ಈಗಾಗಲೇ ‘ಅಂದಗಾತಿ’ ಶೀರ್ಷಿಕೆಯ ಕವನ ಸಂಕಲನವ ಪ್ರಕಟಿಸಿ ಕಾವ್ಯಾಸಕ್ತರ ಕೈಗಿರಿಸಿರುವ ಕನ್ನಡ ಉಪನ್ಯಾಸಕಿ ಶ್ರೀಮತಿ ವಿದ್ಯಾ ರೆಡ್ಡಿಯವರು ನಾನು ನೋಡಿದಂತೆ ಸ್ನೇಹ ಪರ ವ್ಯಕ್ತಿತ್ವವುಳ್ಳವರು. ಸೌಜನ್ಯದ ನಡೆ ನುಡಿಯಿಂದ ಎಲ್ಲರನ್ನೂ ಸುಪ್ರೀತಗೊಳಿಸುವವರು. ಬೇಕಾದ ನೆರವು ನೀಡಿ ಮಾನವೀಯತೆಯನ್ನು ತೋರುವವರು. ದೊಡ್ಡವರಲ್ಲಿ ವಿನಯಾದರಗಳನ್ನು ಹೊಂದಿದ ಅವರ ಸ್ವಭಾವವನ್ನು ನಾನು ತುಂಬ ಮೆಚ್ಚಿ ಕೊoಡಿದ್ದೇನೆ.
ಪ್ರೊ. ವಿದ್ಯಾ ಅವರನ್ನು ನಾನು ಒಂದೆರಡು ಬಾರಿ ನೋಡಿದ್ದರೂ ಮುಖಾ ಮುಖಿಯಾಗಿ ಭೇಟಿ ಮಾಡಿ ಕೆಲ ಹೊತ್ತು ಸ್ವಸ್ಥ ವಾಗಿ ನೆನಪುಳಿಯುವಂತೆ ಸಂಭಾಷಿಸಿದ್ದು ಲೇಖಕಿ ಪುಷ್ಪಾ ಮುರಗೋಡ ಮತ್ತು ಭಾರತಿ ಮದಭಾವಿ ಅವರ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ. ಪ್ರೀತಿ ಗೌರವಗಳಿಂದ ಅನೇಕ ಮಾತುಗಳನ್ನಾಡಿ ಮನಗೆದ್ದ ವಿದ್ಯಾ ಅವರೀಗ ನನ್ನ ಪ್ರೀತಿಯ ಬಳಗದ ಭಾಗವಾಗಿ ಉಳಿದಿದ್ದಾರೆ.
ಮೊನ್ನೆ ಫೋನಾಯಿಸಿ ಮೇಡಂ ನನ್ನ ಪ್ರಥಮ ಕಾದಂಬರಿಯ ಕುರಿತು
ನಿಮ್ಮಂತಹ ವಿದುಷಿಯರ ಅಭಿಪ್ರಾಯ ಬೇಕಿತ್ತು ಎಂದು ವಿನಂತಿಸಿದರು.ಅವರ ವಿನಂತಿಯನ್ನು ಮನ್ನಿಸುವ ಒಂದು ಸಣ್ಣ ಪ್ರಯತ್ನ ಇದು.
ಅತ್ಯಲ್ಪ ಅವಧಿಯಲ್ಲಿ ಬರೆದ ನೂರು ಪುಟ ವ್ಯಾಪ್ತಿಯ ಕಾದಂಬರಿಯಲ್ಲಿ ನಮ್ಮ ಸಮಾಜದ ಎರಡು ಗಂಭೀರ ಸಮಸ್ಯೆಗಳಾದ ಬಡತನ ಮತ್ತು ಸ್ತ್ರೀ ಶೋಷಣೆಯ ಕರಾಳ ಮುಖಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸದ್ದಾರೆ.
ಕೃತಿಯ ಕೇಂದ್ರ ವ್ಯಕ್ತಿ ಶೀಲಾ ಎನ್ನುವ ಹೆಸರಿನ ಸ್ತ್ರೀ ಪಾತ್ರವು ಹೊಟ್ಟೆಯ ಹಸಿವು ಮತ್ತು ಪುರುಷನ ದೈಹಿಕ ಹಸಿವುಗಳ ಆಕ್ರಮಣದ ತೊತ್ತಳ ದುಳಿತಕ್ಕೆ ಒಳಗಾಗಿ ನವೆದು ನಲುಗಿ ಜೀವಪರ ನಿಲುವಿನ ದ್ವಾರಗಳೆಲ್ಲ ಮುಚ್ಚಿ ಬದುಕಿಗೆ ವಿದಾಯ ಹೇಳುವ ರೀತಿ ಮನ ಕಲಕುತ್ತದೆ.
ಶೀಲಾ ಹೆಸರಿನ ಅಮಾಯಕ,ಮುಗ್ಧ ಹೆಣ್ಣು ಮಗಳು,ತನ್ನ ಶೀಲವನ್ನು ಉಳಿಸಿ ಕೊಳ್ಳಲಾಗದ ಅಸಹಾಯಕ ಸ್ಥಿತಿಯು ಮಹಿಳೆಯನ್ನು ಕಾಣುವ ನಮ್ಮ
ಸಮಾಜದ ಅಸಹ್ಯ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ, ವಿದಂಬಿಸಿ ಅಣಕಿಸುತ್ತದೆ.
ಲೇಖಕಿಗೆ ಮಾನವೀಯ ಮೌಲ್ಯಗಳ ಬಗೆಗೆ ಅಪಾರ ಗೌರವ, ಶೀಲಾ ತನ್ನ ರೋಗ ಪೀಡಿತ ತಾಯಿ ತಂದೆಯರ ಆರೈಕೆ ಮಾಡುವ ರೀತಿ, ಮನೆಬಿಟ್ಟು ನಡೆದ ಸೋದರಿಯನ್ನು ಕ್ಷಮಿಸಿ ಅವಳನ್ನು ಪ್ರೀತಿಯಿಂದ ಕಂಡು ಒಳ್ಳೆಯದನ್ನೇ ಹಾರೈಸುವ ಪರಿ,ದುರ್ವ್ಯಸನಕೆ ಬಲಿಯಾದ ಸೋದರ ನನ್ನು ಕರುಣೆಯಿಂದ ಕಂಡು ವ್ಯಸನ ಮುಕ್ತನನ್ನಾಗಿ ಮಾಡಲು ಚಿಂತಿಸುವ ಕ್ರಮ, ಹೆಣ್ತನ ದ ಸಂವೇದನೆಗಳನ್ನು ಪೋಷಿಸಿಕೊಳ್ಳಲು ಹೆಣಗುವ ರೀತಿ ತುಂಬ ಸಹಜವಾಗಿ ಮನಮುಟ್ಟುವಂತೆ ಚಿತ್ರಿಸಿದ್ದುಂತು.
ಭಾರತೀಯ ಗ್ರಾಮೀಣ ಬಡ ಕುಟುಂಬದ ವ್ಯವಸ್ಥೆಯ ಸಮಸ್ಯೆಗಳು ಮಹಿಳೆಯರನ್ನೇ ಬಾಧಿಸುವ ಸ್ಥುಲ ಒಳನೋಟದ ಆಯಾಮಗಳನ್ನು ಲೇಖಕಿ ಅನಾಯಾಸವಾಗಿ ದಾಖಲಿಸಿದ್ದಾರೆ. ನಾಯಕಿ ಶೀಲಾ ತಂದೆಯ ಅನುಚಿತ ಜೀವನ ಕ್ರಮದ ದುಷ್ಪರಿಣಾಮಗಳಿಗೆ ಬಲಿಯಾಗುತ್ತ, ಸಾಹುಕಾರ, ಭಾವ ಭಾಸ್ಕರ, ನಯವಂಚಕ ಮಹೇಶ್, ನಂಬಿಸಿ ಕೈಬಿಟ್ಟ ಶಿವರಾಜ್, ಕೊನೆಗೆ ಹೊಟ್ಟೆಯಿಂದ ಹುಟ್ಟಿದ ಮಗ ವಿಕ್ರಾಂತ್ ಎಲ್ಲರೂ ಪುರುಷತ್ವದ ಭೀಕರ
ಮುಖಗಳೇ. ಬಾಣೆಲೆಯಿಂದ ಬೆಂಕಿಗೆ ಬೀಳುತ್ತ ನಡೆವ ಶೀಲಾ ಈ ಮುಖಗಳನ್ನು ಎದುರಿಸಲಾಗದ ಸ್ಥಿತಿಗೆ ತಲುಪಿದ್ದು,
ಅವಳಿರುವ ಪರಿಸರದಲ್ಲಿ ಎದುರಾಗಿದ್ದುದನ್ನು ಎದುರಿಸಿ ಬದುಕಬೇಕಿತ್ತುರೆಂದು ಯೋಚಿಸುವದೂ
ಕೃತ್ರಿಮವೇ.
ಆದರೂ ಅಸಹಾಯಕ ಹೆಣ್ಣು ಮಗಳೊಬ್ಬಳು ನಿಜ ಜೀವನದಲ್ಲಿಯೇ ಆಗಲಿ,ಸಾಹಿತ್ಯದಲ್ಲಿಯೇ ಆಗಲಿ ದುರಂತ ಕೊನೆಯನ್ನು ಕಾಣುವದು ಕಲ್ಪಿಸಲಾಗದ ನೋವನ್ನುಂಟು ಮಾಡುವುದಂತೂ ನಿಶ್ಚಿತ.
ವಿದ್ಯಾ ರವರ ಮೊದಲ ಯತ್ನ ಯಶಸ್ಸು ಕಂಡು ಅವರೊಬ್ಬ ಭರವಸೆಯ ಕಾದಂಬರಿಗಾರ್ತಿ ಎನ್ನುವುದನ್ನು
ಸಾಬೀತು ಪಡಿಸಿದೆ.
ಡಾ. ಗುರುದೇವಿ ಹುಲೆಪ್ಪನವರಮಠ