ತಿನ್ನುವ ಹಿಡಿ ಅನ್ನಕೆ,
ಸೂರ್ಯ ನೀಡುವ ಬೆಳಕಿಗೆ,
ಹಸಿರು ವೃಕ್ಷಗಳು ಪಸರಿಸುವ ತಂಗಾಳಿಗೆ ,
ಪ್ರಕೃತಿ ನೀಡುವ ಹನಿ-ಹನಿ ಜಲಕೆ ,
ಜೀವಮಾನ ಸವೆಸುವ ಓ ಮಾನವ ,
‘ನಾನು,ನಾನು! ‘ಎಂಬ ಅಹಮಿಕೆ ಬೇಕೇ ???
ಇನಿದನಿಯಲಿ ಹಾಡುವ ಕೋಗಿಲೆಗೆ,
ಸುಂದರ ದನಿ ನೀಡಿದ್ದು ನೀನೇನಾ ?
ಮುಗಿಲೆತ್ತರಕೆ ಹಾರುವ ಹಕ್ಕಿಗೆ,
ಹಾರುವುದ ಕಲಿಸಿದ್ದು ನೀನೇನಾ ?
ನೀರಲಿ ಸ್ವಚ್ಛಂದವಾಗಿ ಈಜುವ ಮೀನಿಗೆ
ಈಜು ಕಲಿಸಿದ್ದು ನೀನೇನಾ ???
ನಾನು, ನಾನೆಂದು ಮೆರೆಯುವ ಓ ಮೂಢಾ !
ಗಾಳಿ ನಿನ್ನದೇ ? ಬೆಳಕು ನಿನ್ನದೇ ?
ತಂಪು ನೀಡುವ ಪ್ರಕೃತಿಮಾತೆ ನಿನ್ನದೇ ?
ಬಾನಲಿ ಮೂಡುವ ಸುಂದರ ಕಾಮನಬಿಲ್ಲು ನೀನು ರೂಪಿಸಿದ್ದೇ?
ನಾಗರೀಕತೆ ಎಂದು ಕಾಡುಕಡಿದೆ,
ನದಿಗಳ ಪಾತ್ರವನೇ ಬದಲಿಸಿದೆ,
ರಸ್ತೆ ನಿರ್ಮಿಸಿದೆ,ರೆಸಾರ್ಟ್ ಗಳ ನಿರ್ಮಿಸಿದೆ,
ದುಡಿದ ಹಣದಲಿ ಮೇಜವಾನಿ ಮಾಡಿದೆ,
ನಿನ್ನ ಕೃತ್ಯಕೆ ಗುಡ್ಡಗಳು ಕುಸಿದವು,
ಮನೆಗಳುದುರಿ,ಭೂಮಿಯೊಳಗೆ ಹೂತುಹೋದವಲ್ಲಾ !!
ಮಾನವ ನೀ ರಾಜಕಾರಣಿ,ಅಧಿಕಾರಿ,
ಸಮಾಜಸೇವಕ,ಹೋರಾಟ
ಮಾಡುವವ,
ಸಂಶೋಧಿಸುವವ, ಧರ್ಮ ಕಾಪಾಡುವವ,
ಹಲವು ಬಗೆಯ ವೇಷ ಧರಿಸಿ,
ನಾನು,ನಾನೆಂಬ ಅಹಮಿಕೆಯೊಡನೆ
ಬಡವರ ಮೇಲೆ,ಪ್ರಕೃತಿಯ ಮೇಲೆ
ಆಕ್ರಮಣ …ನಡೆಸುವೆಯಲ್ಲಾ ???
ಓ ಮನುಜನೇ,ನಿನಗೆ ಹೊಸತನ್ನ ನಿರ್ಮಿಸುವ ಶಕ್ತಿ ಇದೆಯೇ???
ಉಸಿರು ನಿಂತಾಗ ಮೂರು ಅಡಿ ಆರು ಅಡಿ …….
ಇಷ್ಟೇ ನಿನ್ನ ಪ್ರಪಂಚ….!!
ಅದಕಾಗಿ ಅಷ್ಟೆಲ್ಲಾ ಹೋರಾಟ,ಹಾರಾಟ,
ಚೀರಾಟ,ನಾನು ನಾನೆಂಬ ಅಹಮಿಕೆಯ ಬದುಕು ಬೇಕೇ ???
ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368