ಸಕ್ಕರೆ ಸೀಮೆ ಎಂದು ಹೆಸರಾದ ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಇಲ್ಲಿಯ ಕವಿ ಮಿತ್ರ ಕಟ್ಟೆ ಎಂ.ಎಸ್.ಕೃಷ್ಣಸ್ವಾಮಿಯವರ ೩ನೇ ಕವನ ಸಂಕಲನ ಮನಸು ಮಲ್ಲಿಗೆ ನವಿರು ಈಗ ಕೈಗೆ ಸಿಕ್ಕಿದೆ.
ಕಟ್ಟೆಯವರು ವಿಶ್ವ ವಿಖ್ಯಾತ ಬೃಂದಾವನ ಅಣೆಕಟ್ಟೆ ಇರುವ ಕೃಷ್ಣರಾಜಸಾಗರದಲ್ಲಿ ಹುಟ್ಟಿ ಈಗ ಮಂಡ್ಯದಲ್ಲಿ ಗೂಡು ಕಟ್ಟಿ ಇತ್ತೀಚೆಗೆ ಗೃಹಪ್ರವೇಶಕ್ಕೆ ಕರೆದಿದ್ದರು. ಹೋಗಲಾಗಲಿಲ್ಲ. ಇದಕ್ಕೆ ಬೇಸರ ಬೇಡ ಗೆಳೆಯ. ಹಿಂದೊಮ್ಮೆ ನೀವು ಹಾಸನಕ್ಕೆ ಕವಿಗೋಷ್ಠಿಗೆ ಬಂದಾಗ ಒಂದು ಕವನ ಸಂಕಲನ ಕೊಟ್ಟು ಹೋಗಿದ್ದು ಸರಿಯಷ್ಟೇ. ಅದು ನನ್ನ ಪುಸ್ತಕ ಭಂಡಾರದಲ್ಲಿ ಅಡಗಿ ಹೋಗಿತ್ತು. ಇಂದು ಮನೆಯ ಧೂಳು ಕೊಡವಲು ಹೊರಟು ಅಚಾನಕ್ ಸಿಕ್ಕಿತು. ಓದಲು ಕುಳಿತೆ. ನಿಮ್ಮ ಮೊದಲ ಕವನ ಸಂಕಲನ ಮನಸ್ಸು ನಕ್ಕಾಗ ಎಂದೂ ತಿಳಿಯಿತು. ನೀವು ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಕವಿತೆ ಬರೆಯುತ್ತಿರುತ್ತಿರಲ್ಲಾ ಗಮನಿಸುತ್ತಿರುವೆ. ನಿಮ್ಮ ಮನಸ್ಸು ಮಲ್ಲಿಗೆಯಲ್ಲಿ ಮಂಡ್ಯ ಒಳಗೊಂಡು ನಮ್ಮ ನಾಡಿನ ಹೆಮ್ಮೆಯ ಕವಿ ಸಾಹಿತಿಗಳು, ನಾಡು ಕಟ್ಟಿದವರು ನಿಮ್ಮ ಹುಟ್ಟೂರಲ್ಲಿ ಅಣೆಕಟ್ಟೆ ಕಟ್ಟಿದವರು ಸೇರಿ ಅನೇಕ ಮಹನೀಯರ ಸೇವಾ ಕೈಂಕರ್ಯವನ್ನು ಕವಿತೆಯ ನುಡಿಗಟ್ಟಿನಲ್ಲಿ ಕಟ್ಟಿಕೊಟ್ಟಿದ್ದಿರಿ. ಸಂಕಲನದ ಮೊದಲ ಕವಿತೆ ಭುವನೇಶ್ವರಿ ಸೊಗಸಾಗಿ ಪ್ರಾಸಬದ್ಧತೆಯಲ್ಲಿ ಪಡಿಮೂಡಿದೆ.
ಕುವೆಂಪು ಬೇಂದ್ರೆ ಕಾರಂತ ಮಾಸ್ತಿಯವರ ಸಂಗಮ
ವಿಶ್ವೇಶ್ವರಯ್ಯ ಒಡೆಯರ್ ಕನ್ನಂಬಾಡಿ ಕಟ್ಟೆಯ ಉಗಮ
ವ್ಯಕ್ತಿ ಚಿತ್ರಗಳೇ ಹೆಚ್ಚಿರುವ ನಿಮ್ಮ ಕವಿತೆಗಳಲ್ಲಿ ನಾಡಿನ ಅನೇಕ ರಾಜರು ದೇಶ ನಾಡು ಕಟ್ಟಿ ಬಾಳಿ ಬೆಳಗಿದ ಇತಿಹಾಸ ಪುರುಷರ ಭವ್ಯ ಇತಿಹಾಸ ಅನಾವರಣಗೊಂಡಿದೆ. ನಿಮ್ಮ ಕಾವ್ಯವು ಜೀವನ ದೃಷ್ಟಿಯಾಗಿ ಮನುಷ್ಯನೇ ಕಾವ್ಯದ ಕೇಂದ್ರವಾಗಿ ನಾಡು ನುಡಿ ಸೇವೆಗೈದವರ ಸ್ಮರಣೆ ಮನನೀಯವೇ ಸೈ,
ಬೆಂಗಳೂರು ಕಟ್ಟಿದ ಕೆಂಪೇಗೌಡ ನಾಡಿನ ವೀರ ಉದ್ಧಾಮ
ಹಕ್ಕ ಬುಕ್ಕರ ಜನ್ನ ವಿಜಯನಗರದ ಸಾಮ್ರಾಜ್ಯದ ಉಗಮ
ಈ ನಡುವೆ ನಮ್ಮ ನಿಮ್ಮ ನಡುವೆ ಬೆಳೆಯುತ್ತಿರುವ ಭ್ರಷ್ಟಾಚಾರದ ಭೂತ ನಿಮ್ಮನ್ನು ಕೆಂಗೆಡಿಸಿದೆ. ನೀವು ಇಲ್ಲಿ ಸಾಂಕೇತಿಕ ಅಷ್ಟೇ. ಭ್ರಷ್ಟ ತೋಳಗಳ ನಡುವೆ ನೀವಷ್ಟೇ ಅಲ್ಲಾ ನಾವೂ ಕುರಿಗಳೇ. ಕವಿ ನಿಸಾರ್ ಆಹ್ಮದ್ ಕವಿತೆಯಲ್ಲಿ ಹೇಳಿದಂತೆ ಕುರಿಗಳು ಸಾರ್ ಕುರಿಗಳು..
ನಮ್ಮ ನಾಡಿನಲ್ಲಿ ನಮ್ಮವರೆ ತೋಳಗಳಾದರೆ ಹೇಗೆ
ನಮ್ಮವರೇ ನಮ್ಮ ಕಿತ್ತು ತಿಂದರೆ ಉಳಿದೀತೆ ಮನುಕುಲ ?
ಮನುಕುಲ ಇನ್ನು ಕಿಂಚಿತ್ ಉಳಿದಿದೆ. ಅದಕ್ಕೆ ನಾವಿನ್ನೂ ಉಳಿದಿದ್ದೇವೆ. ಮನುಷ್ಯರಾಗಿ ನೀವು ಚಿಂತಿಸಿದ್ದೀರಿ. ನಿಮ್ಮ ಪ್ರಶ್ನೆಗೆ ಉತ್ತರ ಯಾರು ಕೊಡುವುದು ಗೆಳೆಯ. ನೀವು ಸಂಕಲನದುದ್ದಕ್ಕೂ ಅಹಿಂಸೆಯ ಪರ ನಿಂತು ನಿಮ್ಮ ಮನಸ್ಸು ಪ್ರಶ್ನೆಗಳ ಸರಮಾಲೆಯಲ್ಲಿ ಆಕ್ರೋಶದ ಕಿಡಿ ಹರಡಿದೆ. ಅದು ಮುಚ್ಚುಮರೆಯಿಲ್ಲದೆ ನೇರ ಪದಗಳಲ್ಲಿ. ನಿಮ್ಮ ಪದ್ಯಗಳಲ್ಲಿ ಯಾವ ಗೂಢಾರ್ಥವೂ ಇಲ್ಲ. ನೇರಾನೇರ ಡಿಚ್ಚಿ. ಕೊಟ್ಟಿದ್ದೀರಿ. ನಿಮ್ಮ ಮನದಾಳದ ಮಾತಿನಲ್ಲಿ ಈ ಕಾಲಮಾನದಲ್ಲಿ ಭಯದಲ್ಲಿ ಬದುಕು ಸಾಗುತ್ತಿದೆ ಎಂಬುದು ಸತ್ಯ. ಭಯೋತ್ಪಾದನೆ, ನಕ್ಸಲೇಟ್, ವಂಚಕರು ಚೋರರ ಹಾವಳಿ ಹೆಚ್ಚುತ್ತಿದೆ ಎಂದಿದ್ದಿರ. ಪ್ರಪಂಚವೇ ಅಣುಬಾಂಬ್ ಭಯದಲ್ಲಿ ಬದುಕುವ ಪ್ರಕ್ಷುಬ್ಧತೆ ಇದೆ. ಈ ನಡುವೆ ಪ್ರಕೃತಿ ವಿಕೋಪ ಸುನಾಮಿ ಬಿರುಗಾಳಿ ಜಲ ಪ್ರಳಯ..ಕಾಡುತ್ತಿದೆ. ಹೌದಲ್ಲ ಎಷ್ಟೊಂದು ಸಂಕಷ್ಟಗಳ ನಡುವೆ ನಮ್ಮ ಬದುಕು ಸಾಗಿದೆ.
ವಾಯು ಭಾರ ಕುಸಿತಕ್ಕೆ ನಡುಗಿದೆ ಇಳೆ
ಸುರಿದಿದೆ ಆಕಾಶದಿಂದ ಧರೆಗೆ ಮಳೆ
ಇಳೆ ಮಳೆ ಎಲ್ಲಾ ಪ್ರಾಸ ಓಕೆ. ಕವಿತೆಗೆ ಇದು ಬೇಕೆ? ನಿಮ್ಮ ಮನಸ್ಸು ಮಲ್ಲಿಗೆ ನವಿರಾಗಿ ವಿಸ್ತರಿಸುವ ಭರಾಟೆಯಲ್ಲಿ ಕಾವ್ಯ ಛಾಯೆಗಿಂತ ಲೇಖನಿಯ ಛಾಪಿದೆ. ವಿಮರ್ಶಕರು ಇದಕ್ಕೆ ವಾಚ್ಯ ಎನ್ನುತ್ತಾರೆ. ದೇಶ ಪ್ರಿಯ ಭಗತ್ ಸಿಂಗ್. ಕಣ್ಮಣಿ ಲಾಲ್ ಬಹುದ್ದೂರ್ ಶಾಸ್ತ್ರಿ, ಓ ಮಹಾತ್ಮಗಾಂಧಿ ಶೀರ್ಷಿಕೆಯ ದೇಶ ಭಕ್ತ ಮಹನೀಯರ ಕೊಡುಗೆ ಕಾವ್ಯದಲ್ಲಿ ಕಟ್ಟಿದಂತೆ ಲೇಖನಿಯಲ್ಲಿ ವಿಸ್ತರಿಸಿ ಬರೆಯಿರಿ. ಡಾ.ಕಲಾಂ, ಗುಬ್ಬಿ ವೀರಣ್ಣ, ದೇವರಾಜ್ ಅರಸ್ ಅವರ ಬಗ್ಗೆಯೂ ಕವಿತೆ ಬರೆದಿದ್ದೀರಾ. ಇನ್ನೂ ನಿಮ್ಮ ಮಂಡ್ಯ ಇಂಡ್ಯ ಕವಿತೆ ನನ್ನನ್ನು ಮಂಡ್ಯಕ್ಕೆ ಕರೆಯುತ್ತಿದೆ.
ಸಿಹಿ ಸಕ್ಕರೆಯ ಅಕ್ಕರೆಯ ಭವ್ಯ ಊರು ನಮ್ಮದು
ಹಾಲು ಮೊಸರು ಬೆಣ್ಣೆ ಹಂಚುವ ಊರು ನಮ್ಮದು
ಬರುವ ಮನಸ್ಸಿದೆ. ರೈಲು ಟಿಕೇಟು ಬುಕ್ ಮಾಡುವ ಗೋಜೆ ಇಲ್ಲ. ಮಡದಿಗೆ ಬಸ್ ಫ್ರೀ ಇದೆ. ಮಂಡ್ಯ ನಿಮ್ಮ ಪ್ರೀತಿಯ ಊರು ಹೌದು. ನಮಗೂ ಪ್ರಿಯವೇ.
ಸಿಹಿ ಅಕ್ಕರೆಯ ಬಾಂಧವ್ಯದ ಬೀಡು ನಮ್ಮದು
ಮಂಡ್ಯ ನಮ್ಮ ಪ್ರೀತಿಯ ಊರು.
ಅಂದ್ಹಾಗೆ ತಾವು ಅಂಚೆ ಕಛೇರಿ ಉದ್ಯೋಗಿ ಅಲ್ಲವೇ. ಅದಕ್ಕೆ ಈ ಪತ್ರ ಸ್ಟೈಲ್. ಇದು ಓಲ್ಡ್ ನಾಟಿ ಸ್ಟೈಲ್.!
–ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್,೩ನೇ ಕ್ರಾಸ್, ಹಾಸನ-೫೭೩೨೦೧.