- Advertisement -
ಇಂದು ಕನಾ೯ಟಕ ರಾಜ್ಯೋತ್ಸವ ಸಂಭ್ರಮದ ದಿನಗಳು. ಕನ್ನಡ ನಾಡು ಸಂಸ್ಕೃತಿಗಾಗಿ ಅನೇಕ ಮಹಾನುಭಾವರು ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ ವ್ಯಕ್ತಿಗಳ ದೊಡ್ಡ ಇತಿಹಾಸವಿದೆ.ಇಂಥ ಅಪರೂಪದ ಚಾರಿತ್ರಿಕ ಸ್ಫೂರ್ತಿಗಳಲ್ಲಿ ವ್ಯಕ್ತಿಯೋರ್ವರನ್ನು ಪರಿಚಯಿಸಿ ಗೌರವಿಸುವುದು ನನ್ನ ವಾಡಿಕೆ.
- ಕನ್ನಡದ ಹೋರಾಟಗಾರ, ಲೇಖಕ, ನಾಟಕ ಕಲಾವಿದ, ಗೀತ ರಚನೆಕಾರ, ಪತ್ರಕರ್ತ, ಮಾಜಿ ಎಂ.ಎಲ್.ಎ, ಕನ್ನಡ ಸಾಹಿತ್ಯ ಪರಿಷತ್ತಿನ (ಕೇಂದ್ರ) ಅಧ್ಯಕ್ಷ ಹೀಗೆ ಬಹುಮುಖ ಪ್ರತಿಭೆ ಕೀರ್ತಿಶೇಷ ಹೆಚ್ ಡಿ ಜ್ವಾಲನಯ್ಯನವರ ಸಂಕ್ಷಿಪ್ತ ಪರಿಚಯ:
- ಹಾಸನಕ್ಕೊಂದು ಹಸನಾದ ಕನಸುಕಂಡ ಮುಂದಿನ ಪೀಳಿಗೆಗಳಿಗೆ ಕನಸುಗಳನ್ನು ಕಟ್ಟಿಕೊಟ್ಟ ಕನಸುಗಾರ
- ಜ್ವಾಲನಯ್ಯನವರ ಪೂರ್ವಿಕರು ಸಕಲೇಶಪುರ ತಾಲ್ಲೂಕಿನ ಬೆಳಗೋಡಿನವರು.ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುವ ಸಲುವಾಗಿ ಬಹಳ ವರ್ಷಗಳ ಹಿಂದೆ ಹಾಸನಕ್ಕೆ ಬಂದು ನೆಲೆಸಿದರು.
- ಜ್ವಾಲನಯ್ಯನವರು ದಿನಾಂಕ:15-07-1920ರಂದು ಹಾಸನದಲ್ಲಿ ಜನಿಸಿದರು. ತಂದೆಯ ಹೆಸರು:ಸ್ವಗ೯ವಾಸಿ ಹೆಚ್.ಬಿ. ಪದ್ಮರಾಜಶೆಟ್ಟಿ (ಹಾಸನ ಬೆಳಗೋಡು ಪದ್ಮರಾಜಶೆಟ್ಟಿ ಉರುಫ್ ಬ್ರಹ್ಮದೇವಯ್ಯ) ತಾಯಿಯ ಹೆಸರು:ಶ್ರೀಮತಿ ಪದ್ಮಾವತಮ್ಮ ಉರುಫ್ ನಾಗರತ್ನಮ್ಮ,
- ಜ್ವಾಲನಯ್ಯನವರು ಹಾಸನದಲ್ಲಿ ತಮ್ಮ ಪ್ರಾಥಮಿಕ, ಮಾಧ್ಯಮಿಕ, ಬಿ.ಎ. ಪದವಿ ಪೂರೈಸಿದ ಬಳಿಕ ಬೆಂಗಳೂರಿನಲ್ಲಿ ಡಿ.ಎಂ.ಇ. (ಡಿಪ್ಲೋಮ ಇನ್ ಮೆಕ್ಯಾನಿಕಲ್ ಇಂಜಿನಿಯರ್)ಯನ್ನು ಮುಗಿಸಿದರು.
