ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಲ.
ನಾದ ಬಿಂದು ಮಹೇಶ್ವರ ಸ್ಥಲ.
ಕಳೆ ಬೆಳಗು ಪ್ರಸಾದಿಸ್ಥಲ.
ಅರಿವು ನಿರವಯವು ಪ್ರಾಣಲಿಂಗಿಸ್ಥಲ.
ಜ್ಞಾನ ಸುಜ್ಞಾನ ಶರಣಸ್ಥಲ.
ಭಾವವಿಲ್ಲದ ಬಯಲು ಬಯಲಿಲ್ಲದ
ಭಾವ ಅಗಮ್ಯದ ಐಕ್ಯಸ್ಥಲ-
ಇಂತೀ ಷಡುಸ್ಥಲದ ಕೊರಡ ಮೆಟ್ಟಿ ನಿಂದಂಗೆ
ಹೆಸರಿಲ್ಲ ಕುರುಹಿಲ್ಲ ತನಗೆ ತಾನಿಲ್ಲ ಗುಹೇಶ್ವರಾ.
ಅಲ್ಲಮ ಪ್ರಭುದೇವರ ವಚನ
ಸವಸಂ : 2, ವಚನ-1582 ಪುಟ-470.
ಷಟಸ್ಥಲ ಕಲ್ಯಾಣ ಶರಣರು ಕಂಡ ಅಧ್ಯಾತ್ಮ ಸಾಧನೆಯ ಉತ್ತುಂಗ ಶಿಖರ ,ಭಕ್ತ ತನ್ನ ತಾನರಿವ ಮಹಾಸಾಧನೆಯ ರಾಜಮಾರ್ಗ . ಬಸವಣ್ಣನವರು ಕಂಡುಕೊಂಡ ಅರಿವಿನ ಅನುಸಂಧಾನದ ಸಾಧನದ ಸೂತ್ರವೇ ಷಟಸ್ಥಲ . ಅಲ್ಲಮರು ಇಂತಹ ಒಂದು ಸುಂದರ ಸಿದ್ಧಾಂತದ ಸಾರಾಂಶವನ್ನು ತಮ್ಮ ವಚನಗಳಲ್ಲಿ ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ.
ಭಕ್ತ ಸ್ಥಲ ಮಹೇಶ್ವರ ಸ್ಥಲ ಪ್ರಸಾದಿ ಸ್ಥಲ ಪ್ರಾಣಲಿಂಗಿ ಸ್ಥಲ ಶರಣ ಸ್ಥಲ ಐಕ್ಯ ಸ್ಥಲ ಇವು ಶರಣರು ವಿಕಾಸದ ಮಾರ್ಗವನ್ನಾಗಿ ಕಂಡುಕೊಂಡ ವಿವಿಧ ಹಂತಗಳು.
ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಲ.
ಶೂನ್ಯ ಮತ್ತು ಬಯಲು ಶರಣರು ಕಂಡ ಮುಕ್ತಿ ಪಥದ ಪಾರಿಭಾಷಿಕ ಪದಗಳು . ಸೃಷ್ಟಿಯ ರಹಸ್ಯ ಶೋಧನೆಯಲ್ಲಿ ಮನುಷ್ಯನು ಹಲವು ವಿಧವಾದ ಪ್ರಮೆಯಗಳನ್ನು ಕಾಣುತ್ತಾನೆ.
ತರ್ಕ ಆವಿಷ್ಕಾರ ಗ್ರಹಿಕೆ ಲೆಕ್ಕಗಳ ಮೂಲಕ ಸತ್ಯ ಶೋಧನೆಗೆ ಸಿದ್ಧವಾಗುತ್ತಾನೆ . ಅನಂತ ಬಯಲು ಶೂನ್ಯ ಇವುಗಳ ದಾಖಲೆಗೆ ಮುಂದಾಗುತ್ತಾನೆ. ನಿರವಲಯ ನಿರಾಕಾರ ನಿರ್ಗುಣ ತುದಿ ಮೊದಲು ಆದಿ ಅನಾದಿ ಇವುಗಳನ್ನು ವ್ಯಾಖ್ಯಾನಿಸುವ ಪ್ರಯತ್ನ ಭಕ್ತನದು.
ಎಲ್ಲವೂ ಶೂನ್ಯದಿಂದ ಹುಟ್ಟಿದೆ,ನಿರಾಕಾರದಿಂದ ಸಾಕಾರಕ್ಕೆ ಘನೀಕರಣಗೊಂಡ ಸೃಷ್ಟಿಯ ಬಗ್ಗೆ ಅಲ್ಲಮರ ವಿಚಾರ ಬಲು ಸ್ಪಷ್ಟ. ಎಲ್ಲವೂ ಶೂನ್ಯವೆಂದು ತಿಳಿದುಕೊಳ್ಳುವುದೇ ಆದಿ ಅನಾದಿ ಆರಂಭದ ಹಂತ ಅದುವೇ ಪ್ರಾಥಮಿಕ ಜ್ಞಾನವನ್ನು ಹೊಂದುವ ಭಕ್ತ ಸ್ಥಲ ಎಂದಿದ್ದಾರೆ ಅಲ್ಲಮರು.
ನಾದ ಬಿಂದು ಮಹೇಶ್ವರ ಸ್ಥಲ.
ಶೂನ್ಯದಲ್ಲಿ ಬಯಲಿನಲ್ಲಿ ನಡೆದ ಅನೇಕ ವಿಸ್ಮಯ ಬದಲಾವಣೆಯಲ್ಲಿ ಸೂರ್ಯ ಮಂಡಲದಲ್ಲಿ ಸೂರ್ಯನಿಂದ ಸಿಡಿದು ಕೆಲಭಾಗಗಳು ಹೊರ ಬಂದು ಗ್ರಹಗಳಾಗಿ ತಿರುಗ ಹತ್ತಿದವು.
ಸೂರ್ಯನಿಂದ ಸ್ಪೋಟಗೊಂಡು ಸಿಡಿದು ಹೊರಬಂದ ಸಮಯದಲ್ಲಿ ಸೃಷ್ಟಿಯಲ್ಲಿ ಅಗಾಧವಾದ ನಾದವು ಕೇಳಿಸಿತು ಅದುವೇ ಓಂಕಾರ ನಾದವೆಂದು ಹೇಳಲಾಗುತ್ತದೆ .ಇದು ಒಂದು ನಂಬಿಕೆ ನಾದವು ಕ್ರಮೇಣ ತನ್ನ ಅಸ್ತಿತ್ವವನ್ನು ಕಡಿಮೆ ಮಾಡಿಕೊಳ್ಳ ಹತ್ತಿತು. ಬೆಂಕಿ ಉಂಡೆಯಂತಿದ್ದ ಸೂರ್ಯನಿಂದ ಸಿಡಿದು ಬಂದ ಭಾಗವು ಕಾಲಕ್ರಮೇಣ ಘನೀಕರಣಗೊಳ್ಳಹತ್ತಿತು.
ಅದುವೇ ಬಿಂದು ಎನ್ನುತ್ತಾರೆ ಹಿರಿಯರು. ಷಟಸ್ಥಲದಲ್ಲಿ ಹೇಳಬೇಕಾದರೆ ಅದುವೇ ಮಹೇಶ್ವರ ಸ್ಥಲದ ಆರಂಭವೆಂತಾಗುತ್ತದೆ ಎಂದು ಅಲ್ಲಮರು ಅರ್ಥೈಸುತ್ತಾರೆ.
ಕಳೆ ಬೆಳಗು ಪ್ರಸಾದಿಸ್ಥಲ.
