ಅಂಚೆ ಅಣ್ಣನಿಗೆ ನಮೋ…
ಶಾಕುಂತಲೆಗೆ ಕಾಳಿದಾಸನ ಸಂದೇಶ
ಅರುಹಿದ ಮೇಘದ ಪ್ರತಿರೂಪ ನೀನು,
ಸಾಮ್ರಾಜ್ಯದಿಂದ ಸಾಮ್ರಾಜ್ಯಕೆ,
ರಾಜಮನೆತನದಿಂದ ರಾಜಮನೆತನಕೆ
ಸಂದೇಶ ಅರುಹಿದ ಶ್ವೇತಪಾರಿವಾಳದ
ಪ್ರತಿರೂಪ ನೀನು..ನಾಡು ನುಡಿಯ
ಹೃದಯದ ಬಡಿತ ನೀನು…..
ಗೆಜ್ಜೆ ಕೋಲು ಹಿಡಿದು..ಅನುದಿನ
ಹಳ್ಳಿಯ ರಸ್ತೆಗಳಲಿ ಓಡುತ್ತಾ
ಪತ್ರಸಂದೇಶವ ತಲುಪಿಸುತ್ತಿದ್ದೆ ನೀ..
ಓದು-ಬರಹ ಬಾರದ ಮುಗ್ಧ ಜನಕೆ,
ಸಂದೇಶ ವಾಚಿಸುವ ಗುರುವಾಗಿದ್ದೆ ನೀ….
ನಾಗರೀಕತೆಯ ಚಕ್ರ ಉರುಳಿದಂತೆ
ಓಟವ ಬಿಟ್ಟು..ಸೈಕಲ್ಲೇರಿದೆ..
ನೂರಾರು..ಸಾವಿರಾರು ಜನರ ಪ್ರೀತಿ ಗಳಿಸಿದೆ..
ಹಳ್ಳಿಹಳ್ಳಿಗಳಲಿ ಅಂಚೆಕಛೇರಿಗಳ ಆರಂಭ,
ಜನರ ಸಂದೇಶ ವಾಹನೆಗೆ ಕಛೇರಿಯ ಮೂರ್ತರೂಪ…
ತಾಂತ್ರಿಕತೆ ಬೆಳೆದಂತೆ ಬೆಳೆಯಿತು
ದೂರವಾಣಿ-ಟೆಲಿಗ್ರಾಂಗಳ ಸಂಪರ್ಕ ಸೇತು,
ಟೆಲಿಗ್ರಾಂ ಬಂತೆಂದರೆ ಎನೋ ಆತಂಕದ ಆ ದಿನಗಳು,
ಅಂಚೆಕಛೇರಿಯಾಯ್ತು ಉಳಿತಾಯ ಬ್ಯಾಂಕ್,
ಮಾನವನ ಜೀವನಾಡಿಯಾಯ್ತು ಅಂಚೆಕಛೇರಿ….
ಅಗ್ಗದ ಮೊಬೈಲ್ ತಂತ್ರಜ್ಞಾನ
ನೀಡಿತು ಅಂಚೆ ವ್ಯವಸ್ಥೆಗೆ ಕೊಡಲಿಪೆಟ್ಟು,
ಸೆಕೆಂಡಿನೊಳಗೆ ಸಿಗುವ ಸಂದೇಶಕಾಗಿ,
ಒದಗಿತು ಸಾವಿರಾರು ವರ್ಷಗಳ ಇತಿಹಾಸದ ಅಂಚೆ ವ್ಯವಸ್ಥೆಗೆ ಧಕ್ಕೆ..
ಜಗತ್ತೆಲ್ಲಾ ನವನವೀನ ತಾಂತ್ರಿಕ ತೆಯತ್ತ ಸಾಗಿದರೂ,
ಅಂದಿನ ಅಂಚೆಯಣ್ಣ ಪ್ರೀತಿಯಿಂದ,ಮಮತೆಯಿಂದ
ತಾಯಿಗೆ ನೀಡುತ್ತಿದ್ದ ಮಗನ ಒಲವಿನ ಪತ್ರ,
ಪ್ರಿಯತಮೆಗೆ ನೀಡುತ್ತಿದ್ದ ಪ್ರಿಯತಮನ ಪ್ರೀತಿಯ ಸಂದೇಶ ಪತ್ರ,
ವಿದ್ಯಾವಂತನಿಗೆ ಬರುತ್ತಿದ್ದ ಉದ್ಯೋಗಪತ್ರ …
ನೀಡುತ್ತಿದ್ದ ಸಂತಸ,ಸಂಭ್ರಮ,ಉತ್ಸಾಹ,
ನೆಮ್ಮದಿ ಮೊಬೈಲ್, ವಾಟ್ಸಾಪ್,ಫೇಸ್ಬುಕ್,ಇನ್ಸ್ಟಾಗ್ರಾಂಗಳಲಿ ಎಲ್ಲಿ ದೊರೆತೀತು….???
(ಅಂಚೆ ಸಪ್ತಾಹದ ಅಂಗವಾಗಿ ಅಂಚೆ ಅಣ್ಣನನ್ನು ಕುರಿತ ಕವನ)
ಡಾ.ಭೇರ್ಯ ರಾಮಕುಮಾರ್, ಸಾಹಿತಿಗಳು, ಪತ್ರಕರ್ತರು,
ಮೊ:94496 80583,
63631 72368