ಶ್ರೀರಾಮ ಹದಿನಾಲ್ಕು ವರ್ಷಗಳ ವನವಾಸವನ್ನು ಪೂರ್ಣಗೊಳಿಸಿ ಅಯೋಧ್ಯೆಗೆ ಮರಳಿದ್ದು ನಮಗೆಲ್ಲ ಗೊತ್ತು. ನಾನು ಹೇಳ ಹೊರಟಿರುವುದು ರಾಮ ಪಟ್ಟಾಭಿಷಕ್ತನಾದ ಮೇಲಿನ ಕತೆ.
ರಾಮ ಸಿಂಹಾಸನವನ್ನೇರಿದ ಮೇಲೆ ಆಡಳಿತಕ್ಕೆ ಬೇಕಾದ ಖಜಾನೆ ತುಂಬಿರಲಿಲ್ಲ. ಬರಿದಾದ ಬೊಕ್ಕಸವನ್ನಿಟ್ಟುಕೊಂಡು ಹೇಗೆ ಆಡಳಿತ ನಡೆಸುವುದು? ನೂರಾರು ಖರ್ಚುಗಳನ್ನು ನಿಭಾಯಿಸುವುದು ಹೇಗೆ? ಹೀಗಾಗಲು ಕಾರಣವೇನು? ಹಣ ಸಂಗ್ರಹಕ್ಕೆ ದಾರಿ ಯಾವುದು?ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ರಾಮ, ಮಂತ್ರಿ ಸುಮಂತ್ರನೊಂದಿಗೆ ಚರ್ಚಿಸಿದ.
’ರಾಮ ಧ್ಯಾನ ನಿರತನಾದ ಭರತನ ಆಳ್ವಿಕೆಯಲ್ಲಿ ಪ್ರಜೆಗಳಿಂದ ತೆರಿಗೆ ಸಂಗ್ರಹ ನಡೆಯಲಿಲ್ಲ.ಹೀಗಾಗಿ ಬೊಕ್ಕಸ ಬರಿದಾಗಿದೆ.’ಎಂದುತ್ತರಿಸಿದ ಸುಮಂತ. ‘ಪ್ರಜೆಗಳನ್ನು ನೋಯಿಸಿ ತೆರಿಗೆ ಸಂಗ್ರಹ ಮಾಡುವ ಮನಸ್ಸಿಲ್ಲ ನನಗೆ.’ ಎಂದ ರಾಮ. ಆಗ ಲಕ್ಷ್ಮಣ ಒಂದು ಸಲಹೆ ಕೊಡುತ್ತಾನೆ. ಪ್ರಜೆಗಳೆಲ್ಲ ಒಂದು ಕುಂಬಳಕಾಯಿ ಗಾತ್ರದ ಚಿನ್ನದ ಗಟ್ಟಿಗಳನ್ನು ಒಪ್ಪಿಸುವಂತೆ ಡಂಗುರ ಸಾರಬೇಕು. ಎನ್ನುತ್ತಾನೆ.
ರಾಮನ ಅನುಮತಿಯಂತೆ ಹಾಗೆಯೇ ಡಂಗುರ ಸಾರುತ್ತಾರೆ. ಇಷ್ಟು ವರ್ಷ ತೆರಿಗೆ ಕಟ್ಟದ ಪ್ರಜೆಗಳಿಗೆ ಇದು ಭಾರವೆನಿಸುವುದಿಲ್ಲ.
ಹದಿನಾಲ್ಕು ವರ್ಷಗಳಲ್ಲಿ ಕೆಲವರಾದರೂ ಪ್ರಾಮಾಣಿಕವಾಗಿ ತೆರಿಗೆ ಕಟ್ಟಿದ್ದಾರೆ.ಕೆಲವರು ಅಲ್ಪ ಸ್ವಲ್ಪ ಕಟ್ಟಿರುತ್ತಾರೆ. ಹೀಗಿರುವಾಗ ಎಲ್ಲರಿಗೂ ಸಮಾನ ಚಿನ್ನದ ನಾಣ್ಯಗಳ ಭಾರವನ್ನು ಹೊರಿಸುವುದು ಸಾಧುವೆ? ಎಲ್ಲರಿಗೂ ಇದನ್ನು ಭರಿಸುವುದು ಸಾಧ್ಯವೆ?ಎಂಬ ಪ್ರಶ್ನೆಗಳು ಲಕ್ಷ್ಮಣನನ್ನು ಕಾಡುತ್ತವೆ.ತನ್ನ ಸಲಹೆ ಪೂರ್ಣ ಸಮಾಧಾನ ತಂದು ಕೊಡುವುದಿಲ್ಲ.
