ಬಹುಶಃ 1997-98 ಇಸವಿ ಇರಬಹುದು. ರಬಕವಿಯ ತರಕಾರಿ ಮಾರ್ಕೆಟ್ ನಲ್ಲಿ ಒಂದು ದಿನ ಅದೆಲ್ಲಿಂದಲೋ ಒಂದು ಕರಿಮುಖದ ಗಂಡು ಮಂಗ್ಯಾ ( ಮುಸ್ಯಾ ) ಠಣ್ಣನೇ ಜಿಗಿಯುತ್ತ ಬಂತು. ಅಲ್ಲಿ ಲೇಂಗರೆ ಉಸ್ಮಾನಸಾಬನ ಸಹೋದರ ಸುಲೇಮಾನ್ ಲೆಂಗರೆ ಅವರದು ಚಹಾ ಅಂಗಡಿ ಇತ್ತು. ಅದರ ಪಕ್ಕದಲ್ಲಿಯೇ ಈ ಧೀಡಿರನೇ ಆಗಮಿಸಿದ ಮಂಗ ಬಂದು ಕುಳಿತು ಕೊಂಡಿತು.
ಮೊದಲ ದಿನ ಅದನ್ನು ಕುತೂಹಲದಿಂದ ಎಲ್ಲರೂ ನೋಡುವವರೇ ಕೂಡಿದ್ದರು. ಅದು ಇನ್ನೊಂದು ಗಂಡು ಮಂಗನ ಜೊತೆಗೆ ಕಾದಾಡಿ ತನ್ನ ಶಕ್ತಿ ಎದುರಾಳಿಯ ಮುಂದೆ ಕುಂಠಿತವಾಗಿದ್ದರಿಂದ , ಅದು ಗಾಯಗೊಂಡು ಕಾಯಿಪಲ್ಯ ಮಾರ್ಕೆಟ್ ನಲ್ಲಿ ಬಂದು ಆಶ್ರಯ ಪಡೆದಿತ್ತು.
ಮೊದಲ ದಿನ ಅದು ಸುಸ್ತಾಗಿ ಒಂದು ಮೂಲೆಯಲ್ಲಿ ಕುಳಿತಿತ್ತು. ಮರುದಿನವೂ ಅದರ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಮಾರ್ಕೆಟ್ಟಿನಲ್ಲಿ ತರಕಾರಿ ಮಾರುವ ಎಲ್ಲರೂ ಅದಕ್ಕೆ ಬಾಳೆಹಣ್ಣು , ಸೇಬು ಹಣ್ಣು ಹೀಗೆ ತಂದು ಸ್ವತಃ ತಮ್ಮ ಕೈಯಿಂದ ಅದರ ಬಾಯಲ್ಲಿ ಕೊಡತೊಡಗಿದರು. ಆದಾಗ್ಯೂ ಅದು ಏನನ್ನೂ ತಿನ್ನದೆ ನಾಲ್ಕನೇ ದಿನ ಮಾರ್ಕೆಟ್ ನ ಕಟ್ಟೆಯ ಮೇಲೆ ಜೀವ ಬಿಟ್ಟಿತು.
ತಮ್ಮ ಮನೆಯಲ್ಲಿಯ ಓರ್ವ ಸದಸ್ಯ ತಮ್ಮಿಂದ ದೂರವಾದವನಂತೆ ಅಲ್ಲಿನ ಎಲ್ಲಾ ವ್ಯಾಪಾರಿಗಳು ದುಃಖಿತರಾದರು.
ಒಂದು ಕಟ್ಟಿಗೆಯ ಕುರ್ಚಿಯ ಮೇಲೆ ಅದನ್ನು ಕೂಡ್ರಿಸಲಾಯಿತು. ಸೇವಂತಿಗೆ ಹೂವಿನ ಮಾಲೆ ಹಾಕಿ , ಗುಲಾಲು ಹಚ್ಚಿ ಶೃಂಗರಿಸಲಾಯಿತು. ಅದನ್ನು ಅಲ್ಲಿಯೇ ಮಾರ್ಕೆಟ್ಟಿನಲ್ಲಿ ಉತ್ತರ ದಿಕ್ಕಿನಲ್ಲಿ ಲಂಡ್ಯಾನ ಹಳ್ಳಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಅದನ್ನು ಹೂಳಲಾಯಿತು.
