ಬೀದರ – ಗಡಿ ಜಿಲ್ಲೆಯಲ್ಲಿ ಸತತವಾಗಿ ಐದು ದಿನದಿಂದ ಮಳೆ ಸುರಿಯುತ್ತಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸೋಯಾ ಬೆಳೆಗೆ ಶಂಕು ಹುಳುವಿನ ಕಾಟದಿಂದಾಗಿ ರೈತ ಕಂಗಾಲಾಗಿದ್ದಾನೆ ಇಷ್ಟೆಲ್ಲ ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಬೀದರ ಜಿಲ್ಲೆಯ ಕಡೆಗೆ ನೋಡುವ ಕೃಪೆ ಮಾಡಿಲ್ಲ.
ಭಾರೀ ಮಳೆಯಿಂದಾಗಿ ಬೀದರ್ ನಗರದಲ್ಲಿ ಹಲವು ರಸ್ತೆಗಳು ಕೆಟ್ಟು ಹೋಗಿವೆ.ವಾಹನಗಳು ಹೊಯ್ದಾಡುತ್ತ ಸಾಗುತ್ತಿವೆ. ಎಲ್ಲಿ ರಸ್ತೆ ಇದೆ, ಎಲ್ಲಿ ಗುಂಡಿ ಇದೆ ಯಾವುದೂ ಗೊತ್ತಾಗದ ಪರಿಸ್ಥಿತಿ ಇದೆ.
ಜನತೆಗೆ ದಾರಿ ತೋಚದೇ ಕಂಗಾಲಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ ಮುನೇನಕೊಪ್ಪ ಅವರು ಮಾತ್ರ ತಣ್ಣಗೆ ಕುಳಿತಿದ್ದು ಬೀದರ್ ಜಿಲ್ಲೆಗೆ ಮಲತಾಯಿ ಧೋರಣೆ ಮುಂದುವರೆಸಿದ್ದಾರೆ.
ಹಳ್ಳಿಗಳಲ್ಲಿಯೇ ಇಂಥ ಮೊಳ ಕಾಲುದ್ದದ ತಗ್ಗುಗುಂಡಿಗಳು, ಕೆಸರಿನ ಹೊಂಡಗಳಾದ ರಸ್ತೆಗಳು ಇರುತ್ತವೆ ಎಂದು ಎಲ್ಲರೂ ತಿಳಿದಿರುತ್ತಾರೆ ಆದರೆ ಜಿಲ್ಲಾ ಸ್ಥಳವಾದ ಬೀದರ ಪಟ್ಟಣದಲ್ಲಿ ಅದಕ್ಕಿಂತಲೂ ತೀರ ಹದಗೆಟ್ಟಿರುವ ರಸ್ತೆಗಳಿವೆ ಎನ್ನುವುದು ಎದ್ದು ಕಾಣುತ್ತಿರುವ ದೃಶ್ಯ.
ನಗರದ ಬೊಮ್ಮಗೋಡೇಶ್ವರ ದೇವಸ್ಥಾನದಿಂದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತ ಹಾಗೂ ಗಾಂಧಿ ಗಂಜ್ ಮಾರುಕಟ್ಟೆಯಲ್ಲಿರುವ ರಸ್ತೆಗಳ ದುಸ್ಥಿತಿಯನ್ನು ಕಂಡು ಜನರು ಬೇಸರದ ನುಡಿ ನುಡಿಯುತ್ತಿದ್ದಾರೆ. ಈ ರಸ್ತೆಯಲ್ಲಿ ಒಂದ್ಸಲ ಹೋಗಿ ಬಂದ್ರ ಜೀವ ಹೈರಾಣ ಹೈರಾಣ ಆಗ್ಯಾದ ನೋಡ್ರಿ’ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ನಗರದ ಹಾರೂಗೇರಿ ಕಮಾನ ಬಳಿಯ ರಸ್ತೆಯಲ್ಲಿ ಅಂತು ದಿನಕ್ಕೊಂದಾದರೂ ವಾಹನ ಜಾರಿಬಿದ್ದು ಒಬ್ಬಿಬ್ಬರಿಗೆ ಗಾಯಗಳಾಗುತ್ತಿವೆ ಎಂದು ಬಾಡಿಗೆ ವಾಹನ ಚಾಲಕರು ಸಮಸ್ಯೆ ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ ರಸ್ತೆ ತೀರ ಹದಗೆಟ್ಟಿದ್ದು, ನಡೆದುಕೊಂಡು ಹೋಗುವುದಕ್ಕೂ ಆಗದಂಥ ಪರಿಸ್ಥಿತಿ ಇದೆ. ಎಲ್ಲೆಂದರಲ್ಲಿ ತಗ್ಗುಗುಂಡಿಗಳು ಬಿದ್ದಿವೆ. ಮಳೆ ಬಂದಿದ್ದರಿಂದ ಇಂಥ ಗುಂಡಿಗಳಲ್ಲಿ ಮಳೆ ನೀರು ಮತ್ತು ಕೆಸರು ಸಂಗ್ರಹಗೊಂಡಿದ್ದು ದ್ವಿಚಕ್ರ ವಾಹನದ ಸವಾರರು ಸಿಕ್ಕಿಕೊಳ್ಳುತ್ತಿದ್ದಾರೆ. ವೇಗವಾಗಿ ಬಂದ ವಾಹನಗಳು ಜಾರಿ ಬಿದ್ದು ಹಲವರಿಗೆ ಗಾಯಗಳಾಗಿವೆ.
ರಸ್ತೆ ಹದಗೆಟ್ಟು ವಾಹನಗಳು ಒಂದರ ಹಿಂದೆ ಒಂದು ಸಾವಕಾಶವಾಗಿ ಹೋಗಬೇಕಾಗುತ್ತಿದೆ. ತಗ್ಗುಗುಂಡಿಗಳಿರುವ ರಸ್ತೆ ಒಂದು ಕಡೆಯ ವಾಹನ ಇನ್ನೊಂದು ಕಡೆ ಬರಬೇಕಾದರೆ ಹತ್ತಾರು ವಾಹನಗಳು ನಿಂತುಕೊಳ್ಳಬೇಕಾಗುತ್ತಿದೆ. ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಯವರು ಅನೇಕ ಸಲ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಆದರು ರಸ್ತೆ ರಿಪೇರಿ ಆಗಿಲ್ಲ ಉಸ್ತುವಾರಿ ಸಚಿವರು ಶಂಕರ್ ಬಿ ಪಾಟೀಲ ಮುನೇನಕೊಪ್ಪ ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