ಹೆಣ್ಣಿರಲಿ ಗಂಡಿರಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಒಂದು ಸಮಸ್ಯೆ ಎಂದರೆ ಬಿಳಿ ಕೂದಲು. ದಟ್ಟವಾಗಿ ಮೋಡದಂತೆ ಕಪ್ಪಾಗಿ ಕೂದಲು ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ.
ಕೂದಲು ಚೆನ್ನಾಗಿ ಆರೋಗ್ಯಕರವಾಗಿ ಕಪ್ಪಾಗಿದ್ದರೆ ಸುಂದರವಾಗಿ ಕಾಣುತ್ತಾರೆ. ಆದರೆ ಸೀಳಿದ ಕೂದಲು, ವಿರಳ ವಿರಳವಾಗಿ ಹಾಗೂ ಬಿಳಿಯಾಗಿರುವ ಕೂದಲಿನಿಂದಾಗಿ ಎಲ್ಲರ ಮನಸ್ಸು ಹಿಂಡಿದಂತಾಗುತ್ತದೆ. ಬಿಳಿಯಾಗಿರುವ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬಳಸುವುದು, ಕಪ್ಪು ಮೆಹಂದಿ ಹಚ್ಚುವುದು ಮುಂತಾದ ಪ್ರಯತ್ನಗಳಿಗೆ ತೊಡಗುತ್ತಾರೆ.
ವಯಸ್ಸು ಐವತ್ತು ದಾಟಿದ ನಂತರ ಕೂದಲು ಬಿಳಿಯಾಗುವುದು ಸಾಮಾನ್ಯ. ಅದಕ್ಕಾಗಿ ಚಿಂತೆ ಮಾಡಬೇಕಾಗಿಲ್ಲ. ಆದಷ್ಟೂ ಕೆಮಿಕಲ್ ಇಲ್ಲದ ನೈಸರ್ಗಿಕ ಕಪ್ಪು ಮೆಹಂದಿ ಹಚ್ಚುತ್ತ ಬಂದರೆ ಕೂದಲು ಕಪ್ಪಾಗಿ ಕಾಣುತ್ತದೆ. ಅದರ ಜೊತೆಗೆ ಒಳ್ಳೆಯ ಆಹಾರ ಸೇವಿಸುತ್ತ ಆರೋಗ್ಯ ಕಾಪಾಡಿಕೊಳ್ಳಬೇಕು.
ಆದರೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದರುವುದು, ಬಿಳಿಯಾಗುವುದು ಆಗತೊಡಗಿದರೆ ಅದಕ್ಕೆ ಐದು ಕಾರಣಗಳಿವೆ. ಪ್ರಮುಖ ಐದು ಕಾರಣಗಳನ್ನು ನೋಡೋಣ ಬನ್ನಿ.
೧) ಫಂಗಸ್ ಸೋಂಕು:
ನೆತ್ತಿಯಲ್ಲಿ ಯಾವುದೇ ರೀತಿಯ ಸೋಂಕು ಇದ್ದರೆ, ಅದು ಕೂದಲು ಬಿಳಿಯಾಗಲು ಕಾರಣವಾಗುತ್ತದೆ ಮತ್ತು ಅಕಾಲಿಕವಾಗಿ ಉದುರುತ್ತದೆ. ಇದನ್ನು ತಪ್ಪಿಸುವ ಏಕೈಕ ಮಾರ್ಗವೆಂದರೆ ಬೇಸಿಗೆ ಹಾಗೂ ಚಳಿಗಾಲದಲ್ಲಿ ತಲೆಯ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ.
೨) ವಿಟಮಿನ್ ಕೊರತೆ:
ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿಂದಾಗಿ ರಕ್ತಹೀನತೆ ಉಂಟಾಗುತ್ತದೆ. ಈ ಕಾರಣದಿಂದಾಗಿ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತದೆ.
೩) ರಕ್ತಹೀನತೆ:
ರಕ್ತಹೀನತೆ ಎಂದರೆ ದೇಹದಲ್ಲಿ ಮಾತ್ರವಲ್ಲದೆ ರಕ್ತದಲ್ಲಿಯೂ ಆಮ್ಲಜನಕದ ಕೊರತೆ. ಈ ಕಾರಣದಿಂದಾಗಿ, ಆಮ್ಲಜನಕವು ನೆತ್ತಿ ಸೇರಿದಂತೆ ದೇಹದ ಅನೇಕ ಭಾಗಗಳನ್ನು ತಲುಪುವುದಿಲ್ಲ ಈ ಕಾರಣದಿಂದಾಗಿ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ.
೪) ಸತುವಿನ (zinc) ಕೊರತೆ:
ಚರ್ಮ, ಮೂಳೆಗಳು ಮತ್ತು ನೆತ್ತಿಯನ್ನು ಆರೋಗ್ಯವಾಗಿಡಲು, ಸರಿಯಾದ ಪ್ರಮಾಣದ ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇದರ ಕೊರತೆಯು ಅಕಾಲಿಕ ಕೂದಲು ಬಿಳಿಯಾಗಲು ಕಾರಣವಾಗಬಹುದು.
೫) ಥೈರಾಯ್ಡ್ ಸಮಸ್ಯೆ :
ನಿಮ್ಮ ಕೂದಲು ಸಣ್ಣ ವಯಸಿನಲ್ಲಿ ಬಿಳಿಯಾಗಿದ್ದರೆ, ಒಮ್ಮೆ ಥೈರಾಯ್ಡ್ ಪರೀಕ್ಷೆಯನ್ನು ಮಾಡಿ. ಏಕೆಂದರೆ ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯ್ಡಿಸಮ್ ಕಾರಣದಿಂದಾಗಿ ಕೂದಲಿನ ಬಣ್ಣವು ತೆಳುವಾಗಲು ಪ್ರಾರಂಭಿಸುತ್ತದೆ.
ಕೂದಲು ಬಿಳಿಯಾಗಲು ಇನ್ನೂ ಅನೇಕ ಕಾರಣಗಳಿರಬಹುದು. ಪ್ರಮುಖ ಐದು ಕಾರಣಗಳಿವು. ಒತ್ತಡರಹಿತ ಜೀವನ, ಆರೋಗ್ಯಕಾರಿ ಆಹಾರ ಸೇವನೆ, ನಿಯಮಿತ ವ್ಯಾಯಾಮ ಯೋಗಾಸನಗಳಿಂದಲೂ ಕೂದಲ ಕಪ್ಪನ್ನು ಕಾಪಾಡಿಕೊಳ್ಳಬಹುದು.