spot_img
spot_img

ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ : ಒಂದು ಅವಲೋಕನ

Must Read

- Advertisement -

“ಅಂದಿನ ಯುವಕರಿಗೆ ಮುಂದೆ ಗುರಿಯಿತ್ತು

ಹಿಂದೆ ಗುರುವಿದ್ದ
ಮುಂದೆ ನುಗ್ಗುತ್ತಿತ್ತು ರಣಧೀರರ ದಂಡು
ಇಂದಿನ ಯುವಕರಿಗೆ ಮುಂದೆ ಗುರಿಯಿಲ್ಲ
ಹಿಂದೆ ಗುರುವಿಲ್ಲ, ಓಡುತ್ತಿದೆ ನೋಡು ಕುರಿಗಳ ಹಿಂಡು”

ಎಂಬ ಕವಿವಾಣಿ ವಾಸ್ತವತೆಯನ್ನು ಬಿಚ್ಚಿಟ್ಟಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ದೊರೆತರೆ, ಯುವಕರಾದಾಗ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು. ಯುವಜನತೆ ಬೇಜವಾಬ್ದಾರಿಯಿಂದ ವರ್ತಿಸಿದಾಗ ಶಿಕ್ಷಕರು ಮತ್ತು ಪಾಲಕರು ಪರಸ್ಪರ ಆರೋಪಿಸುವುದು ಸಾಮಾನ್ಯವಾಗಿಬಿಟ್ಟಿದೆ. ಪ್ರಾಚೀನ ಕಾಲದಲ್ಲಿ ಗುರುಕುಲದಲ್ಲಿ ದೊರೆಯುವ ಶಿಕ್ಷಣ ಗುರು ಕೇಂದ್ರಿತವಾಗಿತ್ತು. ಆದರೆ ಕಾಲಗತಿಸಿದಂತೆ ಶೈಕ್ಷಣಿಕ ಚರ್ಚೆ ಸಂವಾದಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಜರುಗಿ, ಮನೋವೈಜ್ಞಾನಿಕ ದೃಷ್ಟಿಕೋನದ ಹಿನ್ನಲೆಯಲ್ಲಿ ಶಿಕ್ಷಣ ಶಿಶುಕೇಂದ್ರಿಕೃತವಾಗಿರಬೇಕೆಂಬ ಧೋರಣೆ ಬೆಳೆದು ಎಲ್ಲೆಡೆ ಮಕ್ಕಳ ಹಕ್ಕುಗಳು, ಮಕ್ಕಳ ಪೌಷ್ಠಿಕ ಆಹಾರ, ಮಕ್ಕಳ ಸಾಹಿತ್ಯ, ಮಕ್ಕಳ ಸರ್ವತೋಮುಖ ಏಳ್ಗೆಯನ್ನು ಸಾಧಿಸುವ ದಿಸೆಯಲ್ಲಿ ಕುಟುಂಬ, ಶಾಲೆ, ಧಾರ್ಮಿಕ ಸಾಮಾಜಿಕ ಸಂಘ ಸಂಸ್ಥೆಗಳ ಪಾತ್ರ ಮೊದಲಾದವುಗಳ ಕುರಿತು ಕನ್ನಡದಲ್ಲಿ ಅಧ್ಯಯನಶೀಲವಾದ, ಸರ್ವರಿಗೂ ಪ್ರಯೋಜನಕಾರಿಯಾದ ಮಕ್ಕಳ ಕೃತಿಗಳು ಸಾಕಷ್ಟು ಬಂದಿಲ್ಲ ಈ ಕೊರತೆಯನ್ನು ಸ. ರಾ. ಸುಳಕೂಡೆಯವರ *ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ* ನೀಗಿಸಬಲ್ಲದು.
