spot_img
spot_img

ಗೆಲುವಿಗೆ ರಹಸ್ಯಗಳಿಲ್ಲ!!

Must Read

ಗೆಲುವು ಕೆಲವೇ ಕೆಲವು ಜನರ ಸ್ವತ್ತಲ್ಲ. ಅದು ಅದೃಷ್ಟಶಾಲಿಗಳಿಗೆ ಒಲಿಯುತ್ತದೆ ಎಂಬುದಂತೂ ಸಂಪೂರ್ಣ ಸುಳ್ಳು. ಅಂದ ಹಾಗೆ ಇನ್ನೊಂದು ವಿಷಯ ಗೆಲುವಿಗೆ ಅಡ್ಡದಾರಿಗಳಂತೂ ಇಲ್ಲವೇ ಇಲ್ಲ. ಅದು ಸಾವಿರ ಸಾವಿರ ಪ್ರಯತ್ನಗಳ ಒಟ್ಟಾರೆ ಫಲಿತಾಂಶ.ಗೆಲುವಿಗಾಗಿ ಯಾವೆಲ್ಲ ಜ್ಞಾನವನ್ನು ಗಳಿಸಬೇಕು ಎನ್ನುವುದಷ್ಟೇ ಮುಖ್ಯವಲ್ಲ ಗಳಿಸಿದ ಜ್ಞಾನದ ಜೊತೆಗೆ ಯಾವ ಕಾರ್ಯಗಳನ್ನು ಅನುಷ್ಟಾನಕ್ಕೆ ತರಬೇಕು ಎನ್ನುವುದೂ ಮುಖ್ಯವಾಗುತ್ತದೆ. ನಿರುಪಯೋಗಿಯಾದ ಯೋಚನೆಗಳನ್ನು ಬಿಟ್ಟರೆ ನಿರುಪಯೋಗಿಯಾದ ಕೆಲಸಗಳು ತಾನಾಗಿಯೇ ನಿಲ್ಲುತ್ತವೆ. ಹಾಗೋ ಹೀಗೋ ಗೆಲುವನ್ನು ಸಾಧಿಸಿದರೆ ಸಾಲದು. ಅದನ್ನು ಒಳ್ಳೆಯ ದಾರಿಯಲ್ಲೇ ಸಾಧಿಸಬೇಕು. ಇಲ್ಲದಿದ್ದರೆ ಗೆಲುವೇ ದೊಡ್ಡ ಸೋಲಾಗಿ ಅವಮಾನವಾಗಿ ಕಾಡುವುದು.ಗ್ರೀಕ್ ದೇಶದ ಮಹಾನ ಗಣಿತಜ್ಞ ಸಂತ ಮತ್ತು ವಿಜ್ಞಾನಿ ಪೈಥಾಗರಸ್ ಹೇಳಿದಂತೆ ‘ಎಷ್ಟೇ ಕಠಿಣವೆನಿಸಿದರೂ ಯೋಗ್ಯ ಮಾರ್ಗವನ್ನೇ ಸ್ವೀಕರಿಸಿ. ಅಭ್ಯಾಸವಾದಂತೆ ಅದು ಸರಳವೆನಿಸುತ್ತ ಹೋಗುವುದು.’ ಪ್ರಾಮಾಣಿಕ ಪರಿಶ್ರಮಕ್ಕೆ ಸಂಪೂರ್ಣವಾಗಿ ಕಟ್ಟುಬೀಳಬೇಕು.ಪ್ರಪಂಚದ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಲಕ್ಷಕೋಟಿ ಡಾಲರ್ ಮೊತ್ತದ ಒಡೆಯನಾಗಿರುವುದು ಆತನ ಶುದ್ಧ ಪ್ರಾಮಾಣಿಕತೆಯ ಕಾರಣದಿಂದಲೇ ಹೊರತು ಅಪ್ರಾಮಾಣಿಕ ಅಡ್ಡ ದಾರಿಯಿಂದಲ್ಲ.ಸರಿಯಾದ ಹಾದಿಯಲ್ಲಿ ಹೋಗುವವರನ್ನು ತಪ್ಪಿಸುವುದು ಅಷ್ಟು ಸುಲಭವಲ್ಲ. ಲೆಕ್ಕವಿಲ್ಲದಷ್ಟು ಆಸೆಗಳು ಅಭಿಲಾಷೆಗಳು ಆಕಾಂಕ್ಷೆಗಳು ಮನದಲ್ಲಿ ಪುಟಿದೇಳುತ್ತಲೇ ಇರುತ್ತವೆ. ಮನದಂಗಳದಲ್ಲಿ ಅವು ಇದ್ದ ಮಾತ್ರಕ್ಕೆ ಗೆಲುವು ತಾನೇ ಬಂದು ನಮ್ಮ ಕೈ ಹಿಡಿಯುವುದಿಲ್ಲ. ಅರಿಯದೇ ನೋಡದೇ ಯೋಚಿಸದೇ ಕಾರ್ಯ ಮಾಡಬಾರದು. ಆಲೋಚನೆಗಳು ಮತ್ತು ಕೇಂದ್ರೀಕರಿಸಿದ ಕಾರ್ಯಗಳು ನಿರಂತರ ಖ್ಯಾತಿ ಮತ್ತು ಯಶಸ್ವಿಗೆ ದಾರಿ ಮಾಡಿಕೊಡುತ್ತವೆ. ಹೀಗೆ ಗೆಲುವಿನ ಬಗೆಗೆ ಹೇಳುತ್ತ ಹೊರಟರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಹಾಗಿದ್ದರೆ ಗೆಲುವಿನ ರಹಸ್ಯಗಳಾದರೂ ಏನು ಎಂಬ ಪ್ರಶ್ನೆ ತಲೆ ಹೊಕ್ಕು ಕಾಡುತ್ತದೆ. ಆದರೆ ವಾಸ್ತವದಲ್ಲಿ ಗೆಲುವಿಗೆ ರಹಸ್ಯಗಳೇನೂ ಇಲ್ಲ ಗೆಲುವಿಗೆ ಒಂದು ಸರಿಯಾದ ಕ್ರಮವಿದೆ ವ್ಯವಸ್ಥೆ ಇದೆ. ಅದನ್ನು ಅನುಸರಿಸಬೇಕಷ್ಟೆ.

ಮನೋಧರ್ಮ

ಉದ್ಯಮಿಯೊಬ್ಬ ನೂರು ಕೋಟಿ ಬಂಡವಾಳದ ಪಾದರಕ್ಷೆಯ ದೊಡ್ಡ ಕಂಪನಿಯೊಂದನ್ನು ಪ್ರಾರಂಭಿಸಬೇಕೆಂದು ಒಬ್ಬ ಸಿಇಓನನ್ನು ಆಫ್ರಿಕಾ ದೇಶಕ್ಕೆ ಸಮೀಕ್ಷೆಗೆ ಕಳಿಸಿದ. ಆತ ಮರಳಿ ಬಂದು ಹೇಳಿದ. ‘ಅಲ್ಲಿ ಕಂಪನಿಯನ್ನು ಆರಂಭಿಸಲು ಸಾಧ್ಯವೇ ಇಲ್ಲ. ಏಕೆಂದರೆ ಅಲ್ಲಿಯ ಜನರು ಪಾದರಕ್ಷೆ ಬಳಸುವುದೇ ಇಲ್ಲ.’ ಮಾಲಿಕ ಮತ್ತೊಬ್ಬ ಸಿಇಓನನ್ನು ಕಳಿಸಿದ. ಎರಡನೇ ಸಿಇಓ ನೀಡಿದ ಉತ್ತರ ಅಚ್ಚರಿದಾಯಕವಾಗಿತ್ತು. ‘ಅಲ್ಲಿ ನೂರು ಕೋಟಿ ಬಂಡವಾಳದ ಕಂಪನಿ ಯಾವುದಕ್ಕೂ ಸಾಲುವುದಿಲ್ಲ. ಕನಿಷ್ಟ ಐನೂರು ಕೋಟಿ ಕಂಪನಿ ಬೇಕು ಏಕೆಂದರೆ ಅಲ್ಲಿ ಯಾರ ಬಳಿಯೂ ಪಾದರಕ್ಷೆಗಳಿಲ್ಲ. ಎಲ್ಲರಿಗೂ ಪಾದರಕ್ಷೆಗಳು ಬೇಕು.’ಪರಿಸ್ಥಿತಿ ಒಂದೇ ಆಗಿದ್ದರೂ ವಿಚಾರ ಮಾಡುವ ರೀತಿ ಸ್ಪಂದಿಸುವ ರೀತಿ ಬದಲಾಗಿರುವುದೇ ವ್ಯಕ್ತಿಗೆ ಗೆಲುವನ್ನು ತರುತ್ತದೆ.ಇದನ್ನೇ ವಿಲಿಯಮ್ ಜೇಮ್ಸ್ ಒಮ್ಮೆ ಹೀಗೆ ಹೇಳಿದ್ದ. ‘ನಮ್ಮ ಮನೋಧರ್ಮವನ್ನು ಬದಲಿಸಿಕೊಳ್ಳುವುದರಿಂದ ಬದುಕನ್ನು ಬದಲಿಸಿಕೊಳ್ಳಬಹುದು.’ ಭಗವದ್ಗೀತೆಯಲ್ಲಿ ಹೇಳಿದಂತೆ ನಮ್ಮ ಮನಸ್ಸೇ ನಮಗೆ ಗೆಳೆಯ ಒಡನಾಡಿ ಬಂಧು ಹಾಗೂ ದೇವರು. ಬೇವಿನ ಸಸಿ ಹಚ್ಚಿ ಅದಕ್ಕೆ ಬೆಲ್ಲದ ಕಟ್ಟೆ ಕಟ್ಟಿದರೂ ಅದರಲ್ಲಿ ಬಿಡುವ ಕಾಯಿ ಕಹಿಯೇ ಆಗಿರುತ್ತವೆ. ಬೆಲ್ಲದ ಪ್ರಭಾವ ಅದರ ಮೇಲೆ ಒಂದಿಷ್ಟೂ ಆಗಿರುವುದಿಲ್ಲ. ಇದರರ್ಥ ನಮ್ಮ ಮನಸ್ಸನ್ನು ಸಂತೋಷದಿಂದ ನಿಗ್ರಹದಲ್ಲಿಟ್ಟುಕೊಂಡರೆ ಮಾತ್ರ ಗೆಳೆಯನಾಗಿ ಉಳಿಯಬಲ್ಲದು. ಇಲ್ಲದಿದ್ದರೆ ಅದೇ ವ್ಶೆರಿಯಾಗಿ ಕಾಡಬಲ್ಲದು.

ಸಂಪೂರ್ಣ ಸಾಮಥ್ರ್ಯ ಬಳಕೆ

ಗೆಲುವಿನ ಸರದಾರರು ಯಾವಾಗಲೂ ಅವಕಾಶಗಳಿಗಾಗಿ ಕಾಯುತ್ತ ಕುಳಿತುಕೊಳ್ಳುವುದಿಲ್ಲ. ತಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಇನ್ನೂ ಮುಂದುವರೆದು ಅವಕಾಶಗಳಿಗಿಂತ ಆಯ್ಕೆಯಿಂದ ಅದೃಷ್ಟಕ್ಕಿಂತ ತಮ್ಮದೇ ಗುರಿ ಮತ್ತು ಯೋಜನೆಗಳ ಮೂಲಕ ಬದುಕಲು ನಿರ್ಧರಿಸುತ್ತಾರೆ ಮತ್ತು ಹಾಗೆಯೇ ಬದುಕಿ ತೋರಿಸುತ್ತಾರೆ.

