ನಾನು ಬಿ.ಈಡಿ ವ್ಯಾಸಂಗ ಮಾಡುತ್ತಿರುವ ಸಂದರ್ಭ ಮೈಸೂರಿನಲ್ಲಿದ್ದೆ. ರವಿವಾರ ಬಂತೆಂದರೆ ನಮ್ಮ ಸಂಪರ್ಕ ತರಗತಿಗಳಿಗೆ ರಜೆ.ಹೀಗಾಗಿ ರೂಮಿನಲ್ಲಿ ಕುಳಿತುಕೊಳ್ಳುವ ಬದಲು ಎಲ್ಲಿಯಾದರೂ ಪ್ರವಾಸ ಮಾಡುವ ಹವ್ಯಾಸ ನನ್ನದು. ಆಗ ಮೈಸೂರಿನ ನನ್ನ ಮಿತ್ರ ರವಿಶಂಕರ ಅವರನ್ನು ಕೇಳಿದೆ. ಇಲ್ಲಿ ಹತ್ತಿರದಲ್ಲಿ ಉತ್ತಮವಾದ ಸ್ಥಳ ಯಾವುದಾದರೂ ಇದೆಯೇ.? ಎಂದು.ಅವರು ಮೈಸೂರಿನಲ್ಲಿಯೇ ಸಾಕಷ್ಟು ಸ್ಥಳವಿರುವಾಗ ಬೇರೆ ಹೋಗೋದಾ.? ಎಂದರು ಪ್ರಶ್ನಾರ್ಥಕವಾಗಿ. ಆಗ ನಾನು ಅವರಿಗೆ ಹೇಳಿದ್ದು ಮೈಸೂರನ್ನು ಪ್ರತಿನಿತ್ಯವೂ ನೋಡುತ್ತಿರುವೆ.ರವಿವಾರ ಸ್ವಲ್ಪ ಹೊರಗೆ ಅದೂ ಹತ್ತಿರದ ಸ್ಥಳವನ್ನು ನೋಡಬೇಕು ಅದಕ್ಕಾಗಿ ವಿಚಾರಿಸಿದೆ.”ಎಂದಾಗ, ಅವರು ಹೇಳಿದ್ದು ಹಿಮವದ್ ಗೋಪಾಲಸ್ವಾಮಿ ಬೆಟ್ಟ.
ಶನಿವಾರ ಸಂಜೆ ಸುತ್ತಾಡುತ್ತ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ವಿಚಾರಿಸಿದೆ. ಅವರು ನೇರವಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಇರುವುದನ್ನು ತಿಳಿಸಿದರು.ಅದೂ ಬೆಳಗಿನ ಜಾವ ಮೊದಲ ಬಸ್.ಬಹಳ ಸಂತೋಷಗೊಂಡು ನಾನು ಹೊರಡುವ ರವಿವಾರ ಬೆಳಿಗ್ಗೆ ಬೇಗನೇ ಎದ್ದು ನನ್ನ ಪ್ರಾತಃಕಾಲದ ಎಲ್ಲ ಕೆಲಸಗಳನ್ನು ಮುಗಿಸಿ ತಯಾರಾಗಿ ಬಸ್ ನಿಲ್ದಾಣಕ್ಕೆ ಬಂದೆನು.ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಬಸ್ ಬಂದೇ ಬಿಟ್ಟಿತು.ಹೇಳಿಕೊಳ್ಳುವಂತಹ ಜನರಿರಲಿಲ್ಲ. ಅದು ಬೆಳಗಿನ ಜಾವದ ಬಸ್ ಆಗಿರುವ ಕಾರಣ ಗದ್ದಲ ಇರಲಿಲ್ಲ.ಕಿಟಕಿಯ ಬದಿಯ ಸ್ಥಳದಲ್ಲಿ ಕುಳಿತುಕೊಂಡು ಸುತ್ತಮುತ್ತಲಿನ ಪ್ರಕೃತಿ ಆಸ್ವಾದಿಸುತ್ತ ಪ್ರಯಾಣ ಬೆಳೆಸಿದೆ.
ಸುತ್ತಲೂ ಮಂಜು, ಮೋಡ ಮುಸುಕಿದ ವಾತಾವರಣ, ಬಿರುಸಾಗಿ ಬೀಸುತ್ತಿರುವ ಗಾಳಿ, ಎಲ್ಲಿ ನೋಡಿದರೂ ಸುತ್ತಲೆಲ್ಲ ಬೆಟ್ಟದ ಸಾಲು, ಒಂದೆಡೆ ಪುಟ್ಟದಾದ ಕೊಳ. ಹಸಿರು ಮಿಶ್ರಿತ ಕಾಡಿನೆಲ್ಲೆಡೆ ಮೋಡಗಳು ಪರ್ವತದ ಗಿರಿಶಿಖರಗಳನ್ನು ಮುತ್ತುತ್ತಿವೆಯೇನೋ ಎಂಬಂತೆ ಹೊರಟಂತೆ ಕಾಣುವ ಸಮುದ್ರ ಮಟ್ಟದಿಂದ 1440 ಮೀಟರ್ ಎತ್ತರದಲ್ಲಿರುವ ಗೋಪಾಲಸ್ವಾಮಿ ದೇವಾಲಯದ ಪ್ರಕೃತಿ ನೋಟವಿದು.
ಇಂಥ ಸ್ಥಳವನ್ನು ಸಂದರ್ಶಿಸಬೇಕಾದರೆ ನಾವು ಮೈಸೂರಿನಿಂದ ಊಟಿ ಮಾರ್ಗದಲ್ಲಿರುವ ಗುಂಡ್ಲುಪೇಟೆಗೆ ಬಂದು ಅಲ್ಲಿಂದ ಸಾಗುವ ತಿರುವಿನ ರಸ್ತೆಯ ‘ಹಂಗಳ ‘ ಎಂಬ ಗ್ರಾಮದಿಂದ ಬೆಟ್ಟದ ಮೇಲಿರುವ ತಾಣಕ್ಕೆ ತೆರಳಬೇಕು. ಇದು ಭೂಸ್ವರ್ಗವೆನಿಸುವಂಥಹ ತಾಣ. ಇದನ್ನು ಹಿಮವದ್ ಗೋಪಾಲಸ್ವಾಮಿ ಬೆಟ್ಟ ಎಂದು ಕರೆಯುವರು.ಇಲ್ಲಿ ಚಾರಣಿಗರಿಗಾಗಿ ಹಲವಾರು ಕಾಲುದಾರಿಗಳಿವೆ ಹಾಗಂತ ಚಾರಣ ಹೋಗಲು ಕೂಡ ಒಪ್ಪಿಗೆ ಪಡೆಯಬೇಕು.ಈ ಸ್ಥಳಕ್ಕೆ ಹೋಗಲು ಇರುವುದು ಒಂದೇ ಬಸ್ಸು. ಅದು ಬೆಂಗಳೂರಿನಿಂದ ಹೊರಟು ಮೈಸೂರ ಮಾರ್ಗವಾಗಿ ಗುಂಡ್ಲುಪೇಟೆಯ ಮೂಲಕ ಬೆಟ್ಟವನ್ನು ತಲುಪುತ್ತದೆ. ಹೀಗಾಗಿ ಈ ತಾಣಕ್ಕೆ ಬಸ್ ಪ್ರಯಾಣ ಮೂಲಕ ಬರುವವರು ಬೆಂಗಳೂರಿನಿಂದಲೋ, ಮೈಸೂರಿನಿಂದಲೋ, ಅಥವ ಗುಂಡ್ಲುಪೇಟೆಯಿಂದಲೋ ತಲುಪಬೇಕು. ಒಟ್ಟಾರೆ ಒಂದೇ ಬಸ್ ಸಂಪರ್ಕ ಹೊಂದಿರುವ ಈ ತಾಣಕ್ಕೆ ಅದೇ ಬಸ್ ಕೇವಲ ಅರ್ಧ ಗಂಟೆ ನಿಂತು ಮತ್ತೆ ಗುಂಡ್ಲುಪೇಟೆಗೆ ಮರಳಿ ಸಂಜೆ ಮತ್ತೊಮ್ಮೆ ಇದೇ ತಾಣಕ್ಕೆ ಚಲಿಸಿ ಮರಳುವ ಮೂಲಕ ದಿನಕ್ಕೆ ಎರಡು ಸಲ ಬಸ್ ಸಂಪರ್ಕ ಹೊಂದಿದೆ.
