ಸವದತ್ತಿ ತಾಲೂಕಿನ ಜಕಬಾಳ ಗ್ರಾಮದಲ್ಲಿ ತೋಟದಲ್ಲಿ ೧೪-೦೭-೧೯೯೮ ಆರಂಭವಾದ ಲಕ್ಷ್ಮೀನಗರ ಜಕಬಾಳ ತೋಟದ ಶಾಲೆಯು ಇಂದು ತನ್ನದೇ ಆದ ಪ್ರಕೃತಿ ಮಧ್ಯದಲ್ಲಿ ಇರುವ ಶಾಲೆಯಾಗಿ ಕಂಗೊಳಿಸುತ್ತಿದೆ. ಈ ಶಾಲೆಗೆ ಇತ್ತೀಚಿಗೆ ಜಿಲ್ಲಾ ಅಕ್ಷರದಾಸೋಹ ವಿಭಾಗದಿಂದ ಬಿಸಿ ಊಟದ ನೋಡಲ್ ಅಧಿಕಾರಿಗಳಾದ ಶ್ರೀಮತಿ ಲೀಲಾವತಿ ಹಿರೇಮಠ ಹಾಗೂ ಸವದತ್ತಿ ತಾಲೂಕಿನ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ ಭೇಟಿ ನೀಡಿದರು. ಇಲ್ಲಿನ ಪ್ರಕೃತಿದತ್ತ ಎಸ್.ಡಿ.ಎಂ.ಸಿಯವರ ಸಹಕಾರ ಶಿಕ್ಷಕರ ಪರಿಶ್ರಮದಿಂದ ಉತ್ತಮ ಪರಿಸರ ಹೊಂದಿದ ಈ ಶಾಲೆಯ ಬಿಸಿಯೂಟ ಹಾಗೂ ತರಗತಿ ಪ್ರಕ್ರಿಯೆಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಶಾಲೆಯ ಕುರಿತು ಸಣ್ಣ ಪರಿಚಯಾತ್ಮಕ ಬರಹವಿದು.
ಪ್ರಾರಂಭದಿಂದಲೂ ಸಹಾಯಹಸ್ತದ ಶಾಲೆ
ಯಾವುದೇ ಶಾಲೆ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಪರಿಸರವೂ ಪ್ರಭಾವ ಬೀರುತ್ತದೆ.ಜೊತೆಗೆ ಅಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕರ ಕಾರ್ಯವೈಖರಿ ಕೂಡ. ಈ ಶಾಲೆ ಆರಂಭವಾದಾಗಿನಿಂದ ಇಂದಿನವರೆಗೂ ಇಲ್ಲಿನ ಎಸ್.ಡಿ.ಎಂ.ಸಿ ಇರಬಹುದು. ಇಲ್ಲಿ ಸೇವೆ ಸಲ್ಲಿಸಿ ಹೋಗಿರುವ ಎಲ್ಲ ಶಿಕ್ಷಕರ ಪರಿಶ್ರಮ ಇರಬಹುದು ಈ ಶಾಲೆ ಇಂದು ಸುಂದರವಾಗಿ ಕಂಗೊಳಿಸುತ್ತಿರಲು ಕಾರಣ ಎಂಬುದನ್ನು ನೆನೆಯಲೇ ಬೇಕು.
ಈ ಶಾಲೆ ಆರಂಭಿಸಿದಾಗ ಒಂದು ವರ್ಷ ಆರು ತಿಂಗಳುಗಳ ಕಾಲ ಅಂದಿನ ಗ್ರಾಮದ ಹಿರಿಯರು, ಶಿಕ್ಷಣ ಪ್ರೇಮಿಗಳಾದ ದಿವಂಗತ. ಶ್ರೀ ಹನಮಂತಪ್ಪ ಕಾತ್ರಾಳ ಇವರ ಮನೆಯಲ್ಲಿ ತರಗತಿಯನ್ನು ಪ್ರಾರಂಭಿಸಲಾಯಿತು. ನಂತರ ಗ್ರಾಮದ ಹಿರಿಯರಾದ ಶ್ರೀಯುತ ಮಹಾದೇವಪ್ಪ ಹ ಬಸಳಿಗುಂದಿಯವರು ಶಾಲೆಗೆ ೨೦ ಗುಂಟೆ ಜಮೀನನ್ನು ಹಾಗೂ ಇವರ ಸಹೋದರ ಶ್ರೀ ಸಣ್ಣಲಕ್ಷ್ಮಣ ಹ ಬಸಳಿಗುಂದಿಯವರು ೧೫ ಗುಂಟೆ ಜಮೀನನ್ನು ದೇಣಿಗೆ ನೀಡಿದರು. ನಾನು ಅರ್ಟಗಲ್ ಸಮೂಹ ಸಂಪನ್ಮೂಲ ಕೆಂದ್ರದ ಸಂಪನ್ಮೂಲ ವ್ಯಕ್ತಿಯಾಗಿದ್ದ ಸಂದರ್ಭದಲ್ಲಿ ಈ ಶಾಲೆಯಲ್ಲಿ ಆಪ್ತ ಸಮಾಲೋಚನೆ ಕಾರ್ಯಕ್ರಮ ಇಟ್ಟುಕೊಂಡಿದ್ದೆನು.
