spot_img
spot_img

ಕರಾಳ ದಿನ ಆಚರಣೆ; ಎರಡೂ ರಾಜ್ಯಗಳಿಗೆ ಅವಮಾನ

Must Read

spot_img
- Advertisement -

ಇನ್ನೇನು ನವೆಂಬರ್ ಒಂದು ಬರಲಿದೆ. ಕರ್ನಾಟಕದಲ್ಲಿ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸಲು ಸಂಭ್ರಮದಿಂದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದರೆ ಅತ್ತ ಬೆಳಗಾವಿ ನಮ್ಮದೆಂದು ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯು ನ.೧ ರಂದು ಕರಾಳ ದಿನ ಆಚರಿಸುತ್ತದೆ. ಹಲವು ವರ್ಷಗಳಿಂದ ಇಂಥ ಒಂದು ಆಭಾಸವನ್ನು ಎಮ್ಈಎಸ್ ಮಾಡುತ್ತ ಬಂದಿದ್ದು ಈ ವರ್ಷ ಅದು ಕನ್ನಡಿಗರನ್ನು ಕೆರಳಿಸಿದೆ.

ಅದರಲ್ಲೂ ಇತ್ತೀಚೆಗೆ ನಡೆದ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಎಮ್ಈಎಸ್ ಕೇವಲ ಒಂದೇ ಸ್ಥಾನ ಪಡೆದು ಮಣ್ಣು ಮುಕ್ಕಿದ ಮೇಲಂತೂ ಕನ್ನಡಿರಲ್ಲಿ ಉತ್ಸಾಹ ಉಕ್ಕೇರಿದ್ದು ಈ ಸಲ ಕರಾಳ ದಿನ ಆಚರಣೆ ಮಾಡಲು ಶತಾಯಗತಾಯ ಬಿಡಲಾರೆವು ಎಂದು ಕನ್ನಡಿಗರು ವಿರೋಧವನ್ನು ಈಗಿನಿಂದಲೇ ವ್ಯಕ್ತಪಡಿಸಿಕ ಜಿಲ್ಲಾಡಳಿತಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಅದೂ ಅಲ್ಲದೆ ಜಿಲ್ಲಾಡಳಿತ ಕೂಡ ಎಮ್ಈಎಸ್ ಗೆ ಖಡಕ್ ವಾರ್ನಿಂಗ್ ಮಾಡಿದ್ದು ನ.೧ ರಂದು ಕರಾಳ ದಿನಾಚರಣೆ ಬಹುತೇಕ ಮಣ್ಣುಪಾಲಾಗುವ ಎಲ್ಲ ಲಕ್ಷಣಗಳೂ ಇವೆ.

ಅದು ಇರಲಿ. ಒಂದು ರಾಜ್ಯೋತ್ಸವದ ಅರ್ಥ  ಎಮ್ಈಎಸ್ ಮೂಢರಿಗೆ ಅರ್ಥವಿಲ್ಲವೆಂದು ಕಾಣುತ್ತದೆ. ರಾಜ್ಯೋತ್ಸವವೆಂದರೆ ಒಂದು ಸಾರ್ವಭೌಮ ರಾಜ್ಯದ ಉದಯವಾದ ಹಬ್ಬದ ಆಚರಣೆ. ಒಂದು ರೀತಿಯಲ್ಲಿ ದೇಶದ ಸ್ವಾತಂತ್ರ್ಯೋತ್ಸವ ಆಚರಣೆ ಇದ್ದಂತೆ. ಭಾರತ ಸ್ವತಂತ್ರವಾದ  ನಂತರ ರಾಜ್ಯಗಳ ವಿಂಗಡಣೆ ಮಾಡಿಕೊಟ್ಟಾಗ ಕೆಲವು ಭಾಗಗಳು ರಾಜ್ಯಕ್ಕೆ ಸೇರಿ, ಇನ್ನು ಕೆಲವು ಭಾಗಗಳು ಪಕ್ಕದ ರಾಜ್ಯಕ್ಕೆ ಸೇರಿ ಅಖಂಡ ರಾಜ್ಯವೊಂದು ಉದಯವಾಗಿರುವುದನ್ನೇ ರಾಜ್ಯೋತ್ಸವವೆಂದು ಎಲ್ಲಾ ರಾಜ್ಯಗಳು ಆಚರಿಸುತ್ತವೆ.

- Advertisement -

ನಾವು ಕರ್ನಾಟಕದವರು ನ.೧ ರಂದು ಆಚರಿಸಿದರೆ ಮಹಾರಾಷ್ಟ್ರದ ರಾಜ್ಯ ದಿನವನ್ನು ಮೇ. ೧ ರಂದು ಆಚರಿಸುತ್ತಾರೆಂದು ಕೇಳಿದ್ದೇನೆ. ಮಹಾರಾಷ್ಟ್ರದ ಜೊತೆಗೆ ಪಕ್ಕದ ಗುಜರಾತ್ ಕೂಡ ಮೇ ೧ ರಂದು ಗುಜರಾತ್ ದಿನ ಆಚರಿಸಿಕೊಳ್ಳುತ್ತದೆ. ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳ ನಡುವೆ ಮುಂಬೈ ಕುರಿತಂತೆ ವಿವಾದವಿತ್ತು. ಅದು ಈಗ ಬಗೆಹರಿದಿದೆಯೋ ಗೊತ್ತಿಲ್ಲ ಹಾಗಂತ ಗುಜರಾತ್ ರಾಜ್ಯದವರು ಮೇ ೧ ರಂದು ಮಹಾರಾಷ್ಟ್ರದ ವಿರುದ್ಧ ಕರಾಳ ದಿನ ಆಚರಣೆ ಮಾಡಬಹುದೆ ? ಗಡಿ ಹಂಚಿಕೊಳ್ಳುವ ರಾಜ್ಯ ರಾಜ್ಯಗಳಲ್ಲಿ ಗಡಿ ವಿವಾದ ಇರುವುದು ಸಹಜ.

ಅದನ್ನು ದ್ವಿಪಕ್ಷೀಯವಾಗಿ ಮಾತುಕತೆಯ ಮೂಲಕವೋ ಅಥವಾ ನ್ಯಾಯಾಲಯದ ಮೂಲಕವೋ ಪರಿಹರಿಸಿಕೊಳ್ಳಬೇಕು. ಒಂದು ವಿವಾದ ನ್ಯಾಯಾಲಯದ ಮೆಟ್ಟಿಲೇರಿದಾಗ ಅದು ಮುಗಿಯುವತನಕ ಯಥಾಸ್ಥಿತಿ ಕಾಯ್ದುಕೊಳ್ಳುವುದು ಜಾಣತನ ಇದು ಸೌಹಾರ್ದತೆಗೂ ನಾಂದಿಯಾಗುತ್ತದೆ. ಆದರೆ ಈ ಎಮ್ಈಎಸ್ ಎಂಬ ಪುಂಡ ಸಂಸ್ಥೆಯ ಪುಂಡರು ಮಾಡುತ್ತಿರುವುದೇನು ? ನ್ಯಾಯಾಲಯದಲ್ಲಿರುವ ಮಹಾರಾಷ್ಟ್ರ ಕರ್ನಾಟಕದ ಗಡಿ ವಿವಾದವನ್ನು ಮೇಲಿಂದ ಮೇಲೆ ಕೆಣಕುತ್ತಲೇ ಇರುತ್ತದೆ. ಮಾಯುತ್ತಿರುವ ಗಾಯವನ್ನು ಕೆರೆದು ಹುಣ್ಣು ಮಾಡಿಕೊಂಡಂತೆ. ಗಡಿವಿವಾದ ಕೆಣಕುತ್ತ ರಾಜಕೀಯವಾಗಿ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ ( ಈ ಸಲ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬೆಳಗಾವಿ ಜನರೂ ಜಾಣರಾಗಿ ಎಮ್ಈಎಸ್ ಅನ್ನು ತರಗೆಲೆಯಂತೆ ತೂರಿಬಿಟ್ಟರು ಬಿಡಿ !)

ಜನರಿಗೂ ಅರ್ಥವಾಗಿದೆ. ಈ ಗಡಿ ವಿವಾದವನ್ನು ಈ ಎಮ್ಈಎಸ್ ಜೀವಂತವಾಗಿ ಇಡಲು ಬಯಸುತ್ತದೆಯೆಂಬುದು. ಗಡಿ ವಿವಾದ ಇದ್ದರಷ್ಟೇ ಏಕೀಕರಣ ಸಮಿತಿ ಜೀವಂತವಾಗಿರುತ್ತದೆ. ಅದು ಮುಗಿದ ದಿನ ಇದೂ ಇಲ್ಲ. ಅದಕ್ಕಾಗಿ ಶತಾಯಗತಾಯ ಅದು ಪ್ರಯತ್ನ ಮಾಡುತ್ತಲೇ ಇರುತ್ತದೆ.

- Advertisement -

ಆದರೆ ಎಮ್ಈಎಸ್ ನ ಧೋರಣೆ ಸರಿಯಲ್ಲ. ಬೆಳಗಾವಿ ತಮ್ಮದು ಎನ್ನುವ ಈ ನಾಯಕರು ಕರ್ನಾಟಕ ರಾಜ್ಯೋತ್ಸವ ದಿನ ಕರಾಳ ದಿನ ಆಚರಣೆ ಮಾಡಿದರೆ ಬೆಳಗಾವಿ ಸಿಗುತ್ತದೆಯೇ ಎಂಬುದನ್ನು ವಿಚಾರ ಮಾಡಬೇಕು. ಒಂದು ರಾಜ್ಯದ ಹಬ್ಬದ ದಿನವನ್ನು ಕರಾಳ ದಿನವೆಂದು ಆಚರಣೆ ಮಾಡುವವರು ಗಣತಂತ್ರ ವ್ಯವಸ್ಥೆಗೆ ಅವಮಾನ ಮಾಡುತ್ತಾರೆ.

ಇದು ವಿವಾದಿತ ಎರಡೂ ರಾಜ್ಯಗಳಿಗೆ ಅವಮಾನಕರ ಪ್ರಸಂಗ. ಯಾಕೆಂದರೆ ಒಂದು ಒಕ್ಕೂಟದ ವ್ಯವಸ್ಥೆಯಲ್ಲಿ ಇರುವ ರಾಜ್ಯಗಳು ತಮ್ಮ ವಿವಾದಗಳನ್ನು ನ್ಯಾಯಾಂಗದ ಅಡಿ ಬಗೆಹರಿಸಿಕೊಳ್ಳಬೇಕು ಅದು ಬಿಟ್ಟು ಪುಂಡಾಟಿಕೆ ಮಾಡುವುದು, ಕರಾಳ ದಿನ ಆಚರಣೆ ಮಾಡುವುದು ಸಲ್ಲ. ಇದಕ್ಕೆ ಮಹಾರಾಷ್ಟ್ರ ರಾಜ್ಯಕೂಡ ಅನುಮತಿ ನೀಡಲೇಬಾರದು.

ಯಾಕೆಂದರೆ ಮಹಾರಾಷ್ಟ್ರದ ದಿನ ಆಚರಣೆಗೆ ಕನ್ನಡ ಹೋರಾಟಗಾರರಾಗಲಿ, ಕರ್ನಾಟಕ ಸರ್ಕಾರವಾಗಲಿ ಅಡ್ಡಿಪಡಿಸಿಲ್ಲ. ಮೇ ೧ ರಂದು ಕರಾಳ ದಿನವನ್ನೂ ಆಚರಿಸುವುದಿಲ್ಲ. ಆದ್ದರಿಂದ ಮಹಾರಾಷ್ಟ್ರ ವೂ ಕೂಡ ಕರಾಳ ದಿನಕ್ಕೆ ಪ್ರೋತ್ಸಾಹ ನೀಡಬಾರದು. ನೀಡಿದರೆ ಅದು ತನ್ನ ಮರ್ಯಾದೆ ತಾನೇ ತಕ್ಕೊಂಡಂತಾಗುತ್ತದೆ.

ಅಷ್ಟಕ್ಕೂ ಈ ವರ್ಷದ ರಾಜ್ಯೋತ್ಸವದಲ್ಲಿ ಕರಾಳ ದಿನ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಬೆಳಗಾವಿ ಜಿಲ್ಲಾಧಿಕಾರಿಗಳು ಹೇಳಿದ್ದಾರಾದರೂ ಇಂಥ ಪರಿಸ್ಥಿತಿಯೇ ಉದ್ಭವಿಸದಂತೆ ಮೊದಲು ಮಹಾರಾಷ್ಟ್ರ ರಾಜ್ಯ ತನ್ನ ಪ್ರಜೆಗಳಿಗೆ ಬುದ್ಧಿಮಾತು ಹೇಳಬೇಕು.

ಆ ರಾಜ್ಯದ ಬುದ್ಧಿಜೀವಿಗಳು, ಸಾಹಿತಿಗಳು ಕರಾಳ ದಿನದ ಅರ್ಥವನ್ನು ಎಮ್ಈಎಸ್ ಪುಂಡರಿಗೆ ಮನವರಿಕೆ ಮಾಡಿಕೊಡಬೇಕು. ಗಡಿವಿವಾದ ಏನೇ ಇರಲಿ ಒಂದು ರಾಜ್ಯದ ಉತ್ಸವಕ್ಕೆ ಭಂಗ ಬಾರದಂತೆ ನೋಡಿಕೊಳ್ಳಬೇಕಾದದ್ದು ಎಲ್ಲ ಭಾರತೀಯರ ಕರ್ತವ್ಯ. ಇದನ್ನು ಮಹಾರಾಷ್ಟ್ರದ ಜನ ಅರಿತಿರಬೇಕಾಗುತ್ತದೆ.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಸುಭಾಸ ಗೊಡ್ಯಾಗೋಳಗೆ ರಾಜ್ಯ ಯುವ ಪ್ರಶಸ್ತಿ

ಮೂಡಲಗಿ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕೊಡಮಾಡುವ ರಾಜ್ಯ ಯುವ ಪ್ರಶಸ್ತಿಯನ್ನು ಮೂಡಲಗಿ ತಾಲೂಕಿನ ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ...
- Advertisement -

More Articles Like This

- Advertisement -
close
error: Content is protected !!
Join WhatsApp Group