Homeಕವನಕವನಗಳು

ಕವನಗಳು


ಕನ್ನಡಕಾಗಿ ಹೋರಾಡು

ಕನ್ನಡಕಾಗಿ ಹೋರಾಡು
ಕನ್ನಡ ಭಾಷೆಯ ಮಾತಾಡು,
ಕನ್ನಡದಲೇ ಉಸಿರಾಡು,
ಕನ್ನಡ ತಾಯಿಗೆ ಪ್ರಾಣ ನೀಡು..

ಪಂಪ,ರನ್ನ,ರಾಘವಾಂಕ,ಹರಿಹರ,
ಕುಮಾರವ್ಯಾಸರು ಕನ್ನಡದ ಪಂಚಕಿರೀಟಗಳು,
ಬೇಂದ್ರೆ,ಕುವೆಂಪು, ಮಾಸ್ತಿ,ಕಾರಂತ,
ವಿ.ಕೃ.ಗೋಕಾಕರು ಕನ್ನಡದ ಪಂಚ ಕಳಸಗಳು……

ಕಾವೇರಿ,ಕೃಷ್ಣೆ,ತುಂಗೆ,ಹೇಮಾವತಿ,
ಶರಾವತಿ ನಾಡ ಕಾಮಧೇನುಗಳು,
ಮೈಸೂರು, ಬೆಂಗಳೂರು,ಬೆಳಗಾವಿ,ಕಲ್ಬುರ್ಗಿ,
ಹುಬ್ಬಳ್ಳಿ-ಧಾರವಾಡಗಳು ಕನ್ನಡದ ಕೆಚ್ಚೆದೆಯ ಕೇಂದ್ರಗಳು…..

ಹಂಪೆ,ಬಾದಾಮಿ-ಐಹೊಳೆ,ಮೇಲುಕೋಟೆ,
ಬೇಲೂರು-ಹಳೇಬೀಡು,ಶ್ರವಣಬೆಳಗೊಳಗಳು ಕನ್ನಡದ ಶಿಲ್ಪಕೇಂದ್ರಗಳು,
ರಾಜ್,ವಿಷ್ಣು,ಅಂಬಿ,ಅನಂತ್ನಾಗ್,ಅಶ್ವತ್ಥ್
ಕನ್ನಡನಾಡಿನ ನಟನಾ ರತ್ನಗಳು….

ಕಿತ್ತೂರು ಚೆನ್ನಮ್ಮ,ಕೆಳದಿ ಚೆನ್ನಮ್ಮ,ಒನಕೆ ಓಬವ್ವ,ಬೆಳವಡಿ ಮಲ್ಲಮ್ಮ,,ರಾಣಿ ಅಬ್ಬಕ್ಕ ಕನ್ನಡನಾಡಿನ ಪಂಚ ಹೋರಾಟಗಾರ್ತಿಯರು,
ಚಾಮುಂಡಿಬೆಟ್ಟ,ಮಹದೇಶ್ವರ ಬೆಟ್ಟ,ಅಂಜನಾದ್ರಿ ಬೆಟ್ಟ,ಬಾಬಾ ಬುಡನ್ ಗಿರಿ, ಮಧುಗಿರಿ ಬೆಟ್ಟ ನಾಡಿನ ಪಂಚ ಶಿಖರಗಳು,
ಕೊಡಗು,ಹಾಸನ,ಶಿವಮೊಗ್ಗ,ಚಿಕ್ಕಮಗಳೂರು, ದ.ಕನ್ನಡ-ಉಕನ್ನಡ ಕನ್ನಡ ತಾಯ ಮಲೆನಾಡ ಶಿಖರಗಳು…

ಕನ್ನಡನಾಡಲಿ ಎಲ್ಲವೂ ತುಂಬಿವೆ,
ಚಿಂತೆಯೇತಕೆ ಓ ಕನ್ನಡಿಗ,
ಕನ್ನಡಕಾಗಿ ಹೋರಾಡು,ಕನ್ನಡತನವ ಕಾಪಾಡು…

ಕನ್ನಡವೇ ನಿನ್ನಮ್ಮ,ನಿನ್ನ ಪೊರೆವ ದೇವರು,
ಕನ್ನಡಕಾಗಿ ಕೈಎತ್ತು,ಕನ್ನಡ ಬಾವುಟ ಮೇಲೆತ್ತು,
ಕನ್ನಡ ..ಕನ್ನಡ..ಸವಿಗನ್ನಡ ,ಸಿಹಿಕನ್ನಡ ನಿನ್ನ ಉಸಿರಾಗಲಿ,
ಕರುನಾಡಲಿ ನಿನ್ನ ಜನ್ಮ ಸಾರ್ಥಕವಾಗಲಿ…

(ಕನ್ನಡ ರಾಜ್ಯೋತ್ಸವದ ಅಂಗವಾಗಿ ಬರೆದಿರುವ ವಿಶೇಷ ಕವನ)

ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368


ಕನ್ನಡ ರಾಜ್ಯೋತ್ಸವ

ಬರುತಿದೆ ಕನ್ನಡ ರಾಜ್ಯೋತ್ಸವ
ಮೊಳಗಲಿ ಮೇಳೋತ್ಸವ
ಭಾಷೆಯ ಹರಸುವ ಮೇಳೋತ್ಸವ
ಒಂದುಗೂಡುವ ಕನ್ನಡದ ಅಭಿಮಾನೋತ್ಸವ

ತಂತ್ರಜ್ಞಾನದಿ ವಿಶ್ವಕೆ ಕನ್ನಡಿ
ಇನ್ಫೋಸಿಸ್ ಬರೆದ ಮುನ್ನುಡಿ
ಛಲದಂಕ ಮಲ್ಲರು ನಿನ್ನಯ ದಂಡು
ತೋರುವ ಸಹನಾಶೀಲರ ಹಿಂಡು

ಭಾರತಾಂಬೆಯ ಕೀರುತಿಯ ಕುವರಿ
ತಂದೆ ನೀ ಜ್ಞಾನಪೀಠದ ಹೆಚ್ಚಿನ ಗರಿ
ನಿನ್ನ ನೆನವದು ಸಂತಸದೀ ಮನ
ಭಯವಿಲ್ಲದೇ ಇರುವೆವು ಜೋಪಾನ

ಕೋಗಿಲೆಯ ಇಂಪಿನ ಧ್ವನಿಯು
ಶಿಲ್ಪಕಲೆಗಳ ಆಗರವು
ಜ್ಞಾನವಂತರ ನೆಲೆಗಳ ಬೀಡು
ಶಾರದಾಂಬರ ನಲಿಯುವ ನಾಡು

ರೇಷ್ಮಾ ಕಂದಕೂರ.


ಕನ್ನಡಿಗರ ಮಹಿಮೆ

ಓ ಕನ್ನಡದ ಕಂದ
ಎದೆ ತಟ್ಟಿ ಹೇಳು ನೀ
ಕನ್ನಡದ ಮಹಿಮೆಯ ಗಂಧ
ಬೇಡ ನಿನಗೆ ಕೀಳರಿಮೆಯ ಬಂಧ

ಕುಶಾಗ್ರಮತಿಯ ಬುದ್ದಿ
ಶೌರ್ಯಕ್ಕೆ ಹೆಸರುವಾಸಿ
ದಾನದಲಿ ಎತ್ತಿದ ಕೈಯಂತೆ
ತಾಳ್ಮೆಯಲಿ ಮೇರು ಶಿಖರ

ನೆಲ ಜಲದ ಸಂಪತ್ತು ಅಪಾರ
ಫಲವತ್ತತೆಯ ಪ್ರಸರಣ
ಬಗೆಬಗೆಯ ಫಲ ಪುಷ್ಪಗಳ ತೋರಣ
ಶಿಲ್ಪ ಕಲೆಗಳ ಕಣ್ಮನ ಸೆಳೆತ

ಪರೋಪಕಾರದಲಿ ಮುಂದಾಳು
ಸತ್ಯಕೆ ಪ್ರಾಣ ನೀಡುಲು ಸಿದ್ಧರು
ಮೋಸಕೆ ಸಹಿಸದ ಸರದಾರರು
ಶ್ರಮಿಕರೆಮ್ಮ ಕನ್ನಡಿಗರು

ಸಾಹಿತ್ಯದ ರಸದೌತಣ ನೀಡುತ
ಸ್ನೇಹತ್ವಕೆ ಬಂಧುರದಿ
ನಾಡ ಹಿತವ ಕಾಯ್ವರು
ನೋವಿಗೆ ಸ್ಪಂದನೆಯ ಅನಾವರಣ

ಧೈರ್ಯದಿ ಮೆರೆವ ಕುವರರು
ಹೋರಾಟಕೆ ಹಿಂದೆ ಸರಿಯದೆ
ಎಲ್ಲರೊಳಗೊಂದಾಗುವ ಜಲಧಾರೆ
ಬಲ್ಲವರೆಂಬ ಗರ್ವವಿಲ್ಲದ ಬೆಲ್ಲ.

ರೇಷ್ಮಾ ಕಂದಕೂರ.

RELATED ARTICLES

Most Popular

error: Content is protected !!
Join WhatsApp Group