ಮೂಡಲಗಿ: ಸಮಾಜದ ಸ್ವಾಸ್ಥ್ಯವನ್ನು ಕಾಯುವಲ್ಲಿ ನಾಡಿನ ಮಠಮಾನ್ಯಗಳ ಪಾತ್ರ ಮಹತ್ವದಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ತಾಲ್ಲೂಕಿನ ಹುಣಶ್ಯಾಳ ಪಿಜಿಯ ಕೈವಲ್ಯಾಶ್ರಮದ ಸಿದ್ಧಲಿಂಗೇಶ್ವರ ಮಠದ ಶ್ರೀ ನಿಜಗುಣ ದೇವರ ಷಷ್ಟ್ಯಬ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಮಠಗಳು ಧಾರ್ಮಿಕ ಆಚರಣೆಗಳೊಂದಿಗೆ ನಾಡಿನ ಸಂಸ್ಕೃತಿ ಪರಂಪರೆ, ಸಂಸ್ಕಾರ, ಶಿಕ್ಷಣ ಪ್ರಸಾರ ಹಾಗೂ ಆಧ್ಯಾತ್ಮಿಕ ಚಿಂತನೆಗಳ ಮೂಲಕ ನಾಡಿಗೆ ಬಹುದೊಡ್ಡ ಕೊಡುಗೆ ನೀಡಿವೆ ಎಂದರು.
ಪ್ರತಿ ವ್ಯಕ್ತಿಯ ಹೃದಯದಲ್ಲಿ ದೇವರಿದ್ದು, ನಾವು ಮಾಡುವ ಭಕ್ತಿಯಲ್ಲಿ ದೇವರನ್ನು ಕಾಣಲು ಸಾಧ್ಯ. ಆಧ್ಯಾತ್ಮಿಕ ಮತ್ತು ಸತ್ಸಂಗಗಳಲ್ಲಿ ಭಾಗವಹಿಸುವ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿಯನ್ನು ಪ್ರಾಪ್ತಿಪಡಿಸಿಕೊಳ್ಳುವುದು ಅವಶ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರನ್ನು ಕಂಡು ಪುಳಕಿತಗೊಂಡಿರುವೆನು. ಕೈವಲ್ಯಾಶ್ರಮದಲ್ಲಿ ನಿಜವಾದ ಭಕ್ತಿ ಇದೆ ಎಂದರು.
ಸಮಾರಂಭದ ವೇದಿಕೆಯಲ್ಲಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಬೈಲೂರದ ಶ್ರೀ ನಿಜಗುಣಾನಂದ ಶ್ರೀಗಳು, ವೀರಗೋಟದ ಶ್ರೀಅಡವಿಲಿಂಗ ಮಹಾರಾಜರು, ನರಸಿಪೂರದ ಶ್ರೀ ಶಾಂತಭೀಷ್ಮ ಚೌಡಯ್ಯ ಶ್ರೀಗಳು, ಹಂದಿಗುಂದದ ಶ್ರೀ ಶಿವಾನಂದ ಶ್ರೀಗಳು, ಶೇಗುಣಶೀಯ ಡಾ.ಮಹಾಂತಪ್ರಭು ಶ್ರೀಗಳು, ಶ್ರೀ ನಿಜಗುಣ ದೇವರು, ತೊಂಡಿಕಟ್ಟಿಯ ಶ್ರೀ ವೆಂಕಟೇಶ ಮಹಾರಾಜರು ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಮಹಾತೇಂಶ ಕವಟಗಿಮಠ, ಬೀಳಗಿ ಶಾಸಕ ಜಿ.ಟಿ.ಪಾಟೀಲ, ಡಾ.ಗಿರೀಶ ಸೋನವಾಲಕರ, ಶ್ಯಾಮಾನಂದ ಪೂಜೇರಿ ಮತ್ತಿತರರು ಇದ್ದರು.