದು ಆ ಮಗುವಿನ ಹೆತ್ತ ತಂದೆ ತಾಯಿಗಳು ಮಾಡಿದ ಪೂರ್ವ ಜನ್ಮದ ಪುಣ್ಯವೋ ಅಥವಾ ಆ ಎರಡು ಚಿಲ್ಲರೆ  ವರ್ಷದ ಮಗುವಿನ ಋಣಾನುಬಂಧವೋ ಗೊತ್ತಿಲ್ಲ ಆದರೆ ಇಂತಹುದೇ ಹಲವಾರು ಘಟನೆಗಳು ರಾಜ್ಯದ ಮತ್ತು ದೇಶದ ಹಲವಾರು ಕಡೆ ಆಗಾಗ ವರದಿಯಾದಾಗೆಲ್ಲ ಮಾನವೀಯತೆ ಇರುವ ಎಂಥವರ ಕಣ್ಣುಗಳು ಕೂಡ ಸಹಜವಾಗಿಯೇ ಕಂಬನಿ ಮಿಡಿದಿವೆ.

- Advertisement -

ಆದರೆ ಗಮನಿಸಬೇಕಾದ ಅಂಶವೆಂದರೆ ಯಾರೋ ಮಾಡುವ ತಪ್ಪಿಗೆ ಇನ್ಯಾರದೋ ಮಕ್ಕಳು ಮತ್ತು ಹಸು ಕಂದಮ್ಮಗಳು ತಮ್ಮ ಜೀವವನ್ನೆ ಬಲಿ ಕೊಡುವ ಪ್ರಸಂಗಗಳು ಬಹಳಷ್ಟು ಸಲ ವರದಿಯಾಗಿದ್ದರ ಬಗ್ಗೆ ಇಡೀ ಮನುಕುಲವೇ ತಲೆ ತಗ್ಗಿಸಬೇಕಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಕಾವೇರಿ ಮತ್ತು ಬಾಗಲಕೋಟ ಜಿಲ್ಲೆಯ ಸೂಳಿಕೇರಿಯ ತಿಮ್ಮಣ್ಣನಿಂದ ಹಿಡಿದು ಅದಕ್ಕೂ ಮೊದಲು ದಾವಣಗೆರೆ ಜಿಲ್ಲೆಯ ಕರಿಯ, ರಾಯಚೂರಿನ ನೀರಮಾನ್ವಿಯ ಸಂದೀಪ…. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ 2008 ಎಲ್ಲಿ ಕಾಂಚನಾ ಬಾಗಲಕೋಟೆ ಜಿಲ್ಲೆಯ ಸಿಕ್ಕೇರಿ ಗ್ರಾಮದಲ್ಲಿ 2008 ರಲ್ಲಿ ಕಲ್ಲವ್ವ ಮತ್ತು ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಅಕ್ಷತಾ ಸೇರಿದಂತೆ ಇಂದಷ್ಟೇ ವರದಿಯಾದ ಸಾತ್ವಿಕ ಅನ್ನುವ ಪುಟ್ಟ ಬಾಲಕನ ತನಕ ಹಲವಾರು ಪುಟ್ಟ ಕಂದಮ್ಮಗಳನ್ನ ಇಂತಹ ಕರಾಳ ಘಟನೆಗಳಲ್ಲಿ ಕಳೆದುಕೊಂಡ ಹೆತ್ತ ಕರುಳುಗಳ ಆಕ್ರಂದನ ಮುಗಿಲು ಮುಟ್ಟಿದೆ…

ಯಾವುದೋ ಜಮೀನಿನಲ್ಲಿ ಅಥವಾ ಯಾವುದೋ ಊರಿ ನಲ್ಲಿ ಪಂಚಾಯತಿ ವತಿಯಿಂದ ಕೊರೆಸಿದ ಅಥವಾ  ಮಾಲೀಕರು  ಸ್ವತ್ತು ತಮ್ಮ  ಜಮೀನುಗಳಲ್ಲಿ ಕೊರೆಸಿದ  ವಿಫಲವಾದ ಕೊಳವೆ ಭಾವಿಗಳೇ ಹೀಗೆ ಹಲವಾರು ಜೀವಗಳನ್ನು ಬಲಿಪಡೆದಿರುವದು ದುರಂತವೇ ಸರಿ.

