spot_img
spot_img

ದೇಹಕ್ಕಷ್ಟೇ ಅಲ್ಲ ದೇಶಕ್ಕೂ ಶಾಪ ಮಾದಕ ವ್ಯಸನ

Must Read

spot_img
- Advertisement -

ಹೊಸವರ್ಷವನ್ನು ಸಂಭ್ರಮದೊಂದಿಗೆ ಆಚರಿಸಿದ ಅನೇಕರ ನಶೆ ಇನ್ನೂ ಪೂರ್ತಿ ಇಳಿದಿರಲಿಕ್ಕಿಲ್ಲ ! ಅನೇಕರ ಪಾಲಿಗೆ ಈ ಸಂಭ್ರಮಾಚರಣೆಯ ಹೆಸರಿನಲ್ಲಿ ಏರಿದ ನಶೆಯೇ ವ್ಯಸನಕ್ಕೆ ಮೂಲ ಕಾರಣವೂ ಹೌದು. ಹೊಸದನ್ನು ಉಲ್ಲಾಸದಾಯಕವಾಗಿ ಸಂಭ್ರಮಿಸಬೇಕಾಗಿದ್ದ ಯುವಕ ಯುವತಿಯರ ಪಾಲಿಗೆ ಕೇವಲ ಥ್ರಿಲ್‍ಗಾಗಿ ಕುಡಿದ ಮದ್ಯ, ಸೇವಿಸಿದ ಡ್ರಗ್ಸ್ ಮುಂದೆ ಜೀವನದ ಶಾಶ್ವತ ಸಂಗಾತಿಯಾಗಿ, ವ್ಯಸನವಾಗಿ ಪರಿಣಮಿಸಿದ ಉದಾಹರಣೆಗಳಿವೆ. ಹೊಸ ವರ್ಷದ ಆಚರಣೆಯ ಹೆಸರಿನಲ್ಲಿ ಆಯೋಜಿಸಿದ ರೇವ್‍ಪಾರ್ಟಿ ಮೇಲೆ ದಾಳಿ ಮಾಡಿದ ಪೊಲೀಸರು ಅನೇಕ ರೀತಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಸುದ್ಧಿಯೂ ಪ್ರಕಟವಾಗಿದೆ. ಆನ್‍ಲೈನ್‍ನಿಂದ ಹಿಡಿದು ನಗರದ ಮೂಲೆಯ ಪುಟ್ಟ ಗೂಡಂಗಡಿಯವರೆಗೂ ವಿತರಣೆಯ ಜಾಲ ವಿಸ್ತರಿಸಿರುವುದರಿಂದ ಯಾರೂ ಕೂಡ ಮಾದಕ ವಸ್ತುಗಳನ್ನು ಕೊಂಡುಕೊಳ್ಳಬಹುದಾದ ಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗೆ ಸಂಸತ್ತಿನ ಸ್ಥಾಯಿ ಸಮಿತಿಯೊಂದು ನೀಡಿದ ವರದಿಯ ಪ್ರಕಾರ ಮಾದಕ ವಸ್ತುಗಳ ಪೂರೈಕೆಯ ಜಾಲದ ಟಾರ್ಗೆಟ್ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಆಗಿದ್ದಾರೆ. ಅಪ್ರಾಪ್ತ ವಯಸ್ಸಿನ, ಮುಖ್ಯವಾಗಿ 10-17 ವಯೋಮಾನದ ವಿದ್ಯಾರ್ಥಿಗಳೇ ಬಹುದೊಡ್ಡ ಪ್ರಮಾಣದಲ್ಲಿ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಪಂಜಾಬ್, ಹರ್ಯಾಣ, ಅಸ್ಸಾಂ, ಆಂದ್ರಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ದಿಲ್ಲಿ, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ಅಪಾಯಕಾರಿ ಎನ್ನಬಹುದಾದ ಪ್ರಮಾಣದಲ್ಲಿ ಮಾದಕ ವ್ಯಸನಕ್ಕೆ ತುತ್ತಾಗುತ್ತಿದೆ. ಈ ಸಮಸ್ಯೆಯನ್ನು ಕೇವಲ ವ್ಯಕ್ತಿಗಳ ನೈತಿಕ ಅಧಃಪತನದ ಪ್ರಕರಣಗಳು ಎಂದಷ್ಟೇ ಪರಿಗಣಿಸದೆ, ರಾಷ್ಟ್ರದ ಭದ್ರತೆಯ ಸವಾಲು, ಭವಿಷ್ಯದ ಪೀಳಿಗೆಗಳನ್ನು ವ್ಯವಸ್ಥಿತವಾಗಿ ನಾಶ ಮಾಡುವ ಸಂಚು ಎಂದೇ ಗ್ರಹಿಸಬೇಕು. 

