ಓ ರೈತಾ…ಕುಣಿಯ ತೋಡುವ ಆಸೆ ಬಿಡು…
ನಿನ್ನ ಶೋಷಣೆಯ ಪ್ರತಿಭಟಿಸಿ
ಸಿಡಿದೇಳು,ಪುಟಿದೇಳು,
ಜಗದ ಜನಕೆಲ್ಲಾ ಅನ್ನದಾತ,
ನಿನ್ನ ಕುಣಿಯ ನೀನೇ ತೋಡುವ
ಕ್ರೂರ ದುರ್ಗತಿ ನಿನಗೇಕೆ ಬಂತು ?
ಜನಿಸಿದಂದಿನಿಂದ ಕೊನೆಯುಸಿರುವವರೆಗೂ
ಕಾಡುತಿಹ ಕಷ್ಟಗಳ ಸರಮಾಲೆಯ ಸಹಿಸದಾದೆಯಾ ???
ಜಗವೆಲ್ಲಾ ಹಣ,ಆಸ್ತಿ, ಅಂತಸ್ತುಗಳ ಹಿಂದೆ
ಗಿರಕಿ ಹೊಡೆಯುತ್ತ ಕುಣಿಯುತ್ತಿರುವಾಗ,
ಜಮೀನಿನ ಬಳಿ ಏಕಾಂಗಿ ವೀರನಾದ ನಿನಗೆ,
ಉಳುಮೆ ಮಾಡಿ,ಬೆಳೆ ಬೆಳೆವುದೇ ನಿನ್ನ ಕಾಯಕ,
ಬಸವನ ಕಾಯಕ ತತ್ವ ನಿನ್ನ ಉಸಿರು ,
ನಿನಗೇಕೆ ಸ್ವ ಸಮಾಧಿಯಾಗುವ ದುರ್ಗತಿ ???
ನೀ ಬೆಳೆದ ಬೆಳೆಯ ಮಾರಲ್ಹೊರಟರೆ,
ನಿನಗೆ ಸಿಗದು ಬೆಳೆಗೆ ತಕ್ಕ ಬೆಲೆ,
ರಾಗಿ,ಭತ್ತ ಬಿಟ್ಟೆ ಕಬ್ಬು ನೆಟ್ಟೆ,
ತರಕಾರಿ,ಹೂ-ಹಣ್ಣು ಬೆಳೆಗೆ ಜೀವ ಕೊಟ್ಟೆ,
ಏನೇ ಬೆಳೆದರೂ ನಿನಗೆ ಖಾಲಿ ಹೊಟ್ಟೆ,
ದಲ್ಲಾಳಿಗೆ,ವರ್ತಕರಿಗೆ ಯಗಾದಿ ಹಬ್ಬದೂಟ..
ಬಡತನದ ಬಾಳ ಸಹಿಸಿ ಕುಣಿಯ ತೋಡಹೊರಟೆಯಾ ಓ ರೈತ ಬಾಂಧವ….
ಒಮ್ಮೆ ಅತಿವೃಷ್ಟಿ,ಆಗಾಗ ಅನಾವೃಷ್ಟಿ
ಚೆಲ್ಲದ ಕಾಳು ಫಸಲಾದರೆ ನಿನ್ನ ಪುಣ್ಯ,
ಬೆಳೆದ ಬೆಳೆಯೇ ಜೀವದುಸಿರಾಗಬೇಕು,
ಹಬ್ಬ-ಹರಿದಿನ,ತಿಥಿ-ಮತಿಗಳಿಗೆ ಬಂಡವಾಳವಾಗಬೇಕು,
ಮದುವೆ-ಮುಂಜಿಗಳಿಗೆ ದಾರಿ ತೋರಿಸಬೇಕು…..
ಬೈಗಿನಿಂದ ಗೋಧೂಳಿಯವರೆಗೂ
ನಿನ್ನ ಮೈ-ಕೈ-ದಿರಿಸು ಕೆಸರಾದರೂ
ನಿನ್ನ ಬಾಯಿ ಮೊಸರಾಗಲಿಲ್ಲ;ಬಾಳು ಹೊನ್ನಾಗಲಿಲ್ಲ
ಸಾಲವೆಂಬ ಶೂಲಕೆ ನೀ ಸಿಲುಕುವುದು ತಪ್ಪಲಿಲ್ಲ…
ನಿನ್ನ ಹೆಸರೇಳಿ ಆಸ್ತಿ ಮಾಡಿದರು,
ನಿನ್ನ ಹೆಸರಲೇ ಗದ್ದುಗೆಯೇರಿ,
ನಿನ್ನ ಕಷ್ಟವ ಮರೆತೇ ಬಿಟ್ಟರು,
ನಿನ್ನ ಬಾಳು ನರಕವಾದರೂ
ನಿನ್ನ ಹೆಸರಲಿ ಅಸ್ತಿತ್ವ ಪಡೆದವರು
ಅಧಿಕಾರದ ಮದದಲಿ ಮೊರೆಯುತಿದ್ದಾರೆ,
ನೀನು ನೊಂದು-ಬೆಂದು ಸ್ವಸಮಾಧಿಯ ದಾರಿ ಹಿಡಿದುಬಿಟ್ಟಿದ್ದೀಯಾ ???
ಓ ರೈತ ಸಹೋದರ ,ಬೇಡ ಆತಂಕ
ಸ್ವಸಮಾಧಿಯ ಆಸೆ ಕೈಬಿಟ್ಟು,
ಮೇಲೇಳು,ಸಿಡಿದೇಳು,ಪುಟಿದೇಳು
ನಿನ್ನ ಧ್ವನಿಗೆ ನೂರಾನೆಯ ಬಲವಿದೆ,
ನಿನ್ನ ಹೋರಾಟಕೆ ಜಗತ್ತನ್ನೇ ಬದಲಿಸುವ ಶಕ್ತಿಯಿದೆ….
(ಬೆಳಗಾವಿ ಜಿಲ್ಲೆಯ ಎಂ.ಕೆ ಹುಬ್ಬಳ್ಳಿಯಲ್ಲಿ ಸಕ್ಕರೆ ಕಾರ್ಖಾನೆಯ ಬಾಕಿಯಿಂದ ನೊಂದು ರೈತನೊಬ್ಬ ತನ್ನ ಸ್ವಸಮಾಧಿ ನಿರ್ಮಿಸಿಕೊಂಡ ವರದಿ ನೋಡಿ ನೊಂದು ಬರೆದ ಕವನ)
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು,
ಮೊ:94496 80583,
63631 72368