- Advertisement -

ಊರ ಹೊರಗಿನ ಜಮೀನುಗಳಲ್ಲಿ ಅದರಲ್ಲೂ ಬರ ಬಿದ್ದು ಬದುಕುವ ಅದಮ್ಯ ಉತ್ಸಾಹದಿಂದ ಸಾಲ ಸೋಲ ಮಾಡಿ ಅವರ ತಂದೆ ತಾಯಿ ಮತ್ತು ಭೂ ಮಾಲೀಕರು ಕೊರೆಸಿದ ಕೊಳವೇ ಭಾವಿಗಳಲ್ಲಿ ಸ್ವತಃ ಮಾಲೀಕರ ಅಥವಾ ಜೀತಕ್ಕೆ ಬಂದು ನೆಲೆ ನಿಂತ ಕಾರ್ಮಿಕರ ಜೀವದ ಕುಡಿಗಳೇ ಹೀಗೆ ಬಲಿಯಾಗುವದು ಅತ್ಯಂತ ಖೇದದ ವಿಷಯ.

ಮನುಷ್ಯ ಸಹಜ ತಪ್ಪಿನಿಂದ ಮಳೆ ದೂರವಾಗಿ, ನೀರಿನ ಮೂಲಗಳೂ ಬತ್ತಿ ಹೋಗಿ ಅಂತರ್ಜಲಕ್ಕೆ ಕಣ್ಣು ಹಾಕಿ ಸುರಂಗ ಕೊರೆಯುವ ಒಂದು ಕೊಳವೆ ಭಾವಿಯನ್ನ ಅಗೆಯಲು ತಾಲ್ಲೂಕು ಆಡಳಿತ ದ ಅನುಮತಿ ಕಡ್ಡಾಯ ಅನ್ನುವ ನಿಯಮದಿಂದ ಹಿಡಿದು ವಿಫಲವಾದ ಕೊಳವೆ ಭಾವಿಗಳನ್ನು ಅಷ್ಟೇ ಜತನದಿಂದ ಮುಚ್ಚಬೇಕು ಅನ್ನುವಂತಹ ನಿಯಮಗಳಿದ್ದರೂ ಕೂಡ ಅಂತಹ ನಿಯಮಗಳ ಪಾಲನೆ ಆಗದೆ ಅದೆಷ್ಟೋ ಅಮಾಯಕ ಮಕ್ಕಳ ಬದುಕು ನೀರ ಮೇಲಿನ ಗುಳ್ಳೆ ಆಗುತ್ತಿರುವದು ದುರಂತವೇ ಸರಿ.

ರಾಜ್ಯದ ಬಹುತೇಕ ಒಣ ಜಮೀನು ಹೊಂದಿರುವ ರೈತರು ಹೇಗೋ ಬದುಕು ಕಟ್ಟಿಕೊಳ್ಳುವದಕ್ಕಾಗಿ ಕೊರೆಸಿದ ಕೊಳವೆ ಬಾವಿಗಳೇ ಅವರ ಮಕ್ಕಳ ಜೀವ ಬಲಿ ಪಡೆಯುತ್ತಿರುವದು ದುರಂತವೇ ಸರಿ.

ಇದಕ್ಕೆ ಪೂರಕವಾಗಿ ಕೊಳವೆ ಭಾವಿ ಕೊರೆಸಲು ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ತಹಶಿಲ್ದಾರ ಕಚೇರಿ ಅನುಮತಿಯ ಅವಶ್ಯಕತೆ ಇದ್ದು ಇದನ್ನು ಮೀರಿ ನಡೆಯುತ್ತಿರುವ ಮಾಫಿಯಾ ಹಾಗೂ ಜನಸಾಮಾನ್ಯರಲ್ಲಿ ಮೂಡಿಸಬೇಕಾದ ಜಾಗೃತಿಯ ಕೊರತೆ ಎದ್ದು ಕಾಣುತ್ತಿದ್ದು ಸಾರ್ವಜನಿಕರಲ್ಲಿ ಮೂಡಿಸಬೇಕಾದ ಜಾಗೃತಿಗೆ  ನೈತಿಕ ಹೊಣೆ ಹೊರಬೇಕಾದ ಎನ್ ಜಿ ಓ ಮತ್ತು ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯತಿ ಗಳು ಸೇರಿದಂತೆ ಸಮಾಜ ಸೇವಕರ ಹಿತಾಸಕ್ತಿಯ ಕೊರತೆ ಸದ್ಯದ ಮಟ್ಟಿಗೆ ಎದ್ದು ಕಾಣುತ್ತಿದೆ.

ಇಂದಲ್ಲ ನಾಳೆಗೆ ನಮ್ಮ, ನಿಮ್ಮ ಅಥವಾ ನಮ್ಮ ಸಂಬಂಧಿಕರ ಮತ್ತು ನಮ್ಮದೇ ಊರಿನ ಮತ್ಯಾರದೋ ಮಕ್ಕಳು ಹೀಗೆ ತೆರೆದ ಕೊಳವೆ ಬಾವಿಯೊಳಗೆ ಬಿದ್ದು ಜೀವ ಬಿಡುವ ಮುನ್ನ ವಿಫಲವಾದ ಕೊಳವೆ ಭಾವಿಗಳನ್ನು ಮುಚ್ಚಿಸುವ ಕೆಲಸಕ್ಕೆ ನಾವು ನೀವೆಲ್ಲ ಮುಂದಾಗಬೇಕಿದೆ.

ಬದುಕು ಕಟ್ಟಿಕೊಳ್ಳುವ ಉದ್ದೇಶಕ್ಕಾಗಿ ದುಡ್ಡು ಕೊಟ್ಟು ನೆಲ ಕೊರೆಸುವ ರೈತರು ತಮ್ಮ ವಂಶದ ಕುಡಿಗಳನ್ನ ಅಚಾನಕ್ಕಾಗಿ ನಡೆಯುವ ಇಂತಹ ಘಟನೆಗಳಿಂದ ಕಳೆದುಕೊಂಡು ಕಣ್ಣೀರಿನಲ್ಲೇ ಕೈ ತೊಳೆಯುವಂತೆ ಆಗದಿರಲಿ ಅನ್ನುವ ಕಾರಣಕ್ಕೆ ಮತ್ತು ಎಷ್ಟೋ ಸಲ ಮನುಷ್ಯನ ಸತತ ಪ್ರಯತ್ನಗಳ ಬಳಿಕವೂ ಯಾರದೋ ಮನೆಯ ನಂದಾ ದೀಪವೊಂದು ಹೀಗೆ ಅನಾಯಾಸವಾಗಿ ಆರಿ ಹೋಗದಿರಲಿ ಅನ್ನುವ ಕಾರಣಕ್ಕಾಗಿ ಇನ್ನಾದರೂ ಎಚ್ಚೆತ್ತುಕೊಳ್ಳೋಣ ಅಲ್ಲವಾ??

ದೊಡ್ಡ ದೊಡ್ಡ ಅವಘಡಗಳು ಸಂಭವಿಸಿದಾಗೆಲ್ಲ ಬಾಯಿ ಹರಿದುಕೊಳ್ಳುವ ಮಾಧ್ಯಮಗಳು, ದೌಡಾಯಿಸಿ ಬರುವ ರಕ್ಷಣಾ ಪಡೆಗಳು ಮತ್ತು ಕಂಬನಿ ಮಿಡಿಯುವ ಜನರು ಕನಿಷ್ಠ ಪಕ್ಷ ಮಾನವೀಯ ದೃಷ್ಟಿಯಿಂದ ಒಂದಷ್ಟು ಬದಲಾವಣೆಗೆ ಬುನಾದಿ ಹಾಕಿದಾಗ ಮಾತ್ರ ಮುಂದೆ ಆಗಬಹುದಾದ ಅವಘಢಗಳಿಗೆ ಇನ್ನಾದರೂ ಕಡಿವಾಣ ಹಾಕಬಹುದೆನೋ…ಅನ್ನುವ ನಿರೀಕ್ಷೆಯೊಂದಿಗೆ

ಅಲ್ಲಿಯವರೆಗೂ ಮನೆಯಲ್ಲಿ ಕುಳಿತುಕೊಂಡೇ ಕೊಳವೆ ಬಾವಿಗೆ ಬಿದ್ದ ಅಮಾಯಕ ಜೀವವೊ.ದು ಬದುಕಿ ಬರಲಿ ಅಂತ ಹರಕೆ ಹೊರುವ ಮತ್ತು ದೇವರಲ್ಲಿ ಪ್ರಾರ್ಥಿಸುವ ಜೀವಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳು, ಸಮೂಹ ಮಾಧ್ಯಮಗಳು ಮತ್ತು ಸಮಾಜ ಸೇವಾ ಸಂಸ್ಥೆಗಳು ಒಟ್ಟಾಗಿ ಒಂದಷ್ಟು ಜನಪರ ಕಾಳಜಿ ಹಾಗೂ ಜೀವಪರ ಕಾಳಜಿಯಿಂದ ಫಿಲ್ಡಿಗೆ ಇಳಿದಾಗಲಷ್ಟೇ ಬಲಿಪಶು ಆಗಲಿರುವ ಅದೆಷ್ಟೋ ಅಮಾಯಕ ಜೀವಗಳಿಗೆ ಜೀವದಾನ ನೀಡಬಹುದು.

