ಹಾನಗಲ್ – ಹಾನಗಲ್ಲಿನ ಶ್ರೀ ಶಂಕರ ಮಠದಲ್ಲಿ ಇಂದು ಮಹಿಳಾ ದಿವ್ಯ ಜೀವನ ಸಂಘದ ವತಿಯಿಂದ ಗುರು ವಂದನಾ ಕಾರ್ಯಕ್ರಮ ಹಾಗೂ ೧೩೩ ನೇ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಸರಸ್ವತಿ ಮಹಿಳಾ ಮಂಡಲದ ಅಧ್ಯಕ್ಷೆಯಾದ ಹಿರಿಯ ಕವಯಿತ್ರಿ ಶ್ರೀಮತಿ ಪಾರ್ವತಿ ಬಾಯಿ ಕಾಶೀಕರ್ ಮಾತನಾಡಿ, ಶಿಕ್ಷಕ ಒಂದು ಶಕ್ತಿ. ಅದು ಜನ್ಮ ದತ್ತವಾದುದು.ಅದು ಎಲ್ಲರಿಗೂ ಸಲ್ಲುವಂತಹದುದಲ್ಲ.ಗುರು ಈ ಜಗದ ಸೃಷ್ಟಿಕರ್ತನು. ಗುರು ಸಾಕ್ಷಾತ್ ಪರಬ್ರಹ್ಮ. ಗುರುವನ್ನು ಬ್ರಹ್ಮನಿಗೆ ಹೋಲಿಸಿದಾಗ ಇದಕ್ಕಿಂತ ಹೆಚ್ಚಾಗಿ ಏನು ಹೇಳಲು ಸಾಧ್ಯವಿಲ್ಲ ಎಂದು ನುಡಿದರು.
ಹಾನಗಲ್ಲಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ನ್ಯೂ ಕಾಂಪೋಜಿಟ್ ಜೂನಿಯರ್ ಕಾಲೇಜ್ ನ (ಎನ್.ಸಿ.ಜೆ.ಸಿ) ನಿವೃತ್ತ ಶಿಕ್ಷಕಿ ಶ್ರೀಮತಿ ಬನುತಾಯಿ ಚಿನ್ನ ಮುಳಗುಂದ ಸನ್ಮಾನ ಸ್ವೀಕರಿಸಿ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡುತ್ತಾ, ಶಿಕ್ಷಕ ಈ ದೇಶವನ್ನು ಕಟ್ಟುವ ಕೆಲಸ ಮಾಡುತ್ತಾನೆ. ಒಂದು ದೇಶದ ಭವಿಷ್ಯ ನಿರ್ಧಾರ ಮಾಡುವ ಏಕೈಕ ಭವಿಷ್ಯಕಾರ ಶಿಕ್ಷಕ ಎಂದು ಹೇಳಿದರು.
ಒಬ್ಬ ಅಭಿಯಂತರ ತಪ್ಪು ಮಾಡಿದರೆ ಒಂದು ಕಟ್ಟಡ ಹಾಳಾಗುತ್ತದೆ. ಒಬ್ಬ ವೈದ್ಯ ತಪ್ಪು ಮಾಡಿದರೆ ಒಬ್ಬ ರೋಗಿ ಮರಣ ಹೊಂದುತ್ತಾನೆ. ಆದರೆ ಒಬ್ಬ ಶಿಕ್ಷಕ ತಪ್ಪು ಮಾಡಿದರೆ ಒಂದು ದೇಶ ಅಧಃಪತನ ಹೊಂದುತ್ತದೆ ಎಂದು ಹೇಳಿದರು. ಈ ದೇಶ ಕಂಡ ಖ್ಯಾತ ಶಿಕ್ಷಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಇಂದಿನ ಯುವ ಶಿಕ್ಷಕ ಬಂಧುಗಳಿಗೆ ಆದರ್ಶ ಶಿಕ್ಷಕರಾಗಿ ಕಂಡುಬರುತ್ತಾರೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಜಯಶ್ರೀ ದೇಶಪಾಂಡೆ ಅವರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸವಾಣಿಯನ್ನು ತಿಳಿಸಿ ಆ ಮೂಲಕ ಗುರುವಿನ ಮಹತ್ವವನ್ನು ತಿಳಿಸಿದರು. ಗುರು ಎನ್ನುವ ಹೆಸರು ಪಡೆಯಲು ತಪಸ್ಸು ಬೇಕು. ಅದೊಂದು ಅತ್ಯಂತ ಶ್ರೇಷ್ಠ ಸ್ಥಾನ ಎಂದು ತಿಳಿಸಿದರು. ಓರ್ವ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಗಂಗಾ ದೇಶಪಾಂಡೆ ಅವರು ಮಾತನಾಡಿ ಹರ ಮುನಿದರೂ ಗುರು ಕಾಯುವನು ಎಂದು ತಿಳಿಸಿದರು. ಒಮ್ಮೆ ಹರ ಏನಾದರೂ ಒಬ್ಬ ವ್ಯಕ್ತಿಯನ್ನು ಶಿಕ್ಷಿಸಲು ಮುಂದಾದಾಗ ಶಿಕ್ಷಿಸಲ್ಪಟ್ಟ ವ್ಯಕ್ತಿ ತನ್ನ ಗುರುವನ್ನು ನೆನೆದರೆ ಆ ಗುರು ತನ್ನ ಶಿಷ್ಯನನ್ನು ಕಾಪಾಡುವ ಶಕ್ತಿ ಗುರುವಿಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಇದೇ ವಿದ್ಯಾ ಸಂಸ್ಥೆಯ ಮತ್ತೋರ್ವ ನಿವೃತ್ತ ಶಿಕ್ಷಕಿ ಶ್ರೀಮತಿ ಲಲಿತಾ ದೇಸಾಯಿಯವರು ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವೆಂದು ತಿಳಿಸಿದರು. ಶಿಕ್ಷಕ ಸರ್ವಧರ್ಮಗಳನ್ನು ಸಮಾನವಾಗಿ ಕಾಣುವ ಆಶಾ ಕಿರಣ ಎಂದರು.ತಾನು ಕಲಿತ ಎಲ್ಲಾ ವಿದ್ಯೆಯನ್ನು ತನ್ನ ಮಕ್ಕಳಿಗೆ ಧಾರೆ ಎರೆದು ಕೊಡುವ ಧೀಮಂತ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.ಶ್ರೀಮತಿ ದಮಯಂತಿ ದೇಶಪಾಂಡೆ ಪ್ರಾರ್ಥನೆ ಮಾಡುವ ಮೂಲಕ ಪ್ರಾರಂಭಿಸಿದರು. ಶ್ರೀಮತಿ ವಿದ್ಯಾ ಕಾಶೀಕರ್ ಸರ್ವರನ್ನು ಸ್ವಾಗತಿಸಿದರು.ಶ್ರೀಮತಿ ಲಲಿತಾ ಭಟ್ ಕಾರ್ಯಕ್ರಮದ ವಂದನೆಗಳನ್ನು ಅರ್ಪಿಸಿದರು. ಶ್ರೀಮತಿ ವಿದ್ಯಾ ವಿ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು.