ಬೀದರ – ಇಂದು ದಿ. ೮ ರಂದು ಬೀದರನ ಸಾಯಿ ಸ್ಕೂಲ್ ಮೈದಾನದಲ್ಲಿ ನಡೆಯಲಿದ್ದ ಬೃಹತ್ ಹಿಂದೂ ಜಾಗೃತಿ ಸಮಾವೇಶಕ್ಕೆ ಬೀದರ ಜಿಲ್ಲಾಡಳಿತ ನಿಷೇಧ ಹೇರಿದ್ದು ಸ್ಕೂಲ್ ಮೈದಾನದಿಂದ ೨೦೦ ಮೀಟರ್ ವರೆಗೂ ನಿಷೇಧಾಜ್ಞೆ ಜಾರಿ ಮಾಡಿದೆ.
ಭಾರತೀಯ ಆಡಳಿತ ಸೇವಾ ಬೀದರ ಜಿಲ್ಲಾಧಿಕಾರಿ ಡಾ. ಗಿರೀಶ ಪ್ರದೀಪ ಬದೋಲೆಯವರು ಈ ಆದೇಶ ಹೊರಡಿಸಿದ್ದು ಈ ಹಿಂದೂ ಜಾಗೃತಿ ಸಮಾವೇಶಕ್ಕೆ ಆಗಮಿಸಲಿರುವ ಶ್ರೀ ರಾಮ ಸೇನೆಯ ಪ್ರಮೋದ ಮುತಾಲಿಕ, ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಹಾಗೂ ಹಿಂದೂ ಕಾರ್ಯಕರ್ತೆ ಮಾಧವಿ ಲತಾ ಅವರು ಪ್ರಚೋದನಕಾರಿ ಭಾಷಣ ಮಾಡುವ ಹಿನ್ನೆಲೆಯಲ್ಲಿ ಅವರ ಮೇಲೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.
ಇಂದಿನ ಬೃಹತ್ ಸಭೆಯಲ್ಲಿ ಸನಾತನ ಹಿಂದೂ ಬೋರ್ಡ್ ಸ್ಥಾಪನೆ, ಹಿಂದೂಗಳ ಜಮೀನು ಕಬಳಿಸುತ್ತಿರುವ ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಕುರಿತಂತೆ ಜಾಗೃತಿಯನ್ನು ಮೂಡಿಸುವ ಉದ್ದೇಶ ಹಮ್ಮಿಕೊಳ್ಳಲಾಗಿತ್ತು.
ಆದರೆ ಈ ಮೂವರೂ ಹಿಂದೂ ಮುಖಂಡರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಸದರಿ ಸಮಾವೇಶಕ್ಕೆ ಬರಲು ಇವರ ಮೇಲೆ ನಿರ್ಬಂಧ ಹೇರಲಾಗಿದೆ ಅಷ್ಟೇ ಅಲ್ಲದೆ ಸಮ್ಮೇಳನ ನಡೆಯುವ ಸಾಯಿ ಸ್ಕೂಲ್ ನ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆಯಿಂದ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿತ್ತು ಆದರೆ ಸಮ್ಮೇಲನಕ್ಕೆ ನಿಷೇಧ ಹೇರಿದ್ದರಿಂದ ಹಿಂದೂ ಸಮಾಜದ ಮುಖಂಡರು, ವೇದಿಕೆಯವರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