ಸಿಂದಗಿ; ಸಿಸಿ ರಸ್ತೆ ಓಣಿಯಲ್ಲಿದೆ ಕ್ರಿಯಾ ಯೋಜನೆ ಕಂಪ್ಯೂಟರನಲ್ಲಿ ಎಂದು ಕ್ರಿಯಾ ಯೋಜನೆ ನಡೆಸಿ ಹಗಲು ದರೋಡೆ ನಡೆಸಿದ್ದೀರಿ ಸರಕಾರಿ ಅನ್ನ ತಿನ್ನುತ್ತೀರಿ ಜನರ ಗಮನಕ್ಕೆ ಬರುವ ಹಾಗೆ ಕಾಮಗಾರಿ ಕೈಕೊಳ್ಳಿ ಮನಬಂದಂತೆ ಕಾರ್ಯ ನಿರ್ವಹಿಸಿದ್ದೀರಿ ನಿಮ್ಮನ್ನು ದೇವರೇ ಬಂದು ತಿದ್ದಬೇಕು ಎಂದು ಶಾಸಕ ಅಶೋಕ ಮನಗೂಳಿ ಅವರು ಇಲಾಖಾವಾರು ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟು ಅಧಿಕಾರಿಗಳ ಚಳಿ ಬಿಡಿಸಿದ ಘಟನೆ ನಡೆಯಿತು.
ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ನಡೆದ ಪ್ರಥಮ ತ್ರೈಮಾಸಿಕ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿ, ತಾಪಂ ಯಲ್ಲಿ 2022-23ನೇ ಸಾಲಿನ ಮಾಹೆಯ ಕ್ರಿಯಾ ಯೋಜನೆಯಲ್ಲಿ ರೂ. 1.64 ಲಕ್ಷಗಳ ಅಜೆಂಡಾ ತೋರಿಸಿ ರೂ. 1.39 ಲಕ್ಷಗಳ ಲೆಕ್ಕ ಕೊಟ್ಟು ಇನ್ನುಳಿದ ರೂ. 25 ಲಕ್ಷಗಳ ಬಗ್ಗೆ ಯಾವುದೇ ಕ್ರಿಯಾ ಯೋಜನೆ ನೀಡುತ್ತಿಲ್ಲ. ಹೀಗೆ ಕ್ರಿಯಾ ಯೋಜನೆ ರೂಪಿಸಿ ಸಿಂದಗಿ ಲೂಟಿ ಹೊಡೆದು ಖಾಲಿ ಮಾಡಿ ಬಿಟ್ಟಿದ್ದೀರಿ ಕಾರಣ ಆಲಮೇಲದ 1.44 ಲಕ್ಷಗಳ ಹಾಗೂ 1.64 ಲಕ್ಷಗಳ ಕ್ರಿಯಾ ಯೋಜನೆಯ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಾಪಂ ಅಧಿಕಾರಿ ಬಾಬು ರಾಠೋಡ ಹಾಗೂ ಜಿಪಂ ಇಓ ಅವರಿಗೆ ತಾಕೀತು ಮಾಡಿದರು.
ಮುಂಗಾರು ಹಂಗಾಮಿನ ಮಳೆ ಕೈಕೊಟ್ಟಿದ್ದು ಅದಕ್ಕೆ ಪರ್ಯಾಯವಾಗಿ ಯಾವ ಬೆಳೆ ಬೆಳೆಯಬೇಕು ಎನ್ನುವ ಮುಂಜಾಗೃತಾ ಕ್ರಮವಾಗಿ ಪ್ರತಿ ಗ್ರಾಪಂ ಮಟ್ಟದಲ್ಲಿ ಕಬ್ಬು ಬೆಳೆಗಾರರ ಸಭೆ ಕರೆದು ವಿವಿಧ ಬೆಳೆಗಳ ರೈತರ ಜಾಗೃತಿ ಅಭಿಯಾನ ನಡೆಸಿ ಅನುಭವಿ ನಿವೃತ್ತ ಕೃಷಿ ಅಧಿಕಾರಿಗಳಿಂದ ತರಬೇತಿ ಕೊಡಿ ಎಂದು ಕೃಷಿ ಅಧಿಕಾರಿ ಡಾ. ಎಚ್.ವೈ ಸಿಂಗೆಗೋಳ ಅವರಿಗೆ ತಿಳಿಸಿದರು.