ತಾಳೋಷ್ಠ ಸಂಪುಟ ನಾದ ಬಿಂದು ಕಳಾತೀತ- ಇಲ್ಲಿ ಅಲ್ಲಮರು ಜೈವಿಕ ವಿಕಾಸದ ಸೂಕ್ಷ್ಮತೆಯನ್ನು ಅರ್ಥಪೂರ್ಣವಾಗಿ ವೈಚಾರಿಕ ವೈಜ್ಞಾನಿಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ಹೇಳಿದ್ದಾರೆ .ಸೃಷ್ಟಿ ಸ್ಥಿತಿ ಲಯಗಳ ತತ್ವಗಳನ್ನು ನಯವಾಗಿ ವಿವರಿಸುತ್ತಾ ಜೈವಿಕ ವಿಕಸನ ಒಂದು ನಿರಂತರ ಪ್ರಕ್ರಿಯೆ ಎಂದು ಹೇಳಿದ್ದಾರೆ. ಕಳೆ ಅಂದರೆ ಹುಟ್ಟು ಜೀವಜಾಲದ ಉಗಮ ಅಂತ ಅರ್ಥ . ಕೆಲ ಬ್ಯಾಕ್ಟೇರಿಯಾಗಳು ಆಮ್ಲಜನಕವಿಲ್ಲದೆ ಬದುಕುತ್ತವೆ ಅವುಗಳನ್ನು ವಿಜ್ಞಾನ ಪ್ಲಾಸ್ಮಿಡ್ ಎನ್ನುತ್ತದೆ. ಇಂತಹ ಸೂಕ್ಷ್ಮ ಜೀವಿಗಳ ಉಗಮ ವಿಕಾಸವನ್ನು ಅಲ್ಲಮರು ಕಳೆ ಬೆಳಗು ಎಂದಿದ್ದಾರೆ. ಶಬ್ದ ನಾದದಿಂದ ಭೂಮಿ ಘನ ಗೋಳಾಗಿ ಬಿಂದುವೆನಿಸಿಕೊಂಡು.ಆ ಘನ ಗೋಳದ ಮೇಲೆ ಜೈವಿಕ ಕಳೆ ಹುಟ್ಟು ಉಗಮವಾಯಿತು ಅದರ ಬೆಳಗೆ ಪ್ರಸಾದಿ ಸ್ಥಲ. ನಾದ ಬಿಂದು ಕಳಾತೀತ ಎನ್ನುವ ಅಲ್ಲಮರ ವ್ಯಾಖ್ಯಾನಗಳು ಜೈವಿಕ ವಿಕಾಸದ ಸೂಚನೆಯನ್ನು ತೋರಿಸುತ್ತದೆ . ಪ್ರಸನ್ನತೆಯನ್ನು ಪ್ರಸಾದವೆಂದು ಹೇಳಿ ಪ್ರಸಾದ ಪದಾರ್ಥವಲ್ಲ ಎಂಬುವ ಗಟ್ಟಿ ನಿಲುವು ಅಲ್ಲಮರದು.ಪ್ರಸಾದಿ ಸ್ಥಲವು ಸಕಲ ಚರಾಚರ ಜೀವಿಗಳ ಜಂಗಮ ಚೈತನ್ಯದ ಪ್ರತೀಕವಾಗಿದೆ.
ಅರಿವು ನಿರವಯವು ಪ್ರಾಣಲಿಂಗಿಸ್ಥಲ
ಜೈವಿಕ ವಿಕಸನದ ನಂತರ ಕ್ರಮೇಣವಾಗಿ ಅರಿವು ಪ್ರಜ್ಞೆ ಜ್ಞಾನೇಂದ್ರಿಯ ಕ್ರಿಯೆಗಳು ಪ್ರಾಣಿಗಳಲ್ಲಿ ಅದರಲ್ಲೂ ಮನುಷ್ಯನೆಂಬ ಪ್ರಾಣಿಯಲ್ಲಿ ತ್ವರಿತವಾಗಿ ಬೆಳೆಯಹತ್ತಿತು . ಭವಿ ತನ್ನ ಅಜ್ಞಾನ ತೊಡೆದು ಜ್ಞಾನ ಮಾರ್ಗದಲ್ಲಿ ನಡೆಯಲಾರಂಭಿಸುತ್ತಾನೆ .ಅನುಭಾವದ ಹಿನ್ನೆಲೆಯಲ್ಲಿ ತನ್ನ ಅರಿವಿನ ಮೂಲಕ ಸಮಷ್ಟಿಯ ಜೊತೆಗೆ ಅನುಸಂಧಾನ ಮಾಡುವ ಪ್ರಕ್ರಿಯೆಗೆ ತೊಡಗುತ್ತಾನೆ..
