spot_img
spot_img

ಏಪ್ರಿಲ್ 11 ರಿಂದ ಕಾಕೋಳು ವೇಣುಗೋಪಾಲಕೃಷ್ಣನ 91ನೇ ಬ್ರಹ್ಮರಥೋತ್ಸವ

Must Read

- Advertisement -

ಸೋಸಲೇ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರಿಂದ ಉದ್ಘಾಟನೆ

ಬೆಂಗಳೂರಿನ ಹೊರವಲಯದ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಪೌರಾಣಿಕ ಹಿನ್ನೆಲೆಯ ಕಾಕೋಳು ಗ್ರಾಮದಲ್ಲಿ ದಾಸಸಾಹಿತ್ಯ ಆದ್ಯಪ್ರವರ್ತಕ ಶ್ರೀಶ್ರೀಪಾದರಾಜರಿಂದ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚತುರ್ಭುಜ ಶ್ರೀ ವೇಣುಗೋಪಾಲ ಸ್ವಾಮಿಯ ಜಾಗೃತ ಸನ್ನಿಧಾನವಾಗಿ ನಂಬಿ ಬರುವ ಆಸ್ತಿಕ ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ.      

ಮೂಲವಿಗ್ರಹಗಳ ಪುನರ್ ಪ್ರತಿಷ್ಠಾಪನೆಯ ಸಂಸ್ಮರಣಾರ್ಥವಾಗಿ ಆಚರಿಸುವ ಉತ್ಸವವೇ ಬ್ರಹ್ಮರಥೋತ್ಸವ . ಇದೇ ಕ್ರೋಧಿ ಸಂ. ಚೈತ್ರ ಶುದ್ಧ ಪಂಚಮಿ ( ಏಪ್ರಿಲ್ 13 2024ಕ್ಕೆ ). ಶ್ರೀಸ್ವಾಮಿಯವರ ಬ್ರಹ್ಮರಥೋತ್ಸವಕ್ಕೆ 91ನೇ ವಸಂತದ ಸಂಭ್ರಮ.  1933ರಲ್ಲಿ ಆರಂಭಗೊಂಡ ಈ ಪರಂಪರೆ ಇಲ್ಲಿಯವರೆಗೂ ಅವಿಚ್ಛಿನ್ನವಾಗಿ ನಡೆದು ಬಂದಿರುವುದು ಒಂದು ದಾಖಲೆಯೇ ಸರಿ !

- Advertisement -

ಕಾಕೋಳು ಗ್ರಾಮದ ಗ್ರಾಮಸ್ಥರೂ ಸೇರಿದಂತೆ 4 ತಲೆಮಾರಿನ ಭಕ್ತ ಜನರು ಈ ಉತ್ಸವಕ್ಕೆ ಸಾಕ್ಷಿಯಾಗಿ ಹಲವು ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಮುನ್ನಡೆಸುತ್ತಿದ್ದಾರೆ . ಇದೀಗ ಕ್ರೋಧಿ ಸಂ|| ಚೈತ್ರ ಶುದ್ಧ ಪಂಚಮಿ (ಏಪ್ರಿಲ್ 13 2024ಕ್ಕೆ ) ಭಾಗವತಪ್ರಿಯ ಭಕ್ತವತ್ಸಲನ 91ನೇ ವರ್ಷದ ಬ್ರಹ್ಮರಥೋತ್ಸವದ ಸಂಭ್ರಮದ ಆಚರಣೆಯನ್ನು ಕಾಕೋಳು ಗ್ರಾಮಸ್ಥರು,  ಗ್ರಾಮೀಣ ಪ್ರದೇಶದಲ್ಲಿ ಆಧ್ಯಾತ್ಮಿಕತೆಯ ತಳಹದಿಯ ಮೇಲೆ ಅಕ್ಷರ , ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನದ ಸಹಯೋಗ  ಹಾಗು ಸಕಲ ಸದ್ಭಕ್ತರ ಸಹಕಾರದೊಡನೆ ನಾಡಿನ ಧಾರ್ಮಿಕ – ಸಾಂಸ್ಕೃತಿಕ ಕ್ಷೇತ್ರದ ಖ್ಯಾತನಾಮ ಗಣ್ಯರ ಉಪಸ್ಥಿತಿಯಲ್ಲಿ ಆಗಮೋಕ್ತ ರೀತಿಯಲ್ಲಿ ಅರ್ಥಪೂರ್ಣವಾಗಿ ಹಲವು ವಿಶಿಷ್ಟ ಗಾನ-ಜ್ಞಾನ ಯಜ್ಞ – ಉತ್ಸವಗಳಿಂದ ವಿಜೃಂಭಣೆಯಿಂದ ನಡೆಸಲು ಯೋಜಿಸಿದೆ.

