ನರೇಂದ್ರರು ವಿವೇಕಾನಂದರಾಗಿದ್ದು ಅವರ ಆತ್ಮಜ್ಞಾನದಿಂದ. ಮಹಾತ್ಮರನ್ನು ಸ್ಮರಿಸುವುದು ಸುಲಭ,ಮಹಾತ್ಮರನ್ನು ಅನುಸರಿಸೋದೆ ಕಷ್ಟ.
ಸುಲಭದ ಮಾರ್ಗದಲ್ಲಿ ನಡೆದವರಿಗೆ ಹಣ,ಅಧಿಕಾರ,ಸ್ಥಾನ ನೀಡಿದರೆ ಜನರು ಅದೇ ಮಾರ್ಗ ಹಿಡಿಯುತ್ತಾರೆ. ಹೀಗಾಗಿ ಕಲಿಯುಗದಲ್ಲಿ ಜನರು ಹೆಚ್ಚು ಭೌತಿಕ ವಿಜ್ಞಾನದೆಡೆಗೆ ವಾಲಿಕೊಂಡು ರಾಜಕೀಯಕ್ಕೆ ಮುಖಮಾಡಿ ವಿವೇಕ ಕಳೆದುಕೊಂಡಿರೋದೆನ್ನಬಹುದು.
ಸ್ವಾತಂತ್ರ್ಯ ಪೂರ್ವದ ಭಾರತವನ್ನು ಸ್ವತಂತ್ರ ಜ್ಞಾನದಿಂದ ಬಿಡುಗಡೆ ಮಾಡಿದ ಮಹಾತ್ಮರನ್ನು ಅನುಸರಿಸುವುದಕ್ಕೆ ಮಹಾತ್ಮರಾಗಬೇಕು. ಆತ್ಮಾನುಸಾರ ನಡೆಯುವುದೆ ಮಹಾತ್ಮರ ಲಕ್ಷಣ. ಈಗ ಹೆಚ್ಚು ಅವರವರ ಮನಸ್ಸಿಗೆ ಬಂದ ಹಾಗೆ ನಡೆದು, ಜನರನ್ನು ಹೊರಗೆಳೆದು ರಾಜಕೀಯಕ್ಕೆ ಸಹಕರಿಸಿ ವಿದೇಶದ ಕಡೆಗೆ ವಿವೇಕಾನಂದರ ಪ್ರಚಾರವಿದೆ.
ದೇಶವಾಸಿಗಳಿಗೆ ವಿವೇಕದ ವಿಚಾರ ತಿಳಿಸೋ ಶಿಕ್ಷಣ ನೀಡದೆ ಮಧ್ಯೆ ನಿಂತು ಪ್ರಚಾರ ಮಾಡಿ ಹೆಸರು,ಹಣ ಪಡೆದರೆ ವಿವೇಕಾನಂದ ಸಿಗಲು ಸಾಧ್ಯವಿಲ್ಲ. ಇಲ್ಲಿ ಸಂಘಟನೆಯ ಉದ್ದೇಶ ವಿವೇಕ ಬೆಳೆಸೋದಾಗಿದ್ದರೆ ಮಕ್ಕಳು ಮಹಿಳೆಯರಿಗೆ ಈ ಸ್ಥಿತಿ ಬರುತ್ತಿರಲಿಲ್ಲ.
ಭಾರತಮಾತೆಯ ಹೆಸರಲ್ಲಿ ವಿದೇಶಿಗರಿಗೆ ಮಣೆಹಾಕಿ ಸ್ವಾಗತಮಾಡಿ ಹಣಪಡೆದರೆ ಜ್ಞಾನ ಸಿಗೋದು ಕಷ್ಟ. ವಿವೇಕಾನಂದ ಎಂದರೆ ವಿಚಾರವನ್ನು ವೇದ ಶಾಸ್ತ್ರ ಸತ್ಯ,ಧರ್ಮದಿಂದ ತಿಳಿದು ಕಾಣುವ ಆಂತರಿಕ ಆನಂದ.
