೧ ಗಂಟೆಯಲ್ಲಿ ೫೭೫ ಮೆಟ್ಟಲು ಏರಿದ ಸಾಧಕ: ಹೊತ್ತು ತಂದ ಜೋಳವನ್ನು ದೇವಸ್ಥಾನಕ್ಕೆ ಸಮರ್ಪಿಸಿದ ಯುವಕ
ಹುನಗುಂದ:ದೇವರ ಮೇಲಿನ ಭಕ್ತಿ ಮತ್ತು ಅಪಾರ ನಂಬಿಕೆ ಜೊತೆಗೆ ಸಾಧಿಸುತ್ತೇನೆ ಎನ್ನುವ ಆತ್ಮವಿಶ್ವಾಸ ಮತ್ತು ಛಲವಿದ್ದರೇ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ೨೦ ವರ್ಷದ ಯುವಕನೋರ್ವ ೧೦೫ ಕೆ.ಜಿ. ಜೋಳದ ಚೀಲವನ್ನು ಹೊತ್ತು ೧ ಗಂಟೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿಯ ಸಮೀಪದ ಆಂಜನೇಯನ ಜನ್ಮ ಸ್ಥಳ ಹಾಗೂ ಆಂಜನೇಯನ ಶಕ್ತಿ ಕೇಂದ್ರ ಅಂಜನಾದ್ರಿ ಬೆಟ್ಟವನ್ನು ಏರುವ ಮೂಲಕ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ.
ಹೌದು, ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮ ಸಮೀಪದ ಬಿಸಲದಿನ್ನಿ ಗ್ರಾಮದ ಮಹೇಶ ಸಂಗಪ್ಪ ಬೋಳಿ ಎಂಬ ಯುವಕ ನ.೧೦ ರಂದು ಸೋಮವಾರ ೧೦೫ ಕೆ.ಜಿ ಜೋಳದ ಚೀಲವನ್ನು ಹೆಗಲ ಮೇಲೆ ಹೊತ್ತು ಸಾಧನೆ ಮಾಡಿದ ಯುವಕ ಮೂಲತಃ ಹುನಗುಂದ ತಾಲೂಕಿನ ಗಂಜೀಹಾಳ ಗ್ರಾಮದವನಾಗಿದ್ದು.ಅವನ ಮಾವನ ಊರಾದ ಬಿಸಲದಿನ್ನಿಯಲ್ಲಿ ವಾಸವಾಗಿದ್ದಾನೆ.
ಕಡಿದಾದ ಮೆಟ್ಟಿಲು ಮಾರ್ಗ ಹೊಂದಿರುವ ಅಂಜನಾದ್ರಿ ಬೆಟ್ಟ ಹತ್ತುವುದು ಎಂದರೆ ಸಾಮಾನ್ಯ ಜನರಿಗೆ ಪ್ರಯಾಸ ಪಟ್ಟು ಹತ್ತಾರು ಬಾರಿ ಕುಳಿತು ವಿಶ್ರಾಂತಿ ಪಡೆದು ಹತ್ತೋದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಅಂತಹದ್ದರಲ್ಲಿ ಯುವಕನೊಬ್ಬ ಬರೋಬ್ಬರಿ ೧೦೫ ಕೆ.ಜಿ ಭಾರದ ಜೋಳದ ಚೀಲ ಹೊತ್ತು ಎಲ್ಲಿಯೂ ಇಳಿಸದೇ, ಸ್ವಲ್ಪವೂ ವಿಶ್ರಾಂತಿಯನ್ನು ಪಡೆಯದೇ ಬೆಟ್ಟ ಹತ್ತಿ ದಾಖಲೆ ಮಾಡಿದ್ದಾನೆ.