ಆದ್ದರಿಂದ ಲಕ್ಷ್ಮಣ ಹನುಮಂತನನ್ನು ಕೂಡಿಕೊಂಡು ಧರ್ಮದೇವನನ್ನು ಪ್ರಾರ್ಥಿಸುತ್ತಾನೆ. ಧರ್ಮದೇವ ಇದಕ್ಕೊಂದು ಪರಿಹಾರ ಸೂಚಿಸುತ್ತಾನೆ. ಪ್ರಜೆಗಳು ಚಿನ್ನದ ಗಟ್ಟಿಗಳನ್ನು ಒಪ್ಪಿಸುವಾಗ ತಕ್ಕಡಿಯ ಒಂದು ಬದಿಯಲ್ಲಿ ಕುಂಬಳಕಾಯಿಯನ್ನಿಟ್ಟು ಇನ್ನೊಂದು ಕಡೆ ನಾಣ್ಯಗಳನ್ನು ಇಡುವಂತೆ ಮಾಡಬೇಕು.
ಯಾರು ಎಷ್ಟು ಹೊನ್ನು ಕೊಡುವುದಕ್ಕೆ ಬದ್ಧರು ಅನ್ನುವುದನ್ನು ಧರ್ಮದೇವನೇ ನಿರ್ಧರಿಸಿ ಹನುಮಂತನಿಗೆ ಸೂಚನೆ ನೀಡುತ್ತಾನೆ. ಹನುಮಂತ ಸೂಕ್ಷ್ಮ ದೇಹವನ್ನು ಧರಿಸಿ ಧರ್ಮದೇವನ ಸೂಚನೆಯಂತೆ ತಕ್ಕಡಿಯಲ್ಲಿ ಇಡಬೇಕಾದ ಚಿನ್ನದ ಪ್ರಮಾಣವನ್ನು ತಿಳಿದು ಅದಕ್ಕೆ ಅನುಗುಣವಾಗಿ ಕುಂಬಳಿಕಾಯಿಯನ್ನಿಟ್ಟ ತಟ್ಟೆಯ ಭಾರವನ್ನು ಪರಿವರ್ತಿಸುತ್ತಾನೆ.
ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ತೆರಿಗೆಯ ಹೊರೆಯೂ ಬೀಳುವುದಿಲ್ಲ. ಅವರವರ ಬಾಧ್ಯತೆಗೆ ತಕ್ಕಷ್ಟು ಚಿನ್ನವನ್ನು ಕೊಡುವಂತೆ ಆಗುತ್ತದೆ. ಇದು ರಾಮ ರಾಜ್ಯದಲ್ಲಿ ಲಕ್ಷ್ಮಣ, ಹನುಮಂತ ಹಾಗೂ ಧರ್ಮದೇವ ಕೂಡಿ ಮಾಡಿದ ತೆರಿಗೆ ವ್ಯವಸ್ಥೆ.
ತೆರಿಗೆ ಇರಬಹುದು ಅಥವಾ ಬೇರೆ ಯಾವುದೇ ಸಾಮಾಜಿಕ ಕೆಲಸಗಳಿಗೆ, ಹಬ್ಬಗಳ ಆಚರಣೆಯಲ್ಲಿ ಚಂದಾ ವಸೂಲಿ ಸಂಗ್ರಹ ಇರಬಹುದು ಬಾಧ್ಯತೆಗೆ ಮೀರಬಾರದು. ಶ್ರಮವಿಲ್ಲದೇ ಬಂದುದಾವುದೂ ಶಾಶ್ವತವಲ್ಲ. ಹಾಗಾಗಿ ಯೋಚಿಸಿ ಮುಂದುವರೆಯಬೇಕು.
ಜಯಶ್ರೀ.ಜೆ.ಅಬ್ಬಿಗೇರಿ