ಪ್ರತಿಯೊಂದು ತಪ್ಪನ್ನು ನಾವೇ ಮಾಡಿ ಕಲಿತು ಮುನ್ನಡೆಯುವಷ್ಟು ದೀರ್ಘವಾಗಿಲ್ಲ ಬದುಕು. ಅಲ್ಪಾವಧಿಯ ಜೀವನದಲ್ಲಿ ಗೆಲುವನ್ನು ಸಾಧಿಸಲು ಬಹಳ ಸರಳ ವಿಧಾನವೆಂದರೆ ಈಗಾಗಲೇ ಗೆದ್ದ ವ್ಯಕ್ತಿಗಳು ಅನುಸರಿಸಿದ ನಿಯಮಗಳನ್ನು ಅನುಸರಿಸುವುದು. ಜಗತ್ತಿನ ಪ್ರತಿಯೊಂದು ಜೀವಿಯು ತನ್ನ ಸಾಮಥ್ರ್ಯದ ಅಂತಿಮ ಘಟ್ಟದವರೆಗೆ ಬೆಳೆಯುತ್ತವೆ. ಸಸಿಯೊಂದು ಎಷ್ಟು ಎತ್ತರವರೆಗೆ ಬೆಳೆಯಬೇಕೋ ಎಷ್ಟು ಆಳದಲ್ಲಿ ಬೇರು ಚಾಚಬೇಕೋ ಅಲ್ಲಿಯವರೆಗೆ ಚಾಚುತ್ತದೆ. ಆದರೆ ಮನುಷ್ಯ ಮಾತ್ರ ತನ್ನ ಸಾಮಥ್ರ್ಯವನ್ನು ಸಂಪೂರ್ಣ ಪ್ರಮಾಣದಲ್ಲಿ ಬಳಿಸಿಕೊಳ್ಳುವುದಿಲ್ಲ. ಯಾವುದನ್ನು ಬಳಸುವುದಿಲ್ಲವೋ ಅದನ್ನು ಕಳೆದುಕೊಳ್ಳುವುದು ಖಚಿತ. ‘ಪ್ರತಿ ಸೂರ್ಯೋದಯವೂ ತನ್ನೊಂದಿಗೆ ಹೊಸ ಅವಕಾಶಗಳನ್ನು ತರುತ್ತದೆ. ಪ್ರತಿ ಸೂರ್ಯಾಸ್ತದೊಳಗೆ ಫಲಿತಾಂಶದ ಉತ್ತರ ನೀಡುವುದು ನಮ್ಮ ಕರ್ತವ್ಯ.’ ಪ್ರಯತ್ನದ ಕೊನೆಗೆ ನಮಗೆ ಬೇಕಿರುವುದು ಫಲವೇ ಅಲ್ಲವೇ? ನಾವು ನಮ್ಮ ಕೆಲಸಗಳಿಗೆ ಮಾತ್ರ ಜವಾಬ್ದಾರರಲ್ಲ. ಯಾವ ಕೆಲಸಗಳನ್ನು ಮಾಡಬೇಕೋ ಅವುಗಳನ್ನು ಮಾಡದಿರುವುದಕ್ಕೂ ಜವಾಬ್ದಾರರು ಎಂಬುದನ್ನು ಯಶಸ್ವಿ ವ್ಯಕ್ತಿಗಳು ಚೆನ್ನಾಗಿ ಬಲ್ಲರು. Its always better to Prepare and prevent than repair and repent

ಕಾಣದಿರಲಿ ಅಡೆತಡೆ

ಯಶಸ್ವಿ ವ್ಯಕ್ತಿ ಮತ್ತು ವಿಫಲ ವ್ಯಕ್ತಿಯ ನಡುವೆ ಇರುವ ಮುಖ್ಯ ಅಂತರ ಎಂದರೆ ಯಶಸ್ವಿ ವ್ಯಕ್ತಿಗೆ ತನ್ನ ಗುರಿ ಮಾತ್ರ ಕಾಣುತ್ತಿರುತ್ತದೆ. ಸೋಲುವ ವ್ಯಕ್ತಿಗೆ ನಡುವೆ ಬರುವ ಅಡೆತಡೆಗಳು ಕಾಣಿಸುತ್ತವೆ. ಪರಿಸ್ಥಿತಿ ಒಂದೇ ಆದರೆ ನೋಡುವ ದೃಷ್ಟಿ ಬೇರೆ. ನೋಡುವ ದೃಷ್ಟಿ ಬದುಕನ್ನು ಬದಲಿಸುತ್ತದೆ. ಅನೇಕ ವರ್ಷಗಳಿಂದ ಕತ್ತಲಿನಿಂದ ತುಂಬಿರುವ ಕೋಣೆಯಲ್ಲಿ ಬೆಳಕನ್ನು ಕಾಣಬೇಕೆಂದರೆ ಬಹಳ ವರ್ಷಗಳವರೆಗೆ ಕಾಯಬೇಕೆಂದಿಲ್ಲ.

