ಲೇಖಕರು : ಡಾ. ಗುರುರಾಜ ಪೋಶೆಟ್ಟಿಹಳ್ಳಿ
ಪ್ರಕಾಶಕರು : ಪ್ರಣವ ಮೀಡಿಯಾ ಹೌಸ್ ಪ್ರಕಾಶನ , ಬೆಂಗಳೂರು – 97393 69621
ಪುಟಗಳು : 184
ಬೆಲೆ : ರೂ 180/-
ಆಕಾರ : ಡೆಮ್ಮಿ 1/8
ಗುರು-ಗುರಿ ಇದ್ದರೆ ಯಶಸ್ಸು ಖಚಿತ
ಪಠ್ಯದಲ್ಲಿನ ವಿಷಯಗಳನ್ನು ಕಲಿಸುವುದರಾಚೆಗೆ ವಿದ್ಯಾರ್ಥಿಗಳನ್ನು ಅವರ ವೈಯಕ್ತಿಕ ಸಾಮರ್ಥ್ಯ ಮತ್ತು ಶಕ್ತಿಗೆ ಅನುಗುಣವಾಗಿ ತಿದ್ದುವ, ಅವರಿಗೆ ಮಾರ್ಗದರ್ಶನ ಮಾಡುವ ಕಾರ್ಯಗಳನ್ನೂ ಗುರುಗಳು ಮಾಡುತ್ತಾರೆ. ಶೈಕ್ಷಣಿಕ ಬದುಕಿನಾಚೆಗೂ ನಮಗೆ ಹಲವಾರು ರೀತಿಯ ಗುರುಗಳು ಸಿಗುತ್ತಾರೆ. ನಮ್ಮ ಬದುಕಿಗೆ ಸುಂದರವಾದ ಚೌಕಟ್ಟು ನೀಡಿದವರು, ಗುರಿ ನೀಡಿದವರೆಲ್ಲರೂ ಶಿಕ್ಷಕರೇ. ಗುರು-ಗುರಿ ಇದ್ದರೆ ಯಶಸ್ಸು ಖಂಡಿತಾ ಎಂಬ ಮಾತಿದೆ. ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರ ನೂತನ ಕೃತಿಯಲ್ಲಿ ಈ ಕುರಿತು ವಿಸ್ತಾರವಾಗಿ ವಿಶ್ಲೇಷಿಸಿದ್ದಾರೆ.
ಹಿಂದಿಯಲ್ಲಿ ಒಂದು ಮಾತಿದೆ ಮಾ (ತಾಯಿ) ಮಹಾತ್ಮ( ತಾಯಿ) ಪರಮಾತ್ಮ( ತಾಯಿ) ಈ ಮೂರು ತಾಯಂದಿರ ಸೇವೆಯೇ ಮೋಕ್ಷಕ್ಕೆ ಹೋಗುವ ದಾರಿ.(ಮಾ) ತಾಯಿ ತನ್ನ ಗರ್ಭದಲ್ಲಿ 270 ದಿನದವರೆಗೆ ನಮ್ಮನ್ನು ಪಾಲಿಸಿ ಪೋಷಿಸಿ ಜಗತ್ತಿನ ಮೊದಲ ಗುರು. ಲೌಕಿಕವಾಗಿ ನಮಗೆ ಒಳ್ಳೆಯ ವಿದ್ಯಾಭ್ಯಾಸ, ಗುರುಹಿರಿಯರಲಿ ಹೇಗೆ ನಡೆದುಕೊಳ್ಳಬೇಕು ಎಂದು ತೋರಿಸುವ ತಾಯಿ-ತಂದೆ ಮೊದಲ ಶೈಕ್ಷಣಿಕ ಗುರುಗಳು. ಅರ್ಥ ಮತ್ತು ಕಾಮದ ( ಹಣ ಗಳಿಸುವುದು ಮತ್ತು ಭೋಗಿಸುವುದು) ವಿದ್ಯೆ ಕಲಿಸುವ ವಿದ್ಯಾನಿಲಯವು ವಿಶ್ವದಲ್ಲಿ ತುಂಬಾ ಇದೆ. ಆದರೆ ಧರ್ಮ ಮತ್ತು ಮೋಕ್ಷದ ಬಗ್ಗೆ ವಿದ್ಯೆ ಕಲಿಸುವ ಏಕೈಕ ವಿದ್ಯಾನಿಲಯ ಎಂದರೆ ಅದುವೇ ಮಹಾತ್ಮರ ವಿದ್ಯಾನಿಲಯ.ಮಹಾತ್ಮ( ತಾಯಿ) ರು. ಅಂದರೆ ಆಧ್ಯಾತ್ಮಿಕ ಗುರು ವರೇಣ್ಯರ ಸೇವೆ. ಗುರುಗಳ ಪಾದೋದಕ ಸೇವಿಸಿ ಅವರು ಕೊಟ್ಟಂತಹ ಮಂತ್ರಾಕ್ಷತೆ ಧರಿಸಿಗುರು ನಾಮಸಂಕೀರ್ತನೆ ಗುರುಚರಿತ್ರೆ ಓದುವುದು ಅವರು ಬರೆದಂತಹ ಗ್ರಂಥಗಳ ಅಧ್ಯಯನ ಮತ್ತು ಭಗವದ್ಗೀತೆ ಪುರಾಣದಂತೆ ಧರ್ಮಗ್ರಂಥಗಳ ಪಠಣ ಮಾಡುವುದು.
ಕೃಷ್ಣ ಪರಮಾತ್ಮನು 11 ಅಧ್ಯಾಯದಲ್ಲಿ ವಿಶ್ವರೂಪ ದರ್ಶನ ಪಡೆಯಲು ವಿಶೇಷವಾದ ಕಣ್ಣನ್ನು ಅರ್ಜುನನಿಗೆ ಪ್ರದಾನ ಮಾಡಿದರು. ಹಾಗೆಯೇ ನಮ್ಮ ಮಹಾತ್ಮರು ಗುರುವರೇಣ್ಯರು ಸಾಕ್ಷಾತ್ ಪರಬ್ರಹ್ಮರು ನಮ್ಮ ಸೇವೆಗೆ ಪ್ರಸನ್ನರಾಗಿ ನಮಗೆ ಆಧ್ಯಾತ್ಮಿಕ ಕಣ್ಣನ್ನು ಪ್ರದಾನ ಮಾಡಿ ಜ್ಞಾನ ಭಕ್ತಿ ವೈರಾಗ್ಯ ಮಾರ್ಗದ ಕಡೆಗೆ ಕರೆದೊಯ್ಯುತಾರೆ.ಹೇಗೆ ನಮ್ಮ ಎರಡು ಕಣ್ಣುಗಳು ನಮ್ಮನ್ನು ಲೌಕಿಕ ಮಾರ್ಗದರ್ಶನ ಮಾಡುತ್ತಾರೆ ಹಾಗೆಯೇ ಮಾ ಮತ್ತು ಮಹಾತ್ಮರು (ಎರಡು ತಾಯಂದಿರು ) ಎರಡು ಕಣ್ಣುಗಳಂತೆ ನಮ್ಮ ಜೀವನದಲ್ಲಿ ನಮಗೆ ಲೌಕಿಕ ಹಾಗೂ ಆಧ್ಯಾತ್ಮಿಕ ಮಾರ್ಗದ ಮಾರ್ಗದರ್ಶನ ಮಾಡುತಿದ್ದರುವ ಈ ಎರಡು ಕಣ್ಣುಗಳು.
ಪರಮಾತ್ಮ (ಜಗತ್ತಿನ ತಾಯಿ )ಜಗತ್ತಿನ ಮೂರನೇ ಕಣ್ಣು ಜಗಜ್ಜನಕ ಜಗದ್ರಕ್ಷಕ ಜಗದೋದ್ಧಾರಕ ಬ್ರಹ್ಮರ ಬ್ರಹ್ಮ ಅತಳ ವಿತಳ ಪಾತಾಳ ತಳಾತಳ ರಾಜ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶ್ರೀಹರಿ ಸರ್ವೋತ್ತಮನಾದ ಪರಮಾತ್ಮನ ಸಂಪ್ರೀತನಾಗಲು ಒಂದೊಂದು ಯುಗದಲ್ಲಿ ಒಂದೊಂದು ಸೇವಾ ಮಾರ್ಗವಿದೆ ಸತ್ಯ ಯುಗದಲ್ಲಿದಲ್ಲಿ ಧ್ಯಾನ,ತ್ರೇತಾಯುಗದಲ್ಲಿ ಯಜ್ಞ, ದ್ವಾಪರಯುಗದಲ್ಲಿ ಮೂರ್ತಿ ಪೂಜೆ ಮತ್ತು ಕಲಿಯುಗದಲ್ಲಿ ಪರಮಾತ್ಮನ ಅತಿಶ್ರೇಷ್ಠ ಸೇವೆಯೆಂದರೆ ಪರಮಾತ್ಮನ ಶ್ರೀ ಹರಿನಾಮಸ್ಮರಣೆ ದಾಸರ ವಾಣಿಯಂತೆ ಹರಿ ಭಜನೆ ಮಾಡೊ ನಿರಂತರ.
