ಮೂಡಲಗಿ – ಮೂಡಲಗಿಯಿಂದ ಧರ್ಮಟ್ಟಿಗೆ ಹೋಗುವ ದಾರಿಯಲ್ಲಿರುವ ಧರ್ಮಟ್ಟಿ ಹಳ್ಳದ ಸೇತುವೆ ಹಾಗೂ ಅದರ ರಸ್ತೆಯ ತೀರಾ ಹದಗೆಟ್ಟಿದ್ದು ಇದು ಯಾವಾಗ ರಿಪೇರಿ ಕಾಣುತ್ತದೆಯೆಂದು ಸಾರ್ವಜನಿಕರು ಕೇಳುವಂತಾಗಿದೆ.
ಮೂಡಲಗಿಯಿಂದ ಬರುವ ರಸ್ತೆ ಹಾಗೂ ಹಳ್ಳ ದಾಟಿದ ನಂತರದ ರಸ್ತೆ ಡಾಂಬರೀಕರಣವಾಗಿದೆ ಆದರೆ ಈ ಸೇತುವೆಯ ಕಾರ್ಯವನ್ನಷ್ಟೇ ಉಳಿಸಲಾಗಿದೆ. ಸೇತುವೆ ಆಚೆ ಈಚೆ ತಗ್ಗು ದಿನ್ನೆಗಳು ಏರ್ಪಟ್ಟು ವಾಹನ ಸವಾರರು ಪರದಾಡುವಂತಾಗಿದೆ. ಕೆಲವೊಮ್ಮ ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದು ಗಾಯ ಮಾಡಿಕೊಂಡ ಪ್ರಕರಣಗಳೂ ನಡೆದಿವೆ. ಮಳೆಯಾದರಂತೂ ಈ ಸೇತುವೆಯ ಮೇಲೆ ಪ್ರಯಾಣ ನತಕ ಸದೃಶವಾಗುತ್ತದೆ.
ಚುನಾವಣೆಯ ಕಾಲಕ್ಕೆ ಇದೇ ಸೇತುವೆಯ ಮೇಲೆ ಜನ ಸೇವಕರು ತಿರುಗಾಡಿ ಪ್ರಚಾರ ಮಾಡಿದರು. ಯಾರೂ ಇದರ ಬಗ್ಗೆ ಗಮನಕೊಡದೇ ಇರುವುದು ಅತ್ಯಂತ ವಿಷಾದನೀಯ.
ಪ್ರಸಕ್ತ ಧರ್ಮಟ್ಟಿ ರಸ್ತೆಯನ್ನು ಯಾವ ಗುತ್ತಿಗೆದಾರರು ನಿರ್ಮಾಣ ಮಾಡಿದರೋ ಅವರು ಈ ಸೇತುವೆ ನಿರ್ಮಾಣವನ್ನು ಯಾಕೆ ಕೈಬಿಟ್ಟಿದ್ದಾರೆಂಬುದೇ ಪ್ರಶ್ನೆಯಾಗಿದೆ. ರಸ್ತೆಯೆಲ್ಲ ಚೆನ್ನಾಗಿದ್ದು ಸೇತುವೆ ಮಾತ್ರ ಹದಗೆಟ್ಟಿದ್ದು ಅನೇಕ ಪ್ರಶ್ನೆಗಳಿಗೆ ಕಾರಣವಾಗುತ್ತದೆ. ಆದಷ್ಟು ಬೇಗ ಸೇತುವೆ ನಿರ್ಮಾಣವಾಗಬೇಕಾಗಿದೆ. ತಡವಾದರೆ ಈ ಸೇತುವೆ ನಿರ್ಮಾಣದ ವೇಳೆ ಮುಖ್ಯ ರಸ್ತೆ ಹದಗೆಟ್ಟು ಹೋಗಿರಬಹುದಾಗಿದೆ !