ಆ ಅರಿವೇ ಗುರು ನುಡಿಯೇ ಜ್ಯೋತಿರ್ಲಿಂಗ ಸ್ವರವೆಂಬುದ ಪರ ತತ್ವ ತಾಳೋಷ್ಠ ಸಂಪುಟವೆಂಬುದು ನಾದ ಬಿಂದು ಕಳಾತೀತ , ಇಂತಹ ಮಹಾಜ್ಞಾನವನ್ನು ಪಡೆದು ಮಾಡುವಂತೆ ಮಾಡದಂತೆ ಮಾಡಿಯೂ ಮಾಡದಂತೆ ಇದ್ದು ಇಲ್ಲದಂತೆ ಉದಾತ್ತೀಕರಣದ ನಿರವಯ ತತ್ವಕ್ಕೆ ತಲುಪಿದಾಗ ಜ್ಞಾನ ಅರಿವು ಗೌಣವೆನಿಸುತ್ತದೆ ಅಂತಹ ಅರಿವಿನ ಮತ್ತು ನಿರವಯದ ಉನ್ನತ ಸ್ಥಿತಿಯೇ ಪ್ರಾಣಲಿಂಗಿ ಸ್ಥಲ. ಮನುಷ್ಯನ ಉಸುರಿನಲ್ಲಿ ಇಂತಹ ಜ್ಞಾನದ ಅರಿವನ್ನು ಪ್ರತಿಷ್ಟಾಪಿಸಿ ಸ್ಥಾಪಿತ ಅರಿವನ್ನೇ ಜೋತು ಬೀಳದೆ ಆ ಅರಿವಿನ ಇನ್ನೊಂದು ಭಾಗವಾದ ನಿರವಯದ ಅರ್ಥವನ್ನು ತಿಳಿದುಕೊಂಡು ಸಹಜದತ್ತವಾಗಿ ಬದುಕುವುದೇ ಪ್ರಾಣಲಿಂಗಿ ಸ್ಥಲ .
ಜ್ಞಾನ ಸುಜ್ಞಾನ ಶರಣಸ್ಥಲ.
ಅರಿವನ್ನು ತನ್ನ ಪ್ರಾಣಲಿಂಗಿಯಾಗಿಸಿದ ಭಕ್ತನು ಒಬ್ಬ ಪರಿಪೂರ್ಣ ವ್ಯಕ್ತಿಯಾಗುತ್ತಾನೆ . ಭಕ್ತ ಶರಣಾಗುತ್ತಾನೆ ಶರಣನು ತಾನೇ ದೈವ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ .ತನ್ನ ತಾನರಿವಡೆ ತಾನೇ ದೇವಾ ನೋಡ ಗುಹೇಶ್ವರ ಎಂದು ಅಲ್ಲಮರು ಹೇಳಿದಂತೆ. ಅರಿವು ನಿರವಯವನ್ನು ಸಮಾನವಾಗಿ ಕಾಯ್ದುಕೊಂಡು ತನ್ನ ಜೀವನದಲ್ಲಿ ಅಳವಡಿಸುವ ಭಕ್ತನೇ ಶ್ರೇಷ್ಠ ಸಾಧಕ. ಅಂತಹ ಸಾಧನೆಯನ್ನು ಮಾಡುವ ಪರಮೋಚ್ಚ ಸ್ಥಿತಿಯೇ ಶರಣ ಸ್ಥಲ. ಜ್ಞಾನವನ್ನು ಸುಜ್ಞಾನದ ಕಡೆಗೊಯ್ಯುವ ಪಥವು ಶರಣಸ್ಥಲ.
ಭಾವವಿಲ್ಲದ ಬಯಲು ಬಯಲಿಲ್ಲದ ಭಾವ ಅಗಮ್ಯದ ಐಕ್ಯಸ್ಥಲ
ಭಾವವಿದ್ದಾಗ ಅದು ಭವಿಯ ಸೂತಕವೆನಿಸುತ್ತದೆ. ವಿಷಯಾದಿಗಳ ಮಡುವಿನಲ್ಲಿ ಭವಿ ಒದ್ದಾಡುತ್ತಾನೆ. ಕಾಮ ಕ್ರೋಧ ಮೋಹ ಲೋಭ ಮದ ಮತ್ಸರ ಎಂಬ ಸಹಜದತ್ತವಾದ ಮಾನವನ ಅರಿಷಡ್ವರ್ಗಗಳು ಮನುಷ್ಯನ ಸಾಧನೆಗೆ ಕಂಟಕವೆನಿಸುತ್ತವೆ, ಇಂತಹ ವಿಷಯಾದಿ ಪ್ರಾಪಂಚಿಕ ಬೇಕು ಬೇಡಗಳನ್ನು ತೊರೆದು ಭಾವರಹಿತ ಬಯಲಿಗೆ ಹಾತೊರೆದಾಗ ಬದುಕು ಹಸನಾಗುತ್ತದೆ.
ತನ್ನಂತೆ ಪರರು ಎಲ್ಲರನ್ನೂ ಪ್ರೀತಿಸಬೇಕು ಇದು ಅಲ್ಲಮರ ಬಯಕೆ..ಬಯಲಿಲ್ಲದ ಭಾವವು ಒಂದು ಅಗಮ್ಯ ಅನುಭವವು ಇಲ್ಲಿ ಬಯಲನ್ನು ದಾಖಲಿಸುವ ಅಥವಾ ಸ್ಥಾಯಿಗೊಳಿಸುವ ಯತ್ನವನ್ನೂ ಶರಣರು ಅಲ್ಲಗಳೆಯುತ್ತಾರೆ.ಇಂತಹ ಶ್ರೇಷ್ಠ ಅನುಭವ ಅನುಸಂಧಾನದ ಸಂಗಮವೇ ಐಕ್ಯ ಸ್ಥಲ.ಐಕ್ಯ ಎಂದರೆ ಸಾವು ಎಂಬ ತಪ್ಪು ಗ್ರಹಿಕೆಯನ್ನು ಬಿಡಬೇಕು.ಐಕ್ಯ ನಿತ್ಯ ಕಾಯ ಪ್ರಾಣ ಮತ್ತು ಆತ್ಮಗಳ ಸಂಗಮದ ಸಂಕೇತ ನಿರಂತರವಾಗಿ ಐಕ್ಯ ಸ್ಥಳವನ್ನು ಮುಟ್ಟುವ ಸ್ಥಿತಿ.
ಇಂತೀ ಷಡುಸ್ಥಲದ ಕೊರಡ ಮೆಟ್ಟಿ ನಿಂದಂಗೆ ಹೆಸರಿಲ್ಲ ಕುರುಹಿಲ್ಲ ತನಗೆ ತಾನಿಲ್ಲ ಗುಹೇಶ್ವರಾ.
ಅಲ್ಲಮರು ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರು ಅಪ್ರತಿಮ ಕಾಲ ಜ್ಞಾನಿಗಳು ಬಸವಣ್ಣನವರು ಕಂಡುಕೊಂಡ ಷಟಸ್ಥಲಗಳನ್ನು ಅರ್ಥಪೂರ್ಣವಾಗಿ ಸೃಷ್ಟಿ ವ್ಯಕ್ತಿಗಳ ವ್ಯಷ್ಟಿ ಸಮಷ್ಟಿಯ ಮಧ್ಯೆ ಬ್ರಹ್ಮಾಂಡ ಮತ್ತು ಪಿಂಡಾಂಡಗಳ ಮಧ್ಯೆ ವಿಕಸನದ ನೇರ ಸಂಬಂಧ ಸೂತ್ರಗಳನ್ನು ಸಮೀಕರಿಸುವ ಅದ್ಭುತ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ .ಅವಿರಳ ಜ್ಞಾನದ ಷಟ್ಸ್ಥಲಗಳ ಷಡು ಸ್ಥಲದ ಶೋಧನಾ ದರ್ಶನ ಮತ್ತು ಸಂಗಮದ ಅನುಭವವನ್ನು ಅಲ್ಲಮರು ಸಹಜದತ್ತವಾದ ನೈಸರ್ಗಿಕ ಬೆಳವಣಿಗೆಯ ಜೊತೆಗೆ ಭಕ್ತನ ವಿಕಾಸದ ಬೆಳವಣಿಗೆಯನ್ನು ಸುಂದರವಾಗಿ ಈ ವಚನದಲ್ಲಿ ಸಾದರಪಡಿಸಿದ್ದಾರೆ.
ಇಂತಹ ದಿವ್ಯ ಜ್ಞಾನ ಪಡೆದ ಕೊರಡನ್ನು (ಕೊರಡು ಇಲ್ಲಿ ಅಧ್ಯಾತ್ಮ ಸಾಧನೆಗೆ ಅಡತಡೆ ) ಮೆಟ್ಟಿ ನಿಂತ ಸಾಧಕನು ಈ ಪಂಚ ಮಹಾಭೂತದೊಳಗಿನ ಒಂದು ಅಣುವು.
ಅಂತಪ್ಪ ಸಾಧಕನಿಗೆ ಕುರುಹು ಇಲ್ಲ ಹೆಸರಿಲ್ಲ ತನಗೆ ತಾನೇ ಇಲ್ಲ ಎಂದಿದ್ದಾರೆ ಅಲ್ಲಮರು. ಒಂದು ಸೂಕ್ಷ್ಮ ಜೀವಿಯಿಂದ ನಿರ್ಮಾಣಗೊಂಡ ಈ ಜೈವಿಕ ಸಂಕುಲವು ಸಂಸ್ಕಾರಗೊಂಡು ಅರುವಿನ ಹಾರುವನ್ನು ವಿಸ್ತಾರಗೊಳಿಸಿ ತನ್ನ ಹುಟ್ಟಿನ ಮಹತ್ತರ ಗೌಪ್ಯತೆಯನ್ನು ತಿಳಿದ ಮುಕ್ತಿಪಥದ ಸಾಧಕನು ಸಂಕೇತ ಸಂಜ್ಞೆ ಲಾಂಛನಗಳನ್ನು ಮೀರಿದ ಅರುಹುವಿಲ್ಲ ಕುರುಹು ಇಲ್ಲ ತನಗೆ ತಾನಿಲ್ಲ ಎಂಬ ಉದಾತ್ತೀಕರಣದ ಆಶಯವನ್ನು ಅಲ್ಲಮರು ತಿಳಿಸಿದ್ದಾರೆ. ಪರಿಪೂರ್ಣತೆಯು ಶರಣರ ಆಶಯ .ಆ ಸ್ಥಿತಿಯು ಕೂಡ ಸ್ಥಾಯಿ ಭಾವವಾಗಬಾರದೆಂಬ ಬಲವಾದ ಸಿದ್ಧಾಂತವೇ ಶರಣ ಸಿದ್ಧಾಂತವಾಗಿದೆ.
ಡಾ.ಶಶಿಕಾಂತ.ಪಟ್ಟಣ
ತಮ್ಮ ಅಭಿಪ್ರಾಯಕ್ಕೆ ಮುಕ್ತವಾಗಿದೆ.