spot_img
spot_img

ಮಕ್ಕಳಲ್ಲಿ ಓದಿನ ಪ್ರೀತಿ ಉಕ್ಕಿಸುವ ಚಿತ್ರ ಪುಸ್ತಕಗಳು

Must Read

spot_img
- Advertisement -

‘ಹರಿದ್ವಾರ ಅಂಗಡಿ’ ಏನಿದು ಅಂಗಡಿ ಎಂದು ನಿಮಗೆ ಅನಿಸಿರಬಹುದು. ಪುಟ್ಟ ಹಳ್ಳಿಯಲ್ಲೊಂದು ಅಂಗಡಿ ಇದ್ದರೆ ಅಲ್ಲಿ ಮಕ್ಕಳು ಮುತ್ತುತ್ತಿರುತ್ತಾರೆ. ಅವರಿಗೆ ಬೇಕಾದ ಪೆನ್ಸಿಲ್ಲು, ಪೆನ್ನು, ನೋಟ್ ಬುಕ್, ಬಣ್ಣ, ಚೆಂಡು ಎಲ್ಲಾ ಸಿಗುವುದು ಅಲ್ಲಿಯೇ. ಅಂಗಡಿಯ ಮಾಲೀಕನೊಂದಿಗೆ ಮಕ್ಕಳಲ್ಲಿ ಏನೋ  ಹೃದಯದ ಪ್ರೀತಿ ತಬ್ಬಿಕೊಂಡಿರುತ್ತದೆ. ಇಂತಹದೇ ಒಂದು ಕಥೆಯನ್ನು ಹಿಂದಿಯಲ್ಲಿ ಪವನಕುಮಾರ ವರ್ಮಾ ಬರೆದಿದ್ದನ್ನು ಕನ್ನಡಕ್ಕೆ ತಂದಿದ್ದಾರೆ ಆನಂದ ಪಾಟೀಲರು. ಕಥೆ ಓದುತ್ತಾ ನೀವು ಕಥೆಯೊಂದಿಗೆ ಒಂದಾಗದಿದ್ದರೆ ಹೇಳಿ.

ಹಾಂ, ಕಾಮನಬಿಲ್ಲು ಯಾರಿಗೆ ಗೊತ್ತಿಲ್ಲ. ಕಾಮನಬಿಲ್ಲಿನ ಬಣ್ಣದ ಹಾಗೆ ಮಳೆ ಬರುವಾಗ ಮಕ್ಕಳಲ್ಲಿ ಬಣ್ಣ ಬಣ್ಣದ ಚಿತ್ರಗಳು ಮೂಡುತ್ತಿರುತ್ತವೆ. ಮಳೆ ಯೊಂದಿಗಿನ ಬಾಲ್ಯದ ಸಂಗತಿ ಹೇಳಿ ಎಂದರೆ ನಾನು ಕಾಮನಬಿಲ್ಲನ್ನು ಏರಿ ಕುಳಿತುಬಿಡುತ್ತೇನೆ. ಆಕಾಶದಿಂದ ಪಟಪಟನೆ ಮಳೆ ಉದುರುವ ಹಾಗೆ ಒಂದಿಷ್ಟು ಕಥೆಗಳನ್ನು ತಂಪಾಗಿ ಹರಡಿಬಿಟ್ಟೇನು. ಇರಲಿ, ಇಲ್ಲಿ ನನಗೀಗ  ‘ಕಾಮನಬಿಲ್ಲು’ ಪುಸ್ತಕ ಸಿಕ್ಕಿದೆ. ಇದರಲ್ಲಿ ಮಕ್ಕಳಿದ್ದಾರೆ. ಅವರ ಸುತ್ತ ಹರಡಿಕೊಳ್ಳುವ ಈ ಕತೆ ಓದಿದರೆ ನಮಗೆ ಕಾಮನಬಿಲ್ದನ್ನು ಕಂಡಾಗ ಆಗುವಷ್ಟೇ ಖುಷಿ ಆಗದೇ ಇರದು. ಇದನ್ನು ಬರೆದವರು ಅಕ್ಷಯ ನಾಗ್ರೇಶಿ.  

