ಇವರೇ ಗಾಂಧಿ ಅಜ್ಜ
ಕೈಲಿ ಕೋಲು, ಬಿರುಸು ನಡಿಗೆ
ಬಾಯಲ್ಲಿ ಸತ್ಯ, ಶಾಂತಿ ಮಂತ್ರ
ರಾಷ್ಟ್ರದ ಒಳಿತಿಗಾಗಿ ಹೋರಾಡಿಯೂ,
ಅಧಿಕಾರ ಕೈಬೀಸಿ ಕರೆದಾಗ,
ನಿರ್ಲಿಪ್ತವಾಗಿ ಕುಳಿತವರು…
ಇವರೇ ನಮ್ಮ ಗಾಂಧಿ ಅಜ್ಜ.
ರಾಷ್ಟ್ರಮಾತೆಯ ಕಣ್ಣು,ಕಿವಿ,ಬಾಯಿ ಮುಚ್ಚಿ
ಠೇಂಕರಿಸುತ್ತಿದ್ದ ಕೆಂಪು ಜನರಿಗೆ
ಸತ್ಯಾಗ್ರಹದಿಂದ ಪಾಠ ಕಲಿಸಿದವರು ,
ಸರಳ ನಡೆ-ನುಡಿ- ಜೀವನದಿಂದ
ವಿಶ್ವಕ್ಕೇ ಮಾದರಿಯಾದವರು
ಇವರೇ ನಮ್ಮ ಗಾಂಧಿ ಅಜ್ಜ….
ಪತ್ನಿ,ಪುತ್ರರ ಮರೆತು, ಹೊಣೆಯರಿತು
ಸ್ವಾತಂತ್ರ್ಯ ಹೋರಾಟ ಸಂಘಟಿಸಿ,
ಕಾಯ್ದೆ ಮುರಿದು, ಚಳವಳಿ ತೆಗೆದು
ಲಕ್ಷಾಂತರ ಜನರಿಗೆ ಕೆಚ್ಚು ತುಂಬಿದವರು…
ಇವರೇ ನಮ್ಮ ಗಾಂಧಿ ಅಜ್ಜ…
ಸ್ವಾತಂತ್ರ್ಯ ದೊರೆತರೂ, ಇಬ್ಬಾಗವಾದ
ಭಾರತವ ಕಂಡು ಕಂಬನಿಗೆರೆದವರು ,
ಎಲ್ಲರೂ ಒಂದೇ ಎಂದು ಉಪವಾಸ ಕುಳಿತವರು ,
ಪ್ರಾರ್ಥನಾ ಸಭೆಯಲ್ಲೇ ಗುಂಡೇಟು ತಿಂದವರು,
ಇವರೇ ನಮ್ಮ ಗಾಂಧಿ ಅಜ್ಜ….
ದಲಿತೋದ್ದಾರಕ್ಕಾಗಿ ಹಗಲಿರುಳೂ ಶ್ರಮಿಸಿದವರು ,
ಚರಕ-ಸಬರಮತಿ ಆಶ್ರಮಗಳ ಉಸಿರಾಗಿ ಮಾಡಿಕೊಂಡವರು ,
ಭವಿಷ್ಯದ ಜನತೆಗೆ ದಾರಿದೀಪವಾದವರು ….
ಇವರೇ ನಮ್ಮ ಗಾಂಧಿ ಅಜ್ಜ….
ಡಾ.ಭೇರ್ಯ ರಾಮಕುಮಾರ್,ಸಾಹಿತಿಗಳು, ಪತ್ರಕರ್ತರು
ಮೊ:94496 80583*
ಬಾಪೂಜಿ
ಮಮತೆಯ ಬಾಪೂಜಿ
ಸತ್ಯಾಗ್ರಹಕೆ ನೀನಾದೆ ರಾಜಿ
ಧೀಮಂತ ನೇತಾರ
ಸತ್ಯ ಶಾಂತಿಯ ಮೂರ್ತಿ
ವರ್ಣಾತೀತ ನಿಲುವು
ಸ್ವಾತಂತ್ರ್ಯದ ಉಷಾಕಿರಣ
ದೇಶ ಪ್ರೇಮ ಹುರಿದುಂಬಿಸಿ
ಬ್ರಿಟಿಷರಿಗಾದೆ ಕಂಟಕ
ಬರೆದೆ ನವಯುಗದ ಭಾಷ್ಯ
ನ್ಯಾಯ ಪರತೆಗೆ ಸ್ಪೂರ್ತಿ
ದಾಸ್ಯದಿಂದ ಬಿಡುಗಡೆಗೆ ನಿನ್ನ ಕರೆ
ತ್ಯಾಗ ಬಲಿದಾನಕೆ ವರದಾನ
ಮೂಲಶಿಕ್ಷಣದ ಪರತೆ
ಸ್ವಚ್ಛತಾ ಆಂದೋಲನಕೆ ರುವಾರಿ
ಮೂಡಿಸಿದೆ ಸಂಚಲನ
ಭಾರತಾಂಬೆಯ ಕುಡಿಯಲಿ
ಬಡವನ ಅಂತಃಕರಣದ ಪ್ರತಿ
ಇದೋ ಮಹಾತ್ಮ ನಿನಗೆ ಒಂದನ.