ಅಂತರಾಷ್ಟ್ರೀಯ ಗಡಿಗಳನ್ನು ದಾಟಿ ಕಳ್ಳದಾರಿಗಳಿಂದ ಒಳನುಸುಳಿದ ಮಾದಕವಸ್ತುಗಳು ಎಲ್ಲೆಡೆಯೂ ಮಾರಾಟವಾಗುತ್ತಿರುವುದರ ಪರಿಣಾಮ ಯಾರಕೈಗೂ ಸುಲಭವಾಗಿ ಎಟುಕಲಾರಂಭಿಸಿದೆ. ಹೀಗಾಗಿ ಅಪ್ರಾಪ್ತ ವಯಸ್ಕರೂ ಕೂಡ ವ್ಯಸನದ ಜಾಲಕ್ಕೆ ಸಿಲುಕುತ್ತಿದ್ದಾರೆ. ಅರಿಯದ ವಯಸ್ಸಿನಲ್ಲಿ ಒಮ್ಮೆ ಈ ಜಾಲಕ್ಕೆ ಬಿದ್ದರೆ ಹೊರಬರಲಾರದ ವ್ಯಸನಿಗಳಾಗುವುದರಲ್ಲಿ ಸಂಶಯವೇ ಇಲ್ಲ. ಇತ್ತೀಚಿನ ದಿನಗಳಲಲ್ಲಿ ಮಾದಕ ವ್ಯಸನಕ್ಕೆ ತುತ್ತಾದ ಅಪ್ರಾಪ್ತರೂ ಸೇರಿದಂತೆ ಯುವಕ ಯುವತಿಯರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾಗುತ್ತಿರುವ ವರದಿಗಳನ್ನು ನೋಡಿದರೆ ಈ ಜಾಲ ಉಂಟುಮಾಡುತ್ತಿರುವ ಭಯಾನಕ ದುರಂತಗಳ ಕುರಿತು ಆತಂಕವಾಗದಿರಲಾರದು.

- Advertisement -

ಅರಿವಿನ ಕೊರತೆಯಿಂದ ಮನರಂಜನೆಯ ಹೆಸರಿನಲ್ಲಿ ಆಕರ್ಷಿತರಾದವರು ಮುಂದೆ ಹೊರಬರಲಾರದಷ್ಟು ವ್ಯಸನಿಗಳಾಗುತ್ತಾರೆ. ವಿದ್ಯಾರ್ಥಿಗಳಾದರೆ ಅವರ ಶಿಕ್ಷಣದ ಮೇಲೆ, ಭವಿಷ್ಯದಲ್ಲಿ ಉದ್ಯೋಗದ ಮೇಲೆ ಮಾತ್ರವಲ್ಲದೆ ಅವರ ಆರ್ಥಿಕತೆ, ಆರೋಗ್ಯ, ಕೌಟುಂಬಿಕ ಸಂಬಂಧಗಳ ಮೇಲೆ ತೀವ್ರವಾದ ಪರಿಣಾಮವನ್ನು ಉಂಟುಮಾಡುವ ಈ ವ್ಯಸನವನ್ನು ರಾಷ್ಟ್ರ ನಿರ್ಲಕ್ಷಿಸಬಾರದು. ಬೀದಿ ಮಕ್ಕಳು, ಬಾಲ ಕಾರ್ಮಿಕರು, ಕೌಟುಂಬಿಕ ಗೊಂದಲಗಳಿಂದ ಬಾಧಿತರಾದ ವ್ಯಕ್ತಿಗಳು ಸುಲಭವಾಗಿ ತಮ್ಮ ನೋವಿನ ಉಪಶಮನಕ್ಕಾಗಿ ಮಾದಕವಸ್ತುಗಳ ದಾಸರಾಗುವ ಸಾಧ್ಯತೆಗಳಿದೆ. ಶ್ರೀಮಂತ ಕುಟುಂಬಗಳ ಮಕ್ಕಳು ಪಾರ್ಟಿ, ಮೋಜು ಮಸ್ತಿಗಳ ಹೆಸರಿನಲ್ಲಿ, ತತ್‍ಕ್ಷಣದ ಥ್ರಿಲ್‍ಗಾಗಿ ಅಪಾಯದ ಸುಳಿಗೆ ಸಿಲುಕುತ್ತಾರೆ.

