ಹಸಿರು (ಉಸಿರು ) ರಕ್ಷಕರು.
ನಮ್ಮ ಜೀವ ಪಣಕ್ಕಿಟ್ಟು ,
ನಿಮಗೆ ಹಸಿರು-ಉಸಿರು
ನೀಡುವವರು ನಾವು..
ವಿಶ್ವ ಹಸಿರಾಗಲು ,ಜೀವನ ಬೆಳಕಾಗಲು
ಭೂಮಿ ತಂಪಾಗಲು, ಬಾಳು ಇಂಪಾಗಲು
ದಿನ-ರಾತ್ರಿ ಎಲ್ಲವ ತ್ಯಜಿಸಿ ಶ್ರಮಿಸುವವರು ನಾವು,
ನಾವು ಅರಣ್ಯ ರಕ್ಷಕರು….
ಮರ-ಗಿಡಗಳೇ ನಮಗೆ ಕುಟುಂಬ ,
ವನ್ಯಪ್ರಾಣಿಗಳೆ ನಮಗೆ ಬಂಧುಗಳು ,
ಕೋಗಿಲೆಗಳ ಕುಹೂ-ಕುಹೂಗಾನ
ನಮಗೆ ಸುಮಧುರ ಸಂಗೀತ,
ನವಿಲುಗಳ ನರ್ತನವೇ
ನಮಗೆ ಜಗತ್ಪ್ರಸಿದ್ಧ ನಾಟ್ಯ,
ಮೊಲ,ಜಿಂಕೆಗಳ ಶರವೇಗದ ಓಟವೇ ..
ನಮ್ಮ ಉತ್ಸಾಹದ ಬದುಕಿಗೆ ಸ್ಪೂರ್ತಿ………
ಒಮ್ಮೆ ಇಡೀ ವಿಶ್ವ ಹಸಿರ ಕಡಲಾಗಿತ್ತು ,
ಸುಂದರ ಪ್ರಾಣಿಪಕ್ಷಿಗಳ ತವರಾಗಿತ್ತು ,
ಮನುಷ್ಯನ ಸ್ವಾರ್ಥಕೆ ಮರಗಳ ಹನನ ,
ಪಕೃತಿ,ಪ್ರಾಣಿ-ಪಕ್ಷಿಗಳ ಜೀವಗಳ ತಲ್ಲಣ…..
ಸೌದೆಗೆ,ಗೃಹ ಉಪಕರಣಗಳಿಗೆ
ರಸ್ತೆಗಳನಿರ್ಮಾಣಕೆ ,ನಾಗರೀಕತೆಯ ಶೋಕಿಗೆ
ಕಾಡುಗಳ ಕಡಿದಿರಿ, ಪರಿಸರ ಮಾತೆಯ ತಬ್ಬಲಿಮಾಡಿದಿರಿ..
ಪಕ್ಷಿಗಳು ಗೂಡು ಕಟ್ಟಲು,
ವನ್ಯಪ್ರಾಣಿಗಳಿಗೆ ನೆರಳು ನೀಡಲು,
ಮಳೆಯ ನೀರನು ತಡೆದಿಡಲು,
ಜನಜೀವನಕೆ ತಂಪು ನೀಡಲು
ಬಾಳುತ್ತಿದ್ದ ಕಾಡಿಗೆ ಕಿಚ್ಚು ಹಚ್ಚಿತು
ನಿಮ್ಮ ಸ್ವಾರ್ಥದ ಭೂತ…..
ಕಾಡಿನ ನಾಶ, ವನ್ಯಜೀವಿಗಳಿಗೆ ಪಾಶ ,
ಇವೆರೆಡರ ನಿವಾರಣೆಯ ಕತ್ತಿ ಅಲುಗಿನ ಮೇಲೆ ನಡೆದಿದೆ..
ಪರಿಸರ ಸಂರಕ್ಷಿಸುವ ನಮ್ಮ ಕಾಯಕ..
ಅನುಕ್ಷಣವೂ ವನ್ಯಪ್ರಾಣಿಗಳ
ಧಾಳಿಯ ಆತಂಕ,
ಬೇಸಿಗೆಯ ಬಿರುಬಿಸಲಿನಲಿ
ಕಾಡ್ಗಿಚ್ಚಿನ ಹಾವಳಿ…
ಹೆಜ್ಜೆ-ಹೆಜ್ಜೆಗೂ ಕಾಡುತಿದೆ ನಮ್ಮನು…..
ಆಹಾರ ಸಿಗದೆ ಊರಿಗೆ ನುಗ್ಗುವ ಪ್ರಾಣಿಗಳು ,
ಪ್ರಾಣಿಗಳ ಬೇಟೆಗೆ ,ಮರಗಳ
ಹನನಕೆ
ಕಾಡಿಗೆ ನುಗ್ಗುವ ಅನಾಗರೀಕ ವಂಚಕರು..
ಎರಡೂ ವಿನಾಶಗಳ ನಿವಾರಿಸಬೇಕಿದೆ,
ಕಾಡನು,ಕಾಡು ಪ್ರಾಣಿಗಳನು ಕಾಪಾಡುವ ,
ಕಾಡುಪ್ರಾಣಿಗಳಿಂದ ಮಾನವರ ರಕ್ಷಿಸಲು
ಜೀವವನೆ ಮೀಸಲಿಟ್ಟು ಶ್ರಮಿಸುವ
‘ನಿತ್ಯ ಹೋರಾಟಗಾರರು ನಾವು’
ನಮಗಿರಲಿ ನಿಮ್ಮ ಶುಭ ಹಾರೈಕೆಗಳು…
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು