ಬೆಳಗಾವಿ – ನಮ್ಮ ನಡೆ, ನುಡಿ,ಆಚಾರ, ವಿಚಾರ ಚೆನ್ನಾಗಿದ್ದರೆ ಸಂಸಾರ ಚೆನ್ನಾಗಿರುವದರ ಜೊತೆಗೆ ಮಕ್ಕಳು ಸಹ ಒಳ್ಳೆಯ ದಾರಿ ಹಿಡಿದು ಸಮಾಜಕ್ಕೆ ದಾರಿದೀಪವಾಗುತ್ತಾರೆ ಎಂದು ರವಿವಾರ ದಿ. 4 ರಂದು ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಕೊಳ್ಳಲಾದ ವಾರದ ಸತ್ಸಂಗ ಮತ್ತು ಬಸವೇಶ್ವರ ಬ್ಯಾಂಕಿನ ನೂತನ ಅಧ್ಯಕ್ಷ ಉಪಾಧ್ಯಕ್ಷರ ಸತ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿದರು.
ವಿವಾಹ ವಾರ್ಷಿಕೋತ್ಸವ, ಹುಟ್ಟುಹಬ್ಬ ಮಹೋತ್ಸವ, ಸತ್ಕಾರಗಳು ಸತ್ಸಂಗ ಅಡಿಯಲ್ಲಿ ನಡೆದಿದ್ದೆ ಆದರೆ ಆಯಾ ವ್ಯಕ್ತಿಗಳಲ್ಲಿ ಮತ್ತಷ್ಟು ಶಕ್ತಿ ಬಂದು ಸಮಾಜಕ್ಕೆ ಉಪಯೋಗಿ ಕೆಲಸಗಳು ಹೆಚ್ಚಾಗುತ್ತವೆ ಎಂದು ನಗರದ ಬಸವೇಶ್ವರ ಬ್ಯಾಂಕಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಉಪ್ಪಿನ ಮತ್ತು ಗಿರೀಶ ಬಾಗಿ ಅವರನ್ನು ಮತ್ತು ತಮ್ಮ ವಿವಾಹದ 25ನೇ ವಾರ್ಷಿಕೋತ್ಸವ ವಿಶೇಷವಾಗಿ ಆಚರಿಸಿಕೊಂಡ ಸಮಾಜ ಸೇವಕ ಶಶಿಭೂಷಣ ಪಾಟೀಲ ದಂಪತಿಗಳನ್ನು ಸತ್ಕರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಈರಣ್ಣಾ ದೇಯನ್ನ ವರ ಮಾತನಾಡಿ ಲಿಂಗಾಯತ ಸಂಘಟನೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ. ಬಸವ ತತ್ವಗಳನ್ನು ಜಗಕ್ಕೆ ಸಾರುವ ಮತ್ತು ಸಾಮಾಜಿಕ ಸಮತೋಲನ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಖ್ಯಾತ ಪ್ರವಚನಕಾರ್ತಿ ಪ್ರೇಮಕ್ಕ ಅಂಗಡಿ ಮಾತನಾಡಿ ಅಂತರಂಗ ಶುದ್ಧಿಯಾಗಬೇಕು.
ಅಂದಿನ ಒಂದೊಂದು ವಚನಗಳು ಇಂದು ಒಂದೊಂದು ತೀರ್ಪುಗಳಂತಿವೆ. ಭಾವ, ತನು,ಮನ, ಶುದ್ದಿ ಆದರೆ ಮನುಷ್ಯ ವಿಕಾಸಗೊಳ್ಳುತ್ತಾನೆ. ಧರ್ಮ ಸಂಸ್ಕಾರ ಕಲಿಸುವದರ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಂಘಟನೆ ವತಿಯಿಂದ ಬೇಸಿಗೆ ರಜೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಚಿತ ಟ್ಯೂಷನ್ ಕ್ಲಾಸಿನ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯರಾದ ರಮೇಶ ಕಳಸಣ್ಣವರ, ಮಹಾಂತೇಶ ದೇಸಾಯಿ, ವಿ.ಕೆ ಪಾಟೀಲ, ಸತೀಶ ಪಾಟೀಲ, ಮಹಾದೇವಿ ಅರಳಿ, ಸಿಂಧು ಕಾಡದೇವರ ಅಕ್ಕಮಹಾದೇವಿ ತೆಗ್ಗಿ, ಸದಾಶಿವ ದೇವರಮನಿ, ಆನಂದ ಕರ್ಕಿ ರಾಜೇಶ್ವರಿ ಖನಗನ್ನಿ , ಶೋಭಾ ಅಂಗಡಿ, ಶಂಕರ ಶೆಟ್ಟಿ, ಶಿವಾನಂದ ತಲ್ಲೂರ, ಬಸವರಾಜ ಮಠಪತಿ, ಎಂ ವೈ ಮೆನಸಿನಕಾಯಿ ಸೇರಿದಂತೆ ಶರಣಬಳಗ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಂಗಮೇಶ ಅರಳಿ ಸ್ವಾಗತಿಸಿದರು ಕುಮಾರ ಪಾಟೀಲ ನಿರೂಪಿಸಿದರು. ವಚನಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.