ಇಂದು ‘ವಿಷ’ಯವನ್ನು ವೇದನೆ ದು:ಖದ ರಾಜಕೀಯಕ್ಕೆ ಬಳಸಿಕೊಂಡು ಅಸತ್ಯ, ಅಧರ್ಮದಿಂದ ಜನರನ್ನು ಆಳುತ್ತಾ ಸ್ವಾರ್ಥ ಕಾಣುತ್ತಾ ಆನಂದದ ಮನರಂಜನೆಯಲ್ಲಿ ಮೈ ಮರೆಯುವ ಸಾಧನವಾಗಿದೆ. ಆತ್ಮಾವಲೋಕನ ನಮಗೆ ಅಗತ್ಯವಿದೆ. ನಮ್ಮಲ್ಲಿ ಅಳವಡಿಸಿಕೊಳ್ಳಲಾಗದ ವಿವೇಕವನ್ನು ಪರರಿಗೆ ತಿಳಿಸಿದರೂ ತಲುಪುವುದಿಲ್ಲ.
ಇದು ಶ್ರೀ ರಾಮಕೃಷ್ಣ ಪರಮಹಂಸರ ವಿವೇಕವಾಣಿ.ಭಾರತ ಅವಿವೇಕಿಗಳ ರಾಜಕೀಯಕ್ಕೆ ಸಿಲುಕಿ ಮತ್ತೆ ತನ್ನ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದೆ ಇದಕ್ಕೆ ಮೂಲ ಕಾರಣವೇ ಅಧರ್ಮದ ಶಿಕ್ಷಣ. ನಮ್ಮ ಭಾರತೀಯ ಶಿಕ್ಷಣಕ್ಕೆ ವಿರುದ್ದ ನಡೆದಿರುವ ವಿದೇಶಿ ಶಿಕ್ಷಣ ನೀತಿ. ನಮ್ಮ ಮಕ್ಕಳ ಶಿಕ್ಷಣದಿಂದಲೇ ಅವರ ವಿವೇಕಾನಂದರಿರೋದು. ನಮ್ಮೊಳಗಿನ ದೈವೀಶಕ್ತಿಯೇ ದೇವರನ್ನು ತೋರಿಸೋದು. ನಮ್ಮೊಳಗಿರುವ ದೇಶಭಕ್ತಿಯೇ ದೇಶ ಉಳಿಸೋದು.
ಆದರೆ ಇದರಲ್ಲಿ ರಾಜಕೀಯತೆ ಇದ್ದರೆ ವ್ಯರ್ಥವಾಗುವುದು. ಸ್ತ್ರೀ ಯನ್ನು ಆಳಲು ಹೋಗಬೇಡಿ, ಎಂದ ವಿವೇಕಾನಂದರ ನುಡಿಗೆ ಎಷ್ಟು ಪುರುಷರು ಒಮ್ಮತ ನೀಡಿದ್ದಾರೆ? ಒಟ್ಟಿನಲ್ಲಿ ಇಲ್ಲಿ ಆಳೋದಷ್ಟೇ ಮುಖ್ಯವಾಗಿ ರಾಜಕೀಯ ಬೆಳೆದು ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದಕ್ಕೆ ಸ್ತ್ರೀ ಸಹಕಾರವೂ ಸೇರಿ ಭ್ರಷ್ಟರಿಗೆ ಶಕ್ತಿ ಹೆಚ್ಚಾಗಿದೆ.
ಜೀವ ಒಳಗಿದ್ದರೂ ಅದನ್ನು ಸಾಕಿಕೊಳ್ಳಲು ಸರ್ಕಾರದ ಸಾಲ ಪಡೆದರೆ ವಿವೇಕಾನಂದರಾಗುವರೆ? ಪ್ರತಿಯೊಬ್ಬರೂ ದೇಶದ ಸಾಲಕ್ಕೆ ಅಪರೋಕ್ಷವಾಗಿ ಪಾಲುದಾರರೆ. ನಮ್ಮಲ್ಲಿ ಅತಿಯಾದ ಆಸ್ತಿ, ಹಣ, ಅಧಿಕಾರ ವಿದ್ದರೂ ಬಿಡದೆ ಮತ್ತೆ ಮತ್ತೆ ಜನರನ್ನು ಅಧರ್ಮ,ಭ್ರಷ್ಟರ ಕಡೆಗೆ ನಡೆಸೋ ಮಧ್ಯವರ್ತಿಗಳು ದೇಶದ ಪರ ನಿಂತು ಚಿಂತನೆ ಮಾಡಿದರೆ ದೇಶದ ಈ ಸ್ಥಿತಿಗೆ ಕಾರಣದ ಜೊತೆಗೆ ಪರಿಹಾರವೂ ಸಿಗುತ್ತದೆ.
ಮುಖ, ಕೈ ಮೂಗು ಮೈ ಶುದ್ದಗೊಳಿಸಿಕೊಂಡರೆ ಕೊರೊನ ಬರೋದಿಲ್ಲ. ಆಹಾರದಲ್ಲಿಯೇ ಅಶುದ್ದವಾಗಿ, ವ್ಯವಹಾರದಲ್ಲಿ ಶುದ್ದಿಯಿಲ್ಲದೆ ಇದ್ದರೆ ಒಳಗೆ ಹೋದ ಮೇಲೆ ಕೇಳೋರೆ ಇಲ್ಲ ಕೊರೊನಕ್ಕೆ ಕೇವಲ ಹೊರಗಿನಿಂದ ಶುದ್ದ ಆದರೆ ಸಾಲದು ಒಳಗಿನ ಮನಸ್ಸು ಶುದ್ದವಾಗಬೇಕು.
ಅದು ವಿಜ್ಞಾನದಿಂದ ಸರ್ಕಾರದಿಂದ ಅಸಾಧ್ಯ. ಪ್ರಜೆಗಳ ಸತ್ಯ ಧರ್ಮದಿಂದ ಮಾತ್ರ ಸಾಧ್ಯ. ಸ್ವಚ್ಚಭಾರತ ಜ್ಞಾನದಿಂದ ಸಾಧ್ಯವಿದೆ. ಜ್ಞಾನ ಒಳಗಿದೆ. ಸತ್ಯ ಒಳಗಿದೆ. ಬೆಳೆಸಿಕೊಂಡರೆ ಆರೋಗ್ಯಕರ ಜೀವನ ಇದು ಮಹಾತ್ಮರ ಮಾತು. ಕೈ ಶುದ್ದ ಎಂದರೆ ಸತ್ಕರ್ಮದ ಹಣ ಸಂಪಾಧನೆ, ಬಾಯಿ ಶುದ್ದವೆಂದರೆ ಸತ್ಯದ ನುಡಿ, ಮೂಗು ಶುದ್ದ ಎಂದರೆ ಉತ್ತಮವಾದ ವಾಸನೆ(ಆಸೆ,ಆಕಾಂಕ್ಷೆ,ಗುಣ,ಜ್ಞಾನ).
ಇವುಗಳನ್ನು ಶಿಕ್ಷಣದಲ್ಲಿಯೇ ಅಳವಡಿಸಿ ಮಾನವೀಯತೆ ಬೆಳೆಸುವುದೆ ವಿವೇಕ. ಇದರಿಂದಾಗಿ ಆಂತರಿಕ ಆನಂದ ಮಾನವ ಪಡೆಯುತ್ತಾನೆಂಬುದೆ ಮಹಾತ್ಮರ ಸಂದೇಶ. ವಿವೇಕಾನಂದರು” ಏಳಿ ಎದ್ದೇಳಿ ಗುರಿ ಮುಟ್ಟೋತನಕ ನಿಲ್ಲದಿರಿ ” ಎಂದಿದ್ದರು. ಈಗ ಭಾರತೀಯರಾದವರೆ ವಿದೇಶಿಗಳ ಹಿಂದೆ ನಡೆದು ವಿದೇಶದೆಡೆಗೆ ನಡೆಯೋದೆ ತಮ್ಮ ಗುರಿ ಮಾಡಿಕೊಂಡರೆ ಸಾಧನೆ ಯಾವ ಮಾರ್ಗ ಹಿಡಿದಿದೆ?
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು