spot_img
spot_img

ಅಭಿವೃದ್ಧಿ ಆಗಿಲ್ಲಂದ್ರ ಇಷ್ಟು ದಿನಾ ಇವರೆಲ್ಲಾ ಎಲ್ಲಿದ್ರು? ಕಾಂಗ್ರೆಸ್ ಮತ್ತು ಪಕ್ಷೇತರರನ್ನು ಕೇಳುತ್ತಿರುವ ಅರಭಾವಿ ಜನತೆ

Must Read

spot_img
- Advertisement -

ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಅದಾಗಿಲ್ಲ ಇದಾಗಿಲ್ಲ ಎಂದು ಭಾಷಣ ಬಿಗಿಯುತ್ತಿರುವ ಕಾಂಗ್ರೆಸ್ ನ ಅರವಿಂದ ದಳವಾಯಿ ಇಷ್ಟು ದಿನ ಎಲ್ಲಿ ಇದ್ದರು, ಆಗ ಯಾಕೆ ದನಿಯೆತ್ತಲಿಲ್ಲ?

ಜಾರಕಿಹೊಳಿ ಸಹೋದರರ ಭ್ರಷ್ಟಾಚಾರ ಹೊರಹಾಕುತ್ತೇನೆ ಅವರನ್ನು  ಜೈಲಿಗೆ ಕಳುಹಿಸುತ್ತೇನೆ ಎಂದು ಗುಡುಗುವ ಭೀಮಪ್ಪ ಗಡಾದ ಕೇವಲ ಅಧಿಕಾರಿಗಳ ಭ್ರಷ್ಟಾಚಾರ ಹೊರಗೆ ಹಾಕಿದರೇ ಹೊರತು ಶಾಸಕರ ಭ್ರಷ್ಟಾಚಾರದ ವಿರುದ್ಧ ಒಂದು ಸಣ್ಣ ದನಿ ಕೂಡ ಎತ್ತಲಿಲ್ಲ ಯಾಕೆ? 

ಹೀಗೆ ಅರಭಾವಿ ಕ್ಷೇತ್ರದ ಜನರು ಪ್ರಶ್ನೆ ಮಾಡುತ್ತಿದ್ದಾರೆ. 

- Advertisement -

ಅರಭಾವಿ ವಿಧಾನ ಸಭಾ ಚುನಾವಣಾ ಅಖಾಡ ಹಿಂದೆಂದಿಗಿಂತಲೂ ರಂಗೇರಿದೆ. ಸುಮಾರು ಮೂವತ್ತು ವರ್ಷಗಳ ಕಾಲ ಇಲ್ಲಿ ಶಾಸಕರಾಗಿ ಆಡಳಿತ ಮಾಡಿದ ಬಾಲಚಂದ್ರ ಜಾರಕಿಹೊಳಿಯವರ ವಿರುದ್ಧ ಕಳೆದ ಚುನಾವಣೆಯಿಂದ ವಿರೋಧಿ ಧ್ವನಿ ಗಡುಸಾಗಿದೆ. ಅದಕ್ಕೆ ಕಾರಣ ಮೂಡಲಗಿ ತಾಲೂಕಾ ಹೋರಾಟ. ಘೋಷಣೆಯಾಗಿದ್ದ ಮೂಡಲಗಿ ತಾಲೂಕನ್ನು ರದ್ದು ಮಾಡಿದ ರಮೇಶ ಜಾರಕಿಹೊಳಿ ವಿನಾಕಾರಣ ಜನರ ಅಭಿಮಾನದ ಜೇನುಗೂಡಿಗೆ ಕೈಹಾಕಿದರು. ಅಷ್ಟೇ ಅಲ್ಲ ಬಾಲಚಂದ್ರ ಜಾರಕಿಹೊಳಿಯವರ ಚುನಾವಣಾ ಅಶ್ವಮೇಧಕ್ಕೆ ಸ್ವಲ್ಪ ಅಡಚಣೆಯನ್ನೂ ತಂದೊಡ್ಡಿದರು. ಹಾಗೆ ನೋಡಿದರೆ ಮೂಡಲಗಿ ತಾಲೂಕನ್ನು ರದ್ದು ಮಾಡಿದ್ದರಿಂದ ರಮೇಶ ಜಾರಕಿಹೊಳಿಗೆ ಯಾವ ಲಾಭ ಇತ್ತೋ ಗೊತ್ತಿಲ್ಲ. ಆದರೂ ಮೂಡಲಗಿ ತಾಲೂಕಾಗಿ ಮತ್ತೆ ಹೊರಹೊಮ್ಮಿತು. ಆದರೆ ಬಾಲಚಂದ್ರ ಅವರ ವೇಗಕ್ಕೆ ಸ್ವಲ್ಪ ಕಡಿವಾಣ ಬಿತ್ತು ಭೀಮಪ್ಪ ಗಡಾದ ಶೈನ್ ಆದರು. ಸಹಜವಾಗಿಯೇ ಕಳೆದ ಚುನಾವಣೆ ಸ್ವಲ್ಪ ತುರುಸಿನಿಂದ ಕೂಡಿತ್ತು. ಅಲ್ಲಿಂದ ಜಾರಕಿಹೊಳಿ ವಿರೋಧ ಆರಂಭವಾಗಿದ್ದು ಹಾಗೆಯೇ ಮುಂದುವರೆದಿದೆ. 

ಆದರೆ ಇನ್ನೊಂದು ಸಂಗತಿಯೆಂದರೆ, ಕಾಂಗ್ರೆಸ್ ನ ಅರವಿಂದ ದಳವಾಯಿಯವರು ಕಲ್ಲೊಳಿಯಲ್ಲಿ ಮಾತನಾಡುತ್ತ, ಆಯಾ ಸಮುದಾಯಗಳ ಸಮಾವೇಶಗಳನ್ನು ಪ್ರಸ್ತಾಪಿಸುತ್ತ, ಸಮಾವೇಶ ನಡೆಸುವ ಅಧಿಕಾರವನ್ನು ಬಾಲಚಂದ್ರ ಜಾರಕಿಹೊಳಿಗೆ ಕೊಟ್ಟವರಾರು, ಅವರಿಗೆ ಏನು ನೈತಿಕ ಹಕ್ಕಿದೆ ಎಂದೆಲ್ಲ ಪ್ರಶ್ನೆ ಮಾಡಿದರೇ ಹೊರತು, ಅರಭಾವಿ ಕ್ಷೇತ್ರದಲ್ಲಿ ಅಲ್ಲಿ ಯಾಕೆ ರಸ್ತೆ ಆಗಿಲ್ಲ? ಇಲ್ಲಿ ಇವರಿಗೆ ಮನೆ ಯಾಕೆ ಸಿಕ್ಕಿಲ್ಲ? ಇವರಿಗೆ ನೌಕರಿ ಯಾಕೆ ಸಿಕ್ಕಿಲ್ಲ? ಈ ನೀರಾವರಿ ಯೋಜನೆ ಯಾಕಾಗಿಲ್ಲ ? ಎಂದು ಬೊಟ್ಟು ಮಾಡಿ ಕೇಳಲೇ ಇಲ್ಲ. ಆದರೆ ಪತ್ರಿಕೆಯೊಂದರ ಸಂದರ್ಶನದಲ್ಲಿ ಆಯ್ಕೆಯಾದರೆ ಅಭಿವೃದ್ಧಿ ಕಾರ್ಯ ಮಾಡುವುದಾಗಿ ಹೇಳುತ್ತಾರೆ. ಇದನ್ನೇ ಈಗ ಕ್ಷೇತ್ರದ ಮತದಾರರು ಕೇಳುತ್ತಿದ್ದು ಇಷ್ಟು ದಿನ ಅಭಿವೃದ್ಧಿ ಯ ಬಗ್ಗೆ ಪ್ರಶ್ನೆ ಮಾಡದ ಅರವಿಂದ ದಳವಾಯಿಯವರಿಗೆ ಕ್ಷೇತ್ರದ ಬಗ್ಗೆ ಈಗ ಜ್ಣಾನೋದಯವಾಯಿತೇ ? ಎಂದು ಕೇಳುತ್ತಿದ್ದಾರೆ. 

೨೦೧೯ ರಲ್ಲಿ ಪ್ರವಾಹ ಬಂದಾಗ ಇವರೆಲ್ಲಿ ಇದ್ದರು ? ಎಷ್ಟೋ ಜನರಿಗೆ ಮನೆಗಳು ಸಿಕ್ಕಿಲ್ಲ, ಪರಿಹಾರ ಸಿಕ್ಕಿಲ್ಲ, ಉಳ್ಳವರಿಗೆ ಮಾತ್ರ ಮನೆಗಳು ಸಿಕ್ಕಿವೆ ಎಂದೆಲ್ಲ ಆರೋಪಗಳು ಕೇಳಿ ಬಂದಾಗಲೂ ದಳವಾಯಿಯವರು ತುಟಿ ಬಿಚ್ಚಿಲ್ಲ. ಈಗ ಚುನಾವಣೆ ಬಂದ ಕಾಲಕ್ಕೆ ದಿಢೀರನೇ ಅವರಿಗೆ ಮತದಾರರ ಮೇಲೆ, ಸಮಯದಾಯಗಳ ಮೇಲೆ ಪ್ರೀತಿ ಉಕ್ಕಿ ಬಂದಿದೆ ಎಂದು ಜನತೆ ಪತ್ರಿಕೆಯ ಎದುರು ತಮ್ಮ ಅಳಲು ತೋಡಿಕೊಂಡಿದ್ದಾರೆ.

- Advertisement -

ಇನ್ನು ಭೀಮಪ್ಪ ಗಡಾದ ಅವರು ಒಂದು ರೀತಿಯಲ್ಲಿ ಘರ್ಜನೆಯನ್ನೇ ಮಾಡಿದ್ದಾರೆ. ತಾನು ಶಾಸಕನಾಗಿ ಆಯ್ಕೆಯಾದರೆ ಜಾರಕಿಹೊಳಿ ಸಹೋದರರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ಅವರಿಗೆ ಜನತೆಯ ಪರವಾಗಿ ಪತ್ರಿಕೆ ಕೇಳುವ ಪ್ರಶ್ನೆ ಏನೆಂದರೆ, ಗಡಾದ ಅವರೇ ಮೊದಲಿನಿಂದಲೂ ತಾವು ಭ್ರಷ್ಟಾಚಾರ ವಿರೋಧಿ ಹೋರಾಟ ಮಾಡುತ್ತ ಬಂದವರು ನಿಮ್ಮ ಹೋರಾಟ ಕೇವಲ ಬಡಪಾಯಿ ನೌಕರರ ಪಾಲಿಗಷ್ಟೇ ಸೀಮಿತವಾಯಿತೆ ? ಶಾಸಕರಿಂದ, ಅವರ ಬೆಂಬಲಿಗರಿಂದ ಭ್ರಷ್ಟಾಚಾರವಾಗಿದ್ದರೆ ಹೋರಾಟ ಮಾಡುವುದಿರಲಿ ಒಂದೇ ಒಂದು ಹೇಳಿಕೆ ಕೂಡ ತಮ್ಮಿಂದ ಬಂದಿಲ್ಲ. ಈಗ ಚುನಾವಣೆಯ ಸಮಯದಲ್ಲಿ ಮತ ಗಳಿಸುವುದಕ್ಕೋಸ್ಕರ ಅವರನ್ನು ಜೈಲಿಗೆ ಕಳಿಸುತ್ತೇನೆ ಎಂಬ ಹೇಳಿಕೆ ಕೊಟ್ಟರೆ ನಾವು ನಂಬಬೇಕೆ ? ಅಷ್ಟಕ್ಕೂ ನೀವೇ ನಿಮ್ಮ ಹಿಂದೆ ಭ್ರಷ್ಟನೊಬ್ಬನನ್ನು ಇಟ್ಟುಕೊಂಡು ನಿಮ್ಮ ಪತ್ನಿ ಸಂಸ್ಥೆಯೊಂದರಲ್ಲಿ ಭ್ರಷ್ಟಾಚಾರ ಮಾಡಿದ್ದನ್ನು ಕೂಡ ಬೆಂಬಲಿಸುತ್ತೀರಿ. ಅದು ಹೇಗೆ ಭ್ರಷ್ಟಾಚಾರ ವಿರೋಧಿ ಹೋರಾಟ ಮಾಡುತ್ತೀರಿ ? ಇದು ಅರಭಾವಿ ಕ್ಷೇತ್ರದ ಮತದಾರರ ಪ್ರಶ್ನೆ.

ಗಡಾದ ಅವರು ಮತ ಕೇಳಲು ಹೋದಾಗ ಬಡ ಜನರನ್ನು, ಹೆಣ್ಣು ಮಕ್ಕಳನ್ನು, ವೃದ್ಧರನ್ನು ಭಾವನಾತ್ಮಕವಾಗಿ ಸೆಳೆದು ಬಿಡುತ್ತಾರೆ ಆದರೆ ಅದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಮೇ ೧೩ ರಂದೇ ನಾವು ತಿಳಿದುಕೊಳ್ಳಬೇಕು. 

ಒಂದು ಅಭಿಪ್ರಾಯದಂತೆ ಗಡಾದ ಅವರು ಜೆಡಿಎಸ್ ನಲ್ಲಿ ಇದ್ದಿದ್ದರೆ ಅನಾಯಾಸವಾಗಿ ಈ ಸಲ ಚುನಾವಣೆಯಲ್ಲಿ ಆಯ್ಕೆಯಾಗುತ್ತಿದ್ದರು. ಆದರೆ ಕಾಂಗ್ರೆಸ್ ಗೆ ಬಂದರು, ಅಲ್ಲಿ ಟಿಕೆಟ್ ಸಿಗಲಿಲ್ಲ. ಅದಕ್ಕಾಗಿ ತಾನು ಬಡವ, ರಾಜಕೀಯ ಹಿನ್ನೆಲೆ ಇಲ್ಲದವ ಎಂಬ ಟ್ರಂಪ್ ಕಾರ್ಡ್ ಬಳಸತೊಡಗಿದರು. ಆದರೆ ಅದೇ ಭ್ರಷ್ಟ ಚೇಲಾನನ್ನು ಕರೆದುಕೊಂಡು ಸಾವಿರಾರು ಕಿಮೀ ಗಟ್ಟಲೆ ೧೮ ಲಕ್ಷದ ಕಾರಿನಲ್ಲಿ ತಿರುಗುತ್ತಾರೆ, ಪ್ಲಾಟ್ ಮೇಲೆ ಪ್ಲಾಟ್ ಖರೀದಿ ಮಾಡುತ್ತಾರೆ, ಹಿಂಬಾಲಕರಿಗಾಗಿ ಸಿಕ್ಕಾಪಟ್ಟೆ ಖರ್ಚು ಮಾಡುತ್ತಾರೆ ಮತ್ತೆ ಜನರಿಂದ ಭಿಕ್ಷೆ ಬೇಡುತ್ತಾರೆ !!

ಗಡಾದ ಅವರು ಆಗಾಗ ಪ್ರವಾಹ ಪೀಡಿತರಿಗಾಗಿ ದನಿಯೆತ್ತಿದ್ದಾರೆ ಆದರೆ ಅರವಿಂದ ದಳವಾಯಿಯವರದೂ ಯಾವ ದನಿಯೂ ಇಲ್ಲ. ಇವರಿಬ್ಬರಿಗೂ ಈಗ ಅಭಿವೃದ್ಧಿ ಯ ನೆನಪಾಗಿದೆ. ಅದೇ ವಿಚಿತ್ರ.

ಹಾಗಂತ ಬಾಲಚಂದ್ರ ಜಾರಕಿಹೊಳಿಯವರೇನು ಅರಭಾವಿ ಕ್ಷೇತ್ರವನ್ನು ನಂದನವನ ಮಾಡಿಲ್ಲ. ಇಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕು, ಬಡವರಿಗೆ, ಪ್ರವಾಹ ಸಂತ್ರಸ್ತರಿಗೆ ಮನೆಗಳು ಸಿಗಬೇಕು ಆದರೆ ಉಳ್ಳವರಿಗೆ ಹೋಗಿವೆ. ಬಡವರು ಬಾಯಿಸತ್ತವರಾಗಿದ್ದಾರೆ. ಶಾಸಕರು ವೈಯಕ್ತಿಕವಾಗಿ ಭೆಟ್ಟಿಯಾದವರಿಗೆ ಕೆಲಸ ಮಾಡಿಕೊಟ್ಟಿದ್ದಾರೆ ಅದು ನಿಜ ಆದರೆ ಸಾರ್ವಜನಿಕ ಕೆಲಸಗಳು ಸಾಕಷ್ಟು ಆಗಬೇಕಾಗಿದೆ. ಈ ಬಗ್ಗೆ ಎಲ್ಲ ಅಭ್ಯರ್ಥಿಗಳೂ ತಮ್ಮನ್ನೇ ಪರೀಕ್ಷೆ ಮಾಡಿಕೊಳ್ಳಬೇಕಾಗಿದೆ.

ಅಭ್ಯರ್ಥಿಗಳ ಆಯ್ಕೆ ಮಾತ್ರ ಮತದಾರ ಪ್ರಭುವಿನ ಕೈಯಲ್ಲಿದೆ.

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group