ಅಶೋಕ ಚಕ್ರವರ್ತಿಯ ಕುರಿತು ಎಲ್ಲ ಮಕ್ಕಳು ತಿಳಿದೇ ಇರುತ್ತಾರೆ. ನಮ್ಮ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರವಿದೆ ಎಂದೆಲ್ಲಾ ಹೇಳುತ್ತಿರುತ್ತಾರೆ. ಅಶೋಕನು ಕಳಿಂಗದ ಮೇಲೆ ಯುದ್ಧ ಮಾಡಿ ಜಯಶಾಲಿಯಾದನು. ನಂತರ ಅಲ್ಲಿನ ಸಾವು ನೋವುಗಳನ್ನು ನೋಡಿ ಅವನ ಮನಸ್ಸು ದುಃಖಕ್ಕೆ ಈಡಾಯಿತು ಎನ್ನುವುದನ್ನು ಓದುತ್ತಾ ನಮ್ಮಲ್ಲೂ ಯುದ್ಧದ ಕುರಿತು ತಿರಸ್ಕಾರ ಭಾವ ಉಂಟಾಗುತ್ತದೆ. ಇಲ್ಲಿ ಮಸ್ಕಿ ಅಶೋಕನ ಶಾಸನದ ಕುರಿತು ತುಂಬಾ ಸರಳವಾಗಿ ಪುಟ್ಟ ಪುಸ್ತಕ ಬರೆದಿದ್ದಾರೆ ಗುಂಡೂರಾವ್ ದೇಸಾಯಿ. ನಮ್ಮ ನೂತನ ಸಂಸತ್ ಭವನದ ಒಂದು ಭಾಗದಲ್ಲಿ ಸಾಮ್ರಾಟ ಅಶೋಕನ ಸ್ಮರಣೆಗಾಗಿ ಬೃಹತ್ ಚಿತ್ರ ಅಳವಡಿಸಲಾಗಿದ್ದು ಅಲ್ಲಿ ಮಸ್ಕಿಯ ಶಾಸನದ ಪ್ರತಿಕೃತಿಯನ್ನು ಸ್ಥಾಪಿಸಿದ್ದಾರೆ. ಈ ಶಾಸನದ ಕುರಿತಾಗಿರುವ ಪುಸ್ತಕ ಸರಳವಾಗಿ ಆಪ್ತವಾಗಿದೆ. 

- Advertisement -

ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ಶಿವಪುರ ಎನ್ನುವುದು ಚಿಕ್ಕ ಗ್ರಾಮ. ಅಲ್ಲಿಯ ಯುವಕನೊಬ್ಬ ಎಂಟು ಕಬ್ಬಿಣದ ನೇಗಿಲು, ನಾಲ್ಕು ನೊಗ ಹಾಗೂ ಅದರೊಂದಿಗೆ ಬಳಸುವ ಎಲ್ಲ ಸಾಮಗ್ರಿಗಳನ್ನು (ಸುಮಾರು ಎರಡರಿಂದ ಮೂರು ಕ್ವಿಂಟಲ್) ಭಾರದ ವಸ್ತುಗಳನ್ನು ಹೆಗಲಮೇಲೆ ಹೊತ್ತು ಮೂರು ಮೈಲು ನಡೆಯುವ ಸ್ಪರ್ಧೆಯನ್ನು ಅನಾಯಾಸವಾಗಿ ಮುಗಿಸಿದ್ದ. ಅವನೇ ಚಲೇಜಾವ್ ಚಳವಳಿಯಲ್ಲಿ ತನ್ನ ಪ್ರಾಣವನ್ನೇ  ಮುಡುಪಾಗಿಟ್ಟ ಮೊದಲ ಚೇತನ ಸಾತಪ್ಪ ಟೋಪಣ್ಣನವರ. ಇವರ ಕುರಿತಾಗಿ ಇರುವ ಪುಸ್ತಕ ಬರೆದವರು ಡಾ.ರಾಜಶೇಖರ್ ಬಿರಾದಾರ. ಇದನ್ನು ಓದಲು ಕುಳಿತರೆ ಒಂದೇ ಗುಕ್ಕಿಗೆ ನಾವು ಓದಿ ಮುಗಿಸದೇ ಬಿಡುವುದಿಲ್ಲ. ಅಷ್ಟು ಚೆನ್ನಾಗಿದೆ. 

ಉತ್ತರ ಕನ್ನಡ ಜಿಲ್ಲೆಯ ವಿಶಿಷ್ಟ ಬುಡಕಟ್ಟು ಸಮುದಾಯ ಹಾಲಕ್ಕಿ ಗಳದ್ದು. ಈ ಜನಾಂಗದ ಹಾಲಕ್ಕಿ ಕೋಗಿಲೆ ಎಂದೇ ಪ್ರಸಿದ್ಧ ಆದವರು ಸುಕ್ರಿ ಭೊಮ್ಮ ಗೌಡ ಅವರು. ಪದ್ಮಶ್ರೀ ಪುರಸ್ಕೃತರಾದ ಇವರ ಬದುಕು ಹೇಗೆಲ್ಲ ವಿಸ್ತರಿಸಿದೆ ಎಂಬುದನ್ನು ನೋಡಬೇಕು. ಸುಕ್ರಜ್ಜಿಯವರನ್ನು ಪರಿಚಯಿಸುವ ಈ ಪುಟ್ಟ ಪುಸ್ತಕ ಬರೆದವರು ಅಕ್ಷತಾ ಕೃಷ್ಣಮೂರ್ತಿ ಅವರು. ನಮ್ಮೆಲ್ಲರ ಪ್ರೀತಿಯ ಅಜ್ಜಿ ಸುಕ್ರಜ್ಜಿಯನ್ನು ಹತ್ತಿರದಿಂದ ನೋಡಿರುವ ಲೇಖಕಿಯ ಬರಹ ನಮ್ಮನ್ನು ಹಿಡಿದಿಡುತ್ತದೆ. 

