ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳಿಂದ ಜೋಕೆ – ಡಾ ನಾಗರಾಜ ಪಾಟೀಲ
ಬುಧವಾರ ದಿ. 19 ರಂದು ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಕೆ ಎಲ್. ಇ ಸಂಸ್ಥೆಯ ವೇಣುಧ್ವನಿ ಬಾನುಲಿ ಕೇಂದ್ರ, ಜೆ ಎನ್ಎಂಸಿ.ಯ ಎನ್.ಎಸ್.ಎಸ್ ಘಟಕ ಬೆಳಗಾವಿ ಇವರ ವತಿಯಿಂದ ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕ್ರಮಗಳ ಕುರಿತಾದ ಜಾಗೃತಿ ಕಾರ್ಯಕ್ರಮ ನಡೆಯಿತು.
ಜೆಎನ್ಎಂಸ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ ಪಾಟೀಲ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿ, ಮಳೆಗಾಲದಲ್ಲಿ ಹವಾಮಾನದ ಏರುಪೇರಿನಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಲ್ಲುವ ಕಾರಣ, , ಚರಂಡಿ ನೀರು, ತ್ಯಾಜ್ಯ ವಸ್ತುಗಳ ಸಂಗ್ರಹದಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಅವುಗಳಿಂದ ಡೆಂಗ್ಯೂ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಅದೇ ರೀತಿ ಮಳೆಗಾಲದಲ್ಲಿ ಬರುವ ಹೊಸ ನೀರಿನಿಂದ ವಿಶೇಷವಾಗಿ ಕುಡಿಯುವ ನೀರಿನಲ್ಲಿ ಇನ್ನಿತರ ತ್ಯಾಜ್ಯಗಳು ಸೇರಿ ಕಾಲರಾ ವಾಂತಿಭೇದಿ ಕಾಮಾಲೆಯಂತಹ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಆ ನಿಟ್ಟಿನಲ್ಲಿ ವಿಶೇಷವಾಗಿ ಶಾಲಾ ಮಕ್ಕಳು ಶುದ್ಧ ನೀರು ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು. ಶುಚಿಯಾದ ಆಹಾರವನ್ನು ಸೇವಿಸಬೇಕು. ಶಾಲೆಯಲ್ಲಿ ಆಹಾರ ಸೇವಿಸುವಾಗಲೂ ಸಹ ಸ್ವಚ್ಛವಾಗಿ ಕೈ ತೊಳೆಯುವ ವಿಧಾನವನ್ನು ಅನುಸರಿಸುವುದರ ಮೂಲಕ ಕೈ ತೊಳೆದು ಮಾಡಬೇಕು. ತೆರೆದಿಟ್ಟ ತಿಂಡಿಗಳನ್ನು ತಿನ್ನದೇ ಇರುವುದು ಒಳ್ಳೆಯದು. ಶಾಲೆಯಲ್ಲಿ ಮನೆಯಲ್ಲಿ ನೀರನ್ನು ಶುದ್ಧೀಕರಿಸಿ ಸೋಸುವುದರ ಮೂಲಕ ಬಳಸಬೇಕು. ಆ ನಿಟ್ಟಿನಲ್ಲಿ ಆರೋಗ್ಯದ ಕಡೆಗೆ ಜಾಗೃತಿ ವಹಿಸಿ ತಮ್ಮನ್ನು ತಾವು ರಕ್ಷಿಸಿಕೊಂಡು ವಿದ್ಯಾಭ್ಯಾಸದಲ್ಲಿ ಉತ್ಸಾಹದಿಂದ ಮುಂದುವರೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಸುಮಿತ್ರಾ ಕರವಿನಕೊಪ್ಪ ಮಾತನಾಡಿ, ವೇಣುಧ್ವನಿ ಕೇಂದ್ರದ ಈ ಕಳಕಳಿಯ ಆರೋಗ್ಯ ಕುರಿತಾದ ಜಾಗೃತಿ ಕಾರ್ಯಕ್ರಮ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ತಮ್ಮ ಆರೋಗ್ಯವನ್ನು ಯಾವ ರೀತಿ ರಕ್ಷಿಸಬೇಕು ಎಂಬುದರ ಸಮಗ್ರ ಮಾಹಿತಿ ನಿಜಕ್ಕೂ ಸರಕಾರಿ ಶಾಲಾ ಮಕ್ಕಳಲ್ಲಿ ಹುರುಪು ತುಂಬುವುದರ ಜೊತೆಗೆ ತಮ್ಮ ಆರೋಗ್ಯದ ಸ್ವಯಂ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿದೆ ಎಂದರು.
ವೇಣು ದ್ವನಿ ಬಾನುಲಿ ಕೇಂದ್ರದ ಕಾರ್ಯಕ್ರಮಗಳ ಸಮನ್ವಯಾಧಿಕಾರಿ ಮಂಜುನಾಥರವರು ಮಾತನಾಡಿ, ವೇಣುಧ್ವನಿ ಕೇಂದ್ರದಿಂದ ಅನೇಕ ವಿನೂತನ ಕಾರ್ಯಕ್ರಮಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳಾದ ಕಲೆ, ಕ್ರೀಡಾ ಸಾಧನೆ, ಸಾಹಿತ್ಯದ ಅಭಿರುಚಿ ಹೊರಗಿನ ಜಗತ್ತಿಗೆ ಪ್ರಸ್ತುತಪಡಿಸಲು ವೇದಿಕೆ ಒದಗಿಸುತ್ತಿದೆ ಅದರ ಪ್ರಯೋಜನ ಶಾಲಾ ಮಕ್ಕಳು ಪಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಜೆಎನ್ಎಂ ಸಿ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳ ವತಿಯಿಂದ ಶಾಲಾ ಆವರಣದಲ್ಲಿ ಶಿಕ್ಷಕಿ ಶಶಿಕಲಾ ಹೊಸೂರ, ತೇಜಸ್ವಿನಿ, ಪೂಜಾ ಮತ್ತು ಶಾಲಾ ಮಕ್ಕಳು ಸೇರಿ ಪರಿಸರ ಕಾಳಜಿಗಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಬಿ. ಎನ್. ಮಡಿವಾಳರ,ಲಲಿತಾ ಮಹಾಜನಶೆಟ್ಟಿ, ಗೀತಾ ಖಾನಟ್ಟಿ, ಎಸ್. ಎನ್. ದಿಬ್ಬಿ, ಸಮೀಮಾ ಹುಬಳಿ, ಎಸ್. ಬಿ. ಕರಾಳೆ ಸೇರಿದಂತೆ ಶಾಲೆಯ ಎಲ್ಲಾ ಮಕ್ಕಳು ಭಾಗಿಯಾಗಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ದೈಹಿಕ ಶಿಕ್ಷಕರಾದ ಮಹೇಶ ಅಕ್ಕಿ ಸ್ವಾಗತಿಸಿದರು. ಶಿವಾನಂದ ತಲ್ಲೂರ ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಪ್ರಸ್ತುತಪಡಿಸಿದರು. ಕೊನೆಯಲ್ಲಿ ಶಿಕ್ಷಕಿ ಎಸ್. ವೈ. ಮರಕುಂಬಿ ವಂದಿಸಿದರು.