ರೈತ
ಮಳೆ ಗಾಳಿ ಬಿಸಿಲನು ನೋಡದ
ಬಂಡೆಗಲ್ಲು ನನ್ನ ರೈತ
ಅವನೇ ನಮಗೆ ಅನ್ನದಾತ.
ಬೆವರು ಸುರಿಸಿ ದುಡಿದು ತಾನು
ಜಗಕೆ ಅನ್ನ ನೀಡುತಿರುವ ಅನ್ನದಾತನು
ಕೋಟಿ ವಿದ್ಯೆಯಲ್ಲಿ ಮೇಟಿವಿದ್ಯೆ ಮೇಲು ಎಂದು
ತೋರಿಸಿದಾತನು.
ಭೂಮಿತಾಯಿ ಒಡಲು ತುಂಬಿ
ಭೂಮಿತಾಯಿ ಮಗನು ಆಗಿ
ಮಣ್ಣಿನಲ್ಲಿ ಮಾಣಿಕ್ಯ ತೆಗೆದು
ರತ್ನಕಂಬಳಿಯಲ್ಲಿ ಮೆರೆಯುತಿರುವನು.
ಬಸವ ಸೇವೆ ಮಾಡುತ ನೀನು
ಜಗಮೆಚ್ಚಿದ ಮಗನು ನೀನು
ನಿನ್ನ ಋಣವ ತೀರಿಸಲು ನಾವು
ಏಳು ಜನ್ಮ ಬೇಕು ನಮಗೆ.
ರೈತ ನಿನ್ನ ದುಡಿಮೆಗೆ
ಭೂಮಿತಾಯಿ ಒಲಿದು ಬಂದು
ಫಸಲು ನಿನಗೆ ನೀಡುವಳು
ಹಸನು ನಿನ್ನ ಬಾಳು ಆಗಲೆಂದು.
ಡಾ.ಎಚ್ ಆರ್ ಜಗದಾರ
ಬೆಂಕಿಯಿಂದ ಬಾಣಲೆಗೆ
ನಿಸರ್ಗ ಎಂದರೆ ಸ್ವರ್ಗದ ಕಲ್ಪನೆ
ಆಗುತಿತ್ತು ಆಗ….
ನಿಸರ್ಗ ಎಂದರೆ ನರಕದ ನರ್ತನ
ಕಣ್ಮುಂದೆ ಬರುವುದೀಗ…!!
ಚಂಡಮಾರುತಕ್ಕೆ ನಿಸರ್ಗ ಅನ್ನುವ
ಸುಂದರ ನಾಮಕರಣ…!
ಕರಾವಳಿ ತೀರದ ಊರನು ತೆರವಿಸಿ
ಮಾಡ್ಯಾರ ಭಣ ಭಣ…!!
ಇಂಫಾನ್ ಪ್ರಭಾವವಂತೂ
ತುಂಬಾ ಭೀಕರ…!!
ಆಗಬಹುದೇ ಇದು ಇಂಫಾನ್ ನ
ಸಹೋದರ…?!!
ಕೊರೋನಾ ಎಂಬ ಬೆಂಕಿಯಿಂದ
ತಪ್ಪಿಸಿಕೊಂಡಿಲ್ಲ ಇನ್ನೂ…
ಅಷ್ಟರೊಳಗೆ ರೆಡಿಯಾಗಿ ಬಿಟ್ಟಿತು
ಬಾಣಲೆ ಮತ್ತೊಂದು…!!
ಹೋಗುವುದು ಎಲ್ಲಿಗೆ..?
ಬದುಕುವುದು ಹೇಗೆ…?
ಕಮಲಾಕ್ಷಿ ಕೌಜಲಗಿ
(ಸೂರ್ಯ ಕಮಲ)
ನಾನು ಎಂದರೆ ನಾಶ…
ನಾನು ..ನಾನೆಂದೇಕೆ ಅಹಂಪಡುವೆ,
ಬೀಸುವ ಗಾಳಿ,ಕುಡಿವ ನೀರು,
ಚೆಂದದ ಚಿಟ್ಟೆ, ಕುಣಿವ ನವಿಲೆ,
ಹಾಡುವ ಕೋಗಿಲೆ,ಸುಂದರ ಆಕಾಶ,
ಪಳ್ ಎಂದು ಹೊಳೆಯುವಾ ಮಿಂಚು,
ಸುಂದರ ಕಾಮನಬಿಲ್ಲು ನೀನು ಸೃಷ್ಟಿಸಿದ್ದೇ?
ಹಗಲು -ರಾತ್ರಿಗಳು,ಸೂರ್ಯ-,ಚಂದ್ರರು,
ಹೊಳೆವ ನಕ್ಷತ್ರ ಗಳು,ಹಾರುವ ಹಕ್ಕಿಗಳು,
ಝುಳು-ಝುಳು ಹರಿವ ನದಿ,
ಕಾನನದಿ ಭೋರ್ಗರೆವ ಜಲಪಾತ ನೀನು ರೂಪಿಸಿದ್ದೇ?
ನಾನು-ನಾನೆಂದವರು ಇತಿಹಾಸದ
ಪುಟಗಳಲಿ ಮೂಲೆಗುಂಪಾಗಿದ್ದಾರೆ,
ನಾನು..ನಾನೆಂದು ತಲೆಗಳ ಕೆಡಗಿದ್ದಾರೆ,
ರಕ್ತದ ಹೊಳೆ ಹರಿಸಿದ್ದಾರೆ,
ಕಣ್ಣೀರ ಕೋಡಿ ಬೀಳಿಸಿದ್ದಾರೆ,
ಜನಮಾನಸದಲಿ ಅಪಕೀರ್ತಿ ಗೆ ಒಳಗಾಗಿದ್ದಾರೆ…
ಲಕ್ಷಾಂತರ ಸೈನಿಕ ರೊಡನೆ ನುಗ್ಗಿ,
ಕಳಿಂಗ ಯುದ್ಧ ಜಯಿಸಿದ ಅಶೋಕ
ಸಾವುನೋವು-ರಕ್ತಪಾತ ನೋಡಿ,
ಕಣ್ಣೀರ ಕೋಡಿಯಾದ,ಯುದ್ದವನ್ನೇ ತ್ಯಜಿಸಿದ…
ಅರಮನೆಯಲಿ ಜನಿಸಿ,ಸುಖದ ಸ್ವರ್ಗದಲ್ಲೇ ತೇಲಿದ,
ರಾಜಕುಮಾರ ಸಿದ್ದಾರ್ಥ ವೃದ್ದೆ,
ರೋಗಿ,ಮೃತದೇಹಗಳ ನೋಡಿ
ಜರ್ಝರಿತನಾದ..
ದುಃಖಕೆ ಮೂಲಕಾರಣ ಹುಡುಕಲು,
ರಾಜ್ಯ,ಕೋಶ,ಕುಟುಂಬ ತ್ಯಜಿಸಿ ವಿರಾಗಿಯಾದ,
ಬೋಧಿವೃಕ್ಷ ದ ಕೆಳಗೆ ಗೌತಮಬುದ್ಧ ನಾದ…
ರಾಜ್ಯ ಗೆಲ್ಲಲು ಸಹೋದರನ ಕೆಣಕಿ,
ದೃಷ್ಟಿ ಯುದ್ಧ, ಜಲಯುದ್ಧ,ಮಲ್ಲಯುದ್ದಗಳಲಿ
ಭರತನನು ಜಯಿಸಿದ ಬಾಹುಬಲಿ;
ಕೊನೆಗೆ ವೈರಾಗ್ಯ ಹೊಂದಿ ಭರತನಿಗೇ
ರಾಜ್ಯ ಕೊಟ್ಟು ವೈರಾಗ್ಯಮೂರ್ತಿಯಾದ…
ಇತಿಹಾಸವೇ ತಿಳಿಸಿದೆ
ನಾನು ಎಂದರೆ ನಾಶ..
ನಾವು ಎಂದರೆ ಸ್ವರ್ಗ..
ನಾನು ಎಂಬ ಅಹಂ ತ್ಯಜಿಸಿ
ಸಮಾಜದ ಅಭ್ಯುದಯಕೆ ಶ್ರಮಿಸೋಣ….
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368
ತುಂಬಾ ಚೆನ್ನಾಗಿದೆ sir 🙏💐🙏