spot_img
spot_img

ವೇಣು ಜಾಲಿಬೆಂಚಿ ಗಜಲ್ ಗಳು

Must Read

- Advertisement -

ಗಜಲ್- ೧

ಹೂವಿನ‌‌ ಮಳೆಗರೆಯೆಂದು ಹೇಗೆ ಗೋಗರೆಯಲಿ ರಕ್ತದ ಹೊಳೆ ಹರಿಯುವಾಗ
ಕಣ್ಣೀರ ಕೋಡಿ ಬೇಡವೆಂದು ಹೇಗೆ ಮೊರೆಯಿಡಲಿ ಅಶ್ರುವಾಯು ಸಿಡಿಸುತಿರುವಾಗ

ಅನ್ನ ಮತ್ತು ಮಣ್ಣು ಎರಡೂ ಬೇರೆ ಬೇರೆಯಲ್ಲ ಅನ್ನ ತಿನ್ನುವವರಿಗೆ ಇದು ಗೊತ್ತು
ಅನ್ನದ ಹೆಸರಲಿ ಅನ್ನದಾತನ ಭಯೋತ್ಪಾದಕನೆಂದು ಹೇಗೆ ಕರೆಯಲಿ ಮಣ್ಣು ಮುಕ್ಕಿಸುತಿರುವಾಗ

ಒಪ್ಪತ್ತು ಗಂಜಿಗೆ ಇನ್ನೂ ತಿಪ್ಪಲು ತಪ್ಪಿಲ್ಲ ದೊರೆ ಕಾಳುಸಂತೆ ಬೀದಿಯ ಪಯಣ ನಕಲಿ
ಗೊಬ್ಬರವ ತಿಂದು ಹೇಗೆ ತೀರಿಸಲಿ‌ ಸಾಲ ಜೀವಾತ್ಮನೇ ಹಿಂಡಿ ಹಿಪ್ಪೆ ಮಾಡುತಿರುವಾಗ

- Advertisement -

ದೇಶಕ್ಕೇ ಅನ್ನ ಕೊಟ್ಟರೂ ಬಡಕಲಾಗಿ ಕುಳಿತವರ ಎಲುವುಗಳಿಗೂ ಚಿತೆ ಹಚ್ಚಿಟ್ಟು
ಚಟ ಚಟ ಸುಟ್ಟರೂ ತಮಾಷೆಯೆಂದು ಹೇಗೆ ತಿಳಿಯಲಿ ಬೆಂಕಿಯ ಧಗೆ ಆರದಿರುವಾಗ

ಎಷ್ಟು ಚರಿತ್ರೆಗಳು ಮರುಕಳಿಸಿದರೂ ಅಮ್ಮನ ಕೈತುತ್ತು ರೈತನ ಒಡಲು ತಂಪಾಗಿಡಬಹುದಾ
ಜಾಲಿ ಬೆನ್ನೆಲುಬು ಮುರಿದ ಮೇಲೂ ನಿಜವೆಂದು ಹೇಗೆ ನಂಬಲಿ ರಕ್ತ ಚರಿತ್ರೆಗೆ ನಾಂದಿ ಹಾಡುತಿರುವಾಗ

ಗಜಲ್-೨

ಎಷ್ಟು ಸಹಜ ಪ್ರಿಯೆ ನೀನು ತೋರುವ ಪ್ರೀತಿ ಮತ್ತು ಬೆಂಕಿ
ನನ್ನ ಗಲ್ಲಕ್ಕೆ ಕೊಟ್ಟ ಮುತ್ತನು ಹೋಲುವ ಪ್ರೀತಿ ಮತ್ತು ಬೆಂಕಿ

- Advertisement -

ಮಾತಿನ ಬೆಸುಗೆ ಹಾಡಾಗದು ಗಡಿಬಿಡಿ ಗೊಂದಲ ನೂರು ತೆವಲು
ನಿನ್ನದು ಅವಸರದ ಕಿಚ್ಚನು ನುಂಗಿಬಿಡುವ ಪ್ರೀತಿ ಮತ್ತು ಬೆಂಕಿ

ಗಂಟಲು ಬಿಗಿದು ಕೂಡಿಸುವ ಆಣೆ ಪ್ರಮಾಣಗಳ
ಎತ್ತೆಸೆಯಬೇಕು
ಬೇಕೆಂದೇ ನೀ ಕಣ್ಣಿಗೆ ಲಗ್ಗೆಯಿಟ್ಟುಬಿಡುವ ಪ್ರೀತಿ ಮತ್ತು ಬೆಂಕಿ

ಸಾರ್ಥಕ ಬಾಳು ಸವೆಸಲು ಬಾಳ ಹಾದಿಗುಂಟ ನಡೆಯಬೇಕು
ಮಮತೆಯ ಹೊದ್ದರು ನೀ ಸುಟ್ಟುಬಿಡುವ ಪ್ರೀತಿ ಮತ್ತು ಬೆಂಕಿ

