ಶರಣು ಗುರುವೆ ಶರಣು
ಕರುಣಾಮಯಿ ತಂದೆ ಗುರುವೆ
ಕರಮುಗಿಯುವೆ ಶರಣು ಗುರುವೆ ಶರಣು
ಕಾನನದಿ ಅಲೆವಂಗೆ
ಕಾಣದೇ ಗುರುವಾದವಗೆ ಶರಣು
ಕಿನ್ನರರ ಕಿತಾಪತಿಗಳ ಸಹಿಸಿ ದಹಿಸಿದ
ಕಿರಣ ಸ್ವರೂಪಿ ಗುರುವೆ ಶರಣು
ಕೀಟಲೆಗಳ ಬದಿಗೊತ್ತಿ
ಕೀರ್ತಿ ತರುವಂತೆ ಬೆಳಸಿದ ತಮಗೆ ಶರಣು
ಕುಣಿಸಿ ನಲಿಸಿ ಕಲಿಸುತ
ಕುಶಲಮತಿಗಳಾಗಿಸಿದಾತಗೆ ಶರಣು
ಕೂಡಿ ಬಾಳುವ ನೀತಿ
ಕೂಡಿ ನಲಿಯುವ ರೀತಿ ಕಲಿಸಿದಾತಗೆ ಶರಣು
ಕೆಸರಿನಲ್ಲಿರುವ ಕಮಲದಂತೆ
ಕೆಸರಿನಲ್ಲಿರುವ ಎರೆಹುಳುವಿನಂತೆ ಬಾಳೆಂದಾತಗೆ ಶರಣು
ಕೇದಿಗೆಯ ಘಮಲು ಹೊತ್ತ
ಕೇವಿಗೆಯ ಹೊಳಪುಳ್ಳವಗೆ ಶರಣು
ಕೈ ಕೆಸರಾದರೆ ಬಾಯಿ ಮೊಸರು
ಕೈ ಜೋಡಿಸಿ ಕಾಯಕ ಮಾಡೆಂದಾತಗೆ ಶರಣು
ಕೊಳದೊಳಗಿನ ಮೀನಿನಂತೆ
ಕೊಳದೊಳಗಿನ ಜಲದಂತೆ ಶಾಂತವಾಗಿರೆಂದಾತಗೆ ಶರಣು
ಕೋಣನ ಜಾಣನಾಗಿ ಮಾಡಿ
ಕೋಟೆ ಆಳ್ವಂತೆ ಮಾಡಿದಾತಗೆ ಶರಣು
ಕೌತುಕಗಳ ಜಾಲ ಬಿಡಿಸಿ
ಕೌಶಲ್ಯಗಳ ವೃದ್ಧಿಸಿದಾತಗೆ ಶರಣು
ಕಂಗಳು ತುಂಬಿದವು ಪ್ರಭುವೆ
ಕಂಬನಿ ಒರಸಿ ಅಪ್ಪಿ ಸಂತೈಸಿದಾತಗೆ ಶರಣು
ಕಹಳೆ ಮೊಳಗಲಿ ದೇಶ ಕಟ್ಟುವ ಶಿಲ್ಪಿಗೆ
ಕಹಳೆ ಮೊಳಗಲಿ ಇಂದು ಎಂದೆಂದಿಗೂ
ಶರಣು ಗುರುವೆ ಶರಣು ನಿಮಗೆ
ಶ್ರೀಮತಿ ಜ್ಯೋತಿ ಕೋಟಗಿ, ಬೈಲಹೊಂಗಲ ಬಿ ಆರ್ ಪಿ ಚ. ಕಿತ್ತೂರು