ಈಗಾಗಲೆ ಎಂಭತ್ತಕ್ಕೂ ಮೀರಿ ವೈವಿಧ್ಯಮಯ ಕೃತಿಗಳನ್ನು ರಚಿಸಿ ನಾಡಿನಾದ್ಯಂತ ಚಿರಪರಿಚಿತರಾಗಿರುವ ಸ. ರಾ. ಸುಳಕೂಡೆಯವರು,ಮಕ್ಕಳ ಸಾಹಿತ್ಯ : ಸಾಧ್ಯತೆ ಸವಾಲುಗಳು, ಮಕ್ಕಳ ಸಾಹಿತ್ಯ : ಒಂದು ಹೊರಳು ನೋಟ ಎಂಬ ಕೃತಿಗಳಿಂದ ಮಕ್ಕಳ ಸಾಹಿತ್ಯಕ್ಕೆ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ವಿಮರ್ಶಕರ ಮತ್ತು ಜನ ಮನಕ್ಕೆ ಪಾತ್ರವಾದ ಅವರ ಮತ್ತೊಂದು ” ಕೃತಿ ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ ”
ಮೊದಲನೆಯದಾಗಿ ಮಕ್ಕಳು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಾದ ಗಾಢ ಪ್ರಭಾವದಿಂದ ಟಿ.ವ್ಹಿ., ಮೊಬೈಲ್, ಕಂಪ್ಯೂಟರ್, ಸಿನೆಮಾಗಳಿಗೆ ಮೋಹಿತರಾಗಿ ಪಾಶ್ಚಾತ್ಯ ಆಹಾರ ಪದ್ದತಿ, ಉಡುಗೆ, ತೊಡುಗೆ ಸಂಪ್ರದಾಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ಎರಡನೇಯದಾಗಿ ‘ಮಕ್ಕಳೇ ದೇವರು’, ‘ಇಂದಿನ ಮಕ್ಕಳೆ ನಾಳಿನ ಪ್ರಜೆಗಳು’ ಎಂಬ ಘೋಷಣೆಗಳ ನಡುವೆ ಸಂಪ್ರದಾಯ, ದೇವರು, ಧರ್ಮ ಜಾತಿಗಳ ಹೆಸರಿನಲ್ಲಿ ಮೂಡನಂಬಿಕೆಗಳನ್ನು ತುಂಬಲಾಗುತ್ತಿದೆ ಹಾಗೂ ತಾವು ಹೆತ್ತವರೆಂಬ ಕಾರಣದಿಂದ ಪಾಲಕರು ತಮ್ಮ ಆಸೆ ಆಕಾಂಕ್ಷೆ, ವಿಚಾರ, ಅಭಿಪ್ರಾಯಗಳನ್ನು ಒತ್ತಾಯಪೂರ್ವಕವಾಗಿ ಮಕ್ಕಳ ಮೇಲೆ ಹೇರುತ್ತಿದ್ದಾರೆ. ಮಕ್ಕಳ ಕಲಿಕೆ, ಭಾಷಾ ಮಾಧ್ಯಮ, ಆಟ ಪಾಠಗಳಿಂದ ಹಿಡಿದು ಮದುವೆಯವರೆಗೆ ಪಾಲಕರೇ ನಿರ್ಧರಿಸಿ, ಮಕ್ಕಳ ಆಯ್ಕೆಯ ಸ್ವಾತಂತ್ರ, ವಿಚಾರ ಅಭಿಪ್ರಾಯಗಳಿಗೆ ಧಕ್ಕೆ ತರುತ್ತಿರುವುದು ಶೋಚನೀಯವಾದುದು. ಇಂತಹ ಪ್ರಚಲಿತ ಸಂದಿಗ್ಧ ಪರಿಸ್ಥಿತಿಯ ಅಪಾಯದಿಂದ ಮಕ್ಕಳನ್ನು ಪಾರುಮಾಡಿ ಅವರನ್ನು ಕೌಟುಂಬಿಕ ಮಾತ್ರವಲ್ಲದೆ ಸಾಮಾಜಿಕ ಶಕ್ತಿಯನ್ನಾಗಿ ಬೆಳೆಸುವುದು ಹೇಗೆ? ಬಾಲಕರನ್ನು ನಾಯಕರನ್ನಾಗಿಸಲು ಉತ್ತಮ ಪರಿಸರವನ್ನು ಒದಗಿಸುವುದು ಹೇಗೆ? ಈ ದಿಸೆಯಲ್ಲಿ ಎದುರಾಗುವ ಸವಾಲುಗಳು ಪರಿಹಾರಗಳ ಕುರಿತು ಲೇಖಕರ ವಾಸ್ತವಿಕ ನೆಲೆಗಟ್ಟಿನಲ್ಲಿ ‘ ಹಲಸಿನ ಹಣ್ಣಿನ ತೊಳೆ ‘ ಗಳನ್ನು ಬಿಡಿಸಿದಂತೆ ವಿಶ್ಲೇಷಿಸುತ್ತಾ ಹೋಗುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಗಾಂಧೀಜಿ, ನೆಹರೂ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶಿವಾಜಿ ಮೊದಲಾದ ಮಹಾನ್ ವ್ಯಕ್ತಿಗಳ ಬದುಕಿನ ಚಿತ್ರಣಗಳನ್ನು ಓದುತ್ತ ಹೋದಂತೆ ಅನುಭವದ ಪರಿಧಿ ವಿಸ್ತರಿಸುತ್ತ ಹೋಗುತ್ತದೆ. *ಮಾನವನ ಆಧುನಿಕ ರೀತಿ ಮತ್ತು ಪ್ರವೃತ್ತಿಯಿಂದಾಗಿ ಮಕ್ಕಳು ಹೇಗೆ ಕಡೆಗಣಿಸಲ್ಪಡುತ್ತಿದ್ದಾರೆಂಬುದನ್ನು ಎಳೆ ಎಳೆಯಾಗಿ ಹಿಂಜಿ ಇಟ್ಟಿದ್ದಾರೆ. ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿಸುವಲ್ಲಿ ಬೇಕಾಗುವ ಪರಿಸರ – ಪರಿಕರಗಳ ಬಗ್ಗೆ ಸಾಕಷ್ಟು ಚರ್ಚೆಯನ್ನಿಲ್ಲಿ ಕಾಣಬಹುದಾಗಿದೆ* ಎಂದು ಪ್ರೋ. ಸಂಗಮೇಶ ಗುಜಗೊಂಡ ಅವರು ಬೆನ್ನುಡಿಯಲ್ಲಿ ಹೇಳಿದ್ದು ಕೃತಿಯ ಹೂರಣವನ್ನು ತೆರೆದಿಟ್ಟಂತಾಗಿದೆ.
ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಸಾಕಷ್ಟು ರಚನೆಯಾಗಿದ್ದರೂ ಅದು ಕವಿತೆ, ಕಥೆ, ನಾಟಕಗಳಿಗೆ ಸೀಮಿತವಾಗಿದೆ. ಮಕ್ಕಳ ಸಾಹಿತ್ಯವೆಂದರೆ ಪ್ರಾಣಿ ಪಕ್ಷಿಗಳ ಮತ್ತು ರಾಜ ರಾಣಿ ಮಂತ್ರಿಗಳ ಪಾತ್ರಗಳ ಮೂಲಕ ನೀತಿ ಬೋಧನೆ ಹಾಗೂ ಮನರಂಜನಾತ್ಮಕ ಅತಿರಂಜಿತ ಕಾಲ್ಪನಿಕ ಸಾಹಿತ್ಯ ಮಾತ್ರ ಹೆಚ್ಚಾಗಿದೆ. ಮಕ್ಕಳ ಹಕ್ಕುಗಳು, ಮಕ್ಕಳ ವ್ಯಕ್ತ್ತಿತ್ವ ವಿಕಾಸದಲ್ಲಿ ಸಾಹಿತ್ಯದ ಪಾತ್ರ, ಪಾಲಕರ ಕರ್ತವ್ಯಗಳು ಮೊದಲಾದವುಗಳ ಕುರಿತು ಆಧುನಿಕ ವಿಜ್ಞಾನ ತಂತ್ರಜ್ಞಾನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಎದುರಿಸುವ ಸವಾಲುಗಳು ಪರಿಹಾರಗಳ ಕುರಿತು ಕೃತಿಗಳು ಬಹಳ ಕಡಿಮೆ ಈ ನಿಟ್ಟಿನಲ್ಲಿ ಕುವೆಂಪು, ಶಿವರಾಮ ಕಾರಂತ, ಡಿ.