ರೇಷ್ಮಾ ಕಂದಕೂರ
ರಾಷ್ಟ್ರಪಿತ ಮಹಾತ್ಮಗಾಂಧೀಜಿ
ಭಗವದ್ಗೀತೆಯ ಕೃಷ್ಣನಂತೆ ಅವತರಿಸಿ
ನಾಡಿಗಾಗಿ ಶ್ರಮಿಸುತಾ
ಬ್ರಿಟಿಷರ ಅಟ್ಟಹಾಸ ದುರಾಡಳಿತದಿ ದೇಶ
ಮುಕ್ತ ಗೊಳಿಸಲು ಶಾಂತಿ
ಮಂತ್ರ ಪಾಲಿಸುತಾ
ಹೋರಾಡಿದ ಮಹಾತ್ಮ
ನಿಮಗೆ ನಮನಗಳು.
ದಯವೇ ಧರ್ಮದ ಮೂಲವಯ್ಯಾ
ಬಸವಣ್ಣನವರ ನುಡಿಯಂತೆ
ದಯೆ ಧರ್ಮದ ಆಧಾರದಿ
ಕರ್ತವ್ಯ ನಿಷ್ಠೆ ಮೆರೆದವರು
ಮಹಾತ್ಮ ನಿಮಗೆ ನಮನಗಳು.
ಸತ್ಯ ಅಹಿಂಸೆ ತ್ಯಾಗದ ತ್ರಿವೇಣಿ
ಸಂಗಮ
ಶಾಂತಿ ಕರುಣೆ ಪ್ರೀತಿ ಸದ್ಭಾವದಿ
ಸ್ವಾತಂತ್ರ್ಯ ಹೋರಾಟ ಗೈದ
ಭಾರತಮಾತೆಯನ್ನು ಸ್ವಾತಂತ್ರ್ಯ
ಗೊಳಿಸಿದ ಮಹಾತ್ಮ ನಿಮಗೆ
ನಮನಗಳು.
ಸತ್ಯವೇ ದೇವರೆಂದು ಉಪವಾಸ, ಮೌನ ವೃತ
ಪ್ರತಿಭಟನೆಯ ಅಸ್ತ್ರವಾಗಿ
ಬಳಸಿಕೊಂಡು,
ಅಹಿಂಸಾ ಮಾರ್ಗದಲಿ ಸ್ವಾತಂತ್ರ್ಯ ತಂದು ಕೊಟ್ಟ
ಮಹಾತ್ಮ ನಿಮಗೆ ನಮನಗಳು.
ದ್ವೇಷವೇ ಇಲ್ಲದೆ ಜಗತ್ತು
ನಿಮ್ಮ ಕನಸಾಗಿತ್ತು,
ಬದುಕು ಸರ್ವತ್ರ ಪ್ರೇಮಮಯ
ವಾಗಿರಲೆಂದು ಬಯಸಿದವರು,
ನಿಮ್ಮ ದೇಹ ಅಳಿದರೂ ಆದರ್ಶಗಳಿಗೆ ಸಾವಿಲ್ಲ,
ಎಲ್ಲರ ಹೃದಯದಲಿ ನಿಮ್ಮ
ಬದುಕಿನ ಅರ್ಥ ತುಂಬಿರಲಿ
ಮಹಾತ್ಮ ನಿಮಗೆ ನಮನಗಳು.
ಪುಷ್ಪಾ ಮುರಗೋಡ,ಗೋಕಾಕ
ಗಾಂಧಿಗೊಂದು ಪ್ರಶ್ನೆ
ಹುತಾತ್ಮದ ನೆಪದಲಿ,
ನೆನಪಲಿ
ವೃತ್ತಗಳ ಪ್ರತಿಬಿಂಬ
ನೀನು….