ಕಾಕೋಳು ತೇರು – ವೇಣುಗೋಪಾಲನ ವೈಭವದ ಮೇರು! 

ಏ 11 ರಿಂದ 14ರವರೆಗೆ  ದೇವಾಲಯದ ಆವರಣದ ಪಾಂಚಜನ್ಯ ಸಭಾಂಗಣದ ಹರಿತಸ ವೇದಿಕೆಯಲ್ಲಿ ನಡೆಯುವ ವೈವಿಧ್ಯಮಯ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳು

- Advertisement -

ಏ 11 ಗುರುವಾರ ಬೆಳಿಗ್ಗೆ 7.30ಕ್ಕೆ ದೇವಾಲಯದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶಿಲಾಮಯ ಸಿಂಹದ್ವಾರದ ಲೋಕಾರ್ಪಣೆ  ಮತ್ತು 91ನೇ ಬ್ರಹ್ಮರಥೋತ್ಸವ ಕಾರ್ಯಕ್ರಮಗಳ ಉದ್ಘಾಟನೆಯನ್ನು  ಸೋಸಲೇ ಶ್ರೀ ವ್ಯಾಸರಾಜ ಮಠದ ಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ನೆರವೇರಿಸುವರು. ನಂತರ ಸುದರ್ಶನ ಹೋಮ ನಡೆಯುವುದು. 

ಸಂಜೆ ದೊಡ್ಡಬಳ್ಳಾಪುರದ ಪಾಂಚರಾತ್ರಾಗಮ ಪ್ರವೀಣ ಡಾ. ಶ್ರೀನಿವಾಸ ರಾಘವನ್ ಮತ್ತು ಮಕ್ಕಳ  ಆಗಮ ಸಾರಥ್ಯದಲ್ಲಿ ಗರುಡ ಧ್ವಜಾರೋಹಣ ಸಂತಾನಾಪೇಕ್ಷಿಗಳಿಗೆ ಗರುಡ ಬುತ್ತಿ , ತೊಟ್ಟಿಲುಪೂಜೆ ಆಯೋಜಿಸಲಾಗಿದೆ. ಬ್ರಹ್ಮರಥೋತ್ಸವದ ಪ್ರಮುಖ ಅಂಗವೇ ಗರುಡಬುತ್ತಿ. ಧ್ವಜಾರೋಹಣದಂದು ನೀಡುವ ಗರುಡದೇವರ ಪ್ರಸಾದವನ್ನು ಸಂತಾನಾಪೇಕ್ಷಿಗಳು ಸೇವಿಸಿ, ತೊಟ್ಟಿಲು ಪೂಜೆ ಮಾಡಿದರೆ ಸಂತಾನಭಾಗ್ಯ ನಿಶ್ಚಿತ ಎನ್ನುವ ನಂಬಿಕೆಯಿದೆ. ಹಾಗಾಗಿ ಇಲ್ಲಿಯ ಕೃಷ್ಣ ಸಂತಾನ ವೇಣುಗೋಪಾಲ ಎಂದೂ ಜನಜನಿತ.

ಏ 12 ಶುಕ್ರವಾರ  ಬೆಳಿಗ್ಗೆ ಗಜೇಂದ್ರ ಮೋಕ್ಷ ಉತ್ಸವ – ಮ|ಶಾ|ಸಂ ವಿದ್ವಾನ್ ಕಲ್ಲಾಪುರ ಪವಮಾನಾಚಾರ್ಯರಿಂದ ಪ್ರವಚನ; ಸಂಜೆ 6.00ಕ್ಕೆ ವೈಭವದ ಪರಮ ಮಂಗಳಕರ ಮಹಾಕಲ್ಯಾಣೋತ್ಸವ  ಏರ್ಪಡಿಸಲಾಗಿದೆ. 

ಏ 13 ಶನಿವಾರ  ಬೆಳಿಗ್ಗೆ  ಗರುಡೋತ್ಸವ , ಶೇಷವಾಹನದಲ್ಲಿ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀಕೃಷ್ಣನ ಉತ್ಸವಮೂರ್ತಿಯ ಮಂಟಪ್ಪಡಿ (ಗ್ರಾಮ ಪ್ರದಕ್ಷಿಣೆ) ಹಾಗೂ  ವ್ಯಾಸ ದಾಸ ಸಾಹಿತ್ಯ ಪಂಥದವರ ಸಮಾಗಮದ ವಿವಿಧ ಭಜನಾ ಮಂಡಳಿಯಿಂದ ನಾಮ ಸಂಕೀರ್ತನೆಯೊಂದಿಗೆ ಅಭಿಜಿನ್ ಮುಹೂರ್ತದಲ್ಲಿ ಪೂರ್ಣಾಹುತಿಯಾಗಿ ದಿವ್ಯ ಪುಷ್ಪಾಲಂಕೃತ ಮಹಾರಥಾರೋಹಣ -91ನೇ ಬ್ರಹ್ಮರಥೋತ್ಸವ, ಅನ್ನ ಸಂತರ್ಪಣೆ ನಡೆಯಲಿದೆ.

ಏ 14 ಭಾನುವಾರ ಬೆಳಿಗ್ಗೆ 10ಕ್ಕೆ  ವಿದುಷಿ ಸಂಧ್ಯಾಶ್ರೀನಾಥ್ ರವರಿಂದ ಗೋಪಿವಲ್ಲಭ ಗಾನಸುಧಾ ದಾಸರ ಪದಗಳ ಗಾಯನ : ನಂತರ ಮ|ಶಾ|ಸಂ ವಿದ್ವಾನ್ ಎಲ್.ಎಸ್.ಬ್ರಹ್ಮಣ್ಯಾಚಾರ್ಯರಿಂದ ಪುಣ್ಯ ಕಥಾ ಸಮಯ – ವಸಂತೋತ್ಸವದೊಡನೆ ಅಷ್ಟಮಿಪ್ರಿಯನ ಅವಿಸ್ಮರಣೀಯ ಉತ್ಸವ  ಸಂಪನ್ನವಾಗಲಿದೆ.

ಈ ಎಲ್ಲಾ ಉತ್ಸವಗಳ ಮಹಾಸರಣಿಯು ಭಕ್ತ ಬಂಧುಗಳ ಭವ ಬಂಧನಕ್ಕೊಂದು ಆಧ್ಯಾತ್ಮಿಕ ಸ್ಪಂದನ ನೀಡಿ. ಇಂದಿನ ಒತ್ತಡಯುತ ಜೀವನಶೈಲಿಯ ಹತಾಶೆ, ಉದ್ವಿಗ್ನತೆ ,ಮಾನಸಿಕ ತೊಳಲಾಟಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾಕೋಳು ದೇವಸ್ಥಾನವು ಅಗಾಧ ಕೊಡುಗೆ ನೀಡುತ್ತಿದೆ . ಒಟ್ಟಾರೆ ಈ ದೇಗುಲ ಸಂಕೀರ್ಣ ಕೃಷ್ಣಭಕ್ತಿಗೆ ಪ್ರೇರಕವೆನಿಸುತ್ತದೆ. ಗ್ರಾಮಾಂತರದಲ್ಲಿ ಆಧ್ಯಾತ್ಮಿಕತೆಯನ್ನಾಧರಿಸಿದ ಸಂಘಟನೆ, ಧರ್ಮ ಸಂಸ್ಕೃತಿ ಜಾಗೃತಿಯೇ ಇಲ್ಲಿ ಪರಮಲಕ್ಷ್ಯವಾಗಿದೆ  ಎಂದು ದೇವಸ್ಥಾನ ವಿಶ್ವಸ್ಥ ಮಂಡಲಿಯವರು ತಿಳಿಸಿರುತ್ತಾರೆ. ಸಂಪರ್ಕಕ್ಕೆ – 97393 69621/98450 75250

