ಯಪ್ಪಾ
(ಮಗನೇ, ಹಡದಪ್ಪ, ನನ್ನಪ್ಪ…..ಅಂದರೂ ಒಂದೇ !)
ಧಿಢೀರನೇ ನೀ
ನಿನ್ನ ಕಾಲೇಜಿನ ಊರಿಗೆ ಹೊಂಟ
ನಿಂತಾಗ ನನ್ನ ಧಾವಂತ ಹೆಚ್ಚಾತು.
ಬೇಗ ಎಬ್ಸು ಅಂತ ನಿಮ್ಮಪ್ಪನಿಗೆ
ಮೆಸೇಜು ಮಾಡಿದ್ಯಂತ
ದಿನಾ ೫ ಕ್ಕ ಏಳುವ ಅವರು
ಇಂದ್ಯಾಕೋ ಸ್ವಲ್ಪ ಹುಷಾರಿ ಇಲ್ದಂಗನ್ನಿಸಿ ತಡವಾಗಿ ಎದ್ದರು.
ನಾ ಹೇಳಿದಾಗ ಹಳಹಳಿಸಿದರು ಬಿಡು.
ಅಂತೂ ನೀ ಲಗೂನ ಎದ್ದು
ಲಗುಬಗೆಯಿಂದ ತಯಾರಾಗಿ
ಅರ್ಧ ಮರ್ಧ ನಾಷ್ಟಾ ಮಾಡಿ,
ಬೆನ್ನಿಗಿ ಬ್ಯಾಗ್ ಹಾಕೊಂಡು ‘ಯವ್ವಾ ನಾ ಹೋಗಿ ಬರ್ತೀನಿ ‘ ಅಂದಾಗ…ಸೀರಿಗೆ ಕೈ ಒರೆಸ್ಕೋತ
ಹೊರಗ ಬಂದು
ಹ್ಞೂಂ…ಅಂದೆ. ಅವರೂ ಹ್ಞೂಂ…
ಅಂದರು.
ಈಗ ನೋಡಿದ್ರ ಮನಿ
ಭಣಾ ಭಣಾ ಅನ್ನಾಕ ಹತ್ತಿತು.
ಕೋಣೆದಾಗ ನೀ ತಲಿ ಬಾಚಿಕೊಂಡ ಗುಂಡ ಆಕಾರದ ಹಣಿಗೆ ಹೊಲಿಗಿ ಯಂತ್ರದ ಮ್ಯಾಲ ಬಿದ್ದಿತ್ತು
ಕೂದಲಾ ಸುರಳಿ ಮಾಡೂ ಹಣಿಗಿ
ಕೆಳಗ ಬಿದ್ದಿತ್ತು
ನೀ ವರೆಸ್ಕೊಂಡ ಹಸಿ ಟಾವೆಲ್ಲು ಪಲ್ಲಂಗದ ಮ್ಯಾಲ..
ಕಂಪ್ಯೂಟರ್ ಚಾಲೂನ ಇತ್ತು
ನನಗ ಬಂದ್ ಮಾಡಾಕ ಬರ್ಲಿಲ್ಲ
ಇವರ್ನ ಕರೆದು ಬಂದ್ ಮಾಡ್ಸಿನಿ
ಫ್ಯಾನ್ ಹಂಗ ತಿರಗಾಕ ಹತ್ತಿತ್ತು
ಬಂದ್ ಮಾಡಿನಿ
ನಿನ್ನ ಪ್ಯಾಂಟ ಶರ್ಟ್, ಟೀ ಶರ್ಟ್,
ಅದೇನೋ ಜಾಕೇಟ್ ಅಂತ ಅದೂ…
ಎಲ್ಲಾ ಹಂಗ ಬಿದ್ದಿದ್ದೂ…ತಗದ ಇಟ್ಟೆ….
ಇಷ್ಟೆಲ್ಲಾ ಆದ್ರೂ ನಿನ್ನ ಕೋಣೆಯೊಳಗ
ನಿನ್ ಕಾಲೇಜಿನ ಒಂದೂ ಪುಸ್ತಕಾ
ಕಾಣಲಿಲ್ಲ !!
ಈಗೆಲ್ಲಾ ಮೊಬೈಲ್ ನ್ಯಾಗ, ಕಂಪ್ಯೂಟರ್ ನ್ಯಾಗ ಅಭ್ಯಾಸ
ನಡದಾವಂತಲಾ….
ಎಂತಾ ಅಭ್ಯಾಸನೋ ಏನ್ ಮಣ್ಣೋ !!
ಆದ್ರೂ ನೀ ಇಲ್ಲದ ಮನಿ
ಖಾಲಿ ಅನಸ್ತದ ನೋಡಪಾ
ಬೇಗ ಬಾ ಅಂತ ಹೇಳಬೇಕಂದರೂ
ನಿನ್ ಕಾಲೇಜ ಇರ್ತದಲ್ಲಾ
ಹೆಂಗ ಹೇಳಲಿ….
ಅದನ ಮುಗಿಸಿ ಬಾರಪ್ಪ
ನಿಂದs ಹಾದಿ ಕಾಯ್ತಿರ್ತೀನಿ….
ಇಂತಿ
ನಿಮ್ಮವ್ವ
-ಉಮೇಶ ಬೆಳಕೂಡ