ಕೇವಲ ಒಂದು ಬೆಂಕಿ ಕಡ್ಡಿ ಮತ್ತು ಒಂದು ಹಣತೆ ಇಲ್ಲವೇ ಮೊಂಬತ್ತಿ ಸಾಕು. ಅಂತೆಯೇ ಬದಲಾಗಲು ಬಹಳ ವರ್ಷಗಳು ಬೇಕೆಂದಿಲ್ಲ. ಬದಲಾಗಬೇಕೆಂಬ ದೃಢ ನಿಶ್ಚಯದ ನಿರ್ಣಯದ ಕ್ಷಣವೊಂದೇ ಸಾಕು. ಸೊಲುವ ಭಯ ಮನದಲ್ಲಿ ಆವರಿಸಿಕೊಂಡಿದ್ದರೆ ವಿಚಾರಗಳು ಪ್ರಬಲವಾಗುವುದಿಲ್ಲ ಕಾರ್ಯಗಳಂತೂ ನಿಶ್ಯಕ್ತವಾಗಿಬಿಡುತ್ತವೆ. ವಿಚಾರಗಳು ಭಾವನೆಗಳನ್ನು ರೂಪಿಸುತ್ತವೆ. ಭಾವನೆಗಳು ಕ್ರಿಯೆಗಳನ್ನು ರೂಪಿಸುತ್ತವೆ. ನಕಾರಾತ್ಮಕ ವಿಚಾರಗಳು ನಕಾರಾತ್ಮಕ ಫಲಿತಾಂಶವನ್ನು ತರದೇ ಬಿಡುವುದಿಲ್ಲ. ಸೋತ ಮನಸ್ಸು ಖಿನ್ನತೆಯಿಂದ ಬಳಲುತ್ತದೆ. ನೆನಪಿರಲಿ: ಖಿನ್ನತೆಯ ಚಕ್ರ ನಿಮ್ಮಿಂದಲೇ ಕೊನೆಗೊಳ್ಳಬೇಕು.

ಸಮಯ ನಿರ್ವಹಣೆ

ನೀವು ಬದಲಾಗುವವರೆಗೆ ಯಾವುದೇ ಭಿನ್ನ ಫಲಿತಾಂಶವನ್ನು ನಿರೀಕ್ಷಿಸಬೇಡಿ.ಜಗತ್ತಿನ ಯಾವ ಶ್ರೀಮಂತನೂ ಕೊಳ್ಳಲಾಗದ ಸಮಯ ಅಮೂಲ್ಯ ಸಂಪತ್ತು ಅದನ್ನು ಯಾವುದೇ ಕಾರಣಕ್ಕೂ ವ್ಯರ್ಥವಾಗಿ ಕಳೆಯಬಾರದು.ನಿಮ್ಮ ಏಳ್ಗೆಗಾಗಿ ಬಳಸುವ ಕಲೆ ಕಲಿತುಕೊಳ್ಳಬೇಕು. ಸಮಯ ನಿರ್ವಹಣೆ ಒಂದು ಕಲೆ. ಯಾವುದೇ ಕಲೆಯನ್ನು ಕಲಿಯುವ ಸಾಮರ್ಥ್ಯ ನಮ್ಮಲ್ಲಿದೆ. ಇತರರ ಟೀಕೆಗಳಿಗೆ ಹೊಗಳಿಕೆಗೆ ಕಾಯುತ್ತ ಕುಳಿತುಕೊಳ್ಳಬಾರದು. ಸಾಗರವನ್ನು ಸೇರಲು ಬಯಸಿ ಹರಿಯುವ ನದಿಯಂತೆ ನಿರಂತರವಾಗಿ ಗುರಿಯತ್ತ ಮುಖ ಮಾಡಿ ನಿಮ್ಮ ಕೆಲಸವನ್ನು ಮಾಡುತ್ತ ಮುಂದೆ ಸಾಗಿ. ಕಾಡುವ ಕನಸುಗಳನ್ನು ನನಸು ಮಾಡುವಲ್ಲಿ ವ್ಯಸ್ತರಾಗಿ. ಸಾಧಕರಿಂದ ಪ್ರೇರಣೆ ಪಡೆದುಕೊಳ್ಳಬೇಕು ಹೊರತು ಕಣ್ಮುಚ್ಚಿ ಅನುಕರಣೆಯ ಹಾದಿ ಹಿಡಿಯಬಾರದು. ನಾವೇ ನಾವೇ ಆಗಿರಬೇಕು ಏಕೆಂದರೆ ಜಗದಲ್ಲಿ ನಮ್ಮಂತೆ ಇನ್ನೊಬ್ಬ ವ್ಯಕ್ತಿ ಇಲ್ಲ. ನಮ್ಮತನವನ್ನು ಕಾಪಾಡಿಕೊಳ್ಳಬೇಕು. ಉರುಳುವ ಕಲ್ಲಿಗೆ ಏನೂ ಅಂಟುವುದಿಲ್ಲ. ಎನ್ನುವ ಆಂಗ್ಲ ಗಾದೆಯೊಂದಿದೆ.ಇಷ್ಟ ಪಟ್ಟದ್ದನ್ನು ಪಡೆಯಬೇಕೆಂದರೆ ಕಷ್ಟಪಡಲೇಬೇಕು.

ಕೊನೆ ಹನಿ

ಗೆಲುವಿಗೆ ರಹಸ್ಯಗಳಿಲ್ಲ ಸರಿಯಾದ ಒಂದು ವ್ಯವಸ್ಥೆ ಇದೆ. ನಾವು ಕಾರ್ಯಗತರಾದರೆ ಮಾತ್ರ ವ್ಯವಸ್ಥೆ ನೆರವಿಗೆ ಬರುತ್ತದೆ.

ಕಾರ್ಯಗತರಾಗದಿದ್ದರೆ ಯಾವುದೂ ನೆರವಿಗೆ ಬರುವುದಿಲ್ಲ. ‘ಅಭ್ಯಾಸ ಬಲದಿಂದ ಅಪ್ರಿಯ ವಸ್ತುಗಳು ಪ್ರಿಯವಾಗಿ ಕಾಣುತ್ತವೆ.’ ಎಂದಿದ್ದಾನೆ ಇಸೋಪ ಗಿಡ ಬೆಳೆದು ಹೂವು ಬಿಡುವ ಮುನ್ನ ಗಿಡದಿಂದ ಸಿಹಿಯಾದ ಹಣ್ಣುಗಳು ದೊರೆಯಲಾರವು ಅಂತೆಯೇ ಸಂಯಮವಿಲ್ಲದೇ ಸತತ ಕಾರ್ಯದಲ್ಲಿ ಮಗ್ನರಾಗದೇ ಸೋಲಿನ ಪಾಠಗಳಿಲ್ಲದೇ ಯಾವ ಗೆಲುವಿನ ರುಚಿಯೂ ಸಿಗಲಾರದು. ಗುರಿಯ ಆದ್ಯತೆಗಳನ್ನು ತಿಳಿದು ಸ್ವಯಂ ಶಿಸ್ತಿನಿಂದ ಗೆಲುವಿನ ರುಚಿ ಹೆಚ್ಚಿಸೋಣವಲ್ಲವೇ?


ಜಯಶ್ರೀ.ಜೆ. ಅಬ್ಬಿಗೇರಿ
(ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142)

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!