ಓ ಆರಕ್ಷಕ…
ಜನಸಮುದಾಯದ ರಕ್ಷಕ..
‘ಕಾನೂನು ಗೌರವಿಸುವವರನ್ನು
ನಾನು ಗೌರವಿಸುತ್ತೇನೆ’
ಎನ್ನುವ ಓ ಆರಕ್ಷಕ
ನಿನ್ನ ಬದುಕೇ ಒಂದು ರೋಚಕ !!
ನಮ್ಮೊಡನೆಯೇ ಜನಿಸಿ,
ಶಿಕ್ಷಣ ಪಡೆದು,ಕೆಲಸ ಗಳಿಸಿ,
ಕಾನೂನು ತರಬೇತಿ ಪಡೆದು,
ಕಾನೂನು ಜಾರಿಗೊಳಿಸುವಾಗ,
ನಿನಗೆಷ್ಟುಅಡ್ಡಿ,ಆತಂಕ,ಒತ್ತಡಗಳ ಸುಳಿ….
ನಾವೆಲ್ಲ ಮನೆಯಲಿ
ನೆಮ್ಮದಿಯಲಿ ನಿದ್ರಿಸಿರುವಾಗ,
ಕಳ್ಳರು,ವಂಚಕರಿಂದ
ಸಮಾಜವನು ರಕ್ಷಿಸುವ
ಮಹೋನ್ನತ ಜವಾಬ್ದಾರಿ ನಿನ್ನದು…
ಮುಷ್ಕರ,ಬಂದ್,ಕೋಮುಗಲಭೆ,ಸಾಂಕ್ರಾಮಿಕ ಕಾಯಿಲೆ
ಯಾವುದೇನೇ ಇರಲಿ,
ಬೆಚ್ಚದೆ,ಬೆದರದೆ,ಮುನ್ನುಗ್ಗಿ,
ಅಶಕ್ತರ ರಕ್ಷಿಸಿ,ಕಾನೂನು ಉಲ್ಲಂಘಿಸಿದವರ
ಬಂಧಿಸುವ ಜವಾಬ್ದಾರಿ ಶ್ಲಾಘನೀಯ…..
ಕಾನೂನು ವಿರೋಧಿಗಳ ಸಂಘರ್ಷದಲಿ
ಹಲವೊಮ್ಮೆ ಪ್ರಾಣತ್ಯಾಗ ಮಾಡುವ ಪುಣ್ಯಾತ್ಮನು ನೀನು,
ತಂದೆ-ತಾಯಿ,ಹೆಂಡತಿ-ಮಕ್ಕಳ ಬಂಧ ಮರೆತು,
ಕಾನೂನೆಂಬ ಹೆದ್ದಾರಿಯಲಿ ಜೀವನವಿಡೀ
ಕಳೆಯುವ ಓ ಆರಕ್ಷಕ ನಿನಗಿದೋ ನಮ್ಮ ಸಲಾಂ…
ನೀನು ಧರಿಸಿರುವ ಖಾಕಿ ಸಮವಸ್ತ್ರದೊಳೊಂದು
ಮಾತೃಹೃದಯವಿದೆ,ಮಾನವೀಯ ಚಿಂತನೆಯಿದೆ,
ಬಡವರ ಕಷ್ಟಗಳಿಗೆ ಮರುಗುವ ಆತ್ಮೀಯತೆಯಿದೆ,
ಅಪರಾಧಿಗಳ ,ವಂಚಕರ ವಿರುದ್ದ ಸಿಡಿದೇಳುವ ಛಾತಿಯಿದೆ…
ಕಾನೂನು ನಿರ್ವಹಣೆಯಲಿ ಜೀವನ ಸವೆಸುವ,
ಸುಖಾಸುಮ್ಮನೆ ರಾಜಕಾರಣಿಗಳ,ಅಧಿಕಾರಸ್ಥರ
ಮಿಥ್ಯಾರೋಪಕ್ಕೆ ಗುರಿಯಾಗುವ ಓ ಆರಕ್ಷಕ,
ನಿನಗೆ ಜನಸಮುದಾಯದ ಶುಭಾಶೀರ್ವಾದವಿದೆ..
ಓ ಆರಕ್ಷಕ,ನೀನೊಬ್ಬ ಕಾನೂನು ಪಂಡಿತ,
ಠಾಣೆಗೆ ಬರುವ ಎಲ್ಲಾ ವಿವಾದಗಳಪರಿಹರಿಸುವ
ಮನಶಾಸ್ತ್ರಜ್ಞ ,ಸಮಾಜಸೇವಕ,ಜನಪರ ಚಿಂತಕ,
ಇಡೀ ಸಮಾಜದ ಒಳಿತಿಗೆ ಶ್ರಮಿಸುವ ಆರಕ್ಷಕ,
ನಿನಗೆ, ನಿನ್ನ ಕುಟುಂಬಕ್ಕೆ ಇಡೀ ಮಾನವ ಸಮುದಾಯದ ಆಶೀರ್ವಾದವಿದೆ..
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368