ಅಂಜನಾದ್ರಿ ಬೆಟ್ಟದ ಆರಂಭದಿಂದ ಅಂಜನೇಯನ ಸನ್ನಿಧಾನದವರೆಗೆ ಆಂಜನೇಯನ ಜಪ ಮಾಡುತ್ತಾ ಘೋಷಣೆ ಕೂಗುತ್ತಾ ೧ ಗಂಟೆಯ ಅವಧಿಯಲ್ಲಿ ೫೫೦ ಅಡಿ ಎತ್ತರವಿರುವ ೫೭೫ ಮೆಟ್ಟಿಲುಗಳನ್ನು ಬಾರವಾದ ಜೋಳದ ಚೀಲ ಹೊತ್ತು ಬೆಟ್ಟವನ್ನೇರಿ ಆಂಜನೇಯನ ದರ್ಶನ ಪಡೆದು, ವಿಶೇಷ ಪೂಜೆಯನ್ನು ಸಲ್ಲಿಸಿ,ಬಳಿಕ ಜೋಳದ ಚೀಲವನ್ನು ದೇವರಿಗೆ ಸಮರ್ಪಿಸುವ ಮೂಲಕ ಜಂಕ್ ಫುಡ್ ತಿಂದು ಗಟ್ಟಿತನ ಬೆಳಿಸಿಕೊಳ್ಳದೇ ಇರುವ ಇಂದಿನ ಯುವಕರಿಗೆ ಗಟ್ಟಿತನವನ್ನು ಪ್ರದರ್ಶಿಸಿ ಈ ವ್ಯಕ್ತಿ ಯುವ ಸಮೂಹಕ್ಕೆ ಮಾದರಿಯಾಗಿದ್ದಾನೆ.
ಈ ಸಂದರ್ಭದಲ್ಲಿ ಸೋಮಣ್ಣ.ತ.ಗೌಡರ, ಗಂಗಾಧರ.ಶ.ಗೌಡರ, ಶಶಿಕಾಂತ.ಬ.ಬೋಳಿ, ಶಂಕರ.ಬ.ಕುರಿ, ಸಿದ್ದಪ್ಪ.ಶ.ಕುಣಿಬೆಂಚಿ ಸೇರಿದಂತೆ ಬಿಸಲದಿನ್ನಿ, ವಳಕಲ್ಲದಿನ್ನಿ, ಗಂಜೀಹಾಳ ಗ್ರಾಮದ ಯುವಕರು ಈ ಯುವಕನೊಂದಿಗೆ ಇದ್ದು ಅವನ ಈ ಸಾಧನೆಗೆ ಬೆಂಬಲ, ಪ್ರೋತ್ಸಾಹ, ಸಹಕಾರ ನೀಡಿದ್ದಾರೆ.
ಅಭಿನಂದನೆ ಸಲ್ಲಿಕೆ- ೧೦೫ ಕೆ.ಜಿ ಜೋಳದ ಚೀಲವನ್ನು ಹೊತ್ತು ಅಂಜನಾದ್ರಿ ಬೆಟ್ಟವನ್ನು ಏರಿದ ಯುವಕ ಮಹೇಶ ಸಂಗಪ್ಪ ಬೋಳಿ ಅವರಿಗೆ ಗಂಜೀಹಾಳ ಗ್ರಾ.ಪಂ ಅಧ್ಯಕ್ಷ ತಿಮ್ಮಣ್ಣ ವಡ್ಡರ, ಮುಖಂಡರಾದ ಬಾಲೇಶ ಹಿರೇಗೌಡರ, ಅಂಗನವಾಡಿ ಕಾರ್ಯಕರ್ತರಾದ ವಿಮಲಾ.ಸ.ದ್ಯಾವಣ್ಣವರ (ಬೋಳಿ),ಸಹಾಯಕಿ ಯುವಕನ ತಾಯಿ ಶಾವಕ್ಕ.ಸಂ.ಬೋಳಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ನಾನೊಬ್ಬ ಆಂಜನೇಯನ ಪರಮ ಭಕ್ತನಾಗಿದ್ದು. ದೇವಸ್ಥಾನಕ್ಕೆ ೧೦೫ ಕೆಜಿ ಚೋಳವನ್ನು ಸಮರ್ಪಿಸಬೇಕೆನ್ನುವಂತಹ ಹರಕೆ ಇತ್ತು. ಆ ಹರಕೆಯನ್ನು ತೀರಿಸಲು ಅಂಜನಾದ್ರಿ ಬೆಟ್ಟದ ತುದಿಯಿಂದ ಹನುಮಪ್ಪನ ಸನ್ನಿಧಾನದವರಿಗೆ ಜೋಳದ ಚೀಲವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸಿ ಸಮರ್ಪಿಸಿದ್ದೇನೆ.
ಮಹೇಶ ಸಂಗಪ್ಪ ಬೋಳಿ. ೧೦೫ ಕೆ.ಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ ಯುವಕ.

