ಮುಗಳಖೋಡದಲ್ಲಿ “ನಾದಲೋಕ” ನಿಮಿ೯ಸಿದ ಡೊಳ್ಳಿನ ಕಲಾವಿದರು
ಮುಧೋಳ- ದಾರಿದ್ರ್ಯ, ಕಡು ಕಷ್ಟ, ಬಡತನ, ಸಾವು ನೋವುಗಳಿಂದ ಕಂಗೆಟ್ಟ ಮನುಷ್ಯ ಗಣಪನ ದಿವ್ಯ ನಾಮಗಳನ್ನು ಸದಾ ಮನಸ್ಸಿನಲ್ಲಿ ಧ್ಯಾನ ಮಾಡುವಂತವನಾದರೆ ಅವನ ಭವ ಬಾಧೆಗಳು ದೂರಾಗುವವು ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು.
ಅವರು ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಡೆದ ಸಿದ್ಧಿವಿನಾಯಕನ ಬೀಳ್ಕೊಡುವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ “ಆದಿಮೂಲ ಪುರುಷ” ಗಣಾವತಾರದ ಗರಿಮೆ ಹಿರಿಮೆ ಕಲಿಯುಗದಲ್ಲಿ ಉತ್ಕೃಷ್ಟವಾದದ್ದು. ದುರ್ಗವಿನಾಯಕ, ಉದ್ಧಂಡ ವಿನಾಯಕ, ಪಾಶಪಾಣಿ ವಿನಾಯಕ, ಸರ್ವ ವಿಘ್ನ ಹರಣ ವಿನಾಯಕ, ಲಂಬೋದರ, ಶೂಲಕಂಠಕ ವಿನಾಯಕ, ವಿಕಟರಾಜ ವಿನಾಯಕ, ರಾಜ್ಯ ಪುತ್ರ ವಿನಾಯಕ ಹೀಗೆ ಹಲವಾರು ನಾಮಗಳನ್ನು ಹೊಂದಿರುವ ಗಣನಾಥನನ್ನು ಶ್ರದ್ಧೆಯಿಂದ ಪೂಜಿಸಿದರೆ ಅಸಾಧ್ಯವೆನಿಸುವ ಕಾರ್ಯಗಳು ಸಿದ್ಧಿಸುವದಲ್ಲದೆ ಆಯುಷ್ಯ, ಆರೋಗ್ಯ .ಧನ-ಕನಕ, ಸಂಪತ್ತು ವೃದ್ಧಿಗೊಳ್ಳುವುದು ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಾಧುರೀಣರು, ಗುರು ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ಶ್ರೀಶೈಲ ಪಾಟೀಲ ಅವರನ್ನು ಶಾಲು ಮಾಲೆ ಹಣ್ಣು.ಕಾಯಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಸಮಾರಂಭದ ನೇತೃತ್ವವನ್ನು ಹಿರೇಮಠದ ಸಿದ್ದಯ್ಯ ಸ್ವಾಮಿಗಳು, ಮಹಾಲಿಂಗಯ್ಯ ಮಹಾಸ್ವಾಮಿಗಳು, ಕಡಪಟ್ಟಿ ಬಸವೇಶ್ವರ ದೇವಸ್ಥಾನದ ಅಚ೯ಕರಾದ ರಾಮಯ್ಯ ಶ್ರೀಗಳು ವಹಿಸಿದ್ದರು. ಪರಮಾನಂದ ದೇವರ ಪೂಜಾರಿಗಳಾದ ಅಮೋಘ ಒಡೆಯರ ಹಾಗೂ ಮಹಾಳಿಂಗೇಶ್ವರ ದೇವರ ಪೂಜಾರಿಗಳು ಹಾಗೂ ಆಶ್ರಮದ ಕುಮಾರ ಗುರುಪ್ರಸಾದ ಸ್ವಾಮೀಜಿ ಅವರ ಸಮ್ಮುಖದಲ್ಲಿ ದಯಾನಂದ ಸಿಂಗಾಡಿ ದಂಪತಿಗಳನ್ನು ಸತ್ಕರಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಪಿ. ಬಿ.ಸುಣಗಾರ, ಶಂಕರಗೌಡ ಪಾಟೀಲ, ಹಿರಿಯರಾದ ಕಲ್ಲಪ್ಪ ಕುಂಬಾರ, ಪರಮಾನಂದ ಬೆನ್ನೂರ, ಸಾವಿತ್ರಿ ಹಿರೇಮಠ, ದ್ರಾಕ್ಷಾಯಣಿ ಲಕ್ಷ್ಮೇಶ್ವರ, ಭೌರಮ್ಮ ಹಿರೇಮಠ, ಪವಿತ್ರ ಚೌವ್ಹಾಣ್, ಅಚ್ಯುತ ಹಿಪ್ಪರಗಿ, ವಿಠಲ ಕೋರೇಗೋಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ಧರು.
ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ ಅವರು ಪ್ರಸಾದದ ವ್ಯವಸ್ಥೆ ಮಾಡಿದರು. ಜಮಖಂಡಿ ತಾಲೂಕಿನ ನಿಂಗನೂರ ಗ್ರಾಮದ ಹಿರಿಯ ಕಲಾವಿದ ಕರೆಪ್ಪ ಮೂಡಲಗಿ ಕಲಾ ತಂಡದವರು ತಮ್ಮ ವಾದನದಿಂದ ನಾದಲೋಕವನ್ನು ನಿಮಿ೯ಸಿದರು . ಡೊಳ್ಳಿನ ಕುಣಿತ ಅವರ ಕೈಚಳಕ ನೋಡುಗರನ್ನು ಆಕರ್ಷಿಸಿತು. ಆಶ್ರಮದ ಲಕ್ಷ್ಮೀಪ್ರಸಾದ ಅವರು ಜ್ಞಾನ ವಿನಾಯಕನನ್ನು ಪೂಜಿಸಿ ಆರತಿಯನ್ನು ಬೆಳಗಿದರು.ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಯುವಮುಖಂಡ ಶ್ರೀನಿವಾಸ ಪ್ರಸಾದ ಸರ್ವರನ್ನು ಸ್ವಾಗತಿಸಿ ವಂದಿಸಿದರು