ತಾವರಖೇಡ ಗ್ರಾಮದ ಪುನರ ವಸತಿ ಕೇಂದ್ರಕ್ಕೆ ಅಭಿವೃದ್ಧಿಗೊಸ್ಕರ ರೂ. 9 ಕೋಟಿ 93 ಲಕ್ಷ ಮಂಜೂರಾಗಿ ಸುಮಾರು ಮೂರು ವರ್ಷಗಳು ಗತಿಸಿದರು ಕೂಡಾ ಇನ್ನೂವರೆಗೂ ಹಕ್ಕು ಪತ್ರ ನೀಡದೇ ಯಾವುದೇ ಕಾಮಗಾರಿ ಕೈಕೊಳ್ಳದೇ ಜನತೆಗೆ ಮೂಲ ಸೌಲಭ್ಯ ನೀಡದೇ ಅಲ್ಲಿಗೆ ಹೋಗಿ ಎಂದರೆ ಹೇಗೆ ? ವಿದ್ಯುತ್ ವ್ಯವಸ್ಥೆ ನೀರಿನ ವ್ಯವಸ್ಥೆ ಕಲ್ಪಿಸಿದರೆ ಅಲ್ಲಿ ವಾಸಿಸಲು ಅನುಕೂಲವಾಗುತ್ತದೆ ಅದಕ್ಕೆ ಮಂಜೂರಾದ 16 ಟಿಸಿಗಳ ಪೈಕಿ ಹಂತ ಹಂತವಾಗಿ ಜೋಡಣೆ ಮಾಡಿ ಎಂದು ಕೆಇಬಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಕೈಗಾರಿಕಾ ವಲಯಕ್ಕೆ 24 ಗಂಟೆಗೆ ವಿದ್ಯುತ್ ಬೇಡಿಕೆಯಿದೆ ಅದನ್ನು ಕೂಡಲೇ ಪೂರೈಸಿ ಎಂದರು.
ಲೋಕೋಪಯೋಗಿ ಇಲಾಖೆ ಎಇಇ ತಾರಾನಾಥ ರಾಟೋಡ ವರದಿ ನೀಡಿ, ಇಲಾಖೆಯಿಂದ 25 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳುತ್ತಿದ್ದಂತೆ ಶಾಸಕರು ಡಾ. ಅಂಬೇಡ್ಕರ ವೃತ್ತದಿಂದ ಮೋರಟಗಿ ನಾಕಾದವರೆಗಿನ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ತಾರಕಕ್ಕೆರುತ್ತಿದೆ ಅದರ ಬಗ್ಗೆ ನಿಗಾ ವಹಿಸುತ್ತಿಲ್ಲ. ಕಾಮಗಾರಿ ಗುತ್ತಿಗೆಗೆ ಪಡೆದುಕೊಂಡ ಏಜೆನ್ಸಿಗೆ ನೋಟಿಸ ನೀಡಿ ಮುಂದಿನ ವಾರದಲ್ಲಿ ಕಾಮಗಾರಿಗೆ ಇತೀಶ್ರೀ ಹಾಡಿ ಎಂದು ತಿಳಿಸಿದರು.
ಪಟ್ಟಣದ ಕೆರೆಯ ಪಕ್ಕದಲ್ಲಿ ಉದ್ಯಾನವನ ನಿರ್ಮಾಣಕ್ಕೆ 19-20ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ರೂ 1 ಕೋಟಿ, ಒಳ ಚರಂಡಿ ಇಲಾಖೆಯಿಂದ ರೂ 1 ಕೋಟಿ ಅನುದಾನ ಮಂಜೂರಾಗಿತ್ತು ಆದರೆ ಅರ್ಧಕ್ಕೆ ನಿಂತುಕೊಂಡಿದ್ದು ತೋಟಗಾರಿಕೆ ಇಲಾಖೆಯಿಂದ ಅನುದಾನ ಬಂದಿಲ್ಲ ಅದರ ಬಗ್ಗೆ ಕೂಡಲೇ ಕ್ರಮ ವಹಿಸಿ ಎಂದು ತೋಟಗಾರಿಕೆ ಇಲಾಖಾಧಿಕಾರಿಗಳಿಗೆ ಹೇಳಿದರು.
ತಾಲೂಕಿನ ಕೆಲವೊಂದು ಗ್ರಾಮಗಳಿಗೆ ಬಸ್ ಸಂಪರ್ಕವೇ ಇಲ್ಲ ಅಂತಹ ಗ್ರಾಮಗಳ ಪಟ್ಟಿ ಮಾಡಿ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಎಂದು ಡಿಪೋ ವ್ಯವಸ್ಥಾಪಕರಿಗೆ ನಿರ್ದೆಶನ ನೀಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾವಾರು ವರದಿ ಮಂಡಿಸಿದರು.
ತಾಪಂ ಯೋಜನಾಧಿಕಾರಿ ನಿಂಗಪ್ಪ ಗೋಠೆ, ತಾಪಂ ಇಓ ಬಾಬು ರಾಠೋಡ ವೇದಿಕೆ ಮೇಲಿದ್ದರು.