ಸ್ವಂತ ವಾಹನ ಇಲ್ಲವೇ ಬಾಡಿಗೆಯ ವಾಹನದ ಮೂಲಕ ಈ ತಾಣಕ್ಕೆ ಬರುವುದು ಸುಲಭ. ಆದರೂ ಕೂಡ ಕಾಡು ಪ್ರಾಣಿಗಳ ಅರಣ್ಯ ವಲಯ ಇದಾಗಿರುವುದರಿಂದ ಬೆಳಿಗ್ಗೆ 8 ರಿಂದ ಸಂಜೆ 4.30 ರ ಅವಧಿಗೆ ಮಾತ್ರ ಇಲ್ಲಿನ ಭೇಟಿಗೆ ಅರಣ್ಯ ಇಲಾಖೆ ಸಮಯ ನಿಗದಿಪಡಿಸಿದ್ದರಿಂದ ‘ಹಂಗಳ’ ಗ್ರಾಮದ ಬಳಿ ಇರುವ ಅರಣ್ಯ ಇಲಾಖೆಯ ಚೆಕ್ ಪೋಸ್ಟಲ್ಲಿ ಅನುಮತಿ ಪಡೆದು ಸಾಗುವುದು ಕಡ್ಡಾಯ.ಬಸ್ ಬೆಟ್ಟದ ತಿರುವಿನಲ್ಲಿ ಸಂಚರಿಸುವಾಗ ಭಯ ಆವರಿಸುವುದು.ಅಷ್ಟು ಕಡಿದಾದ ತಿರುವುಗಳುಳ್ಳ ಎತ್ತರದ ಬೆಟ್ಟದ ಸ್ಥಳವಿದು.ಇಂತಹ ಸ್ಥಳಗಳಿಗೆ ಹೊರಡುವ ದೊಡ್ಡ ವಾಹನಗಳ ಚಾಲಕರು ನಿಪುಣರಿರಬೇಕು ಅಂತಹ ಚಾಲಕ ನಮ್ಮ ಬಸ್ ಚಲಾಯಿಸುತ್ತಿದ್ದ.ನಿಜಕ್ಕೂ ಅವನ ಆ ಕಾರ್ಯಕ್ಷಮತೆ ಕಂಡು ಅವನಿಗೆ ಧನ್ಯವಾದಗಳನ್ನು ಅರ್ಪಿಸಿ ಕೆಳಗಿಳಿದೆನು.ಅಬ್ಬಾ ಎಷ್ಟೊಂದು ಅಂದ ಚಂದದ ಪ್ರಕೃತಿ.ಇದನ್ನು ನೋಡುತ್ತಿದ್ದರೆ ಕಣ್ಣುಗಳೆರಡು ಸಾಲದು ಅಷ್ಟೊಂದು ಭುವಿಗೆ ಮುತ್ತಿಕ್ಕುವ ಮೋಡಗಳ ಮಧ್ಯದಲ್ಲಿ ನಾನು ನಿಂತಂತೆ ಭಾಸವಾಗತೊಡಗಿತು.ಮೈ ಚಳಿಯಿಂದ ಕೈ ಕಾಲು ಗಟ್ಟಿಯಾಗಿ ಮಂಜು ನನ್ನನ್ನು ಮುತ್ತುತ್ತಿತ್ತು. ನಾನು ಬಂದಿದ್ದು ಬೇಸಿಗೆಯಲ್ಲಿ.ಬಹುಶ: ಚಳಿಗಾಲದಲ್ಲಿ ಬಂದರೆ ಇನ್ನೂ ಎಷ್ಟು ಚಳಿ ಮತ್ತು ಇಬ್ಬನಿ ಈ ಸ್ಥಳದಲ್ಲಿ ಇರಬಹುದು ನೀವೇ ಊಹಿಸಿ. ನಮ್ಮ ರಾಜ ಮಹಾರಾಜರು ಇಂತಹ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ದೇವಸ್ಥಾನ ನಿರ್ಮಿಸಿ ಈ ವಾತಾವರಣವನ್ನು ದೈವೀಶಕ್ತಿಯ ಕೇಂದ್ರವಾಗಿ ಮಾಡಿರುವರಲ್ಲ ಮಹಾರಾಜರಿಗೊಂದು ಸಲಾಂ ಹೇಳಲೇಬೇಕು.ನಮ್ಮ ದೇಶದ ಸಂಸ್ಕøತಿ ನಿಂತಿರುವುದೇ ಇಂತಹ ಮಹಾನ್ ಕಾರ್ಯಗಳ ಅಲೆಯಲ್ಲಿ.
ಸುಮಾರು ಕ್ರಿ.ಶ. 1250-1300 ಅವಧಿಯಲ್ಲಿ ಹೊಯ್ಸಳ ಅರಸರ ಪಾಳೆಗಾರ ಮಾಧವ ಢಣನಾಯಕ(ದಂಡನಾಯಕ) ಈ ಪ್ರದೇಶ ಆಳುತ್ತಿದ್ದನು. ಇವನು ಕೃಷ್ಣ ಭಕ್ತ. ಇವನಿಗೆ ಮಕ್ಕಳಾಗಿರಲಿಲ್ಲ. ಒಮ್ಮೆ ಶ್ರೀ ಕೃಷ್ಣ ಪರಮಾತ್ಮ ಇವನ ಕನಸಿನಲ್ಲಿ ಬಂದು “ ನೀನು ನಿನ್ನ ದುಷ್ಟತನವನ್ನು ತ್ಯಜಿಸಿ , ನನ್ನನ್ನು ಭಜಿಸಿದರೆ, ನಿನಗೆ ಸಂತಾನ ಪ್ರಾಪ್ತಿಯಾಗುವುದು” ಎಂದಂತೆ ಭಾಸವಾಗಲು. ಆತ ತನ್ನ ದುಷ್ಟತನ ತ್ಯಜಿಸಿದ್ದಲ್ಲದೇ ಕೃಷ್ಣ ಪರಮಾತ್ಮನ ಆರಾಧನೆ ಮಾಡಿದನು ಆತನ ಆರಾಧನೆ ಹಾಗೂ ಭಕ್ತಿಯಿಂದ ಗಂಡು ಮಗುವಿನ ತಂದೆಯಾದನು. ಆಗ ಆತ ಈ ಸ್ಥಳದಲ್ಲಿ ದೇವಾಲಯ ಕಟ್ಟಿಸಿದನೆಂದು ಹೇಳುವರು. ಇವನ ಮಗನಾದ ಪೆರುಮಾಳ್ ಢಣನಾಯಕ ಈ ದೇವಾಲಯಕ್ಕೆ ಸುತ್ತು ಗೋಡೆಯನ್ನು ಕಟ್ಟಿಸಿ ತಂದೆಯಂತೆ ಇವನೂ ಕೂಡ ಕೃಷ್ಣನ ಆರಾಧಕನಾಗಿ ಬದುಕಿದ.
ಈ ದೇವಾಲಯದ ಸುತ್ತಮುತ್ತ 8 ಕೊಳಗಳಿದ್ದು ಅವುಗಳನ್ನು ಹಂಸತೀರ್ಥ,ಚಕ್ರತೀರ್ಥ,ಗಧಾತೀರ್ಥ,ಪದ್ಮತೀರ್ಥ,ಶಾಙ್ಗತೀರ್ಥ,ವನಮೂಲಕ ತೀರ್ಥ ಎಂಬ ಹೆಸರಿನಿಂದ ಕರೆಯುವರು.ಇನ್ನು ದೇವಾಲಯದ ಒಳಗೆ ಬಂದರೆ ಗರ್ಭಗೃಹದಲ್ಲಿ ವೇಣುಗೋಪಾಲನ ಏಕ ಶಿಲಾ ವಿಗ್ರಹವಿದ್ದು ಈ ಏಕ ಶಿಲಾ ಶಿಲ್ಪದಲ್ಲಿ ಶ್ರೀ ಕೃಷ್ಣ ತ್ರಿಭಂಗಿಯಲ್ಲಿ ನಿಂತಿದ್ದು,ಸುರಹೊನ್ನೆ ವೃಕ್ಷದ ಕೆಳಗೆ ವೃಣುವಾದವನ್ನು ಮಾಡುತ್ತಿರುವ ಹಾಗೂ ಅವನ ಸುತ್ತಲೂ ಗೋವುಗಳು, ರುಕ್ಮಣಿ,ಸತ್ಯಭಾಮ,ಗೋಪಿಕೆಯರು ನಿಂತಿದ್ದು ಕೃಷ್ಣನ ಗೆಳೆಯ ಮಕರಂದನನ್ನು ಕೂಡ
ಕೆತ್ತಲಾಗಿದೆ. ನಿಜಕ್ಕೂ ಕಪ್ಪು ಶಿಲೆಯ ಈ ವಿಗ್ರಹ ಮನಮೋಹಕವಾದುದು. ಈ ಸ್ಥಳದ ಇನ್ನೊಂದು ಇಲ್ಲಿನ ವಿಶೇಷವೆಂದರೆ ವೇಣುಗೋಪಾಲ ಮೂರ್ತಿಯ ಶಿರದ ಮೇಲೆ ಹಾಗೂ ಗರ್ಭಗುಡಿಯ ದ್ವಾರದ ಮೇಲೆ ಸದಾ ಹಿಮವಿರುವುದರಿಂದ ಇಲ್ಲಿ ತಂಪಾದ ವಾತಾವರಣ ಕಂಡುಬರುವುದು.ಹೀಗಾಗಿ ಇದನ್ನು ಹಿಮವದ್ ಗೋಪಾಲಸ್ವಾಮಿ ಎಂದು ಕರೆಯುವರು.ಗಟ್ಟಿ ತಳಪಾಯದ ಒಂದೇ ಸುತ್ತು ಪೌಳಿಯಲ್ಲಿ ನಿಂತ ಈ ದೇಗುಲದಲ್ಲಿ ವಿಶಾಲ ಆವರಣವಿದ್ದು ಮುಖಮಂಟಪದಲ್ಲಿ ದಶಾವತಾರದ ಕೆತ್ತನೆಗಳಿವೆ.ಬಲಿಪೀಠ,ಧ್ವಜಸ್ಥಂಭಗಳು ಎದ್ದು ಕಾಣುತ್ತವೆ.
ಈ ದೇಗುಲದಲ್ಲಿ ಗೋಪಾಲನನ್ನು ದರ್ಶನ ಮಾಡಿ ಹೊರ ಬಂದರೆ ಸಾಕು. ಇಲ್ಲಿನ ಅರ್ಚಕರು ನೀಡುವ ಸಿಹಿ ಪೊಂಗಲ್ ಮತ್ತು ಪುಳಿಯೊಗರೆ ಇಲ್ಲವೇ ಮೊಸರನ್ನ ನಿಜಕ್ಕೂ ಅಮೃತಸಮಾನವಾದುದು.ಇದನ್ನು ಸವಿದು ಹೊರಬಂದರೆ ಆವರಣದಲ್ಲಿ ಗಿಡವೊಂದಕ್ಕೆ ಬಟ್ಟೆಯ ಗಂಟುಗಳು ಕಾಣುವವು ಇವು ಹರಕೆಯ ಗಂಟುಗಳು, ಮಕ್ಕಳಾಗದವರು ತಮಗೆ ಪುತ್ರ ಸಂತಾನಭಾಗ್ಯ ಕರುಣಿಸೆಂದು ಗೋಪಾಲಸ್ವಾಮಿಯಲ್ಲಿ ಕೇಳಿಕೊಂಡು ಗಂಟು ಕಟ್ಟುವರು. ಅದು ಇಷ್ಟಾರ್ಥ ಈಡೇರಿದ ನಂತರ ತಾವು ಏನನ್ನು ಕಾಣಿಕೆಯಾಗಿ ಅಥವ ಅರ್ಚನೆ ಮಾಡಿಸುತ್ತೇವೆ ಎಂದು ಹರಕೆ ಹೊತ್ತಿರುವರೋ ಅದನ್ನು ಮಾಡಿ ನಂತರ ಆ ಗಂಟನ್ನು ಬಿಚ್ಚುವುದು ಹರಕೆಯ ಪದ್ಧತಿ.
ಹಾಗೆಯೇ ದೇವಾಲಯದಿಂದ ಹೊರಬಂದು ಸುತ್ತಲೂ ಕಣ್ಣಾಡಿಸಿದರೆ ಸಾಕು ಅಬ್ಬಾ ಎಂಥ ಮನಮೋಹಕ ದೃಶ್ಯ ಒಂದೆಡೆ ಬೋಳು ಗುಡ್ಡಗಳು ಮತ್ತೊಂದೆಡೆ ಹಸಿರಿನಿಂದ ಮೋಡಗಳು ಮುತ್ತಿಕ್ಕುವ ಪರ್ವತಗಳ ಸಾಲು, ಅಗಾಧವಾದ ಮರಗಳಿಂದ ತುಂಬಿರುವ ದಟ್ಟ ಹಸಿರಿನ ವನ ಅಲ್ಲಲ್ಲಿ ಕಂಡು ಬರುವ ಕೊಳಗಳು ಇವನ್ನೆಲ್ಲ ನೋಡುತ್ತಿದ್ದರೆ ಮನಸ್ಸು ಪ್ರಪುಲ್ಲಿತವಾಗುವುದಲ್ಲದೇ ಈ ದೃಶ್ಯಗಳು ಕಾವ್ಯಾತ್ಮಕವಾಗಿ ಯೋಚಿಸುವಂತೆ ಮಾಡುವುದರಲ್ಲಿ ಯಾವ ಸಂದೇಹವೂ ಇಲ್ಲ. ದೇವಾಲಯಕ್ಕೆ ಕಟ್ಟಿರುವ ಗೋಡೆಯ ಮೇಲೆ ನಿಂತು ಪೋಟೋ ತಗೆಸಿಕೊಳ್ಳಬೇಕೆಂದು ಹೋದರೆ ಸಾಕು ಅಲ್ಲಿ ಜೋರಾಗಿ ಬೀಸುವ ಗಾಳಿ ಎಲ್ಲಿ ನಮ್ಮನ್ನು ಎತ್ತಿಕೊಂಡು ಹೋಗಿಬಿಡುತ್ತದೆಯೋ ಎಂಬಂತೆ ವೇಗವಾಗಿ ಬೀಸುತ್ತಿರುತ್ತದೆ.ಇಂಥಹ ಚೆಲುವಿನ ಖನಿಯನ್ನು ಕಣ್ಣು ತುಂಬಿಕೊಳ್ಳಬೇಕಾದರೆ ನಿಜಕ್ಕೂ ಒಮ್ಮೆಯಾದರೂ ಈ ಬೆಟ್ಟಕ್ಕೆ ಭೇಟಿ ನೀಡಲೇಬೇಕು.
ಅಂದಹಾಗೆ ಈ ಬೆಟ್ಟದ ಸುತ್ತಲೂ ಪರ್ವತಗಳ ಸಾಲನ್ನು ಕಾಣುತ್ತೇವಲ್ಲವೇ ಇವುಗಳು ಕೂಡ ಅಷ್ಟ ಪರ್ವತಗಳೆಂದು ಹೆಸರು ಪಡೆದಿವೆ. ಅಂದರೆ ನೀಲಾದ್ರಿ ಪರ್ವತ, ಹಂಸಾದ್ರಿ ಪರ್ವತ, ತ್ರಯಂಬಕಾದ್ರಿ ಪರ್ವತ, ಮಲ್ಲಿಕಾರ್ಜುನ ಪರ್ವತ, ಪಲ್ಲವಾದ್ರಿ ಪರ್ವತ, ಮಂಗಳಾದ್ರಿ ಪರ್ವತ, ಗರುಡಾದ್ರಿ ಪರ್ವತ, ಶಂಖರಾದ್ರಿ ಪರ್ವತ ಗಿರಿಶಿಖರಗಳು ಇಲ್ಲಿ ವ್ಯಾಪಿಸಿದ್ದು ಇವೆಲ್ಲವುಗಳ ಸಮುಚ್ಚಯವನ್ನು ಕಮಲಾಚಲ ಎಂದು ಕರೆಯುವುದು ವಾಡಿಕೆ.
ಇರುವ ಒಂದೇ ಬಸ್ ಸೌಕರ್ಯದಲ್ಲಿ ಈ ಬೆಟ್ಟಕ್ಕೆ ಬೆಂಗಳೂರಿನಿಂದ ಬರುವವರು ಬೆಳಿಗ್ಗೆ 6 ಗಂಟೆಗೆ ಮೈಸೂರಿನಿಂದ ಇದೇ ಬಸ್ ಹಿಡಿಯಬೇಕೆಂದರೆ ಬೆಳಿಗ್ಗೆ 9 ಗಂಟೆಗೆ ಗುಂಡ್ಲುಪೇಟೆಯಿಂದ ಹೊರಡುವವರು ಇದೇ ಬಸ್ 11 ಗಂಟೆಗೆ ಹಿಡಿಯಬೇಕು. ಯಾವ ಮಾರ್ಗದಲ್ಲಿಯೇ ಬನ್ನಿ ಬೆಂಗಳೂರು-ಗೋಪಾಲಸ್ವಾಮಿ ಬೆಟ್ಟ ಎಂಬ ಬಸ್ ಮಾತ್ರ ನಿಮಗೆ ಲಭ್ಯ, ಈ ಸ್ಥಳ ಬೆಂಗಳೂರಿನಿಂದ 220 ಕಿ.ಮೀ ಮೈಸೂರಿನಿಂದ 75 ಕಿ.ಮೀ ಗುಂಡ್ಲುಪೇಟೆಯಿಂದ 18 ಕಿ.ಮೀ ಹಂಗಳ ಗ್ರಾಮದಿಂದ 8 ಕಿ.ಮೀ ಹೀಗೆ ತಲುಪಬಹುದು. ಜೊತೆಗೆ ಚೆಕ್ ಪೋಸ್ಟನಲ್ಲಿ ಅನುಮತಿ ಪಡೆದುಕೊಂಡೇ ಸಾಗುವುದು ಕಡ್ಡಾಯ.ಖಾಸಗಿ ವಾಹನ ತಂದಿದ್ದಲ್ಲಿ ಹೆಚ್ಚು ಅನುಕೂಲವಾದರೂ ಆನೆ,ಕಾಡೆಮ್ಮೆ,ಹುಲಿಯಂಥಹ ಪ್ರಾಣಿಗಳು ಇಲ್ಲಿ ಹೆಚ್ಚು ಓಡಾಡುವುದರಿಂದ ಜಾಗೃತೆ ಅವಶ್ಯ, ಇನ್ನು ಇಲ್ಲಿ ಯಾವುದೇ ಅಂಗಡಿಗಳಿಲ್ಲ. ತಿನ್ನಲು ತಿನಿಸು ಏನಾದರೂ ಬೇಕಾದಲ್ಲಿ ಮೊದಲೇ ಜೊತೆಗಿರಿಸಿಕೊಂಡು ಹೋಗುವುದು ಒಳ್ಳೆಯದು. ಪ್ರತಿನಿತ್ಯ ಇಲ್ಲಿ ಪೂಜೆಯನ್ನು ಅರ್ಚಕರು ನೆರವೇರಿಸುತ್ತಿದ್ದು. ಅರ್ಚಕರು ನೀಡುವ ಪ್ರಸಾದವೂ ಕೂಡ ರುಚಿಕಟ್ಟಾಗಿರುತ್ತದೆ.
ವರ್ಷದ ಎಲ್ಲಾ ಕಾಲದಲ್ಲೂ ತಂಪಾದ ಹವಾಗುಣ ಹೊಂದಿದ ಇದು ಬಂಡೀಪುರ ಅಭಯಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವುದು. ಮಳೆಗಾಲ ಅಥವ ಚಳಿಗಾಲದಲ್ಲಿ ಇಲ್ಲಿ ಬಂದರಂತೂ ಮುಗಿಯಿತು ಬೆಳಿಗ್ಗೆ 12 ರ ವರೆಗೂ ಹಿಮದಿಂದ ಆವೃತವಾಗಿದೆಯೇನೋ ಎಂಬಷ್ಟು ಮಂಜು, ಚಳಿ, ಜಿಟಿ ಜಿಟಿ ಜಿನುಗುವ ಮಳೆ ಹನಿ. ಅದರಲ್ಲೂ ಜೋರಾಗಿ ಮಳೆ ಸುರಿಯತೊಡಗಿದರಂತೂ ಮುಗಿಯಿತು.ಮೋಡಗಳ ನಡುವೆಯೇ ನಾವಿದ್ದೇವೆನೋ ಎಂಬಂತೆ ಭಾಸವಾಗುತ್ತದೆ. ಹೊದೆದುಕೊಳ್ಳಲು ಬೆಚ್ಚನೆಯ ಹೊದಿಕೆ ಬಟ್ಟೆ ಜೊತೆಗೊಯ್ಯುವುದು ಉತ್ತಮ ಇಲ್ಲವಾದಲ್ಲಿ ಇಲ್ಲಿನ ಕೊರೆವ ಚಳಿಗೆ ಶರೀರವೆಲ್ಲ ಮಂಜಿನ ಗಡ್ಡೆಯಾಗುವ ಅನುಭವ. ಒಟ್ಟಾರೆ ಕರ್ನಾಟಕದ ಮೈಸೂರು ಜಿಲ್ಲೆಯ ವ್ಯಾಪ್ತಿಯ ಈ ತಾಣ ಊಟಿ-ಉದಕಮಂಡಲವನ್ನು ಮೀರಿಸಿದ್ದು ಎಂದರೆ ತಪ್ಪಾಗದು.ನಾನಂತೂ ಸುತ್ತಲೂ ಸಂಚರಿಸಿ ಕಂಡಕ್ಟರ್ ಮತ್ತು ಚಾಲಕನ ಅನುಮತಿ ಪಡೆದು ನಿಸರ್ಗ ಸೌಂದರ್ಯ ದಲ್ಲಿ ವಿಹರಿಸಿ ನನ್ನ ಕ್ಯಾಮೆರಾ ದಲ್ಲಿ ಛಾಯಾಚಿತ್ರ ತಗೆದುಕೊಂಡು ಮತ್ತೆ ಅದೇ ಬಸ್ಸಿನಲ್ಲಿ ಮರಳಿದೆನು.ನಿಜವಾಗಿಯೂ ಇಂತಹ ಸ್ಥಳದಲ್ಲಿ ಚಾಲನೆ ಮಾಡುವ ಚಾಲಕರಿಗೆ ನಾವು ಸದಾಕಾಲವೂ ಚಿರಋಣಿಯಾಗಿರಲೇಬೇಕು.
ವೈ.ಬಿ.ಕಡಕೋಳ
ಶಿಕ್ಷಕರು
ಮಾರುತಿ ಬಡಾವಣೆ, ಸಿಂದೋಗಿ ಕ್ರಾಸ್
ಮುನವಳ್ಳಿ-591117
ತಾಲೂಕಃ ಸವದತ್ತಿ ಜಿಲ್ಲೆಃ ಬೆಳಗಾವಿ
9449518400 8971117442