ಎಸ್.ಕರ್ಕಿ, ಸಿದ್ದಯ್ಯ ಪುರಾಣಿಕರಂತಹ ಕೆಲವರು ಮಾತ್ರ ಮಹತ್ತರ ಕೃತಿಗಳನ್ನು ನೀಡಿದ್ದಾರೆ. ಈ ಪರಂಪರೆಯನ್ನು ಸುಳಕೂಡೆಯವರು ಮುಂದುವರೆಸಿ ಮಾದರಿಯ ಕೃತಿಯನ್ನು ನೀಡಿದ್ದಾರೆನ್ನಬಹುದು. ಕುವೆಂಪು ಅವರು ಹೇಳುವಂತೆ – “ಮಕ್ಕಳಿಗೆ ಏನನ್ನು ನೀಡಬೇಕು? ಎಷ್ಟು ನೀಡಬೇಕು? ಮತ್ತು ಯಾವಾಗ ನೀಡಬೇಕು? ಎಂಬುದನ್ನು ಪಾಲಕರು ಪೂರ್ವ ಯೋಜಿತವಾಗಿ ನಿರ್ಧರಿಸಿಕೊಳ್ಳಬೇಕು”. ಎಂದಿರುವುದು ಅರ್ಥಗರ್ಭಿತವಾಗಿದೆ. ಅದು ಅಭಿವ್ಯಕ್ತಿ ಸ್ವಾತಂತ್ರ್ಯ, ಆಹಾರ, ವಿಹಾರ, ಸಾಹಿತ್ಯ ಆಯ್ಕೆಯ ಸ್ವಾತಂತ್ರ್ಯವಾಗಿರಬಹುದು. ಪಾಲಕರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ತುಂಬುವಂತಹ ಉತ್ತಮ ಪರಿಸರವನ್ನು ನಿರ್ಮಿಸಬೇಕಾಗಿದೆ. ಮಕ್ಕಳಲ್ಲಿ ಜಾತ್ಯತೀತ, ಧರ್ಮಾತೀತವಾದ ನಡೆ ನುಡಿಗಳನ್ನು ರೂಪಿಸಬೇಕಾಗಿದೆ. ಇಂದು ಆಧುನಿಕ ಮೌಲ್ಯಗಳನ್ನು ಸ್ವೀಕರಿಸುವ ಭರದಲ್ಲಿ ಸಾವಿರಾರು ವರ್ಷಗಳ ಪ್ರಾಚೀನ ಪರಂಪರೆ ಸಂಸ್ಕೃತಿಯನ್ನು ಮರೆಯಲಾಗುತ್ತಿದೆ. ಪ್ರಾಚೀನ ಪರಂಪರೆ ಸಂಪ್ರದಾಯಗಳನ್ನು ಧಿಕ್ಕರಿಸುವುದೇ ಆಧುನಿಕತೆ ಎಂದು ಸಾಗಿರುವುದು ಮೂಢತನವೇ ಆಗಿದೆ. ಜಾಗತೀಕರಣದ ಸಂದರ್ಭದಲ್ಲೂ ನಮ್ಮ ಸಂಸ್ಕೃತಿ ಹೆಚ್ಚು ಪ್ರಚಾರ ಪಡೆಯುತ್ತಿದೆ. ಆಯುರ್ವೇದ, ಯೋಗ, ಭಾರತೀಯ ಆಹಾರ ಪದ್ದತಿ, ಸಂಗೀತ, ಸಾಹಿತ್ಯ, ಕಲೆಗಳು ಸಾರ್ವಕಾಲಿಕ ಮನ್ನಣೆ ಹೊಂದಿವೆ. ಇಂತಹ ಪರಂಪರೆಯ ಸತ್ವವನ್ನು ಮಕ್ಕಳಿಗೆ ಧಾರೆಯೆರೆಯದೆ ಭೋಗ ಸಂಸ್ಕೃತಿಯ ಕಡೆಗೆ ವಾಲುತ್ತಿದ್ದೇವೆ. ಎಂಬ ವಿಚಾರಧಾರೆಗಳು ನಮ್ಮನ್ನು ಚಿಂತನೆಗೆ ತೊಡಗಿಸುವಂತೆ ಪ್ರೇರೆಪಿಸುತ್ತವೆ. ಮಕ್ಕಳಿಗೆ ಅವರ ವಿಕಾಸಕ್ಕೆ ತಕ್ಕಂತೆ ವಿಶ್ವವಿಶಾಲ ಭಾವನೆಗಳ ತಳಹದಿಯಲ್ಲಿ ಬೆಳೆಸುವಂತಹ ವೈಚಾರಿಕ, ವೈಜ್ಞಾನಿಕ ಬರಹಗಳು ಪ್ರಚಲಿತ ಸಮಾಜಕ್ಕೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸುಳಕೂಡೆಯವರ ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ ಕೃತಿಯು ಮಕ್ಕಳ ಸಾಹಿತಿಗಳಿಗೆ ಮಾರ್ಗದರ್ಶಿ ಮಾತ್ರವಲ್ಲದೆ ಪಾಲಕರು, ಶಿಕ್ಷಕರೆನ್ನದೆ ಎಲ್ಲರಿಗೂ ಸಂಗ್ರಹಯೋಗ್ಯ ಕೈಪಿಡಿಯಾಗಿದೆ. ಎಂಬುದರಲ್ಲಿ ಎರಡು ಮಾತಿಲ್ಲ. ಈ ಕೃತಿಯ ಭಾಷೆ ಮಕ್ಕಳಿಗೂ ಕೂಡ ಸುಲಭವಾಗಿ ಅರ್ಥವಾಗುವಂತಿದ್ದು, ಮಕ್ಕಳು ದಿನನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಬೀರುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ವಿಚಾರವಾದಿಗಳು ಮಕ್ಕಳ ವ್ಯಕ್ತಿತ್ವ ವಿಕಾಸ ಕುರಿತು ಹೊಂದಿರುವ ಆಶಯ ಈ ಕೃತಿಯಲ್ಲಿ ಬಹುಮಟ್ಟಿಗೆ ಪ್ರತಿಫಲಿಸಿದೆ ಎನ್ನಬಹುದು. ಅದು ಎಲ್ಲರ ಹೃದಯಗಳಲ್ಲಿ ಪ್ರತಿ ಫಲಿಸುವಂತಾಗಲಿ ಎಂಬುದು ನಮ್ಮ ಆಶಯವಾಗಿದೆ.

- Advertisement -

ಸಂಜೀವ ಲದ್ದಿಮಠ
ಕನ್ನಡ ಉಪನ್ಯಾಸಕರು
ಸೋಮವಾರ ಪೇಟೆ ಚನ್ನಮ್ಮನ ಕಿತ್ತೂರು – 591115
ಜಿಲ್ಲೆ -ಬೆಳಗಾವಿ
ಮೋ – 9902595867

- Advertisement -
- Advertisement -

Latest News

ವಾಹನ ಸವಾರರಿಗೆ ಬೆಲೆ ಏರಿಕೆ ಬರೆ – ಈರಣ್ಣ ಕಡಾಡಿ

ಮೂಡಲಗಿ:ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಏರಿಸುವ ಮೂಲಕ ಗ್ಯಾರಂಟಿ ಬರೆ ನೀಡಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group