- 1952ರಲ್ಲಿ ಸೌಭಾಗ್ಯಮ್ಮವರನ್ನು ಮದುವೆಯಾದರು.ಆ ಬಳಿಕ ಅವರ ಸೌಭಾಗ್ಯದ ಬಾಗಿಲು ತೆರೆಯಿತು. ಅದೇ ವರ್ಷವೇ ಜ್ವಾಲಯ್ಯನವರು ಹಾಸನದ ಪುರಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು.
- ಈ ದಂಪತಿಗಳಿಗೆ ಮೂರು ಜನ ಮಕ್ಕಳು ಶ್ರೀ ಹೆಚ್.ಜೆ. ಹಂಸರಾಜ್, ಶ್ರೀ ಸುಜಿತ್ ಹೆಚ್. ಜೆ ಸಾಹು,ಮಗಳು ಶ್ರೀಮತಿ ಪದ್ಮ ಮಾನಸ.
- ಜ್ವಾಲಯ್ಯನವರು ಹಾಸನದಲ್ಲಿ “ ಬೆಳಗೋಡು ಬ್ರದರ್ಸ್ ಇಂಡಸ್ಟ್ರೀಸ್” ಎಂಬ ಹೆಸರಿನಲ್ಲಿ ಒಂದು ಕೈಗಾರಿಕಾ ಸಂಸ್ಥೆಯನ್ನು ಪ್ರಾರಂಭಿಸಿ ವ್ಯವಸಾಯಕ್ಕೆ ಬೇಕಾಗುವ ಉಪಕರಣಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. (1946) ಮದ್ರಾಸ್‌ನಲ್ಲಿ ಸ್ವಲ್ಪ ದಿವಸ ಕೆಲಸ ಮಾಡಿದರು.
- ಹಾಸನಕ್ಕೆ ಮರಳಿ ಈ ಇಂಡಸ್ಟ್ರಿ ಕೆಲಸದ ಜೊತೆಗೆ ರಾಜಕೀಯ ಕ್ಷೇತ್ರಕ್ಕೆ ಬಂದು 1949 ರಲ್ಲಿ ಹಾಸನದ ಪುರಸಭಾ ಸದಸ್ಯರಾಗಿ ಪುನರಾಯ್ಕೆಯಾಗುತ್ತಾರೆ. ನಂತರ ಪುರಸಭೆಯ ಅಧ್ಯಕ್ಷರೂ ಆಗಿ ಜನಮಾನಸದಲ್ಲಿ ಉಳಿಯುವ ಅನೇಕ ಸಾಮಾಜಿಕ ಕೆಲಸಗಳನ್ನು ಕೈಗೊಂಡರು.
- 1967ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸಹಪಾಠಿ, ಪ್ರಭಾವಿ ವ್ಯಕ್ತಿಯಾಗಿದ್ದ ಎಲ್.ಟಿ. ಕಾರೆಯವರ ವಿರುದ್ಧ ಸೆಣಸಿ ಗೆದ್ದರು.
- ಈ ಸಂದರ್ಭದಲ್ಲಿ ಮಂತ್ರಿಯಾಗುವ ಅವಕಾಶ, ಆಹ್ವಾನ ಬಂತು, ಬೇರೆ ಪಕ್ಷ ಅಧಿಕಾರದಲ್ಲಿತ್ತು. ಇವರು ಗೆದ್ದದ್ದು ಬೇರೆ ಪಕ್ಷ, ಪಕ್ಷಾಂತರಿಯಾಗಿ ಮಂತ್ರಿಯಾಗುವುದಕ್ಕೆ ಇವರ ಮನಸ್ಸು ಒಪ್ಪಲಿಲ್ಲ.
- 1948ರಲ್ಲಿ ಜ್ವಾಲನಯ್ಯನವರ ಮುಂದಾಳತ್ವದಲ್ಲಿ “ಮಿತ್ರವೃಂದ” ಎಂಬ ಹೆಸರಿನ ಒಂದು ಸಾಹಿತ್ಯ,ಸಾಂಸ್ಕೃತಿಕ ಸಂಘ ಸ್ಥಾಪಿಸಿದರು.ಸ್ವತಃ ಸಾಹಿತಿ,ನಾಟಕಕಾರ,ನಟರಾಗಿ ಇವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ಅನೇಕ ಗಣ್ಯರು ಇವರ ಬೆಂಬಲಕ್ಕೆ ನಿಲ್ಲುತ್ತಾರೆ.
