ದಾದಿಯರು ಬಹುಶಃ ಈ ಪದ ನಮ್ಮ ಜೀವನದಲ್ಲಿ ಹುಟ್ಟಿನಿಂದ ಮರಣದವರೆಗೂ ಬರುತ್ತದೆ.ಕಾರಣ ದಾದಿಯರು ನಮಗೆ ಇನ್ನೊಂದು ತಾಯಿಯ ಹಾಗೆ. ಭೂಮಿಗೆ ಬರಲು ಒಂದು ಮಗು ತಾಯಿಯ ಗರ್ಭದಲ್ಲಿ ಒಂಭತ್ತು ತಿಂಗಳ ಕಾಲ ಇದ್ದು, ಭೂಮಿಗೆ ಬಂದ ತಕ್ಷಣ ದಾದಿಯ ಕೈಯಲ್ಲಿ ಇರುತ್ತದೆ. ಅವರೇ ಸ್ವತಃ ನಮ್ಮ ತಾಯಿಗೆ ಹೇಳುತ್ತಾರೆ.
ಅಮ್ಮ ನಿಮ್ಮ ಮಗು ಜೋಪಾನ ಎಂದು.ಹುಟ್ಟುವ ಮೊದಲು ಅನೇಕ ಬಾರಿ ಈ ದಾದಿಯನ್ನು ಅಮ್ಮ ಭೇಟಿ ಮಾಡಿರುತ್ತಾಳೆ.ನನಗೀಗ ಮೂರು ತಿಂಗಳು, ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಬೇಕು? ಯಾವ ಮಾತ್ರೆ ತೆಗೆದುಕೊಂಡರೆ ಒಳ್ಳೆಯದು? ಯಾವಾಗ ಆಸ್ಪತ್ರೆಗೆ ದಾಖಲಿಸಲಾಗಬೇಕು? ಇತ್ಯಾದಿಯಾಗಿ ಮಾಹಿತಿ ಕೊಡುವವರು ದಾದಿಯರು. ಅಲ್ಲಿಂದ ನಮ್ಮ ಮತ್ತು ದಾದಿಯರ ಒಡನಾಟ ಪ್ರಾರಂಭವಾಗುತ್ತದೆ. ಹುಟ್ಟಿದ ಮೇಲೆ ಯಾವ ಆಹಾರ? ಎಷ್ಟು ಪ್ರಮಾಣದಲ್ಲಿ? ಮಗುವಿನ ಆರೋಗ್ಯ, ತಾಯಿಯ ಆರೋಗ್ಯ ಇವೆಲ್ಲವನ್ನೂ ಲೆಕ್ಕ ಹಾಕುವವಳು ದಾದಿ.
ಇಲ್ಲಿಂದ ನಮ್ಮ ಪಾಲನೆ, ಪೋಷಣೆ ಆರೋಗ್ಯ ರಕ್ಷಣೆ ನೀಡುತ್ತದೆ. ಯಾವ ತಿಂಗಳಲ್ಲಿ ಯಾವ ಚುಚ್ಚುಮದ್ದು ಹಾಕುವುದು? ಒಂದು ಚುಚ್ಚುಮದ್ದಿನಿಂದ ಇನ್ನೊಂದು ಚುಚ್ಚುಮದ್ದಿಗೆ ಎಷ್ಟು ಕಾಲಾವಧಿ? ಹೀಗೆ ಸಾಗುತ್ತದೆ. ಹಾಗಾದರೆ ನಾವು ದಾದಿಯರನ್ನು ಹೇಗೆ ನೋಡಿಕೊಂಡಿದ್ದೇವೆ?ಅವರಿಗೆ ನಮ್ಮ ಗೌರವ ಹೇಗಿದೆ? ಇವುಗಳನ್ನು ನೋಡೋಣ. ಒಂದು ಅರ್ಥದಲ್ಲಿ ದಾದಿ ನಮ್ಮ ಎರಡನೇ ತಾಯಿ ಎಂದು ಕರೆದರೆ ತಪ್ಪಾಗಲಾರದು.
ಇತ್ತೀಚಿನ ದಿನಗಳಲ್ಲಿ ದಾದಿಯರು ನಮ್ಮ ನಡುವೆ ಕೇವಲ ದಾದಿಯರಾಗಿದೆ ಕೊರೊನಾ ವಾರಿಯರ್ ಆಗಿದ್ದು ನಮ್ಮ ಸೌಭಾಗ್ಯ. ಹೌದು ಇಡೀ ವಿಶ್ವವನ್ನು ತಲ್ಲಣಗೊಳಿಸುತ್ತಿರುವ ಮಹಾ ಮಾರಿ ರೋಗ ಕೋವಿಡ್. ಇದು ಇಂದು ವಿಶ್ವವ್ಯಾಪಿ.
ಕೋವಿಡ್ ಪಾಸಿಟಿವ್ ಇರುವ ರೋಗಿ ಹತ್ತಿರ ಇದ್ದರೂ ಈ ರೋಗ ಬರುತ್ತದೆ.ಇಂತಹ ಕಷ್ಟ ಕಾಲದಲ್ಲಿ ಹಗಲು ರಾತ್ರಿ ಎನ್ನದೇ ದುಡಿಯುತ್ತಿರುವ ಒಂದು ಸಮುದಾಯ ಎಂದರೇ ಅದು ದಾದಿಯರು.ಆಸ್ಪತ್ರೆಗೆ ದಾಖಲಾಗುವ ರೋಗಿ ಯಾರು?ಅವನು ಎಲ್ಲಿಂದ ಬಂದ? ಅವನ ರೋಗ ಯಾವುದು? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವ ಏಕೈಕ ಸಮುದಾಯ ದಾದಿಯರು. ಕೋವಿಡ್ ಸಂದರ್ಭದಲ್ಲಿ ಮನೆಯವರು ದೂರ ಇದ್ದರೂ ದಾದಿಯರು ಹತ್ತಿರ ಇರಬೇಕು.
ಕೊರೋನಾ ರೋಗಿ ಸತ್ತ ಹೋದರೆ ಅವನ ಅಂತ್ಯಕ್ರಿಯೆ ಮಾಡಲೂ ಹಿಂದೇಟು ಹಾಕುವುದಿಲ್ಲ.ತಮ್ಮ ಮನೆ,ಮಕ್ಕಳು, ಗಂಡ ಇವರೆಲ್ಲರನ್ನೂ ಬಿಟ್ಟು ಈ ರೋಗದ ವಿರುದ್ಧ ಹೋರಾಡುತ್ತಿದ್ದಾರೆ.ದಾದಿಯರು ತಾವು ಜನ್ಮ ನೀಡಿದ ಮಕ್ಕಳನ್ನು ದೂರದಿಂದ ಗಾಜಿನ ಪರದೆಯ ಮೂಲಕ ವಿಚಾರಿಸುವ ದೃಶ್ಯ ಮನಕಲಕುವಂತೆ ಮಾಡುತ್ತದೆ.
ಯಾವುದೋ ಅನಾಥ ಮಗುವಿನ ತಾಯಿಯಾಗುತ್ತಾರೆ.ಬಂಧನಗಳು ಇಲ್ಲದಿದ್ದ ಸಮಯದಲ್ಲಿ ಸಂಬಂಧ ಬೆಸೆದು ಮಾನವೀಯತೆಯ ಮೌಲ್ಯವನ್ನು ಸಾರುತ್ತಾರೆ.ಮಗು ಹೇಗೆ ಜನನವಾಯಿತು? ಅದೆಲ್ಲವೂ ಬೇಕಿಲ್ಲ. ಆದರೆ ಅದಕ್ಕೊಂದು ತಾಯಿಯ ಸ್ಥಾನ ಮೊದಲು ಕೊಟ್ಟವಳು ದಾದಿ.ಅನಾಥ ಶವಗಳಿಗೆ ಮುಕ್ತಿ ಹೊಂದಲು ತಮ್ಮನ್ನು ತಾವು ಮುಡಿಪಾಗಿಟ್ಟ ಸಮುದಾಯ.ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸದೆ ಸದಾಕಾಲವೂ ಪರರ ಹಿತಕ್ಕಾಗಿ ಸಕ್ರಿಯವಾಗಿ ಹೋರಾಡುತ್ತಿದೆ.
ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು