spot_img
spot_img

ಶೇಖರಗೌಡ ನಾಡಗೌಡರ ತೋಟದ ಸಂದರ್ಶನ

Must Read

spot_img
- Advertisement -

ಒಂದು ತಿಂಗಳ ಹಿಂದೆ ನಮ್ಮ ಗಂಗಾವತಿಯ ನಿವೃತ್ತ ಬ್ಯಾಂಕ ಅಧಿಕಾರಿ ರಾಘವೇಂದ್ರ ಕುಲಕರ್ಣಿಯವರ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ತಾವರಗೇರಿಯ ನಿವೃತ್ತ ಬ್ಯಾಂಕ್‌ ಮ್ಯಾನೇಜರ್ ಶೇಖರಗೌಡ ನಾಡಗೌಡರ ಮತ್ತು ಅವರ ಪತ್ನಿ‌ ಶ್ರೀಮತಿ ಅಕ್ಕಮಹಾದೇವಿ ತಾಯಿಯವರು ನಿಮ್ಮ ಪುಸ್ತಕಗಳು ನನಗೆ ಬೇಕೆಂದು ಕೇಳಿದರು. ನಾನು ತಕ್ಷಣ ಮನೆಗೆ ಹೋಗಿ ತಂದುಕೊಟ್ಟೆ. ಅದಕ್ಕೆ ಖುಷಿಯಾಗಿ ನೀವು ನಮ್ಮ ತೋಟದ ಮನೆಗೆ ಬರಬೇಕೆಂದು ಆಹ್ವಾನ ಕೊಟ್ಟರು. ಶೇಖರಗೌಡರವರು ಸುಮಾರು ೪೦ ಕಥೆಕಾದಂಬರಿ ಪುಸ್ತಕಗಳ ಪ್ರಕಟಿಸಿದ ಸಾಹಿತಿಗಳು. ಆಗಲಿ ಬರತ್ತೇನೆಂದು ಹೇಳಿದ್ದೆ.

ನಾನು ಮತ್ತು ಬೂತಲದಿನ್ನಿ ವಿಶ್ವನಾಥ ಹೋಗಲು ನಿರ್ಧರಿಸಿ ಅವರಿಗೆ ೨೮.೮.೨೦೨೪ ರಂದು ರಾತ್ರಿ ಫೋನ್‌ ಮಾಡಿ ತಿಳಿಸಿದೆವು. ಮರುದಿನ ೨೯.೮.೨೦೨೪ ರಂದು ಬೆಳಿಗ್ಗೆ ಹೊರಡಲುನುವಾದಾಗ ಅವರು ಫೋನ್ ಮಾಡಿ ಎಷ್ಟುಹೊತ್ತಿಗೆ ಬರುತ್ತೀರೆಂದು ವಿಚಾರಿಸಿದರು. ಸುಮಾರು ೧೨ಗಂಟೆಗೆ ಎಂದು ತಿಳಿಸಿದೆವು. ನಾವಿಬ್ಬರು ಬಸ್ಸತ್ತಿ ಮೆಣೆದಾಳ ಗ್ರಾಮ ತಲುಪಿ ಮತ್ತೆ ಅವರಿಗೆ ಫೋನಾಯಿಸಿದೆವು. ಆಗ ಅವರು ತಮ್ಮ ಒಬ್ಬ ಕೆಲಸಗಾರನನ್ನು ಸ್ಕೂಟಿಕೊಟ್ಟು ಕಳಿಸಿದರು. ನಾವು ಮೂವರು ಸೇರಿ ಅಲ್ಲಿಂದ ೨ ಕಿ.ಮೀ ದೂರವಿರುವ ಅವರ ತೋಟದ ಮನೆಗೆ ಹೋದೆವು. ಸುಮಾರು ೪೦ ಎಕರೆ ತೋಟದಲ್ಲಿ ಹಚ್ಚಹಸುರಾದ ಗಿಡಮರಬಳ್ಳಿತುಂಬಿದ ತೋಟ ನೋಡಿ ನಾವು ಮಲೆನಾಡಿಗೆ ಬಂದಂತೆ ಭಾಸವಾಯಿತು. ಹೋದ ಕೂಡಲೆ ಅವರ ಸೊಸೆ ನಮ್ಮನ್ನು ಸ್ವಾಗತಿಸಿದರು. ನಾವಿಬ್ಬರು‌ ಹೊರಗಿದ್ದ ನಳದಲ್ಲಿ ಮುಖತೊಳೆದುಕೊಂಡು ಮನೆಯೊಳೆಗೆ ಹೋಗಿ ಕುಳಿತೆವು.

ಅದೇ ತಾನೆ ಹೊಲದಲ್ಲಿ ಅಡ್ಡಾಡಿ ಬಂದ ಇಬ್ಬರು ದಂಪತಿಗಳು ಸ್ನಾನಮಾಡಿ ಲಿಂಗಪೂಜೆಯಲ್ಲಿ ನಿರತರಾಗಿದ್ದರು. ಪೂಜೆ ಮುಗಿಸಿ ಬಂದು ನಮ್ಮನ್ನು ಮಂದಹಾಸದಿಂದ ಮಾತನಾಡಿಸಿ
ಶರಬತ್ತು ತಂದು ಕುಡಿಯಲು ಕೊಟ್ಟರು. ಅಲ್ಲಿಯೆ ಅಕ್ಕನವರ ತಾಯಿ ಮಲಗಿದ್ದಳು.ಆಕೆಯ ಯೋಗಕ್ಷೇಮ ಕೇಳಿದೆವು. ಅವರಿಗೆ ಕೊಂಚ ಅರ್ಧಾಂಗವಾಯು ಹೊಡೆದ ಕಾರಣ ಮಲಗಿದಲ್ಲೆ ಮಲಗಿದ್ದರು. ಎರಡಂತಸ್ತಿನ ಮನೆಯ
ಪಕ್ಕದಲ್ಲಿ ತಗಡಿನಿಂದ ಮಾಡಿದ ವಿಶಾಲವಾದ ಅಡಿಗೆ ಮನೆ
ಇತ್ತು.ಅದರ ಪಕ್ಕದಲ್ಲಿ ಏಳು ಬೋರುಗಳಿಂದ ನೀರು ಬಂದು ಸಂಗ್ರಹವಾಗುವ ಒಂದು ದೊಡ್ಡ ಬಾವಿ ಇತ್ತು.ಒಳಗೆ ಅವರ ಮಲಗುವ ಕೋಣೆಗೆ ಹೋಗಿ ಕುಳಿತೆವು. ಅಲ್ಲಿ ತಂಪಾದ ಗಾಳಿ ಎಸಿ ಯಂತೆ ನುಗ್ಗುತ್ತಿತ್ತು ಮನಸಿಗೆ ಆಹ್ಲಾದಕರ ವಾತಾವರಣ ಕಂಡು ಆನಂದವಾಯಿತು.ಅಲ್ಲಿ ಕೂತು ಅವರ ಸಾಹಿತ್ಯದ ರಚನೆ ಕುರಿತು ತಮ್ಮ ವಿಷಯವನ್ನೆಲ್ಲ ತಿಳಿಸಿದರು. ಅವರು ಬರೆದ ೪೮೦‌ ಕಥೆಗಳ ಪಟ್ಟಿನೋಡಿ ನಾನು ಮತ್ತು ವಿಶ್ವನಾಥ ಅಚ್ಚರಿಪಟ್ಟೆವು. ತಮ್ಮ ಪ್ರಕಟಿತ ಪುಸ್ತಕ, ಪತ್ರಿಕೆ ಮತ್ತು ಗಣಕಯಂತ್ರ ತೋರಿಸಿದರು.

- Advertisement -

ತದನಂತರ ಅಕ್ಕ ಮುದ್ದು ಮೊಮ್ಮಗ ಸಾಯಿಸ ರೂಪ‌ ಎಂದು ಕರೆದಂತೆ ಕೇಳಿಸಿದಂತಾಯಿತು! ಏನಿದು ಹೆಸರು ಎಂದು ನಾನು ಗಾಬರಿಯಿಂದ ಕೇಳಿದೆ. ಅವನ ಹೆಸರು ಸ್ವರೂಪ ಆದರೆ ನಾನು ಸಾಯಿ ಬಾಬಾನ ಭಕ್ತೆ. ಅದಕ್ಕೆ ಅವನಿಗೆ ಸಾಯಿ ಸ್ವರೂಪ ಎಂದು ಕರೆಯುತ್ತೇನೆಂದು ಹೇಳಿದಳು. ನಾವೆಲ್ಲರು ನಕ್ಕೆವು. ನನಗೆ ಚುಟುಕು ಬರೆಯಲು ವಸ್ತು ಸಿಕ್ಕಿತೆಂದು ಸಂತೋಷಪಟ್ಟೆ. ಆ ಇಬ್ಬರ ಸರಳತೆ ಮತ್ತು ಆತ್ಮೀಯತೆ ಕಂಡು ನಮಗೆ ಇಷ್ಟವಾಯಿತು.ಅಷ್ಟೆಲ್ಲ ಇದ್ದರು ಸಾಹುಕಾರರ ಗತ್ತು ಗರ್ವ ಅವರಲ್ಲಿ ಕಂಡುಬರಲಿಲ್ಲ. ನಂತರ ಗೌಡರು ತಮ್ಮ ತೋಟವನ್ನು ತೋರಿಸಲು ಕರೆದೊಯ್ದರು. ಅಲ್ಲಿ ತೆಂಗು, ಅಡಕೆ, ನೀರಲ, ಪ್ಯಾರಲ, ಸಾಗುವಾನಿ, ಅರೆಬೇವು, ಸಪೋಟ, ಮಾವು, ನಿಂಬೆ,ಬೇವು, ಆಲ‌ ಮುಂತಾದ ಮರಗಳನ್ನು ನೋಡಿ ಮಲೆನಾಡಿನ ತೋಟದಲ್ಲಿ ಇದ್ದಂತೆ ಮನಸಿಗೆ ಉಲ್ಲಾಸವಾಯಿತು.ಅಲ್ಲಿ ಹೊಲದ ಮದ್ಯದಲ್ಲಿ ನೀರು ಸಂಗ್ರಹಣೆಯ ದೊಡ್ಡ ಹೊಂಡವನ್ನು ನೋಡಿದೆವು.