ಇಂತಹ ಕಾನೂನು ಬಾಹಿರ ಚಟಗಳಿಗೆ ತುತ್ತಾದವರು ಎದುರಿಸುತ್ತಿರುವ ಅನಿಯಂತ್ರಿತ ಉದ್ವೇಗ, ಕೋಪಗಳು ಸಮಾಜದಲ್ಲಿ ಉಂಟುಮಾಡುತ್ತಿರುವ ಹಾನಿ ನಮ್ಮ ದೇಶಕ್ಕೆ ಎಚ್ಚರಿಕೆಯ ಕರೆಗಂಟೆಯೂ ಹೌದು. ನಮ್ಮ ಸುತ್ತ ಪ್ರತೀ ದಿನವೂ ಸಂಭವಿಸುತ್ತಿರುವ ವಾಹನ ಅಪಘಾತಗಳಲ್ಲಿ, ಕೊಲೆ, ಗಲಭೆಗಳಲ್ಲಿ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯಗಳಲ್ಲಿ ಮಾದಕ ವ್ಸಸನಿಗಳ ಪಾತ್ರವೇ ಬಹುದೊಡ್ಡದು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳೂ ಕೊಲೆಗಳಲ್ಲಿಯೇ ಅಂತ್ಯವಾಗುವ, ನೂರು ರೂಪಾಯಿಗಾಗಿ ತಮ್ಮ ಸ್ನೇಹಿತರನ್ನೇ ಕೊಲೆಗೈಯುವ, ಎಳೆಯ ಕಂದಮ್ಮಗಳನ್ನೂ ಬಿಡದೆ ಅತ್ಯಾಚಾರವೆಸಗಿ ಕತ್ತು ಹಿಸುಕುವ ಹೀನಾಯ ಕೃತ್ಯಗಳಲ್ಲಿ ಬಹುಪಾಲು ಮಾದಕ ವ್ಯಸನಿಗಳೇ ಭಾಗಿಗಳಾಗುತ್ತಿದ್ದಾರೆ ಎಂದರೆ ನಮ್ಮ ಸುತ್ತಲಿನ ಸಮಾಜ ಎಂತಹ ಅಭದ್ರತೆಯ ನಡುವೆ ಬದುಕುತ್ತಿದೆ ಎನ್ನುವ ಅರಿವಾಗಬಹುದು. ಬಾಲ್ಯದಲ್ಲಿಯೇ ಇಂತಹ ಚಟಕ್ಕೆ ಬಲಿಯಾದವರು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ತೊರೆದು ಹೋಗುತ್ತಿರುವುದರ ಅಂತಿಮ ಪರಿಣಾಮ ರಾಷ್ಟ್ರದ ಮೇಲೆಯೇ. ವ್ಯಸನಕ್ಕೆ ಹಣ ಹೊಂದಿಸಲು ಸುಲಿಗೆ, ಗಲಭೆಗಳಲ್ಲಿ ಭಾಗಿಯಾಗುವುದಷ್ಟೇ ಅಲ್ಲ, ಸುಲಭವಾಗಿ ಆಮಿಷಕ್ಕೆ ತುತ್ತಾಗಿ ಎಂತಹ ಕಾನೂನುಬಾಹಿರ ಕೃತ್ಯಗಳನ್ನಾದರೂ ನಡೆಸಬಲ್ಲರು. 

ಇದು ವರ್ತಮಾನ ಭಾರತದ ಬಹುಗಂಭೀರ ಸಮಸ್ಯೆಗಳಲ್ಲಿ ಒಂದಾಗಿದ್ದು, ಭಯೋತ್ಪಾಧನೆಗಿಂತ ಕಿಂಚಿತ್ತೂ ಕಡಿಮೆ ಅಲ್ಲ. ದುರಂತವೆಂದರೆ ಭಯೋತ್ಪಾಧನೆಯ ಕೃತ್ಯದಲ್ಲಿ ಭಾಗಿಯಾದವರು ಜೈಲು ಸೇರಿದರೆ, ಮಾದಕ ವಸ್ತುಗಳನ್ನು ಪೂರೈಸುವ ಜಾಲ ರಾಜಾರೋಷವಾಗಿ ಇದೇ ಸಮಾಜದ ನಡುವೆ ಐಷಾರಾಮಿಯಾಗಿ ಬದುಕುತ್ತಿರುತ್ತಾರೆ ! ದಿನದಿಂದ ದಿನಕ್ಕೆ ನಶೆಗೆ ಸಿಲುತ್ತಿರುವವರ ಪ್ರಮಾಣ ಹೆಚ್ಚಾಗುತ್ತಲೇ ಇದೆ ಎಂದರೆ ದೇಶಕ್ಕಿದು ಅಪಾಯದ ಮುನ್ಸೂಚನೆಯಲ್ಲವೇ? ಕ್ಷಣಿಕವಾದ ಉನ್ಮಾದವನ್ನು ಉಂಟುಮಾಡಬಹುದಾದ ಈ ವ್ಯಸನಕ್ಕೆ ತುತ್ತಾದರೆ ಅವರ ಬದುಕು ಮಾತ್ರ ಶಾಶ್ವತವಾಗಿ ನರಕಸದೃಶವಾಗುತ್ತದೆ. ಎಳೆವಯಸ್ಸಿನವರ ನಶೆ ಹೆತ್ತವರನ್ನು ಬೀದಿಗೆ ತಂದರೆ, ಪ್ರೌಢವಯಸ್ಸಿನವರ ದಾಸ್ಯ ಹೆಂಡತಿ ಮಕ್ಕಳನ್ನು ಅನಾಥರನ್ನಾಗಿಸುತ್ತದೆ. 

- Advertisement -

ಇತ್ತೀಚಿನ ಕೆಲವು ವಿದ್ಯಮಾನಗಳನ್ನು ಗಮನಿಸಿದರೆ ಇದು ಕೇವಲ ಭಾರತೀಯ ಯುವಕ ಯುವತಿಯರಿಗೆ ತಾತ್ಕಾಲಿಕ ಉನ್ಮಾದವನ್ನು ಉಂಟುಮಾಡುವ ಕಾರ್ಯಾಚರಣೆಯಾಗದೆ ದೇಶವನ್ನೇ ನಿಶ್ಯಕ್ತಗೊಳಿಸುವ ಅಂತರಾಷ್ಟ್ರೀಯ ಸಂಚಿನ ಭಾಗವೇ ಆಗಿರುವುದರಲ್ಲಿ ಅನುಮಾನವಿಲ್ಲ. ಯುವಕರನ್ನೇ ಗುರಿಯಾಗಿಸಿ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡ ವ್ಯವಸ್ತಿತ ಸಂಚು ಇದು ಎಂದು ಅರಿಯದ ಹೊರತು ಪರಿಹಾರ ಸಾಧ್ಯವಿಲ್ಲ. ಮನರಂಜನೆಯ ಮಾಧ್ಯಮಗಳು ನಶೆಯನ್ನು ಪ್ರಚೋದಿಸುವುದರ ಜತೆಗೆ ಅದನ್ನು ವೈಭವೀಕರಿಸುತ್ತಿರುವುದರಿಂದ ಪರಿಣಾಮವನ್ನೇ ಅರಿಯದ ಅಜ್ಞಾನದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.

ಒಂದು ದೇಶವನ್ನು ವಿದ್ವಂಸನಗೊಳಿಸಬೇಕಾದರೆ ಬಾಂಬ್ ಹಾಕುವುದಕ್ಕಿಂತಲೂ, ಅಲ್ಲಿನ ಯುವಜನರನ್ನು ನಶೆಗೆ ದಾಸರನ್ನಾಗಿಸಿದರೆ ಸಾಕು, ತಾನೇ ನಾಶವಾಗುತ್ತದೆ ಎಂದರಿತೇ ಬಾಹ್ಯಶಕ್ತಿಗಳು ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ. ಮಾದಕ ವಸ್ತುಗಳ ಮಾರಾಟದ ಹಣವೂ ನೇರವಾಗಿ ಭಯೋತ್ಪಾಧನೆಯಂತಹ ಕೃತ್ಯಗಳಿಗೆ ಬಳಕೆಯಾಗುತ್ತದೆ. ಮಾದಕ ವ್ಯಸನ ಮತ್ತು ಅಪರಾದ ಕೃತ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ಭಾರತ ಮಾದಕ ವಸ್ತುಗಳ ಮಾರಾಟದ ಬಹುದೊಡ್ಡ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ. ಕೇವಲ ಕಾನೂನು ಬಾಹಿರ ಕೃತ್ಯವೆಂದು ಮಾತ್ರವಲ್ಲ, ಅದಕ್ಕಿಂತಲೂ ರಾಷ್ಟ್ರೀಯ ಸುರಕ್ಷೆಯ ಅತಿ ಗಂಭೀರ ಸವಾಲು ಎನ್ನುವುದನ್ನು ಅರ್ಥಮಾಡಿಕೊಂಡು ನಿಗ್ರಹಕ್ಕಾಗಿ ಮುನ್ನುಗ್ಗಬೇಕು. ಕಠಿಣ ದಂಡನೆ ಒಂದು ಬಗೆಯ ಪರಿಹಾರವಾದರೆ, ಸುಲಭವಾಗಿ ತುತ್ತಾಗುತ್ತಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ವ್ಯಸನದ ಪರಿಣಾಮಗಳ ಕುರಿತು ಜಾಗೃತಿಯನ್ನು ಮೂಡಿಸಬೇಕಾಗಿದೆ. ಭಾರತ ಕಾನೂನುಬಾಹಿರ ಡ್ರಗ್ಸ್ ಗಳ ಮಾರಾಟ ಮತ್ತು ಸೇವನೆಯಿಂದ ಸಂಪೂರ್ಣವಾಗಿ  ಮುಕ್ತವಾಗಬೇಕಾದರೆ ಜಾಗೃತಿ, ಆಪ್ತಸಮಾಲೋಚನೆ ಮಾತ್ರ ಪರಿಹಾರ. ವ್ಯಸನಕ್ಕೆ ಸಿಲುಕಿದವರನ್ನು ಅದರಿಂದ  ಬಿಡುಗಡೆಗೆಳಿಸಿ ಸರಿಯಾದ ಜೀವನ ನಿರ್ವಹಣೆಗೆ ಪರಿಣಾಮಕಾರಿ ಪುನರ್ವಸತಿ ವ್ಯವಸ್ಥೆ, ಪಠ್ಯಗಳಲ್ಲಿಯೂ ಸೂಕ್ತವಾದ ಮಾಹಿತಿ ನೀಡುವಂತಾದರೆ ಮಾತ್ರ ನಶೆಯಿಂದ ಮುಕ್ತವಾದ  ಭಾರತವನ್ನು ಕಟ್ಟಬಹುದು. ಇದಕ್ಕಾಗಿ ನಾಗರಿಕ ಸಮಾಜದ ಸಹಭಾಗಿತ್ವವೂ ಅಗತ್ಯವಾಗಿದೆ.


ಡಾ. ರೋಹಿಣಾಕ್ಷ ಶಿರ್ಲಾಲು

ಸಹಾಯಕ ಪ್ರಾಧ್ಯಾಪಕರು

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group