ಶಾಸಕಿ ಲಕ್ಷ್ಮೀ ಹೆಬ್ಬಾಳಕರಗೆ ಬಿಜೆಪಿ ಆಗ್ರಹ
ಬೆಳಗಾವಿ – ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕರ್ನಾಟಕ ಸರಕಾರದಿಂದ ಎಷ್ಟು ಅನುದಾನ ಬಂದಿದೆ ಎನ್ನುವುದನ್ನು ಸಾಕ್ಷಿ ಸಮೇತ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದ ಪದಾಧಿಕಾರಿಗಳು
ಶನಿವಾರ 10/02/2024 ರಂದು ಮಧ್ಯಾಹ್ನ 12 ಗಂಟೆಗೆ ಸಹ್ಯಾದ್ರಿ ನಗರದ ಶಾಸಕರ ನಿವಾಸದ ಬಳಿ ಇರುವ ಕಛೇರಿಯಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಇಲ್ಲಿಯವರೆಗೆ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಯಾವ ಕಾಮಗಾರಿಗಳನ್ನು ಮಾಡಿದ್ದಾರೆ, ಯಾರು ಯಾವ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಎಷ್ಟು ಅನುದಾನ ತಂದಿದ್ದಾರೆ ಇದನ್ನು ಪುರಾವೆಯೊಂದಿಗೆ ಬಹಿರಂಗಪಡಿಸಬೇಕು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷ ಗ್ಯಾರಂಟಿಯ ಭರವಸೆಗಳನ್ನು ನೀಡಿದೆ. ಸರ್ಕಾರದ ಅವ್ಯವಸ್ಥೆಯಿಂದ ರಾಜ್ಯ ದಿವಾಳಿಯ ಅಂಚಿನಲ್ಲಿದೆ. ಕಳೆದ ಹತ್ತು ತಿಂಗಳಲ್ಲಿ ಎಷ್ಟು ಹಣ ತಂದಿದ್ದಿರಿ ಹಾಗೂ ಯಾವ ಕೆಲಸಕ್ಕೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪರ ವಿರೋಧ ಘೋಷಣೆಯ ಘೋಷಣೆಗಳಿಂದ ವಾತಾವರಣ ಬಿಗಿಯಾಗಿತ್ತು. ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ, ಪ್ರದೀಪ ಪಾಟೀಲ, ಲಿಂಗರಾಜ ಹಿರೇಮಠ, ವಿಠ್ಠಲ ಕಲ್ಲಣ್ಣವರ, ಪ್ರಸಾದ ಬಾಚಿಕರ, ಶಾದ್ಯಕಶ್ರೀ ಹಿರೇಮಠ, ಗುಣವಂತ ಸುತಾರ, ಚಂದ್ರಶೇಖರ್ ವಕ್ಕುಂದ, ವಿಲಾಸ ತಹಶೀಲ್ದಾರ್, ಗಣಪತರಾವ್ ದೇಸಾಯಿ, ಗುರು ಹಲಗತ್ತಿ, ರಾಜು ಖನಗಾಂವಕರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.