ಹಸಿರು ಎಂದರೆ ಯಾರಿಗೆ ಪ್ರೀತಿ ಅಲ್ಲ. ಮಕ್ಕಳಲ್ಲಿ ಹುಟ್ಟಿಕೊಳ್ಳುವ ಸಹಜ ಪ್ರಕೃತಿ ಪ್ರೀತಿ ಒಂದು ಭಾವವಾಗಿ ಪ್ರೀತಿಯ ಬಂಧವಾಗಿ ಉಳಿಯುವುದನ್ನು ನೋಡಲು ‘ರಾಪಾದಿಬ್ಬ’ ಕಥೆ ಓದಬೇಕು. ರಾಪಾದಿಬ್ಬ ಶೀರ್ಷಿಕೆಯೇ ಆಕರ್ಷಕವಾಗಿದ್ದು ಇದನ್ನು ಓದಿದರೆ ಪ್ರಕೃತಿಯ ಕುರಿತು ಒಂದಿಷ್ಟು ಕಾಳಜಿ ತಾನೆ ತಾನಾಗಿ ಆರಂಭವಾಗುತ್ತದೆ. ಇದನ್ನು ಬರೆದವರು ನಾಗರಾಜ ಹುಡೇದ ಅವರು. 

- Advertisement -

ಈ ಆರೂ ಪುಸ್ತಕಗಳನ್ನು ಪ್ರಕಟಿಸಿದವರು ಕನ್ನಡದ ಹೆಮ್ಮೆಯ ಪ್ರಕಾಶನ ಅಭಿನವದವರು. ಹಿಂದೆ ಮೇವುಂಡಿ ಮಲ್ಲಾರಿ ಕಾದಂಬರಿ ಸುಗ್ಗಿಯ ಅಡಿಯಲ್ಲಿ ಹನ್ನೆರಡು ಕಾದಂಬರಿಗಳನ್ನು ಮಕ್ಕಳಿಗಾಗಿ ಆನಂದ ಪಾಟೀಲರ  ಸಂಪಾದಕತ್ವದಲ್ಲಿ ಹೊರ ತಂದಿದ್ದರು. ಇವೆಲ್ಲ ಮಕ್ಕಳಿಗೆ ಹೊಸ ಖುಷಿಯ ಉಣಿಸನ್ನು ನೀಡಿ ಯಶಗಳಿಸಿದ್ದವು. ಈಗ ಯುವ ಪ್ರತಿಭಾವಂತ ಸಾಹಿತಿ ಡಾ. ಶಿವಲಿಂಗಪ್ಪ ಹಂದಿಹಾಳ ಸಂಪಾದಕತ್ವದಲ್ಲಿ ಧಾರವಾಡದ ಮಕ್ಕಳ ಪ್ರೀತಿಯ ನಿವೃತ್ತ ಗ್ರಂಥ ಪಾಲಕ ಅಧಿಕಾರಿ ಜಿ ಬಿ ಹೊಂಬಳ ಹೆಸರಿನ ಪುಸ್ತಕ ಮಾಲೆಯಲ್ಲಿ ಸರಣಿ ಪುಸ್ತಕ ಪ್ರಕಟಿಸುತ್ತಿದ್ದಾರೆ. ಈ ಮಾಲೆಯಲ್ಲಿ ಹನ್ನೆರಡು ಪುಸ್ತಕಗಳು ಪ್ರಕಟವಾಗಲಿದ್ದು ಮೊದಲ ಕೊಡುಗೆಯಾಗಿ ಮೇಲಿನ ಆರು ಪುಸ್ತಕಗಳು ಪ್ರಕಟವಾಗಿವೆ. ಇವೆಲ್ಲ ಸೊಗಸಿನ ಪುಟ್ಟ ಪುಟ್ಟ ಆಕರ್ಷಕ ಚಿತ್ರ ಪುಸ್ತಕಗಳು. ಸಂತೋಷ ಸಸಿಹಿತ್ಲು ಅವರ ಅಂದವಾದ ಚಿತ್ರಗಳು ಎಲ್ಲರಿಗೂ ಇಷ್ಟವಾಗುತ್ತವೆ. ಆರೂ ಪುಸ್ತಕಗಳ ಒಟ್ಟು ಬೆಲೆ 200 ರೂಪಾಯಿಗಳು. ಇಂತಹ ಸೊಗಸಿನ್ ಪುಸ್ತಕ ನೀಡಿದ ಪ್ರಕಾಶನಕ್ಕೆ ಹಾಗೂ ಲೇಖಕರಿಗೆ ವಂದನೆಗಳು.


ತಮ್ಮಣ್ಣ ಬೀಗಾರ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group