ಆ ಮಹಡಿ,ಮೆಟ್ಟಿಲು,ಎತ್ತರದ ಸೂರು,
ಹೊಳೆವ ಗಾಜು ಒರೆಸಿ ಬಣ್ಣ ಮೆತ್ತಿದ ಕೈ…
ನಲ್ಲಿಗೆ ನೆಲ ಅಗೆದು ಕಟ್ಟಿದ ಮೋರಿಯ ಕೆಸರು ಎತ್ತಿ ಪಾಯ್ ಖಾನೆಯನ್ನೂ ಸ್ವಚ್ಚಗೊಳಿಸಿದರು
ಮತ್ತದೇ ಹಸನಾಗದ ಬದುಕು
ಇಟ್ಟಿಗೆ,ಜಲ್ಲಿ,ಕಬ್ಬಿಣ,ಕಲ್ಲು ಹೊತ್ತ ತಲೆ
ಅದೇ ಮಾಸಿದ ಬಟ್ಟೆ,
ಉಳ್ಳವರಿಗೆ ರೇಜಿಗೆ ಹುಟ್ಟಿಸಿದ ಬೆವರ ಘಮ.
ಛೇ ಕಂದೀಲು,ಕ್ಯಾಂಡಲ್ಲು,ದೀಪ ಹಚ್ಚಿದರೂ ಬದಲಾಗದ ಬದುಕು.
ಗಂಟೆ,ಜಾಗಟೆ,ಹೋಮ ಹವನ
ಯಾವುದೂ ಇಲ್ಲದಿದ್ದರೂ
ಸೈರನ್ನಿನ ಕೂಗಿಗೆ ಮೈ ಬಗ್ಗಿಸಿ ದುಡಿವ ದೇಹ.
ಬೇಲ್ ಪೂರಿ,ಪಾನಿಪೂರಿ,ಹಣ್ಣು-ತರಕಾರಿ ಮಾರಿ
ಕಟ್ಟ ಹೊರಟರೂ ಕಟ್ಟಲಾಗದ ಬದುಕು
ಯಾರೋ ಜಾಡ್ ಮಾಲಿ
ಗಾರ್ಡನ್ನಿನ ಗಿಡ ಕತ್ತರಿಸುವವ
ಬೂಟು ಪಾಲೀಸು,ಚಪ್ಪಲಿ ರಿಪೇರಿ,
ಹೀಗೆ ಯಾವನೋ ಒಬ್ಬ ಸಣ್ಣಪುಟ್ಟ ಕೆಲಸದವ!!
ದೊಡ್ಡ ಮನೆಗಳ ಗೇಟು ಕಾಯುವ ನೇಪಾಳಿ,
ಬೂಟಿನ ಮಾಲೀಕರಿಗೆ ವಿನಯದಲ್ಲಿ ಕೈ ಮುಗಿವ ಜೀವ
ಮನೆ ಮನೆಗೆ ತಿರುಗಿ,ಬಟ್ಟೆಗಳ ತೊಳೆದು
ಐರನ್ನು ಹಾಕಿ ಹೆಸರು ಹೇಳದ ಹುಡುಗ..
ಟೀ,ಬಿಸ್ಕತ್ತು, ಬನ್ ಮಾರುತ್ತ
ಹುಟ್ಟಿದ ಊರು ಬಿಟ್ಟು
ವಿಧಿಯನ್ನೇ ತಿದ್ದ ಹೊರಟ ವಿಳಾಸವಿಲ್ಲದ ದೇಹ.
ಮತ್ತದೇ ಕಣ್ಣ ತುಂಬ ಬಣ್ಣ ಬಣ್ಣದ ಕನಸು..
ಇನ್ಯಾರೋ ಸ್ಟೇಷನರಿ ತರಿಸುವ
ಮಾರ್ವಾಡಿಯವ,
ಐಸ್ಕ್ರೀಮು ಮಾರುವ ಬಿಹಾರಿ ಬಾಬು,
ರಾಜಸ್ಥಾನ, ಗುಜರಾತ,ಮಹಾರಾಷ್ಟ್ರ
ಹೀಗೆ ದೇಶದ ಮೂಲೆ ಮೂಲೆಯಿಂದ
ದುಡಿಯಲು ಬಂದ ಗಂಡು ಹೆಣ್ಣು ಮತ್ತು ಕರುಳ ಬಳ್ಳಿಗಳ ಹೊತ್ತ ಅನಾಮಧೇಯ ಜೀವ.
ಬದುಕು ಕಟ್ಟುವ ಭರವಸೆಯ ಹೊತ್ತು
ಕ್ರಮಿಸಿದ ದೂರದ ಹಾದಿ.