ಆಗ ಪ್ರಧಾನ ಗುರುಗಳಾಗಿದ್ದವರು. ಎಸ್.ಕೆ.ಬಡಿಗೇರ ಗುರುಗಳು ಇವರು ಈ ಶಾಲೆಯನ್ನು ಬಹಳ ಮುತುವರ್ಜಿ ವಹಿಸಿ ಹಿರಿಯರಿಂದ ದೇಣಿಗೆ ಸಂಗ್ರಹಿಸಿ ಸುಂದರ ವಾತಾವರಣ ನಿರ್ಮಾಣವಾಗಲು ಕಾರಣೀಭೂತರಾಗಿದ್ದರು.ಎಂಬುದನ್ನು ಇಲ್ಲಿ ಸ್ಮರಿಸಲೇ ಬೇಕು. ಅವರಿಗೆ ಆ ವರ್ಷ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ದೊರೆತಿತ್ತು.
ಈ ಶಾಲೆಗೆ ೨೦೦೦ ಇಸ್ವಿಯಲ್ಲಿ ನಿರ್ಮಾಣವಾದ ಮೊದಲ ಕೊಠಡಿಯನ್ನು ಗ್ರಾಮದ ಹಿರಿಯರಿಂದ ಉದ್ಘಾಟಿಸಲಾಯಿತು. ನಂತರ ಎರಡನೆಯ ಕೊಠಡಿಯನ್ನು ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ಪ್ರಭಾವಿ ರಾಜಕೀಯ ನಾಯಕರು, ಶಿಕ್ಷಣ ಪ್ರೇಮಿಗಳಾದ ಶ್ರೀ ರವೀಂದ್ರ ಭೂಪಾಲಪ್ಪ ಯಲಿಗಾರ ಹಾಗೂ ಸಹಕಾರಿ ಧುರೀಣರಾದ ಸನ್ಮಾನ್ಯ ಶ್ರೀ ಉಮೇಶ ಬಾಳಿ ಅವರಿಂದ ಉದ್ಘಾಟನೆಗೊಂಡಿತ್ತು ಅಂದಿನಿಂದ ಇಂದಿನವರೆಗೂ ತನ್ನದೇ ಆದ ವೈಶಿಷ್ಟ್ಯತೆಯಿಂದ ಕಂಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ. ಇಂದು ಮೂರು ತರಗತಿ ಕೊಠಡಿ ಹೊಂದಿ ೧ ರಿಂದ ೫ನೇ ತರಗತಿಯವರೆಗೆ ೭೬ ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ.
ಇಲ್ಲಿ ಈಗ ಮಕ್ಕಳಿಗೆ ಸ್ಮಾರ್ಟ ಟಿ.ವಿ ಮೂಲಕ ಪಾಠಬೋಧನೆ ಮಾಡಲಾಗುತ್ತಿದೆ. ಒಂದು ಅಡುಗೆ ಕೋಣೆ ಹಾಗೂ ಒಂದು ಉಗ್ರಾಣ ಕೊಠಡಿ ಹೊಂದಿರುವ ಶಾಲಾ ಆವರಣದಲ್ಲಿ ಪಂಚಾಯತಿಯಿಂದ ಮಂಜೂರಾದ ಸ್ವಂತ ಬೋರ್‌ವೆಲ್ ಇದ್ದು ಶಾಲಾ ಕೈತೋಟವಿದ್ದು, ನರೇಗಾ ಯೋಜನೆಯಲ್ಲಿ ಶಾಲಾ ಮುಂದುಗಡೆ ನೆಲಹಾಸು ಹಾಕಿಸಲಾಗಿದೆ. ಮಕ್ಕಳಿಗೆ ರುಚಿ ಹಾಗೂ ಪೌಷ್ಠಿಕಾಂಶ ಭರಿತ ಬಿಸಿಯೂಟದ ಜೊತೆಗೆ ವಿಶೇಷ ದಿನಗಳಲ್ಲಿ ಸಿಹಿ ನೀಡಲಾಗುತ್ತಿದೆ.
ಗ್ರಾಮಸ್ಥರ, ಶಿಕ್ಷಕರ ಹಾಗೂ ಮಕ್ಕಳ ಪರಿಸರ ಪ್ರೇಮದಿಂದ ಈ ಶಾಲೆ ಇಂದು ೨೦೦ ಕ್ಕಿಂತ ಹೆಚ್ಚು ವಿವಿಧ ಗಿಡ-ಮರಗಳನ್ನು ಹೊಂದಿದೆ. ಅಷ್ಟೇ ಅಲ್ಲ ಈ ಶಾಲೆಗೆ ಧ್ವಜದ ಕಟ್ಟೆ ಕಟ್ಟಿಸಿಕೊಡುವ ಜೊತೆಗೆ ಹಾಗೂ ಪ್ರತಿ ವರ್ಷ ಎರಡು ರಾಷ್ಟ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಭೂದಾನಿಗಳಾದ ದಿವಂಗತ ಸನ್ಮಾನ್ಯ ಶ್ರೀ ಮಹಾದೇವಪ್ಪ ಹ ಬಸಳಿಗುಂದಿಯವರು ಹತ್ತು ಸಾವಿರ ರೂಪಾಯಿಗಳನ್ನು ಶಾಶ್ವತ ಠೇವು ಇರಿಸಿದ್ದು ಅದರ ಬಡ್ಡಿಯಲ್ಲಿ ಬರುವ ಹಣದಿಂದ ಮಕ್ಕಳಿಗೆ ಪಾಲಕರಿಗೆ ಸಿಹಿ ಭೋಜನ ವ್ಯವಸ್ಥೆ ಮಾಡುತ್ತ ಬಂದಿರುವರು.ಇದು ಭೂದಾನಿಗಳು ಶಿಕ್ಷಣದ ಬಗ್ಗೆ ಹೊಂದಿರುವ ಕಾಳಜಿಯನ್ನು ಹೊಂದಿದೆ.
ಈ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಆಯೋಜಿಸಿ ಅದರಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ಭೂದಾನಿಗಳ ಪುತ್ರ ಶ್ರೀ ಸಂಗಪ್ಪ ಮಹಾದೇವಪ್ಪ ಬಸಳಿಗುಂದಿಯವರು ನೀಡುತ್ತಾ ಬಂದಿರುತ್ತಾರೆ. ಪ್ತಥಮ, ದ್ವಿತಿಯ, ತೃತೀಯ ಬಹುಮಾನಗಳನ್ನೂ ಗ್ರಾಮ ಪಂಚಾಯತ ಸದಸ್ಯರುಗಳು ನೀಡುತ್ತಾ ಬಂದಿರುತ್ತಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಪಾಲಕ-ಪೋಷಕ ಕಮೀಟಿ ಸದಸ್ಯರುಗಳು ವಿದ್ಯಾರ್ಥಿಗಳಿಗೆ ನೋಟ್-ಬುಕ್, ಪೆನ್ನು ಪೆನ್ಸಿಲ್. ಕಂಪಾಸ, ಶಬ್ದಕೋಶ ಗಳನ್ನು ಮತ್ತು ಹಣದ ಮೂಲಕ ಬಹುಮಾನ ನೀಡಿ ಮಕ್ಕಳಿಗೆ ಪ್ರೋತ್ತಾಹಿಸುತ್ತಾ ಬಂದಿರುವುದು ಹೆಮ್ಮೆಯ ವಿಷಯ.
ದೇಣಿಗೆಗಳ ಮಹಾಪೂರ
ಈ ಭಾಗದ ಜನಪ್ರೀಯ ಶಾಸಕರಾದ ಶ್ರೀಯುತ ಆನಂದ ಚಂ ಮಾಮನಿಯವರು ಕಂಪ್ಯೂಟರ ದೇಣಿಗೆ ನೀಡಿರುತ್ತಾರೆ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀ ಅರ್ಜುನ ಮರಕುಂಬಿಯವರು ೪೨ ಇಂಚಿನ ಸ್ಮಾರ್ಟ ಟಿ.ವಿ ದೇಣಿಗೆ ನೀಡಿರುತ್ತಾರೆ ಹಾಗೂ ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಶ್ರೀಯುತ ದೊಡ್ಡಯಲ್ಲಪ್ಪ ಬಂಡ್ರೋಳ್ಳಿ ಯವರು ಮಕ್ಕಳಿಗೆ ೧೦೦ ಕ್ಯಾಪ್ ಮಾಡಿಸಿ ಕೊಟ್ಟಿರುತ್ತಾರೆ. ಗ್ರಾಮದ ಪಾಲಕ-ಪೋಷಕ ವರ್ಗದವರು ಈ ಶಾಲೆಗೆ ಬ್ಯಾಟರಿ ಇನ್ವೆöಟರ್, ೪೦ ಕುರ್ಚಿಗಳನ್ನು, ೨ ಇಡ್ಲಿ ತಯಾರಿಸುವ ಬಾಕ್ಸ್, ಮೈಕ್ ಸೆಟ್, ೧೨ ದೊಡ್ಡ ಬೋಗೋಣಿ(ಪಾತ್ರೆ)ಗಳನ್ನು, ೧೦ ಬಕೇಟಗಳನ್ನು, ೨೦೦ ಕ್ಕಿಂತ ಹೆಚ್ಚು ಊಟದ ತಟ್ಟೆಗಳನ್ನು, ೮೦ ಗ್ಲಾಸಗಳನ್ನು, ೫ ಬುಟ್ಟಿ ಹೀಗೆ ಹತ್ತು ಹಲವು ವಸ್ತುಗಳಲ್ಲದೆ ಶಾಲೆಗೆ ಸುಣ್ಣ ಬಣ್ಣ, ಸಣ್ಣ ಪುಟ್ಟ ರಿಪೇರಿಗಳನ್ನು ಮಾಡುತ್ತಾ ಬಂದಿರುವುದು ಶ್ಲಾಘನೀಯ. ಹಾಗೂ ನಮ್ಮ ಶಾಲೆಯ ಪಾತ್ರೆ ಪರಿಕರಗಳನ್ನು ಗ್ರಾಮಸ್ಥರ ಶುಭ ಸಮಾರಂಭಗಳಲ್ಲಿ ಉಪಯೋಗಿಸಿ ಶಾಲೆಗೆ ಅಗತ್ಯವಿರುವ ಹೊಸ ವಸ್ತುಗಳನ್ನು ಬಾಡಿಗೆ ರೂಪದಲ್ಲಿ ಪಡೆಯುವ ಪದ್ಧತಿ ಜಾರಿಯಲ್ಲಿದೆ.
ಪ್ರಶಸ್ತಿಗಳ ಸುರಿಮಳೆ ಕಂಡ ಶಾಲೆ
ಗ್ರಾಮದ ಹಿರಿಯರ, ಶಿಕ್ಷಕರ ಪಾಮಾಣಿಕ ಸೇವೆ ಕಂಡು ಈ ಶಾಲೆಗೆ ೨೦೧೦-೧೧ ನೇ ಸಾಲಿನ ಸವದತ್ತಿ ತಾಲೂಕಿನ ಅತ್ಯುತ್ತಮ ಶಾಲೆ ಪ್ರಶಸ್ತಿಯನ್ನು ಮತ್ತು ೨೦೧೭-೧೮ ಮತ್ತು ೨೦೧೮-೧೯ ನೇ ಸಾಲಿನ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಹಾಗೂ ೨೦೧೮-೧೯ ನೇ ಸಾಲಿನ ಅತ್ಯುತ್ತಮ ಎಸ್.ಡಿ.ಎಮ್.ಸಿ ಪ್ರಶಸ್ತಿಗೆ ಸವದತ್ತಿ ತಾಲೂಕಿನಿಂದ ಆಯ್ಕೆಯಾಗಿರುತ್ತದೆ.
ಈ ಶಾಲೆಯ ಹಿರಿಯ ವಿದ್ಯಾರ್ಥಿಗಳು ಸದ್ಯ ಭಾರತೀಯ ಸೇನೆಯ ಭೂದಳ, ವಾಯುದಳ, ನೌಕಾದಳಗಳಲ್ಲಿ, ಕರ್ನಾಟಕ ಪೋಲಿಸ ಇಲಾಖೆಯಲ್ಲಿ, ವೈದ್ಯಕೀಯ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಈ ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಸದರಿ ಶಾಲೆಗೆ ಪ್ರೋಜೆಕ್ಟರ ದೇಣಿಗೆ ರೂಪದಲ್ಲಿ ನೀಡುತ್ತಿದ್ದು ಇದು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಮತ್ತಷ್ಟು ಸಹಕಾರಿಯಾಗಲಿದೆ.
ಒಟ್ಟಿನಲ್ಲಿ ಈ ಶಾಲೆ ಇಂದು ಇಷ್ಟು ಹೆಮ್ಮರವಾಗಿ ಬೆಳೆಯಲು ಗ್ರಾಮಸ್ಥರ ಕೊಡುಗೆ ಅಪಾರವಾಗಿದೆಎಂದು ಶಿಕ್ಷಕ ರವಿ ಸಣಕಲ್ ಹೆಮ್ಮೆಯಿಂದ ಹೇಳುತ್ತಾರೆ. ಸದ್ಯಕ್ಕೆ ಇಲ್ಲಿ ಪ್ರಧಾನ ಗುರುಗಳಾಗಿ ಶ್ರೀ ಬಿ.ಬಿ.ಹುಲಿಗೊಪ್ಪ. ಸಹ ಶಿಕ್ಷಕರಾಗಿಶ್ರೀ ಆರ್.ವಿ.ಸಣಕಲ್ಲ ಸೇವೆ ಸಲ್ಲಿಸುತ್ತಿರುವರು. ಈ ಇರ್ವರೂ ಶಿಕ್ಷಕರು ಕೂಡ ಉತ್ತಮ ಕಾರ್ಯವನ್ನು ಕೈಗೊಂಡ್ಡಿದ್ದಾರೆ. ಇಂತಹ ಶಾಲೆಗೆ ಜಿಲ್ಲಾ ಹಂತದ ಅಧಿಕಾರಿಗಳು ಆಗಾಗ ಭೇಟಿ ನೀಡುತ್ತಿರುವರು.
ಈ ಹಿಂದೆ ಶಿವಲಿಂಗಮೂರ್ತಿ ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಈ ಶಾಲೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದು ನನಗೆ ನೆನಪಿದೆ. ಈ ದಿಸೆಯಲ್ಲಿ ಈ ಶಾಲೆಗೆ ಇತ್ತೀಚಿಗೆ ಭೇಟಿ ನೀಡಿದ ಜಿಲ್ಲಾ ಅಕ್ಷರದಾಸೋಹ ನೋಡಲ್ ಅಧಿಕಾರಿಗಳಾಗಿದ್ದ ಶ್ರೀಮಿತಿ ಲೀಲಾವತಿ ಹಿರೇಮಠ ಹಾಗೂ ಸವದತ್ತಿ ತಾಲೂಕಿನ ಅಕ್ಷರದಾಸೋಹ ಸಹಾಯಕ ನಿರ್ದೇಶಕರಾಗಿರುವ ಶ್ರೀಮತಿ ಮೈತ್ರಾದೇವಿ ವಸ್ತ್ರದ ಈ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವರು.
ಅಷ್ಟೇ ಅಲ್ಲದೇ ಪ್ರಸ್ತುತ ಅರ್ಟಗಲ್ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಜಿ. ಎಸ್.ಚಿಪ್ಪಲಕಟ್ಟಿ ರವರು ಆಗಾಗ ಬೇಟಿ ನೀಡಿ ಮಾರ್ಗದರ್ಶನ ಮಾಡುತ್ತಿದ್ದಾರೆ. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ. ಎನ್. ಬ್ಯಾಳಿಯವರು ಶಿಕ್ಷಣ ಸಂಯೋಜಕರಾದ ಜಿ. ಎಂ. ಕರಾಳೆಯವರ ಮಾರ್ಗ ದರ್ಶನ. ಈ ಶಾಲೆಗೆ ದೊರೆಯುತ್ತಿದ್ದು ಮುಂದಿನ ದಿನಗಳಲ್ಲಿ ಈ ಶಾಲೆ ರಾಜ್ಯ ಮಟ್ಟದ ಅತ್ಯುತ್ತಮ ಶಾಲೆಯಾಗಲಿ ಎಂದು ಆಶಿಸುವೆನು.
ವೈ.ಬಿ.ಕಡಕೋಳ
ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