ಹಾಸನ ನಗರದಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ನಮ್ಮ ಊರು ಚಿಕ್ಕನಾಯಕನಹಳ್ಳಿ ( ಗೊರೂರು ) ಬಳಿ ಹೇಮಾವತಿ ಹಾಗೂ ಯಗಚಿ ನದಿಗಳ ಸಂಗಮ ಸ್ಥಾನದಲ್ಲಿ ನದಿಗೆ ಅಡ್ಡಲಾಗಿ ಹೇಮಾವತಿ ಅಣೆಕಟ್ಟು ಕಟ್ಟಲಾಗಿದೆ. ಇಂಥಹ ದೊಡ್ಡ ಅಭಿವೃದ್ದಿ ಯೋಜನೆಗಳ ಸಂತ್ರಸ್ತರ ಕಷ್ಟ ನಿಜಕ್ಕು ಭಯಾನಕ. ಮೂಲ ನೆಲೆಯನ್ನು ಬಿಟ್ಟು, ಪ್ರಭುತ್ವಗಳು ತಂದು ಹಾಕಿದ ನೆಲದಲ್ಲಿ ಬದುಕು ಕಟ್ಟಿಕೊಳ್ಳುವುದು ಒಂದೆಡೆಯಾದರೆ, ಅಪರಿಚಿತ ಪ್ರಪಂಚದಲ್ಲಿ ಸಂಸ್ಕೃತಿಯನ್ನು ಮರು ರೂಪಿಸಿಕೊಳ್ಳುವುದು ಮತ್ತೊಂದು ಸವಾಲು.
ಭಾವನೆಗಳಿಗೆಲ್ಲಿ ಸ್ಪಂದಿಸುತ್ತದೆ ಆಧುನಿಕತೆ?
ಈ ಅಣೆಕಟ್ಟೆಯ ಹಿನ್ನೀರಿನಲ್ಲಿ ಭಾಗಷಃ ಮುಳುಗಿ ಹೋದ ಊರು ಶೆಟ್ಟಿಹಳ್ಳಿ. ಹೇಮಾವತಿ ನದಿಯ ದಂಡೆಯಲ್ಲಿ ಸುಭಿಕ್ಷವಾಗಿದ್ದ ವ್ಯವಸಾಯ ಮೂಲವೃತ್ತಿಯ ಊರು. ಇದೆ ಊರಿನಲ್ಲಿ ನದಿ ದಂಡೆಯಲ್ಲಿ ಸುಮಾರು 1860 ರಲ್ಲಿ ಫ್ರೆಂಚ್ ಮಿಷನರಿ Abbe J A Dubois ಎನ್ನುವವರ ಮಾರ್ಗದರ್ಶನದ ಮೇರೆಗೆ ನಿರ್ಮಿಸಲ್ಪಟ್ಟ ಒಂದು ಭವ್ಯವಾದ ಗೋಥಿಕ್ ವಾಸ್ತುಶಿಲ್ಪದ ಚರ್ಚು ಇದೆ. ಆಲೂರು ಸಕಲೇಶಪುರ ಭಾಗದಲ್ಲಿ ನೆಲೆಸಿದ್ದ ಎಸ್ಟೇಟು ಮಾಲೀಕರಾದ ಶ್ರೀಮಂತ ಕ್ರೈಸ್ತರಿಗಾಗಿ ನಿರ್ಮಿಸಲ್ಪಟ್ಟ ರೋಸರಿ ಚರ್ಚ್ ಎಂದು ಕರೆಯಲ್ಪಡುತ್ತಿದ್ದ ಚರ್ಚಿಗೆ ಪ್ರಸ್ತುತ ಪೂಜ್ಯ ಜಪಮಾಲೆ ತಾಯಿಯವರ ದೇವಾಲಯ ಎಂದು ಸ್ಥಳೀಯ ಜನರು ಕರೆಯುತ್ತಾರೆ. ಗೋಥಿಕ್ ವಾಸ್ತುಶಿಲ್ಪದಲ್ಲಿ ಐಷಾರಾಮಿಯಾಗಿ ನಿರ್ಮಿಸಲಾದ ಈ ಚರ್ಚಿಗೆ ಸ್ಥಳಿಯವಾದ ಸುಟ್ಟ ಇಟ್ಟಿಗೆ, ಬೆಲ್ಜಿಯಮ್ಮಿನ ಗ್ಲಾಸು, ಸ್ಕಾಟ್ಲೆಂಡಿನ ವರ್ಣ ಚಿತ್ರಗಳು, ಗಾರೆಗೆ ಈಜಿಪ್ಟಿನಿಂದ ಆಮದು ಮಾಡಿಕೊಂಡ ಜಿಪ್ಸಮ್ಮು, ಸ್ಥಳೀಯ ಸುಣ್ಣದ ಕಲ್ಲು, ಬೆಲ್ಲ ಮತ್ತು ಕೋಳಿಮೊಟ್ಟೆ ಬಳಸಲಾಗಿತ್ತು. ಎಲ್ಲವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ಗಾಣದಲ್ಲಿ ಅರೆದು ಗಾರೆ ತಯಾರಿಸಿ ನಿರ್ಮಿಸಲಾಗಿದೆ. ಇಟಲಿ ಮತ್ತು ಬ್ರೆಜಿಲ್ ದೇಶಗಳಿಂದ ಅಲಂಕಾರಿಕ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಚರ್ಚಿನ ಮುಂದಿನ ಉದ್ಯಾನದ ಅಂದ ಹೆಚ್ಚಿಸಲು ಮಲೇಷಿಯಾದಿಂದ ತಾಳೆ (ಪಾಮ್) ಮರಗಳನ್ನು ತಂದು ನೆಡಲಾಗಿತ್ತು. ರೆವೆರೆಂಡ್ ಕಿಟ್ಟಲ್, ಮ್ಯಾಕ್ಸ್ ಮುಲ್ಲರ್ ಮೊದಲಾದ ಸಂಶೋಧಕರು ಇಲ್ಲಿ ತಂಗಿ ತಮ್ಮ ಕ್ಷೇತ್ರಕಾರ್ಯ ನಡೆಸಿದ್ದರ ಮಾಹಿತಿ ಇದೆ.
1960 ರಲ್ಲಿ ಹೇಮಾವತಿ ನದಿಗೆ ಗೊರೂರು ಬಳಿ ಅಣೆಕಟ್ಟು ಕಟ್ಟಲ್ಪಟ್ಟು, 1976 ಕ್ಕೆ ಪೂರ್ಣ ಪ್ರಮಾಣದ ನೀರು ಶೇಖರಿಸಲು ಪ್ರಾರಂಭವಾದಾಗ ಅನಿವಾರ್ಯವಾಗಿ ಜನರನ್ನು ಇಲ್ಲಿಂದ ಸ್ಥಳಾಂತರಿಸಲಾಯಿತು. ಭವ್ಯವಾದ ಚರ್ಚು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿತು. ಊರು ಮುಳುಗಡೆಯಾದ ನಂತರ ಸ್ಥಳೀಯ ಜನರೆಲ್ಲ ಚದುರಿ ಚನ್ನರಾಯಪಟ್ಟಣ, ಹಾಸನ, ಹೊಳೇನರಸೀಪುರದ ಕಡೆಗೆ ಹೋಗಿ ನೆಲೆಸಿದರು.
ಪ್ರಸ್ತುತ ಚರ್ಚ್ ಕಟ್ಟಡದ ಅವಶೇಷಗಳು ಸುಮಾರು ಅರ್ದ ಶತಮಾನ ಕಾಲ ನೀರಿನಲ್ಲಿ ಮುಳುಗಿದ್ದ ನಂತರವೂ ದೃಢವಾಗಿ ನಿಂತಿರುವುದು ಅಂದಿನ ಕಾಲದ ಕಟ್ಟಡ ನಿರ್ಮಾಣ ಕೌಶಲ್ಯಕ್ಕೆ ಮಾದರಿಯಾಗಿವೆ. ಗೋಪುರಕ್ಕೆ ಬಳಸಿದ್ದ ಮರದ ತೊಲೆಯೊಂದು ಇಂದಿಗೂ ಸುಸ್ತಿತಿಯಲ್ಲಿ ಗೋಪುರದ ಅವಶೇಷಗಳನ್ನು ಹೊತ್ತು ನಿಂತಿದ್ದು, ಹೆಗಲು ಕೊಡಲು ಮತ್ಯಾರೊ ಬರುವರೆಂಬ ನಿರೀಕ್ಷೆಯಲ್ಲಿರುವಂತೆ ತೋರುತ್ತದೆ. ಸಾಮಾನ್ಯವಾಗಿ ಮಳೆಗಾಲದ ಜೂನ್ ನಿಂದ ಅಕ್ಟೋಬರ್ ವರೆಗೆ ನೀರಿನಲ್ಲಿ ಮುಳುಗಿದ್ದು, ಬೇಸಿಗೆಯಲ್ಲಿ ಹಿನ್ನೀರು ಹಿಂದೆ ಸರಿದಂತೆ ಹೊರಪ್ರಪಂಚಕ್ಕೆ ತೆರೆದುಕೊಳ್ಳುತ್ತಿದ್ದ ಚರ್ಚು ಈ ವರ್ಷ ಮಳೆಯ ಕೊರತೆಯಿಂದ ಸೆಪ್ಟಂಬರ್ ನಲ್ಲಿಯೂ ನೀರಿನಲ್ಲಿ ಮುಳುಗದೆ ದರ್ಶನ ನೀಡುತ್ತಿದೆ.
ಈ ಫ್ರೆಂಚರು, ಬ್ರಿಟೀಷರಿಗಿಂತಲೂ ಮೊದಲೇ ಟಿಪ್ಪುವಿನ ಕಾಲದಲ್ಲಿಯೆ ಮೈಸೂರು ರಾಜ್ಯದಲ್ಲಿ ಸೇನೆ, ವ್ಯಾಪಾರ ಮೊದಲಾದ ಕ್ಷೇತ್ರಗಳನ್ನು ಪ್ರವೇಶಿಸಿದ್ದರು. ನಂತರ 1799 ರ ನಾಲ್ಕನೇ ಆಂಗ್ಲೋ-ಮೈಸೂರು ಯುದ್ದದಲ್ಲಿ ಟಿಪ್ಪುವಿನ ಪತನಾ ನಂತರ ನಡೆದ ಫ್ರೆಂಚರು ಬ್ರಿಟೀಷರ ನಡುವಿನ ಯುದ್ಧಗಳು, ವಿವಿಧ ರೀತಿಯ ರಾಜಕೀಯ ಬೆಳವಣಿಗೆಗಳ ನಡುವೆ ಸಮಾನಾಂತರವಾಗಿ ಬಂದ ಕ್ರಿಷ್ಚಿಯನ್ ಧರ್ಮ ಪ್ರಚಾರಕರು ಮೈಸೂರು ಪ್ರಾಂತ್ಯದಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುತ್ತಿದ್ದ ಆರಂಭ ಕಾಲದಲ್ಲಿ ಈ ಚರ್ಚಿನ ನಿರ್ಮಾಣವಾಗಿದೆ. ಶ್ರೀರಂಗಪಟ್ಟಣ ಬಳಿ ಪುರಾತನ ಚರ್ಚು ಇದ್ದು ಇದನ್ನು ಸ್ಥಳೀಯರು “ಅಬ್ಬೆದುಬೆ” ಚರ್ಚು ಎಂದು ಕರೆಯುತ್ತಾರೆ. ಬಹುಷಃ “Abbe J A Dubois” ನ ಕನ್ನಡ ಅಪಭ್ರಂಶ “ಅಬ್ಬೆದುಬೆ” ಎಂದು ಆಗಿರಬಹುದು.
ಸುಸ್ತಿತಿಯಲ್ಲಿ ಉಳಿದುಕೊಂಡಿದ್ದರೆ ಗೋಥಿಕ್ ವಾಸ್ತುಶಿಲ್ಪ ವೈಭವಕ್ಕೆ ಸಾಕ್ಷಿಯಾಗಬಹುದಾಗಿದ್ದ ಕಟ್ಟಡ ಕಾಲನ ಹೊಡೆತಕ್ಕೆ ಸಿಲುಕಿ ಜರ್ಜರಿತವಾಗಿ, ಅಪ್ಸರೆಯ ಅಸ್ಥಿಪಂಜರದಂತೆ ಅಣೆಯ ನೀರಿಗೆ ಮೈಚಾಚಿಕೊಂಡು ಅಸ್ತವ್ಯಸ್ತವಾಗಿ ಸೊರಗಿದೆ. ದಿನವಹಿ ನಿಯಮಿತವಾಗಿ ಹೊಡೆದುಕೊಳ್ಳುತ್ತಾ ತನ್ನ ಅಸ್ತಿತ್ವವನ್ನು ದಶದಿಕ್ಕುಗಳಿಗು ಸಾರುತ್ತಿದ್ದ ಗಂಟೆ ಗೋಪುರ ಇಂದು ಮೌನವ್ರತ ಹಿಡಿದಂತೆ ನಿಶ್ಯಬ್ದದಲ್ಲಿ ಅಡಗಿ ಸ್ತಭ್ಧವಾಗಿದೆ. ಅಂದು ಅನವರತ ದೇವಸ್ತೋತ್ರಗಳು ಮೊಳಗುತ್ತಾ, ಧೂಪದ ಗಂಧ ಅಡರುತ್ತಾ ದೈವಿಕತೆ ನೆಲೆಸಿದ್ದ ಆಲಯದಲ್ಲಿ ಇಂದು ನೀರವ ಸ್ಮಶಾನಮೌನ ಮನೆಮಾಡಿದೆ. ಕಡು ನಿಶ್ಶಬ್ದದ ನೀರವತೆಯಲ್ಲಿ ಹಿನ್ನೀರಿನ ಮೇಲಿಂದ ಸುಯ್ಯನೆ ಸುಳಿದು ಬರುವ ಸುಳಿಗಾಳಿಯು ಅಸ್ಥಿಪಂಜರದಂತ ಗೋಡೆಗಳಿಗೆ ತಾಕಿ, ನಡುವಲ್ಲೆಲ್ಲೊ ನುಸುಳಿ ಸೃಷ್ಟಿಸುವ ರೌದ್ರ ಸನ್ನಿವೇಶ ಒಂದೊಮ್ಮೆ ಅಸಹನೀಯವೆನಿಸುತ್ತದೆ.
ಹಾಸನಕ್ಕೆ ಇಷ್ಟು ಹತ್ತಿರವಿರುವ ಸ್ಥಳಕ್ಕೆ, ನನ್ನ ಮನೆಯಿಂದ ಕೇವಲ ಐದಾರು ಕಿ ಮೀ ದೂರದ ಇಂತಹ ಅಮೋಘ ಅದ್ಭುತ ಸ್ಥಳಕ್ಕೆ ಇತ್ತೀಚೆಗೆ ನನಗೆ ಹೆಚ್ಚು ಹೋಗಲು ಸಾದ್ಯವಾಗಿರಲಿಲ್ಲ. ಒಮ್ಮೆ ಹೋಗಿಬರಲೆಬೇಕೆಂದು ನನ್ನ ಇಂಥಹ ಕಿರುಪ್ರವಾಸಗಳ ಸಾರಥಿಯಾದ ನನ್ನ ಅಂತರಂಗದ ಶಿಷ್ಯನ ಬಳಿ ಹಲವು ಬಾರಿ ಪ್ರಸ್ತಾಪಿಸಿದ್ದೆ. ಆದರೆ “ಅಲ್ಲೋಗಿ ನೀವೇನ್…. ಮಾಡ್ತಿರಿ ಬುಡಿ ಸ್ಸಾ…… “” ಎಂದು ಹೇಳುತ್ತಾ ಕೊನೆಕೊನೆಗೆ “ಅಲ್ಲಿಗೆ ನಿಮ್ನ ಕರ್ಕಂಡೋಗದು ವೇಷ್ಟು ಬುಡಿ ಸಾ…..” ಎಂದು ಹೇಳುತ್ತಾ ನನ್ನನ್ನು ಕರೆದುಕೊಂಡು ಹೋಗುವುದರಿಂದ ತಪ್ಪಿಸಿಕೊಂಡೇ ಓಡಾಡುತ್ತಿದ್ದ.