ಮಸಾರಿ ಭೂಮಿಯಾಗಿದ್ದು ಕಲ್ಲುಬಿಂಚೆಗಳಿಂದ ಕೂಡಿದ
ಹೊಲ ಫಲವತ್ತಾಗಿದೆ. ಮತ್ತು ಅನೇಕ ದೇಸಿ ಆಕಳುಗಳು
ಸಾಕಿ ಸಾವಯವ ಕೃಷಿ ಮಾಡುತ್ತಾರೆ. ಇದಕ್ಕೆಲ್ಲ
ಕಾರಣ ತಮ್ಮ ಇಬ್ಬರು ಗಂಡುಮಕ್ಕಳೆ. ಅವರೆ
ಹೊಲ ಖರೀದಿಮಾಡಿ ಇಷ್ಟೆಲ್ಲ ಸುಧಾರಣೆ ಮಾಡಿದ್ದಾರೆಂದು ಹೆಮ್ಮೆಯಿಂದ ಹೇಳಿದರು. ಹಿರಿಯ ಮಗ ಕಿರಣ ಬಿ.ಎಸ್.ಸಿ ಅಗ್ರಿ ಓದಿದ್ದು ನೌಕರಿಗೆ ಹೋಗದೆ ತೋಟ ನೋಡಿಕೊಳ್ಳುತ್ತಿದ್ದಾನೆ. ಇನ್ನೊಬ್ಬ ಮಗ ಸಂತೋಷ ಧಾರವಾಡದಲ್ಲಿ ನೌಕರಿ ಮಾಡುತ್ತಿದ್ದಾನೆ. ಒಬ್ಬ ಮಗಳು ಅನುಪಮ‌ ಮದುವೆಯಾಗಿದ್ದು ಗಂಡನ ಮನೆಯಲ್ಲಿದ್ದಾಳೆ.

ಎಲ್ಲ ತಿರುಗಾಡಿ ಮನೆಗೆ ಬಂದ ಮೇಲೆ ಊಟ ತಯಾರಾಗಿತ್ತು.ಮೂವರು ಡೈನಿಂಗ್ ಟೇಬಲ್ಲಲ್ಲಿ ಊಟಕ್ಕೆ ಕೂತೆವು. ಅಕ್ಕ ನಮಗೆ ನಗುನಗುತ್ತ ಬಿಳಜೋಳದ ರೊಟ್ಟಿ, ಅಲಸಂದೆ ಗುಗ್ಗರಿ ಹೀರೇಕಾಯಿ ಪಲ್ಯೆ, ಸೇಂಗಾಪುಡಿ, ದೇಸಿ ಆಕಳ ಘಮಘಮಿಸುವ ತುಪ್ಪ‌ ನೀಡಿದಳು. ಆನಂದದಿಂದ ಮಾತನಾಡುತ್ತ ಉಂಡೆವು. ಕೊನೆಗೆ ಅನ್ನ ಸಾರು ಮೊಸರು ನೀಡಿದಳು. ಪುಷ್ಕಳವಾಗಿ ಹಳ್ಳಿ ಊಟ ಉಂಡು ಮುಗಿಸಿದೆವು. ನಂತರ ಅಜ್ಜಿ, ಅಕ್ಕ ಮತ್ತು ಸೊಸೆ ಊಟಮಾಡಿದರು. ಆಮೇಲೆ ನಮ್ಮ ಕವನ ವಾಚನ ಸಾಹಿತ್ಯ ಚರ್ಚೆ ಮಾಡಿದೆವು.ಅಷ್ಟೊತ್ತಿಗೆ ತಾವರಿಗೇರಿಗೆ ಶಾಲೆಗೆ ಹೋಗಿದ್ದ ಇಬ್ಬರು ಮೊಮ್ಮಕ್ಕಳನ್ನು ಮಗ ಕಿರಣ ಕಾರಿನಲ್ಲಿ ಕರೆತಂದ. ದೊಡ್ಡ ಮೊಮ್ಮಗನ ಹೆಸರು ವೀರಶೇಖರ ಎಂದರು. ಇದು ಹೇಗೆ ಎಂದೆ ಗೌಡರ ತಂದೆ ವೀರನಗೌಡರ ವೀರ ಮತ್ತ ಅಕ್ಕನ ತಂದೆಯ ಹೆಸರು ಚಂದ್ರಶೇಖರ( ಗೌಡರ ಹೆಸರು ಶೇಖರಗೌಡ) ಶೇಖರ ಎರಡು ಸೇರಿಸಿ ಅವರ ನೆನಪಿಗೆ ವೀರಶೇಖರ ಎಂದು ಹೆಸರು ಇಟ್ಟಿದ್ದೇವೆ ಎಂದರು. ಮೂವರು ತಾತಂದಿರ ಹೆಸರು ಸೇರಿಸಿ ಇಟ್ಟ ಹೆಸರು ನೋಡಿ ಎರಡು ಮನೆತನಕ್ಕೆ ಗೌರವ ಇರುವುದು ಕಂಡು ಇಷ್ಟವಾಯಿತು. ಆ ಮೊಮ್ಮಕ್ಕಳ ಜೊತೆ ಆಟವಾಡಿ ಸಂತೋಷಪಟ್ಟೆವು.

- Advertisement -

ಅಷ್ಟೊತ್ತಿಗೆ ಸಮಯ ನಾಲ್ಕು‌ ಮೀರಿತ್ತು ಹೊರಡಲು ಅನುವಾದಾಗ ಗೌಡರು ತಮ್ಮ ನಾಲ್ಕು ಕಥಾ ಪುಸ್ತಕ ಕೊಟ್ಟರು. ಅಜ್ಜಿ, ಅಕ್ಕ, ಸೊಸೆ, ಮೊಮ್ಮಕ್ಕಳಿಗೆ ವಿದಾಯ ಹೇಳಲು ಎಲ್ಲರು ಕಾರಿನ ಬಳಿಗೆ ಬಂದು ನಮ್ಮ ಮನೆಯವರಂತೆ ಬೀಳ್ಕೊಟ್ಟರು.ಬರಿ ನಾಲ್ಕು ತಾಸಿನಲ್ಲಿಬಂಧುಗಳಂತೆ ಅವರು ತೋರಿದ ಪ್ರೀತಿ‌ ಎಂದಿಗೂ
ಮರೆಯಲಾರದ್ದು. ಗೌಡರು ಮತ್ತು ಮೊಮ್ಮಗ ಸ್ವರೂಪ ನಮ್ಮ ಜೊತೆ ಕಾರಿನಲ್ಲಿ ಮಗ ಕರೆದುಕೊಂಡು ಬಂದು ಮೆಣೆದಾಳ ಬಸ್ ನಿಲ್ದಾಣಕ್ಕೆ ಬಿಟ್ಟರು‌ .ಬಸ್ ಬರುವವರೆಗೆ ಇದ್ದು ಬಸ್ಸತ್ತಿಸಿ ಕಳಿಸಿದರು. ಹೀಗೆ ಒಂದು ದಿನ ಸಂತೋಷವಾಗಿ ಗೌಡರ ಜೊತೆಗಿದ್ದು ಕಳೆದ ಕಾಲ ಸದಾ ಸ್ಮರಣೀಯ.

ಎನ್.ಶರಣಪ್ಪ ಮೆಟ್ರಿ ಗಂಗಾವತಿ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಜಗಳವಾಡುವುದೊಂದು ಸುಗುಣವೆಂದೆನಬೇಡ ಲಾಭವಿಲ್ಲದರಿಂದ ನಷ್ಟವುಂಟು ಮನದ ನೆಮ್ಮದಿ ಕೆಡಿಸಿ ನರಕಯಾತನೆ ಕೊಡುವ ಜಗಳವನೆ ಕಡೆಗಣಿಸು‌- ಎಮ್ಮೆತಮ್ಮ ಶಬ್ಧಾರ್ಥ ಸುಗುಣ‌ = ಒಳ್ಳೆಯ ಗುಣ. ನೆಮ್ಮದಿ‌ = ಸಮಾಧಾನ ತಾತ್ಪರ್ಯ ಬೇರೆಯವರೊಂದಿಗೆ ಗುದ್ದಾಡುವುದು , ತಂಟೆತಕರಾರು ಮಾಡುವುದು...
- Advertisement -

More Articles Like This

- Advertisement -
close
error: Content is protected !!
Join WhatsApp Group