ರೈಲು,ಬಸ್ಸುಗಳಲ್ಲಿ ಬದುಕು ಅರಸಿ ಬಂದು
ಕಳೆಗಟ್ಟಿ ಬಾಡಿದ ಅದೇ ಹಳೆಯ ಮುಖ
ಬೆಂಗಳೂರು, ಮುಂಬೈ, ಚೆನ್ನೈ,ದಿಲ್ಲಿ,
ಅಷ್ಟೇ ಅಲ್ಲಬಿಡಿ
ದೊಡ್ಡ ಊರುಗಳ ಪ್ರತಿ ಗಲ್ಲಿ ಗಲ್ಲಿ.
ಎಲ್ಲಿಂದ ವಕ್ಕರಿಸಿತೋ
ಈ ಕೊರೊನಾ ಎಂಬ ಮಹಾಮಾರಿ??
ಸಾವ ಭಯ ಹುಟ್ಟಿಸಿ ಜೀವಗಳ ಜೊತೆ ಚೆಲ್ಲಾಟ ಮಾಡಿದ್ದಕ್ಕೆ ದುಡಿವ ಜೀವಗಳ ಬದುಕು ಚೆಲ್ಲಾಪಿಲ್ಲಿ.
ಸ್ಥಬ್ದಗೊಂಡ ಊರುಗಳು,ನಿಶ್ಯಬ್ದ ರಸ್ತೆಗಳು
ಮತ್ತದೆ ಬೆಂಕಿಯಿಂದ ಬಾಣಲೆಗೆ ಬಿದ್ದ
ಬಡವರ ಬದುಕು.
ಹಸಿದ ಹೊಟ್ಟೆ,ಕುಸಿದ ದೇಹ
ದೂರವಾಗುತ್ತಲೆ ಸಾಗಿದ ಊರಹಾದಿ.
ಮನೆ ಮಾರುದ್ದ ದೂರ ಇರುವಾಗಲೇ
ಕುಸಿದು ಬಿದ್ದು ಜೀವ ಬಿಟ್ಟವರು
ಪುಟ್ಟ ಕಂದ,ನಂಬಿ ಬಂದ ಮಡದಿ
ಜೊತೆಯಾದ ಗೆಳೆಯರು!
ರಸ್ತೆಯುದ್ದಕ್ಕೂ ಮತ್ತದೇ ಸಾಲು ಸಾಲು.
ಬಿರಿದ ಪಾದ,ಸುರಿದ ರಕ್ತ,ತುತ್ತು ತುತ್ತಿಗೂ ತತ್ವಾರ
ನಿಲ್ಲದ ಹಾಹಾಕಾರ,
ಕುರ್ಚಿಯಲ್ಲಿ ಕುಳಿತವರಿಗೆ ಹುಟ್ಟದ ಮಮಕಾರ.
ಮತ್ತದೇ ಕೊಡು ಕೊಳ್ಳುವ ನಾಟಕ,
ಬಡವರ ಮನೆಯಿಂದ ಸುದ್ದಿಯಾಗದ ಸೂತಕ
ಕರುಣೆ ಇಲ್ಲದ ಕೊರೊನಾ
ಸುದ್ದಿಮನೆಗಳಿಗೆ ಮಾತ್ರ ರಸದೌತಣ.
ನಿಜಾಮುದ್ದಿನ್ ನಂಜು,ಅಜ್ಮೇರದ ವಿಷ
ಎಲ್ಲದಕ್ಕೂ ಹುಟ್ಟಿದ ಜಾತಿ ಲೆಕ್ಕಾಚಾರ!!
ವೈದ್ಯರು, ಪೋಲಿಸರು, ಪೌರ ಕಾರ್ಮಿಕರು,ಆಶಾ ಕಾರ್ಯಕರ್ತರು ಎಲ್ಲರೂ ಸನ್ನದ್ಧ..ಕರ್ತವ್ಯ ನಿರತ.
ಕೊರೊನಾ ತಡೆಯಲು ಕೈ ಜೋಡಿಸಿದವರು
ಮನೆಯಲ್ಲೇ ಇದ್ದು ಸಹಕರಿಸಿದವರು,
ಹಸಿದ ಹೊಟ್ಟೆಗೆ ಊಟ,ಬಾಯಾರಿದವರಿಗೆ ನೀರು ಕೊಟ್ಟವರು,ಎಲ್ಲರಿಗೂ ಎಂದಿಗೂ ಋಣಿಯು ನಾನು.
ಸತ್ಯವಿಷ್ಟೇ ಲಾಕ್ ಡೌನಿಗೆ ಬಲಿಯಾದವರು,
ದಿನಗಳು ಕಳೆದಂತೆಲ್ಲ ನರಳಿ ನಡೆದವರು
ಇಷ್ಟು ದಿನಗಳ ಕಾಲ ಸತ್ತು ಸತ್ತೇ ಬದುಕಿದವರು
ಈ ಹಾಳಾದ ಕೊರೊನಾ ಶಪಿಸುವವರು
ಬರೀ ಬಡವರಷ್ಟೇ..ಬರೀ ಬಡವರಷ್ಟೇ..
–ದೀಪಕ ಶಿಂಧೇ