- ಕನ್ನಡ ಸಾರಸ್ವತ ಲೋಕಕ್ಕೆ 40ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದ ಪುಸ್ತಕ ಪ್ರೇಮಿ ಹೆಚ್.ಬಿ. ಜ್ವಾಲನಯ್ಯನವರು 1969ರಲ್ಲಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ.
- 1971ರಲ್ಲಿ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರ ಅಧ್ಯಕ್ಷತೆಯಲ್ಲಿ ಚನ್ನರಾಯಪಟ್ಟಣದಲ್ಲಿ ನಡೆಸಿ ಯಶಸ್ವಿಯಾಗುತ್ತಾರೆ.
- ಹೊರ ಜಿಲ್ಲೆಯಿಂದ ಮೊಟ್ಟಮೊದಲ ಬಾರಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ (ಕೇಂದ್ರ) ಅಧ್ಯಕ್ಷರಾದ ಕೀರ್ತಿ ಇವರ ಪಾಲಿಗೆ ಇದೆ.ಅಧ್ಯಕ್ಷರಾಗಿ ಸ್ವಲ್ಪಕಾಲವಿದ್ದರೂ ಕಲಬುರ್ಗಿಯಲ್ಲಿ ಸಿದ್ಧಯ್ಯ ಪುರಾಣಿಕರ ಅಧ್ಯಕ್ಷತೆಯಲ್ಲಿ 51ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏಪ೯ಡಿಸಿ ಕನ್ನಡ ಅಭಿಮಾನಿಗಳ ಮೆಚ್ಚುಗೆ ಪಡೆದರು.
- ಇದೆಲ್ಲಕ್ಕಿಂತ ಮುಖ್ಯವಾಗಿ ಹಾಸನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ನಿವೇಶನವನ್ನು ಕೇವಲ 101 ರೂಪಾಯಿ ಸಾಂಕೇತಿಕ ಪಾವತಿಸಿ ನೋಂದಾಯಿಸಿ ಕೊಡುತ್ತಾರೆ.
- ಇವರ ಕಾಲದಲ್ಲಿ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳು, ಜಾನಪದೋತ್ಸವಗಳು, ನಾಟಕಗಳು ನಿರಂತರವಾಗಿ ನಡೆಸಿದರು. ಜ್ವಾಲನಯ್ಯನವರು ನಟರಾಗಿ, ನಾಟಕ ರಚನಕಾರರಾಗಿ ಮಹಾಶಿಲ್ಪ, ರಾಜಲಾ, ಅಮಿತಾ, ಮಹಾಪರಿವರ್ತನೆ,ರಾಣಿ ರತ್ನಾಜೀ, ಪುರಸ್ಕಾರ, ಕವಿಯಾಗಿ “ ಸಂಕೇತ” ಕವನ ಸಂಕಲನ, ರೇಡಿಯೋ ನಾಟಕಗಳನ್ನು ರಚಿಸಿ ಪಾತ್ರಧಾರಿಯಾಗಿ ರಂಗದ ಮೇಲೆ, ಚಲನಚಿತ್ರನಟರಾಗಿ “ ಮಹಾಶಿಲ್ಪಿ” ಚಲನಚಿತ್ರದಲ್ಲಿ ನಟಿಸಿದರು. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ನಾಲ್ಕನೆಯ ಹಾಸನ ಜಿಲ್ಲಾ ಸಾಹಿತ್ಯಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಿದ್ದಾರೆ.
- ಸಹಕಾರ ಕ್ಷೇತ್ರದಲ್ಲಿ ಜ್ವಾಲನಯ್ಯನವರು ಅನೇಕ ಚಿರಸ್ಥಾಯಿಯಾದ ಕೆಲಸವನ್ನು ಮಾಡಿದ್ದಾರೆ.ಹಾಸನ ಸಹಕಾರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಕೈಗಾರಿಕಾ ಬ್ಯಾಂಕ್ ಸ್ಥಾಪನೆ, ಜನತಾ ಬಜಾರ್ ಸ್ಥಾಪನೆ, ಉತ್ತರ ಬಡಾವಣೆಯ ಸಹಕಾರ ಸಂಘ, ಎಂಜಿನಿಯರ್ ಅಂಡ್ ಟೆಕ್ನಿಶಿಯನ್ ಸಹಕಾರ ಸಂಘಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಈ ಸಂಘಗಳ ಏಳ್ಗೆಗೆ ಶ್ರಮಿಸಿದ್ದಾರೆ.
