ಬೀದರ ಜಿಲ್ಲೆಯ ಸಾವಗಾಂವ್ ಗ್ರಾಮದಲ್ಲಿ ನೀರಿಗಾಗಿ ಪರದಾಟ
ಬೀದರ – ಜಿಲ್ಲೆಯ ಭೋಂತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾವಗಾಂವ್ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಬಡಜನರು ಪರಿತಪಿಸುವಂತಾಗಿದ್ದು ನೀರು ತರಲು ತುಂಬು ಗರ್ಭಿಣಿಯೊಬ್ಬಳು ಹೆಗಲ ಮೇಲೆ ಮಗು ಹೊತ್ತು ತಿರುಗುವ ದುರಂತಮಯ ವಾತಾವರಣ ಕಂಡುಬಂದಿದೆ.
ಶಾಸಕ ಪ್ರಭು ಚೌಹಾಣ ಅವರ ಸ್ವಗ್ರಾಮದಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿರುವ ಸಾವಗಾಂವ್ ಗ್ರಾಮದಲ್ಲಿಯೇ ಈ ದೃಶ್ಯ ಕಂಡುಬಂದಿದ್ದು ಶಾಸಕರ ಕಾರ್ಯ ವೈಖರಿಗೆ, ಜನಸೇವೆಗೆ ಕನ್ನಡಿ ಹಿಡಿದಂತಾಗಿದೆ.
ಇನ್ನೂ ಬೇಸಿಗೆ ಕಾಲಿಟ್ಟಿಲ್ಲ ಆದರೂ ಈಗಲೇ ಈ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದ್ದು ಮುಂದಿನ ದಿನಗಳ ಭೀಕರತೆ ಎದ್ದು ಕಾಣುತ್ತಿದೆ. ಗ್ರಾಮಸ್ಥರು ಈ ಬಗ್ಗೆ ತುಂಬ ಆಕ್ರೋಶಗೊಂಡಿದ್ದು, ಮನೆಯಲ್ಲಿ ಮಕ್ಕಳಿಗೂ ಕೂಡ ಸ್ನಾನ ಮಾಡಲು, ಕುಡಿಯಲು ನೀರಿಲ್ಲದಂತಾಗಿದೆ ಹೀಗಾದರೆ ನಾವು ಹೇಗೆ ಬದುಕಬೇಕು ಎಂದು ಹೆಂಗಸರು ಪ್ರಶ್ನೆ ಮಾಡುತ್ತಿದ್ದಾರೆ.
ಜಲಜೀವನ ಮಿಷನ್ ಯೋಜನೆಯ ಅಧಿಕಾರಿಗಳ ಕಳಪೆ ಕಾಮಗಾರಿಯಿಂದಾಗಿ ಗ್ರಾಮದಲ್ಲಿ ನೀರಿನ ಕೊರತೆ ಉಂಟಾಗಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ. ಜನರು ರೈತರ ಜಮೀನುಗಳಲ್ಲಿರುವ ಬಾವಿ, ಕೊಳವೆ ಬಾವಿಗಳ ಮೊರೆ ಹೋಗಿದ್ದಾರೆ.
ಸಾವಗಾಂವ್ ಗ್ರಾಮಸ್ಥರ ನೀರಿನ ವಿಷಯದಲ್ಲಿ ಶಾಸಕರು, ಜಿಲ್ಲಾಡಳಿತ, ತಾಲೂಕಾಡಳಿತ ಯಾವ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕು.
ವರದಿ : ನಂದಕುಮಾರ ಕರಂಜೆ, ಬೀದರ