ರೀತಿ,ನೀತಿ,ಮೀರಿ ನಿಲ್ಲಿಸಿಬಿಟ್ಟರು
ಫೋಟೋ ಫೋಜು ಕೊಟ್ಟು
ಜೀವನ ಪರ್ಯಂತ
ಬರೀ ಮೈಯಲಿ ತಿರುಗಾಡಿ,
ತಪ್ಪು ಮಾಡಿದಿ ಮಹಾತ್ಮ-?
ಭರತ ನೆಲದ ಪಿತ ನೀನು
ನಿನಗೇನು ಪ್ರಶ್ನಿಸಬಲ್ಲೆ
ಸತ್ಯ,ಶಾಂತಿ,ಸಮಾನತೆ-
ಎನ್ನುತ ಅಲೆದಾಡಿದಿ
ಬೆಳಕು ಗಾಳಿಯಂತೆ ಬಟಾ ಬಯಲಾಗಬೇಕಿತ್ತು
ಅಹಿಂಸಾ ವ್ರತಭಾರ ಹೊತ್ತೆ
ಬ್ರಿಟಿಷರಿಗೆ,ಗತ್ತಿನಲಿ ಉತ್ತರವಿತ್ತೆ
ಸಹಚರರ, ಆಂತರಿಕ ನಿಲುವಿಗೆ
,ನೂರು ಬಗೆಯಾಗು- ಹೋಗುಗಳ
ರುದ್ರತೆ ಕಂಡರೂ ಸ್ಥಿರವಾಗಿ
ನಿನಗೆ ನೀನೇ ಒತ್ತೆಯಾದಿ
ತಪ್ಪು ಮಾಡಿದಿ ನೀನು?
ಚಿಂತನಶೀಲ
ಗೌಪ್ಯವಾಗಿಟ್ಟಿ
ಕೋಮಲ ಹೃದಯ ತೆರೆದು ನಕ್ಕುಬಿಟ್ಟಿ
ಗತಿಮಿತಿಯನು
ಸಿಹಿ ಮಾಡಿ,
ಕಹಿ ಮೆದ್ದು ಮಹಾತ್ಮ ನೀನು
ತಪ್ಪು ಮಾಡಿದಿ?
ಸ್ನೇಹ ಮೋಹಾಭಿಮಾನದಿ
ಹೊಸ ಹರೆಯದ
ಮೊಗ್ಗಿನ ಹಾಗೆ ನಕ್ಕಂತೆ,
ಕನಸು ನನಸುಗಳ
ದೇಶಕೆ ಮುಡಿಪಿಟ್ಟ ತಾಯಮಮತೆ
ನಿನ್ನದು.
ಬದುಕಿರುವತನಕ ಬಸವಳಿಯದೇ
ದೇಶಕೆ ಮರುಗಿ
ತಪ್ಪು ಮಾಡಿದಿ?
ಈಗಲೂ-
ನಿನ್ನ ಪ್ರತಿಮೆ,ಚಿತ್ರಪಟಕೆ
………?
ಅನ್ಯಾಯವಾಗುತಿದೆ
ಎಂದೇಳಬಲ್ಲೆ?
ನೀನು ಸುಮ್ಮನೇ ಇದ್ದು
ತಪ್ಪು ಮಾಡುತ್ತಿರುವಿ?
ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ
ಗಾಂಧೀಜಿ ಚಷ್ಮಾ
ಅಪ್ಪಾ ಎಲ್ಲಿ ಗಾಂಧೀಜಿ ಚಷ್ಮಾ?
ಕೇಳಿದಳು ಮಗಳು
ತೋರುತ ಗಾಂಧಿ ಚಿತ್ರ
ಹೇಳಿದ ಅಪ್ಪ ಹೌದಮ್ಮ
ಕಳೆದು ಕೊಂಡಿದ್ದೇವೆ ನಾವು
ಸಿಗುತ್ತಿಲ್ಲ ಎಲ್ಲೂ
ಈ ತುಂಡು ಬಟ್ಟೆ?
ಬಡವರಿಗೆ ಸಿಗುತ್ತಿಲ್ಲ
ಶ್ರೀಮಂತರಿಗೆ ಬೇಕಿಲ್ಲ
ಮತ್ತೆ ಈ ಕೋಲು?
ಹಿಡಿಯಲಾರರು
ಬೀಳುವಾಗಲೂ
ಹಿಡಿದರೂ ಹಿಡಿವರು
ಬಡಿದಾಡಲು
ಇವರ ಚಪ್ಪಲಿಗಳು ಎಲ್ಲಪ್ಪಾ?