ಆದರೆ ತಾನು ಮಾತ್ರ ರಹಸ್ಯವಾಗಿ ತನ್ನ “ಸಮಾನ ಹವ್ಯಾಸಿ” “ಸಮಾನಾಸಕ್ತ” ಗೆಳೆಯರುಗಳೊಂದಿಗೆ ಹೇಮಾವತಿ ಹಿನ್ನೀರಿನ ಪ್ರವಾಸವನ್ನು ಆಗಾಗ ಮಾಡುತ್ತಲೆ ಇರುತ್ತಿದ್ದ. ಅದರ ರಹಸ್ಯವೂ ಇಂದು ಸುತ್ತಮುತ್ತಲ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಯಿತು. ಜಲಕ್ರೀಡೆಗೆ ವಿಶಾಲ ಹಿನ್ನೀರು, ತಕ್ಕಮಟ್ಟಿಗೆ ಜನಸಂದಣಿಯಿಂದ ದೂರವಾದ ಶಾಂತ ಪರಿಸರ, ಯಾರ ಡಿಸ್ಟರ್ಬೆನ್ಸು ಇಲ್ಲದೆ ಹುಡುಗರ ಮೋಜಿಗೆ ಹೇಳಿ ಮಾಡಿಸಿದ ತಾಣ.!!! ಐತಿಹಾಸಿಕ ಪ್ರಜ್ಞೆ…. ಮೋಜಿನಾಟದ ಭ್ರಮೆ… ಗಳನ್ನು ಏಕಕಾಲದಲ್ಲಿ ಪ್ರಚೋದಿಸುವ ಅಚ್ಚರಿ. ( ಇನ್ನೂ ತರೋಬರೋ… ಹುಡುಗನಾದ ಕಾರಣ ಶಿಷ್ಯನ ಹೆಸರನ್ನು ಗೌಪ್ಯವಾಗಿರಿಸಲಾಗಿದೆ…!! )
ಅದಾವ ಸುಕೃತ ಪುಣ್ಯವೋ, ಮೊನ್ನೆ ಅನಿರೀಕ್ಷಿತವಾಗಿ ಯಾವುದೋ ಕಾರ್ಯಕ್ರಮದ ನಿಮಿತ್ತ ಬೇರೆ ಊರಿಗೆ ಹೋಗಿದ್ದವನು ಕಾರ್ಯಕ್ರಮ ಮುಗಿಸಿ ಮುಸ್ಸಂಜೆಯಲ್ಲಿ ಅದೇ ಮಾರ್ಗವಾಗಿ ಹಿಂದಿರುಗುವಾಗ ದಾರಿಯಲ್ಲಿ ಅಚಾನಕ್ಕಾಗಿ ಕಣ್ಣಿಗೆ ಬಿದ್ದ ಈ ಮಾಜಿ ಅಪ್ಸರೆಯನ್ನು ಕಣ್ಣುತುಂಬಿಕೊಂಡಿದ್ದಾಯ್ತು. ನಂತರ ಸದರಿ ಚರ್ಚಿನ ನೆನಪಿಗಾಗಿ ಇಲ್ಲಿಂದ ಒಂದು ಕಿಲೋಮೀಟರು ದೂರದಲ್ಲಿ ಹೊಸದಾಗಿ ಕಟ್ಟಲ್ಪಟ್ಟಿರುವ ಚರ್ಚನ್ನು ನೋಡಿಕೊಂಡು, ಅದಕ್ಕೆ ಹೊಂದಿಕೊಂಡಂತೆ ಇರುವ ಪಾದ್ರಿಯವರ ನಿವಾಸಕ್ಕೆ ತೆರಳಿ ಅವರಿಂದ ಚಕ್ಕುಲಿ / ಬೆಣ್ಣೆಮುರುಕುಗಳ ಪ್ರೀತಿಯ ಆತಿಥ್ಯ ಸ್ವೀಕರಿಸಿ ಹಿಂತಿರುಗುವಾಗ ಸರಿಸುಮಾರು ಕತ್ತಲು…
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ*