ಮೂಡಲಗಿ: ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ, ಹಗಲಿರುಳು ಶ್ರಮಪಡಬೇಕಾಗುತ್ತದೆ, ಮಂಜುನಾಥ ಶಿಕ್ಷಣ ಸಂಸ್ಥೆ ಸಾಮಾನ್ಯ ಸಂಸ್ಥೆ ಅಲ್ಲ ದೇಶದ ಶಕ್ತಿಯನ್ನು ಹೆಚ್ಚಿಸುವ ಸೈನಿಕರನ್ನು ತಯಾರಿಸುವ ಶಕ್ತಿ ಕೇಂದ್ರವಾಗಿದೆ ಎಂದು ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಪಟ್ಟಣದ ಮಂಜುನಾಥ ಶಿಕ್ಷಣ ಸಂಸ್ಥೆಯ ಎಲ್.ವಾಯ್,ಅಡಿಹುಡಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮತ್ತು ಮೊಟರ್ ಡ್ರೈವಿಂಗ್ ಶಾಲೆಯ ಸಾಂಸ್ಕೃತಿಕ ಕಲಾ ವೈಭವ2023-24 ಹಾಗೂ 20ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಜಿನಿಯರಗಳನ್ನು ತಯಾರು ಮಾಡಿದರೆ ಕಟ್ಟಡಗಳು ಹೆಚ್ಚಾಗುತ್ತವೆ, ಎಂ.ಬಿ.ಎ ವಿದ್ಯಾರ್ಥಿ ತಯಾರಾದರೆ ವ್ಯಾಪಾರ ಹೆಚ್ಚಾಗುತ್ತವೆ ಆದರೆ ಸೈನಿಕ ತಯಾರಾದರೆ ನಾವು ನೀವು ನೆಮ್ಮದಿಯಿಂದ ಇರಲು ಸಾಧ್ಯ, ದೇಶದ ಜನತೆ ನೆಮ್ಮದಿಯ ಜೀವನ ನಡೆಸುವಂತೆ ಸೈನಿಕರನ್ನು ತಯಾರಿಸುವ ಅಡಿಹುಡಿ ಅವರಿಗೆ ಅಭಿನಂದನೆಗಳು ಎಂದರು
ಗ್ರಾಮೀಣ ಭಾಗದಲ್ಲಿ ಗಡಿ ಕಾಯುವ ದೇಶಾಭಿಮಾನಿಗಳ ಕನಸು ನನಸು ಮಾಡುವ ಅಡಿಹುಡಿ ಶಿಕ್ಷಣ ಸಂಸ್ಥೆಗೆ ಸದಾ ಬೆಂಬಲವಾಗಿ ಜೊತೆಗೆ ಮಾರ್ಗದರ್ಶನ ಮತ್ತು ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಮೂಡಲಗಿಯನ್ನು ರಾಜ್ಯದ ಬೇರೆ ಬೇರೆ ಕಡೆಗೆ ಬೆಳಕಿಗೆ ತಂದಿರುವ ಮಂಜುನಾಥ ಸೈನಿಕ ತರಬೇತಿ ಕೇಂದ್ರ ಎಂದ ಅವರು ಇಲ್ಲಿಯವರೆಗೆ 10800 ಸೈನಿಕರು ಆಯ್ಕೆಯಾಗಿ ಗಡಿ ರಕ್ಷಣೆ ಮಾಡುತ್ತಿರುವ ಶ್ಲಾಘನೀಯ ಕಾರ್ಯ, ಶಿಕ್ಷಕರು ನಾಲ್ಕು ಗೋಡೆಗಳ ಮಧ್ಯೆ ಮಾತ್ರ ಮಕ್ಕಳಿಗೆ ಶಿಕ್ಷಣ ನೀಡದೇ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಳಕಿಗೆ ತರುವಂಥ ವೇದಿಕೆಯಲ್ಲಿ ಅವಕಾಶ ಕಲ್ಪಿಸಿ ಕೊಡುವ ಕೆಲಸ ಮಾಡಬೇಕು. ನನಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸುವುದಕ್ಕೆ ಮೂಡಲಗಿ ಶೈಕ್ಷಣಿಕ ವಲಯದ ಶಿಕ್ಷಕರ ಶ್ರಮ ಮುಖ್ಯವಾಗಿದೆ ಎಂದರು.
ಸಮಾರಂಭದಲ್ಲಿ ತಿಗಡಿಯ ನಿವೃತ್ತ ಸೈನಿಕ ಶಿವಬಸು ಪಾಟೀಲ ಅವರು ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು, ಉತ್ತಮ ಶಿಕ್ಷಕರಿಗೆ ಪ್ರಮಾಣ ಪತ್ರ ವಿತರಿಸಿ ಸತ್ಕರಿಸಿ ಗೌರವಿಸಿದರು.
ಸಮಾರಂಭದ ವೇದಿಕೆಯಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ಹಂದಿಗುಂದ, ನ್ಯಾಯವಾದಿ ಕೆಂಪಣ್ಣ ಮಗದುಮ್, ಜಾನಪದ ಗಾಯಕ ಶಬ್ಬಿರ ಡಾಂಗೆ, ಎಮ್.ವಾಯ್.ಮರೆಪ್ಪಗೋಳ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಅಬ್ದುಲ್ ಮಿರ್ಜಾನಾಯ್ಕ, ಸಿದ್ದುಮಹಾರಾಜ ಹಳ್ಳೂರ, ಈಶ್ವರ ಕಂಕಣವಾಡಿ, ಹಣಮಂತ ಕಂಕಣವಾಡಿ, ಹಾಲಪ್ಪ ಅಂತರಗಟ್ಟಿ, ಅಜ್ಜಪ್ಪ ಕಂಕಣವಾಡಿ, ಭೀಮಶಿ ಢವಳೇಶ್ವರ, ಶ್ರೀಶೈಲ್ ಗಾಣಿಗೇರ, ಶಿವಲಿಂಗ ಹಾದಿಮನಿ, ಮಲ್ಲಪ್ಪ ತೇಲಿ, ರಾಜೂ ಪೂಜೇರಿ ಮತ್ತಿತರರು ಇದ್ದರು.
ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಗಾಯಕ ಆಯುಬ್ ಕಲಾರಕೊಪ್ಪ ಪ್ರಾರ್ಥಿಸಿದರು, ಶಶಿಧರ ಆರಾಧ್ಯ ನಿರೂಪಿಸಿದರು, ಸುಭಾಸ ಗೋಡ್ಯಾಗೋಳ ವಂದಿಸಿದರು.