ರಾತ್ರೋ ರಾತ್ರಿ ಬಂದು ಜಮೀನುಗಳಲ್ಲಿ ಭೂಮಿಗೆ ಕನ್ನ ಕೊರೆಯುವ ಬೋರ್ ವೆಲ್ ಏಜೆನ್ಸಿ ಗಳ ವಾಹನಗಳು, ಅನುಮತಿ ಇಲ್ಲದೆ ಕೊಳವೆ ಭಾವಿ ಕೊರೆದರೆ ವಾಹನ ಸೀಜ್ ಮಾಡುವದರ ಜೊತೆಗೆ ಜಮೀನು ಮಾಲೀಕರಿಗೆ ದಂಡ ವಿಧಿಸುವ ಕೆಲಸಗಳು ನೈಜವಾಗಿ ಕಾರ್ಯರೂಪಕ್ಕೆ ಬಂದಾಗಲಷ್ಟೇ ಇಂತಹ ಅದೆಷ್ಟೋ ಅಮಾಯಕ ಹಸು ಕಂದಮ್ಮಗಳ ಜೀವ ಬಲಿಯನ್ನ ಎಲ್ಲರೂ ಒಟ್ಟಾಗಿ ತಡೆಯಬಹುದು.

ಇಷ್ಟಕ್ಕೂ ವಿಫಲವಾದ ಕೊಳವೆ ಭಾವಿಗಳಿಗೆ ಅಬ್ಬಬ್ಬಾ ಅಂದರೆ ಒಂದೆರಡು ಟ್ರಾಕ್ಟರ್ ಟ್ರಾಲಿಯಷ್ಟು ಮಣ್ಣು ಮತ್ತು ಕೆಲವಷ್ಟು ಸೈಜುಗಲ್ಲುಗಳನ್ನ ಎತ್ತಿ ಹಾಕುವದರ ಜೊತೆಗೆ ನೆಲದ ಸರಿ ಸಮಾಂತರವಾಗಿ ಕೊರೆದ ಕೊಳವೆ ಭಾವಿಗಳಿಗೆ ಒಂದಷ್ಟು ಎತ್ತರದ ಪೈಪುಗಳನ್ನ ಅಳವಡಿಸುವದಕ್ಕೆ ಜಾಣತನ ತೋರಿಸಿ  ಜೀವ ಬಲಿಗೆ ಕಾರಣವಾಗುವದು ಅಕ್ಷಮ್ಯ ಅಪರಾಧ ಅನ್ನುವ ಮನವರಿಕೆಯನ್ನ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಎಲ್ಲ ಜನರಿಗೆ ಮಾಡಿಕೊಡುವ ತುರ್ತು ಅಗತ್ಯ ಈ ದಿನಗಳಲ್ಲಿ ಇದೆ.

ಸಾಧ್ಯವಾದರೆ ಒಂದಷ್ಟು ತೆರೆದ  ವಿಫಲ ಕೊಳವೆ ಭಾವಿಗಳನ್ನ ಸ್ವತಃ ಮುಂದೆ ನಿಂತು ಮುಚ್ಚಿಸುವ ಕೆಲಸಕ್ಕೆ ನಾವು ನೀವೆಲ್ಲ ಮುಂದಾಗೋಣ…

ಯಾಕೆಂದರೆ

ಎಲ್ಲ ಕಾಲಕ್ಕೂ ಯಮಧರ್ಮರಾಯ, ಚಿತ್ರಗುಪ್ತ ಮತ್ತು ಅವರ ಸಹಚರರು ವಿಶ್ರಾಂತಿ ಯಲ್ಲಿ ಇರುವದಿಲ್ಲವಾದ್ದರಿಂದ ನಮ್ಮ ಸ್ವಯಂಕೃತ ಅಪರಾಧಗಳಿಗೆ ಮತ್ಯಾರದೋ ಮಕ್ಕಳ ಜೀವ ಬಲಿಯಾಗದಿರಲಿ ಏನಂತೀರಿ??


ದೀಪಕ ಶಿಂಧೇ

9482766018

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group