ದೇಗುಲದ ಕಿರು ಪರಿಚಯ: ಬೃಂದಾವನದಲಿ ನಲಿಯುವ ಕೃಷ್ಣ

ಅಲ್ಲೊಂದು ತುಳಸಿ ಬೃಂದಾವನ. ನಡುವೆ ಎಡಗಾಲ ಮೇಲೆ ಬಲಗಾಲನ್ನಿಟ್ಟು ಕೊಳಲನ್ನು ಹಿಡಿದ ಮುರಳಿ, ಇಕ್ಕೆಲಗಳಲ್ಲಿ ವೇಣುಗಾನದಲ್ಲಿ ಭಾವ ಪರವಶವಾಗಿರುವ ಗೋವುಗಳು, ಎದುರಿಗೆ ಕೃಷ್ಣನ ದಿವ್ಯ ಸ್ವರೂಪವನ್ನು ಕಣ್ತುಂಬಿಸಿಕೊಳ್ಳುತ್ತಿರುವ ವೇದವ್ಯಾಸ, ಆಚಾರ್ಯ ಮಧ್ವ, ಶ್ರೀಪಾದರಾಜರು… ಸನಿಹದಲ್ಲಿಯೇ ಕನಕ- ಪುರಂದರದಾಸರು…ಮನದಲ್ಲಿ ನೆಮ್ಮದಿ, ಮಾತಿನಲ್ಲಿ ಸಿದ್ಧಿ, ಮನೆಯಲ್ಲಿ ಸಮೃದ್ಧಿ ಬೇಕೆ?  ಹಾಗಿದ್ದರೆ ಬನ್ನಿ ಇಲ್ಲಿಗೆ ಎಂದು ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತಿದೆ ಈ ತಾಣ. ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಧಾರ್ಮಿಕ ಸೊಗಡಿನ ಚಾರಿತ್ರಿಕ, ಪೌರಾಣಿಕ ನೆಲೆಯೆಂದು ಜನಪ್ರಿಯವಾಗಿದೆ. ಕಾಲಕ್ಕೆ ತಕ್ಕಂತೆ ಕೊಂಚ ಆಧುನಿಕತೆಯ ಲೇಪವಿದ್ದರೂ ಗ್ರಾಮೀಣ ಸಂಸ್ಕೃತಿಯಿಂದ ಬೇರ್ಪಟ್ಟಿಲ್ಲ. ಒಂದು ಊರಿನ ಇತಿಹಾಸವೆಂದರೆ ಅದು ಜನತೆಯ ಇತಿಹಾಸ, ಅವರು ಬಾಳಿ ಬದುಕಿದ ರೀತಿ, ಅನುಸರಿಸಿದ ಧರ್ಮ, ಸಾಂಸ್ಕೃತಿಕ ಸಾಮಾಜಿಕ ಪ್ರಜ್ಞೆ, ಜೀವನ ಮೌಲ್ಯಗಳನ್ನು ಶ್ರೀ ಕ್ಷೇತ್ರ ಕಾಕೋಳಿನಲ್ಲಿ ಕಾಣಬಹುದು.

ಚತುರ್ಭುಜ ವೇಣುಗೋಪಾಲ

ಹೆಸರುಘಟ್ಟ ಕೆರೆ ಸನಿಹದ ಕಾಕೋಳಿನ  ಪ್ರಧಾನ  ಆಕರ್ಷಣೆ ದಾಸಸಾಹಿತ್ಯದ ಆದ್ಯ ಪ್ರವರ್ತಕ ಶ್ರೀ ಶ್ರೀಪಾದರಾಜ ಪ್ರತಿಷ್ಠಿತ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲಸ್ವಾಮಿ ಮತ್ತು ಒಳ ಪ್ರವೇಶಿಸಿದೊಡನೆ ಎದುರು ಕಾಣುವುದೇ ಶೀಘ್ರ ವರಪ್ರದ ಮೋದ ಮಾರುತಿ. ವ್ಯಾಸರಾಜರು ಪ್ರತಿಷ್ಠಾಪನೆ ಮಾಡಿರುವ 732 ಹನುಮನ ವಿಗ್ರಹಗಳಲ್ಲಿ ಒಂದಾದ ಕಂಬದ ಆಂಜನೇಯಸ್ವಾಮಿಯ ದರ್ಶನ ಇಲ್ಲಾಗುತ್ತದೆ. ಈ ಕ್ಷೇತ್ರ ಮೊದಲು ವಿಜಯನಗರ ಅರಸರ ಸಾಮಂತನೊಬ್ಬನ ಆಳ್ವಿಕೆಯಲ್ಲಿತ್ತು. ಆಗ ಇದಕ್ಕೆ ಕಾಕೋಡು, ಕಾಕಾಪುರ, ಮುಂತಾದ ಹೆಸರುಗಳಿದ್ದವು. ಕಾಕೋಡು ಎಂದರೆ ಸುಖ ಸಮೃದ್ಧಿಯಿಂದ ಕೂಡಿದ ಸ್ಥಳವೆಂದರ್ಥ. ರಾಮಾಯಣದ ಕಾಕಾಸುರನು (ಇಂದ್ರನ ಮಗ ಜಯಂತ) ಶಾಪ ವಿಮೋಚನೆಗಾಗಿ ಸ್ನಾನ ಮಾಡಿದ ಕೊಳ ಅದುವೇ `ಕಾಕೋಳು’ ಆಯಿತೆನ್ನುತ್ತದೆ ಸ್ಥಳ ಪುರಾಣ. ಕಾಕೋಳು ಶ್ಯಾನುಭೋಗ್ ನರಸಣ್ಣ ಮತ್ತು ಶೇಷಗಿರಿರಾವ್ ಸಹೋದರರು ತಮ್ಮ ಜೀವನವನ್ನು ರಾಮ ಮತ್ತು ಲಕ್ಷ್ಮಣರಂತೆ ಕಳೆದರು, ಸಹೋದರತ್ವ, ಉದಾತ್ತ ಚಿಂತನೆಗಳು ಮತ್ತು ಸಮಾಜದ ಕಾಳಜಿಯ ಪ್ರತಿರೂಪವಾಗಿದ್ದರು. ಹಿಂದಿನ ಹೆಸರುಘಟ್ಟ ಕೆರೆ ಪ್ರದೇಶದಿಂದ 1900ರ ಸುಮಾರಿನಲ್ಲಿ ಕಾಕೋಳು ಗ್ರಾಮವನ್ನು ಸ್ಥಳಾಂತರಿಸಿದಾಗ,  ಶ್ರೀ ವೇಣುಗೋಪಾಲಸ್ವಾಮಿ ಮತ್ತು ಮುಖ್ಯಪ್ರಾಣದೇವರ ವಿಗ್ರಹಗಳನ್ನು ಈಗಿನ ಕಾಕೋಳು ಗ್ರಾಮಕ್ಕೆ ಸ್ಥಳಾಂತರಿಸಿ ಮತ್ತು ಆರಾಧ್ಯ ದೇವತೆಯಾಗಿ ಪೂಜಿಸಲು ಸಣ್ಣ ದೇವಾಲಯವನ್ನು ನಿರ್ಮಿಸಿದರು. ದೇವಾಲಯದ ಆವರಣದಲ್ಲಿ ಸುಸಜ್ಜಿತವಾದ ಪಾಂಚಜನ್ಯ – ಸುದರ್ಶನವೆಂಬ ಸಭಾಂಗಣಗಳಿವೆ. ಬ್ರಹ್ಮರಥೋತ್ಸವದ ಅಷ್ಟದಶಮಾನೋತ್ಸವದ ಸ್ಮರಣಾರ್ಥ ನಡೆದ ಶ್ರೀ ಕೃಷ್ಣ ಕಲಾದರ್ಶನ ಆರ್ಟ್ ಗ್ಯಾಲರಿ ಕಣ್ತುಂಬಿಕೊಳ್ಳಬಹುದು. 90ನೇ ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರ ‘ಶ್ರೀ ಕೃಷ್ಣಾರ್ಪಣ’ ಸಂಗ್ರಹಯೋಗ್ಯ ಸ್ಮರಣ ಸಂಪುಟವು ಭಾಗವತಪ್ರಿಯನಿಗೊಂದು ಭಕ್ತಿ ನಮನವಾಗಿ ಪ್ರಕಟವಾಗಿದೆ. ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಿಂದ ಕಾಕೋಳು ತಲುಪಲು ಸಾಕಷ್ಟು ಬಸ್ ಸೌಕರ್ಯಗಳಿವೆ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group