ನಂತರ ಎರಡು – ಮೂರು ತಿಂಗಳ ನಂತರ ನಾಗಪ್ಪ ಜಿನ್ನಿ ಅಲ್ಲಿ “ಮಾರುತಿ ದೇವಸ್ಥಾನ” ಕಟ್ಟೋಣ ಎಂದು ಎಲ್ಲರ ತಲೆಯಲ್ಲಿ ಬೋರಂಗಿ ಬಿಟ್ಟ. ಕೆಲವರು ಈಗಾಗಲೇ ಊರಲ್ಲಿ ಹಣಮಂತ ದೇವರ ಗುಡಿ ಇದೆ. ಮತ್ತೇ ಅದರ ಸನಿಹದಲ್ಲೇ ಇನ್ನೊಂದು ಗುಡಿ ಬೇಡ ಎಂದರು. ಆದಾಗ್ಯೂ ಯಾರೂ ಅದನ್ನು ಲೆಕ್ಕಿಸದೆ ಅಲ್ಲಿ ಒಂದು ಸಣ್ಣದಾದ ಮಾರುತಿ ಗುಡಿ ಕಟ್ಟಿಯೇ ಬಿಟ್ಟರು.
ಅದರ ಪ್ರಾಣಪ್ರತಿಷ್ಠಾಪನೆಯ ದಿವಸ ಹಂದಿಗುಂದ ಊರಿನ ಸ್ವಾಮಿಗಳು ಉದ್ಘಾಟನೆಗಾಗಿ ಆಗಮಿಸಿದ್ದರು.
ಅವರು ನೆರೆದ ಎಲ್ಲಾ ಜನರಿಗೆ ಉದ್ದೇಶಿಸಿ ಆಶೀರ್ವಚನ ನೀಡಿದರು. ಅವರು ” ನಾನು ಸಾಮಾನ್ಯವಾಗಿ ಯಾವುದೇ ಗುಡಿ ಗುಂಡಾರಗಳ ಉದ್ಘಾಟನೆಗೆ ಹೋಗುವುದಿಲ್ಲ. ದುರ್ಗವ್ವ , ದ್ಯಾಮವ್ವ ಅಂತ ಎಲ್ಲಿಯೂ ಹೋಗುವುದಿಲ್ಲ. ಆದರೆ ಈ ಮಾರ್ಕೆಟ್ ಓಣಿಯ ಜನ ಮೊನ್ನೆ ನನ್ನ ಹತ್ತಿರ ಬಂದು ಹಣಮಂತನ ಗುಡಿ ಕಟ್ಟೇವರ್ರಿ ಅದರ ಉದ್ಘಾಟನಾ ಮಾಡಾಕ್ ನೀವು ಬರಬೇಕರಿ ಅಂದಾಗ , ನಾನು ತಕ್ಷಣ ಒಪ್ಪಿಕೊಂಡು ಬಿಟ್ಟೆ !
ಯಾಕಂದ್ರ ಹಣಮಂತ ಯಾರ ಮೈಯ್ಯಾಗೂ ಬರೂದಿಲ್ಲರೇನ್ರ್ಯಪs , ಅಂವಾ ಒಬ್ಬ ದೇವರು ಯಾರ ಮೈಯಾಗೂ ಬರಾಂಗಿಲ್ಲ. ಒಂದವ್ಯಾಳ್ಳೆ ಅಂವಾ ಏನರs ಮೈಯಾಗ್ ಬಂದ್ ಅಂದ್ರ ನೀವ ಯಾರರೆ ‘ ಈ ಕುಂಬಿ ಮ್ಯಾಲಿಂದ್ ಆ ಕುಂಬಿಮ್ಯಾಲ್ ಜಿಗದ್ ತೋರಸ್ ‘ ಅಂದರಿ ಎಂದ್ರ ಏನ್ ಗತಿ ? ದುರ್ಗವ್ವ , ದ್ಯಾಮವ್ವ ಧಾರಾಳವಾಗಿ ಎಲ್ಲಾರ ಮೈಯಾಗ ಬರ್ತಾವ ! ಇಂವಾ ಒಬ್ಬ ಹಣಮಂತ ಯಾರ ಮೈಯಾಗೂ ಬರೂದಿಲ್ಲ ಅನ್ನು ಸಲುವಾಗಿ ನಾನು ಇದರ ಉದ್ಘಾಟನಾ ಸಮಾರಂಭಕ್ಕ ಬಂದೇನಿ ಎಂದರು.
– ನೀಲಕಂಠ ದಾತಾರ.
ರಬಕವಿ