- ಶಿಕ್ಷಣ ಕ್ಷೇತ್ರಕ್ಕೆ ಜ್ವಾಲನಯ್ಯನವರು ಕೊಟ್ಟಿರುವ ಕೊಡುಗೆ ಅಪಾರ ಹಾಸನಕ್ಕೆ ಟಿ.ಸಿ.ಹೆಚ್.ಕಾಲೇಜ್, ಭಾರತೀ ವಿದ್ಯಾಮಂದಿರ್, ಬಾಲಿಕಾ ಪ್ರೌಢಶಾಲೆ, ಹಿಂದಿ ಪ್ರಚಾರ ಸಮಿತಿ, ಕನ್ನಡ ಕಾವ್ಯಜಾಣ, ರತ್ನಪರೀಕ್ಷೆಗೆ ಕೂರುವುದಕ್ಕೆ ಅವಕಾಶ.
- ಕೀರ್ತಿಶೇಷರಾದ ಜ್ವಾಲನಯ್ಯನವರು ಪ್ರವೇಶಿಸದ ಕ್ಷೇತ್ರವಿಲ್ಲ. ಸಾಹಿತ್ಯ, ಕಲೆ, ರಂಗಭೂಮಿ, ಸಿನಿಮಾ, ಕೈಗಾರಿಕೆ, ರಾಜಕೀಯ, ಸಹಕಾರ ಒಂದೇ ಎರಡೇ? ಈ ಎಲ್ಲಾ ಕ್ಷೇತ್ರದಲ್ಲೂ ಸಾರ್ಥಕ ಸೇವೆ ಸಲ್ಲಿಸಿದ ನಿಸ್ವಾರ್ಥಜೀವಿ.
- ಜ್ವಾಲನಯ್ಯನವರು ತೊಡುತ್ತಿದ್ದ ಸೂಟುಬೂಟು, ಉಡುಗೆ ತೊಡಿಗೆ ನೋಡಿದವರಿಗೆ ಶ್ರೀಮಂತ ಧೀಮಂತರಂತೆ ಕಂಡರೂ ಹೃದಯ ಶ್ರೀಮಂತ ಸರಳ ಸಜ್ಜನಿಕೆ, ಸೌಜನ್ಯ, ಸ್ನೇಹಜೀವಿ, ಶಿಸ್ತಿನಸಿಪಾಯಿ.ಇವರು ಹಾಸನದ ಅಭಿವೃದ್ಧಿಗೆ ಮಾಡಿದ ಯೋಚನೆ, ಯೋಜನೆ, ಬೆಂಗಳೂರು, ನಿರ್ಮಾತೃ ಕೆಂಪೇಗೌಡರ ನೆನಪನ್ನು ತರುತ್ತದೆ. “ ಟೀಕೆಗಳು ಸಾಯುತ್ತವೆ ಮಾಡಿದ ಕೆಲಸಗಳು ಉಳಿಯುತ್ತವೆ” ಎಂಬದಕ್ಕೆ ಇವರೇ ಜೀವಂತ ಸಾಕ್ಷಿ. ಕನ್ನಡ ಕುವರನಿಗೊಂದು ಸಲಾಂ.
(ಮಾಹಿತಿ: ಹಾಸನದ ಕೈಗಾರಿಕೋಧ್ಯಮಿ
ಜ್ವಾಲನಯ್ಯನವರ ಸುಪುತ್ರರಾದ ಹೆಚ್.ಜೆ ಹಂಸರಾಜ್ ಮತ್ತು ಎನ್.ಎಲ್. ಚನ್ನೇಗೌಡ, ಸಾಹಿತಿಗಳು)
ಡಾ.ಅಜಿತ ಮುರುಗುಂಡೆ ಬೆಂಗಳೂರು.9448936461