ಜೋಪಾನ ಮಾಡಿ ಸುಸ್ತಾದ ಮೇಲೂ ಮೈಲುಗಳ ಪಯಣ “ಜಾಲಿ”
ಜಗದ ಮಾಯಾಜೋಕಾಲಿ ಆಡಿಸಿಬಿಡುವ ಪ್ರೀತಿ ಮತ್ತು ಬೆಂಕಿ

ಗಜಲ್-೩

ಪ್ರೇಮಚಕ್ರ ತಿರುಗದೆ ನಿಂತಿತು ಯಾರ ಆಜ್ಞೆಗೋ
ಹೊಸ ಚಿಗುರು ಮುರುಟಿತು ಯಾರ ಆಜ್ಞೆಗೋ

ಕರುಣೆಯೆಂದರೆ ನರಕ ಶಾಲೆಗೆ ಮೊದಲ ಪಾಠ
ಎದೆಯ ಬುಗ್ಗೆಯು ಒಡೆಯಿತು ಯಾರ ಆಜ್ಞೆಗೋ

ದೇಖರೇಖಿ ಇಲ್ಲದ ಮನೆಗೆ ಯಾರು ಬರುವವರು
ಸ್ವಾಗತದ ಕರೆ ಕರ್ಕಷವಾಯಿತು ಯಾರ ಆಜ್ಞೆಗೋ

ಕಷ್ಟವಾದರೂ ಜೀವನಕೆ ಪ್ರೇಮವೇ ಅನುಪಲ್ಲವಿ
ರಿಂಗಣದಾಲಿಂಗನವಗುಲಿತು ಯಾರ ಆಜ್ಞೆಗೋ

ಚಿತ್ತಪರಿಭ್ರಮಣೆಗೂ ಮುನ್ನ ಪ್ರಶಾಂತ ಗಾಳಿಗೆ
ಜಾಲಿ ದರವಾಜು ಮುಚ್ಚಲಾಗಿತ್ತು ಯಾರ ಆಜ್ಞೆಗೋ

ಗಜಲ್ – ೪

ಮಾನವೀಯತೆಯ ಡಿಗ್ರಿ ಪಡೆದವರು ಈ ಜಗದಲದೆಷ್ಟು ಜನ ಕೇಳದಿರು ಗೆಳತಿ
ನನ್ನ ನಿನ್ನ ಸಾವಿಗೆ ಕಂಬನಿಯಾಗುವವರು ಈ ಜಗದಲದೆಷ್ಟು ಜನ ಕೇಳದಿರು ಗೆಳತಿ

ದೈವದ ಹೆಸರಲಿ ದೇಣಿಗೆ ಚಂದಾ ಕೊಡುವವರು ಹುಟ್ಟುತ್ತಲೇ ಇರುವರು ದಣಿವೇ ಇಲ್ಲದೆ
ದುಡಿದು ಮೆತ್ತಗಾದ ಜೀವಕಾಸರೆಯಾಗುವವರು ಈ ಜಗದಲದೆಷ್ಟು ಜನ ಕೇಳದಿರು ಗೆಳತಿ

ಅನ್ನದಲಿ ನಿತ್ಯ ಪರಮಾತ್ಮನ ಕಾಣಬೇಕು ರೈತನೆಂದರೆ ಪರಮಾತ್ಮನ ನಿತ್ಯ ಸೇವಕನೆ
ಪರಮಾತ್ಮನನು ಮನುಷ್ಯನಲಿ ಕಾಣುವವರು ಈ ಜಗದಲದೆಷ್ಟು ಜನ ಕೇಳದಿರು ಗೆಳತಿ

ಕೋಟಿ ವಿದ್ಯೆಗೂ ಮಿಗಿಲು ಎದೆಗಾದ ಗಾಯದ ಭಾಷೆ ಕಲಿಸಿಕೊಡುವ ಪಾಠಗಳು
ಅಂತರಾಳದ ಮೌನದ ಕರತಾಡನ‌ ಕೇಳುವವರು ಈ ಜಗದಲದೆಷ್ಟು ಜನ ಕೇಳದಿರು ಗೆಳತಿ

ಹಗಲಲೇ ಬಿಚ್ಚುಗತ್ತಿ ಹಿಡಿದು ಕೂಡಬೇಡ ಇರುಳೂ ಬಂದು ಕೇಕೆ ಹಾಕೀತು
“ಜಾಲಿ” ನಮ್ಮಿಷ್ಟಕೆ ಒಪ್ಪಿ ನಡೆವ ಮನಸುಳ್ಳವರು ಈ ಜಗದಲದೆಷ್ಟು ಜನ ಕೇಳದಿರು ಗೆಳತಿ


ವೇಣು ಜಾಲಿಬೆಂಚಿ
ರಾಯಚೂರು.

- Advertisement -
- Advertisement -

Latest News

ವಾಹನ ಸವಾರರಿಗೆ ಬೆಲೆ ಏರಿಕೆ ಬರೆ – ಈರಣ್ಣ ಕಡಾಡಿ

ಮೂಡಲಗಿ:ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಏರಿಸುವ ಮೂಲಕ ಗ್ಯಾರಂಟಿ ಬರೆ ನೀಡಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group