ಗುರುವಿನ ಮಹತ್ವ ಗುರೂಪದೇಶಕ್ಕೆ ದೇವತೆಗಳು ಪ್ರಾಶಸ್ತ್ಯ ಕೊಡುವರು: ( ಭಾಗವತ – ದಶಮಸ್ಕಂದ ಅಧ್ಯಾಯ 72 ) ಶ್ರೀಕೃಷ್ಣನು ಗುರೂಪದೇಶಕ್ಕೆ, ಗುರುಗಳಿಗೆ ಕೊಟ್ಟಿರುವ ಮಹತ್ವವನ್ನು ಅನೇಕ ಪುರಾಣಗಳು ಸಮರ್ಥಿಸಿದ ವಾಕ್ಯಗಳನ್ನು ನಾವು ಕಾಣುತ್ತೇವೆ. ಅಜ್ಞಾನಿಗಳು ಮತ್ತು ಅನ್ಯಥಾಜ್ಞಾನಿಗಳು ತೀರ್ಥದೇವತೆಗಳ ಸ್ವರೂಪವನ್ನು ತಿಳಿದಿರುವುದಿಲ್ಲ. ಸರಿಯಾಗಿ ತಿಳಿಯದೆ ತೀರ್ಥದೇವತೆಗಳನ್ನು ಸೇವಿಸಿದಾಗ ಅನ್ಯಥಾಜ್ಞಾನಿಗಳಿಗೆ ಕೋಪದಿಂದ ಅವರು ಶಾಪವನ್ನು ಕೊಡುತ್ತಾರೆ. ಆದುದರಿಂದ ತೀರ್ಥಾದಿ ಸಕಲ ದೇವತೆಗಳ ಸರಿಯಾದ ಜ್ಞಾನವನ್ನು ಅರಿಯುವುದಕ್ಕಾಗಿ ಯೋಗ್ಯವಾದ ಗುರುವನ್ನು ಆಶ್ರಯಿಸಲೇಬೇಕು. ಅದಲ್ಲದೆ ತೀರ್ಥಗಳೂ ದೇವರುಗಳೂ ಸದಾ ಜ್ಞಾನಿಗಳಾದ ಗುರುಗಳಲ್ಲಿ ಸನ್ನಿಹಿತರಾಗಿರುತ್ತಾರೆ ಎಂದು ಗರುಡಪುರಾಣದಲ್ಲಿ ಉಕ್ತವಾಗಿದೆ.
ಅನ್ಯಥಾಜ್ಞಾನಗಳನ್ನು ದೂರ ಮಾಡಿಕೊಳ್ಳುವುದಕ್ಕಾಗಿ ಉತ್ತಮ ಗುರುಗಳನ್ನು ಸೇವಿಸಬೇಕು. ಗುರುಗಳನ್ನು ಸೇವಿಸಿದರೆ ಅವರೊಳಗಿರುವ ಎಲ್ಲ ದೇವತೆಗಳೂ ಪ್ರೀತರಾಗುವರು. ಗುರೂಪದೇಶದಂತೆ ಪೂಜಿಸುವುದನ್ನು ಬಿಟ್ಟು ಬೇರೆ ರೀತಿಯಲ್ಲಿ ಪೂಜಿಸಿದರೆ ದೇವತೆಗಳಿಗೆ ಸಂತೋಷವಾಗುವುದಿಲ್ಲ. ಆದುದರಿಂದ ಮಾನವರು ಸಾಧುಜನರ ಪೂಜೆಯನ್ನು ವಿಶೇಷವಾಗಿ ಮಾಡಬೇಕು. ಭಕ್ತಿಯನ್ನು ತಾರತಮ್ಯದಿಂದ ಮಾಡಬೇಕು. ಉತ್ತಮರಲ್ಲಿ ಹೆಚ್ಚು ಭಕ್ತಿ ಮಾಡಬೇಕು ಎಂದು ಸ್ಕಂದ ಪುರಾಣವು ಹೇಳುವುದು.
ದೇವತೋತ್ತಮರು ಗುರುಗಳಿಗಿಂತ ಉತ್ತಮರೇ ಆಗಿದ್ದರೂ, ಮಾನವರನ್ನು ತಮಗಿಂತ ಕಡಿಮೆಯಾಗಿರುವ ಗುರುಗಳಲ್ಲೇ ಕಳಿಸುವರು. ಪ್ರತ್ಯಕ್ಷವಾಗಿ ತಾವು ಆರಾಧನೆ ಮಾಡಿಸಿಕೊಳ್ಳುವುದಿಲ್ಲ. ಏಕೆಂದರೆ ಪರೋಕ್ಷವಾಗಿ ಆರಾಧನೆಯನ್ನು ಸ್ವೀಕರಿಸುವುದೇ ಅವರಿಗೆ ಪ್ರಿಯವಾಗಿರುತ್ತದೆ.
ಗುರುಗಳ ಅಂತರ್ಗತರಾಗಿದ್ದುಕೊಂಡೇ ತಮಗೆ ಇಷ್ಟವಾದ ಉತ್ತಮ ಪೂಜೆಯನ್ನು ತಾವು ಸ್ವೀಕರಿಸುತ್ತಾರೆ. ಗುರುಗಳ ಮೂಲಕವೇ ಜ್ಞಾನಾದಿಗಳನ್ನು ಮಾನವರಿಗೆ ನೀಡುತ್ತಾರೆ. ಹೀಗೆ ತಿಳಿದುಕೊಂಡೇ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಸದಾ ಪೂಜಿಸಬೇಕು ಎಂದು ವಾಮನ ಪುರಾಣದಲ್ಲಿ ಉಕ್ತವಾಗಿದೆ ನಾವು ತಿಳಿಯಬೇಕು.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ ಎನ್ನುವಂತೆ ಗುರುವಿನ ಆಗಮನದಿಂದಲೇ ಅಂತರಂಗದಲ್ಲಿ ಬೆಳಕು ಮೂಡಿ , ಜ್ಞಾನ ಕುಸುಮವು ಅರಳಲು ಸಾಧ್ಯ. ಗುರುವಿನ ಈ ಅಪಾರ ಮಹಿಮೆಯನ್ನು ಸಂಸ್ಕೃತಿ ಚಿಂತಕರಾದ ಡಾ. ಗುರುರಾಜ ಪೋಶಟ್ಟಿಹಳ್ಳಿ ಯವರು ತಮ್ಮ “ವಂದೇ ಗುರು ಪರಂಪರಮ್” ಗ್ರಂಥದಲ್ಲಿ ತಿಳಿಸಿರುವರು.ಗುರು ಎಂದರೆ ವ್ಯಕ್ತಿಯಲ್ಲ , ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದೊಯ್ಯುವ ಪೂರ್ಣತೆಯ ಪಥದರ್ಶಿಯನ್ನು ಅಧ್ಯಾತ್ಮ , ಜ್ಯೋತಿಷ್ಯ ಅವಧೂತ ತತ್ವ, ಹೀಗೆ ಎಲ್ಲಾ ಆಯಾಮಗಳಿಂದಲೂ ವಿಶ್ಲೇಷಣೆ ಮಾಡಿರುವ ಈ ಗ್ರಂಥ ಸಮಗ್ರವಾಗಿ ಮೂಡಿ ಬಂದಿದೆ.ಬಹಳ ಸೊಗಸಾಗಿ ಗುರುವಿನ ಹಿರಿಮೆಯನ್ನು ನಮ್ಮೆಲ್ಲರೆದುರು ತೆರೆದಿಟ್ಟಿರುವ ಲೇಖಕರಿಗೆ ಮನಃಪೂರ್ವಕ ಅಭಿನಂದನೆಗಳು. ಹೀಗೆ ಅನೇಕ ಗ್ರಂಥಗಳು ತಮ್ಮಿಂದ ಹೊರಬರಲಿ ಎಂದು ಹಾರೈಸುವೆ.
— ಡಾ. ಭಾರತಿ ರವೀಂದ್ರ