ದೀಪಾವಳಿ ಹಬ್ಬದ ಕವನಗಳು

1
5681

ದೀಪಗಳ ಹಬ್ಬ

ಮನದ ಮೂಲೆಯಲ್ಲಿ
ಕವಿದಿದೆ ಕಾರ್ಮೋಡ
ಬದುಕಲ್ಲಿ ಕವಿದಿದೆ
ಅಂಧಕಾರ….

ದೀಪಗಳ ಹಬ್ಬದ
ಬೆಳಕಿನಲ್ಲಿ ನಶಿಸಿಹೋಗಲಿ
ಜಗಕೆ ಅಂಟಿದ ಕರೋನಾ
ಎಂಬ ಪೆಡಂಭೂತ…

ದೀಪಗಳ ಹಬ್ಬದ ಬೆಳಕಿನಲ್ಲಿ
ನಾಡಿನ ಮನೆ-ಮನೆಯ

ಅಂಗಳದಲ್ಲಿ ಪ್ರಜ್ವಲಿಸಲಿ

ಹಣತೆಯ ದೀಪ

ಮನದಲ್ಲಿ ಮೂಡಲಿ
ಹರ್ಷದ ಹೊಂಬೆಳಕು
ಹಣತೆಯ ಹಚ್ಚಿ
ಬೆಳಗಿ ಮನೆಯ ದೀಪ

ಸಂಭ್ರಮದಿ
ಆಚರಿಸೋಣ
ದೀಪಾವಳಿ ಹಬ್ಬ

ತೀರ್ಥಹಳ್ಳಿ ಅನಂತ ಕಲ್ಲಾಪುರ


ದೀಪಾವಳಿ

ಬೆಳಗುತಿದೆ ಹಣತೆ
ದೀಪಾವಳಿ ಪರ್ವದಿ

ಮನೆ ಅಂಗಳ ಮನದಂಗಳದ
ಅಜ್ಞಾನವ ಕಳೆಯುತ
ನಿಸ್ವಾರ್ಥದ ಕಾಂತಿಯಲಿ
ವಿವೇಕದ ಪಥದಲಿ
ನಿಷ್ಕಲ್ಮಷ ಭಾವದಲಿ

ಓತಪ್ರೋತವಾಗಿ
ಬೆಳಗುತಿದೆ ಹೊನ್ನ ಹಣತೆ
ಮೇಲು ಕೀಳುಗಳ ಭೇದವಳಿಸುತ
ಎಲ್ಲರಲಿ ನಗೆ
ಮಧುರತೆಯಲಿ ಚಿಮ್ಮಿಸುತಲಿ

ಬರುತಿಹ ಉಜ್ವಲ ಭವಿತವ್ಯದಿ
ಬೆಳಗುತಿದೆ ಮನಂಗಳದಿ
ಪ್ರೀತಿಯ ಹಣತೆ

ರಾಧಾ ಶಾಮರಾವ