ಉಂಗುಷ್ಟ ಕಿತ್ತು ಬಿದ್ದಿವೆ ಮಗಳೇ ಎಲ್ಲೋ
ಹುಡುಕುವರಾರಿಲ್ಲ
ಅಪ್ಪಾ ನಾನು ಹುಡುಕುವೆ
ಚಷ್ಮಾ ಬಟ್ಟೆ ಕೋಲು
ಚಪ್ಪಲಿಗಳನ್ನ
ಹೌದೇ ಮಗಳೇ?
ಹೋಗು ಹುಡುಕು ತಿಳಿಸು
ವಿಶ್ವ ಕ್ಕೆಲ್ಲ ಅವುಗಳ
ಮೌಲ್ಯವನ್ನ
ಅವುಗಳ ಮೌಲ್ಯವನ್ನ.
ರಾಧಾ ಶಾಮರಾವ
ಗಾಂಧಿ
ತಾಳ್ಮೆಯದು ಶಕ್ತಿಯಾಗಿ
ಅಹಿಂಸೆಯು ಅಸ್ತ್ರವಾಗಿ
ಶಾಂತಿಯ ದೂತನಾಗಿ
ಅವತರಿಸಿದ ಗಾಂಧಿಯಾಗಿ
ಕರುಣೆಯ ಕಲಿಯಾಗಿ
ಮಮತೆಯ ಆಗರವಾಗಿ
ಸರಳ ಬಾಳಿನ ಸೂತ್ರವಾಗಿ
ಕಾಯಕಯೋಗಿ ಗಾಂಧಿ
ಸಜ್ಜನಿಕೆ ಮನದ ಇಂಗಿತವಾಗಿ
ಪರೋಪಕಾರವು ಗುಣವಾಗಿ
ಕಂಬನಿ ಒರೆಸುವ ಕಣ್ಣಾಗಿ
ಧರೆಗಿಳಿದ ದೇವದೂತನಾಗಿ
ಅಬಲೆಗೆ ಅಭಯದ ಅಸ್ತವಾಗಿ
ಸಮಾನತೆಯ ಸುಧಾರಕನಾಗಿ
ದಲಿತರ ದಿಟ್ಟ ದನಿಯಾಗಿ ಗಾಂಧಿ
ಸ್ವಾತಂತ್ರ್ಯ ಪ್ರಭೆಯ ಬೆಳಕಾದ.
ಗಿರಿಜಾ ಮಾಲಿ ಪಾಟೀಲ್ ಪ್ರಾಧ್ಯಾಪಕಿ ವಿಜಯಪುರ
★ಗಾಂಧೀ ತಾತಾ★
ಮಕ್ಕಳತಾತಾ ಹರಿಗಿರಿಜನ ಪಿತಾ
ಧರೆಯೊಳು ಸಾರಿದ ಭಗವದ್ಗೀತಾ
ಉತ್ತಮ ಭಾರತ ಕುಲ ಸಂಭೂತಾ
ಸುಜನ ಪೂಜಿತಾ ಗಾಂಧೀ ತಾತಾ
ಸ್ವಾತಂತ್ರ್ಯ ಸಾರಿದ ಸ್ಪೂರ್ತಿಯ ತಾತಾ
ಗುಂಡಿನ ಮನೆಯೊಳು ಸಿಲುಕಿದ ತಾತಾ
ಸೆರೆಮನೆ ಹೊಕ್ಕರು ಸಂತೋಷದಾತಾ
ಕಳೆದನು ದಿನಗಳ ಗಾಂಧೀ ತಾತಾ
ಉಪವಾಸವನು ಆಚರಿಸಿದಾತಾ…
ಜಗ್ಗದ ಬ್ರಿಟೀಷರ ಬಗ್ಗಿಸಿದಾತಾ..
ಆಂಗ್ಲಜನಾಂಗವ ಜಯಿಸಿದ ತಾತಾ
ತಂದ ಸ್ವತಂತ್ರವ ಗಾಂಧೀ ತಾತಾ
ಸತ್ಯ ಅಹಿಂಸೆ ಗಾಂಧೀಯ ತತ್ವಾ
ವಿಶ್ವದೆಲ್ಲೆಡೆ ಪ್ರಖ್ಯಾತಿ ಪಡೆದಾತಾ
ತಾರಕ ಮಂತ್ರವ ಜಪಿಸುತ ತಾತಾ
ಸ್ವರ್ಗವು ಸೇರಿದಾ ಗಾಂಧೀ ತಾತಾ
◆ಬಸಮ್ಮ ಹಿರೇಮಠ◆
ಶಿಕ್ಷಕಿ
ಸ.ಪ್ರೌ.ಶಾಲೆ,ಗೊರೇಬಾಳ
ತಾ,ಸಿಂಧನೂರು ಜಿ,ರಾಆಯಚೂರು